ಹಸಿ ಮುನಿಸು


೨೫/ಮಾರ್ಚ್/೨೦೧೩

ನಿನ್ನ ಜೊತೆ ಮಾತಾಡಬೇಕುಬಂದಿತ್ತು ಮೆಸೇಜ್.

ಶೇಖರ್ ನಿಟ್ಟುಸಿರು ಬಿಟ್ಟು ಮೊಬೈಲನ್ನು ಬದಿಗೆಸೆದು ಕಟ್ಟುತ್ತಿದ್ದ ಟೈ ಕಡೆಗೆ ಗಮನ ಕೊಟ್ಟ. ಟೈ ಕಟ್ಟಾದ ಮೇಲೆ ನಿಖಿತಾಗೆ ಮೆಸೇಜ್ ಮಾಡಿದ.

ಹೂಂ ಇವತ್ತು ಸಂಜೆ ಸಿಗ್ತೀನಿ. ಕಾಫಿ ಶಾಪ್‍ನಲ್ಲಿ !! ಓ.ಕೆ”

ಸಂಜೆ ಶೇಖರ್ ಬರೊವಷ್ಟರೊಳಗೆ ನಿಖಿತಾ ಬಂದು ಕಾಯ್ತಾ ಇದ್ದಳು. ಅವಳ ಸಿಟ್ಟು ನೆತ್ತಿಗೇರಿತ್ತು, ಮುಖ ಊದಿತ್ತು.

ಶೇಖರ್‍ಗೆ ಅವಳ ಅವತಾರ ಕಂಡು ನಗು ತಡಿಯೋದು ಕಷ್ಟವಾಗ್ತಾ ಇತ್ತು. ಆದರೂ ಮುಖದ ಭಾವನೆ ಗಂಭೀರ ಮಾಡಿಕೊಂಡು ಅವಳೆದುರು ಕುಳಿತುಕೊಂಡ.

ನಿಖಿತಾ ಬಾಯಿ ತೆರೆಯೋದರೊಳಗೆ ಶೇಖರ್ ಹೇಳಿದ “ತಡಿ, ಮೊದಲು ಕಾಫಿ ಆರ್ಡರ್ ಕೊಟ್ಟುಬಿಡ್ತೀನಿ”
ಬಂದ ವೈಟರ್‍ಗೆ ಕಾಫಿ ಆರ್ಡರ್ ಕೊಟ್ಟು, ನಿಖಿತಾ ಕಡೆಗೆ ತಿರುಗಿದ. 

ಈಗ ನೀನು ಹೇಳು ಎನ್ನುವಂತೆ ಇತ್ತು ಅವನ ಮುಖದ ಭಾವನೆ.

ನಿಖಿತಾ ಮುಂದೆ ಬಾಗಿ ಅಂದಳು “ಇದು ಸ್ವಲ್ಪವೂ ಸರಿಯಿಲ್ಲ. ಯಾಕೋ ಇದು ಸರಿ ಹೋಗ್ತಾ ಇಲ್ಲ. ಬ್ರೇಕ್ ಅಪ್ ಆಗೋಣ.”

“ಈಗ ಏನಾಯಿತು ಅಂತ ನಾವು ಬೇರೆಯಾಗಬೇಕು

ಒಂದು ವಾರದಿಂದ ನೋಡ್ತಾ ಇದ್ದೀನಿ, ನಿನಗೆ ನನ್ನ ಜೊತೆ ಮಾತಾಡೋಕೆ ಸಮಯವಿಲ್ಲ. ಅಥವಾ ನಂಗೆ ಸಮಯ ಕೊಡೋಕೆ ಇಷ್ಟವಿಲ್ವ??!!

ನಂಗೊತ್ತಿಲ್ಲ..... ಮತ್ತೆ ಗೊತ್ತು ಮಾಡಿಕೊಳ್ಳುವಷ್ಟು ಸಂಯಮ ಇನ್ನು ಉಳಿದಿಲ್ಲ ನನ್ನ ಹತ್ರ

ಶೇಖರ್ ಒಂದು ಕ್ಷಣ ಯೋಚಿಸಿದ. ಅಷ್ಟರಲ್ಲಿ ಅವರ ಕಾಫಿ ಬಂದಿತು. ಕಾಫಿ ಕುಡಿಯುತ್ತಾ ಇದ್ದ ಹಾಗೆ ಸ್ವಲ್ಪ ಸಮಯದಲ್ಲಿ ನಿಖಿತಾಳ ಕೋಪವೂ ಸ್ವಲ್ಪ ತಣಿಯಿತು.

ಶೇಖರ್ ಅಷ್ಟರಲ್ಲಿ ಅಂದ... ಓ, ಇದು ಗಂಭೀರವಾದ ವಿಷಯವೇ. ಅದಕ್ಕೆ ನಾಳೆ ನಾನು ರಜ ತಗೊಂಡು ನಿನ್ನ ಸುತ್ತಾಡಿಸೋಣ ಅಂದುಕೊಂಡಿದ್ದೆ.”

ಈ ಮಾತನ್ನು ಕೇಳಿ ನಿಖಿತಾಳ ಮುಖ ಮಲ್ಲಿಗೆಯ ಹಾಗೆ ಅರಳಿತು. ಶೇಖರ್ ಮನದಲ್ಲೆ ನಸು ನಕ್ಕಿದ್ದ.


೨೯/ಮೇ/೨೦೧೩

ನಿನ್ನ ಜೊತೆ ಮಾತಾಡಬೇಕುಬಂದಿತ್ತು ಮೆಸೇಜ್. ಕಾಫಿ ಕುಡಿಯುತ್ತಿದ್ದ ಶೇಖರ್ ಲೋಟ ಕೆಳಗಿಟ್ಟು ಕೂದಲು ಸವರಿಕೊಂಡ.

“ಸಂಜೆ ಸಿಗ್ತೀನಿ ಕಾಫಿ ಶಾಪ್‍ನಲ್ಲಿ” ಎಂದು ರಿಪ್ಲೈ ಮಾಡಿ ಕಾಫಿ ಮುಗಿಸಿದ.

ಸಂಜೆ ಮತ್ತೆ ಅದೆ ಕಾಫಿ ಆರ್ಡರ್ – ನಿಖಿತಾಳ ಬ್ರೇಕ್ ಅಪ್ – ಶೇಖರ ಮತ್ತೆ ಲಂಚ – ಕಾಫಿ ಮುಗಿಯುದರೊಳಗೆ ನಿಖಿತಾಳ ನಗು.

೨೬/ಜೂನ್/೨೦೧೩

ನಿನ್ನ ಜೊತೆ ಮಾತಾಡಬೇಕುಬಂದಿತ್ತು ಮೆಸೇಜ್.

ಆಗ ತಾನೆ ತನ್ನ ಟೀಮಿಗೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದದ್ದಕ್ಕೆ ಬೈದು ಬಂದಿದ್ದ ಶೇಖರ್‍ನ ಮೂಡ್ ತುಂಬಾ ಹಾಳಾಗಿತ್ತು. ಈ ಮೆಸೇಜ್ ನೋಡಿ ಪೂರ್ತಿ ತಲೆ ಕೆಟ್ಟು ಹೋಗಿತ್ತು.

ಇವತ್ತು ಬೇಡಎಂದು ರಿಪ್ಲೈ ಮಾಡಿದ. ರಾತ್ರಿಯಾದರೂ ನಿಖಿತಾಳ ಉತ್ತರ ಬರದಿದ್ದಾಗ ಫೋನ್ ಮಾಡಿದ. ಫೋನ್ ಸ್ವಿಚ್ಡ್ ಆಫ್ ಅಂತ ಬರುತ್ತಿತ್ತು.

ಸೋತು ಹೋದ ಭಾವನೆ ಮನೆ ಮಾಡಿತು ಅವನ ಮನದಲ್ಲಿ. ನಾಳೆ ಸಂಜೆ ಕಾಫಿ ಶಾಪ್‍ನಲ್ಲಿ ಸಿಗ್ತೀನಿಎಂದು ಮೆಸೇಜ್ ಮಾಡಿ ಯೋಚಿಸುತ್ತಾ ಮಲಗಿದ.

ಮರುದಿನ ಶೇಖರ್ ಬಂದು ಸುಮಾರು ಹೊತ್ತಾದರೂ ನಿಖಿತಾ ಬಂದಿರಲಿಲ್ಲ. ಕಾದೂ ಕಾದೂ ಸುಸ್ತಾದ ಶೇಖರ್ ಇನ್ನೇನು ಹೊರಡಬೇಕು ಅಂದುಕೊಳ್ಳುವಾಗ ನಿಖಿತಾ ಒಳ ಬಂದಳು.

ಇವನೆದುರು ಕೂತು ಗುಮ್ಮನ ಹಾಗೆ ಮುಖ ಊದಿಸಿಕೊಂಡಿದ್ದಳು. ಕಾಫಿಗೆ ಆರ್ಡರ್ ಕೊಟ್ಟ ನಂತರ. ನಿಖಿತಾ ಹೇಳಲು ಅನುವಾದಳು. ಆದರೆ ಅವಳು ಬಾಯಿ ಬಿಡುವ ಮುಂಚೆ ಶೇಖರ್ ಹೇಳಿದ “ಇದು ಸರಿಯಾಗ್ತಾ ಇಲ್ಲ. ನಾವು ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ನಾವು ಬೇರೆಯಾವುದು ಒಳ್ಳೆಯದು

ನಿಖಿತಾಳ ಕಣ್ಣುಗಳು ತುಂಬಿದ್ದವು, ಅವಳ ಬಾಯಿಂದ ಒಂದು ಸ್ವರವೂ ಹೊರಬರಲಿಲ್ಲ. ಮುರಿದ ಧ್ವನಿಯಲ್ಲೇ ಕೇಳಿದಳು ಯಾಕೆ??!!  ಏನಾಯಿತು

ನಾಲ್ಕು ವರ್ಷದಿಂದ ನೋಡ್ತಾ ಇದ್ದೀನಿ, ಪ್ರತಿ ಎರಡು ಮೂರು ತಿಂಗಳಿಗೆ ನಿನಗೆ ಮೂಡ್ ಬರುತ್ತೆ ಬ್ರೇಕ್ ಅಪ್ ಆಗಲು. ಎಷ್ಟು ಸಣ್ಣ ಕಾರಣವಾದರೂ ಸಾಕು ನಿನಗೆ. ಯಾಕೆ ಇಷ್ಟು ಇನ್‍ಸೆಕ್ಯೂರಿಟಿ ನಿನಗೆ. ನಿನಗೆ ನನ್ನ ಎಲ್ಲಾ ಕೆಲಸ ಗೊತ್ತು. ಎಲ್ಲಿ ಹೋಗ್ತೀನಿ ಎಲ್ಲಿ ಬರ್ತ್ತಿನಿ. ಯಾವ ಹೊತ್ತಿನಲ್ಲಿ ಏನು ಮಾಡ್ತೀನಿ ಎಲ್ಲಾ ನೀನು ಕೇಳದೇನೆ ತಿಳಿಸ್ತೀನಿ ಆದರೂ ನಿನಗೆ ನನ್ನ ಮೇಲೆ ನಂಬಿಕೆಯಿಲ್ಲ. ಯಾಕೆ ನಿಖ್ಖಿ??!! ನಂಗೆ ಈ ಆಟವೆಲ್ಲ ಸಾಕಾಗಿದೆ. ನಾವು ಜೀವನ ಹಂಚಿಕೊಳ್ಳಬೇಕು ಅಂತ ಯೋಚಿಸಿದ್ದೀವಿ ಆದರೆ ನೀನು ನನ್ನ ನಂಬದೇ ಇದ್ದರೆ ಹೇಗೆ ಹಾ??!!”

ನಿಖಿತಾಳ ಬಳಿ ಇದಕ್ಕೆ ಯಾವ ಉತ್ತರವೂ ಇರಲಿಲ್ಲ. ಕೊಲ್ಡ್ ಕಾಫಿ ಬಿಸಿಯಾಗಿ, ಮಾತು ಮುಗಿದು, ಕಣ್ಣಿರು ಬತ್ತಿ ಸುಮಾರು ಹೊತ್ತಾದ ಮೇಲೆ ನಿಖಿತಾ ಅಂದಳು ಶೇಖರ್, ಐ ಆಮ್ ಸಾರಿ. ನಿನ್ನ ಮೇಲೆ ನಂಬಿಕೆ ಇಲ್ಲ ಅಂತ ಅಲ್ಲ. ಬಹುಷಃ ನಾನು ನಿನ್ನಂತಹ ವ್ಯಕ್ತಿಯ ಗಮನ ಹಿಡಿದಿಡಬಲ್ಲೆನಾ ಅನ್ನೊ ಅನುಮಾನವಿರಬೇಕು. ಪ್ರತಿ ಕ್ಷಣ ನಿನ್ನ ಕಳೆದುಕೊಳ್ಳುವ ಭಯ ನನಗೆ. ನಿನ್ನ ಕಳೆದುಕೊಂಡರೆ ಒಡೆದು ಚೂರಾಗೊ ನನ್ನ ಮನಸ್ಸನ್ನು ಮೊದಲೇ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀದ್ದೀನಿ ಅನ್ಸುತ್ತೆ. ಆದರೆ ನಿನ್ನ ಮಾತು ನನಗೆ ಅರ್ಥವಾಯಿತು. ಇನ್ನು ಮುಂದೆ ಈ ತರಹದ ಮಾತುಗಳನ್ನು ಆಡೊಲ್ಲ. ಪ್ಲೀಸ್ ನನ್ನ ಕ್ಷಮಿಸು.

ಶೇಖರ್ ನಸು ನಕ್ಕು ಅವಳ ಬಳಿ ಕೂತು ಅವಳನ್ನು ತನ್ನ ತೋಳಲ್ಲಿ ಅಡಗಿಸಿಕೊಂಡ.

ಜುಲೈ ೨೦೧೩

ಆಗಸ್ಟ್ ೨೦೧೩

ಸೆಪ್ಟೆಂಬರ್ ೨೦೧೩

ಅಕ್ಟೊಬರ್ ೨೦೧೩

ನವೆಂಬರ್ ೨೦೧೩
.........................
ಡಿಸೆಂಬರ್ ೨೦೧೩
..........................

೨೬/ಜನವರಿ/ ೨೦೧೪

ಶೇಖರ್‍ ಗೆ ಯಾಕೊ ಒಂದು ತರಹ ಕಸಿವಿಸಿಯಾಗುತ್ತಿತ್ತು. ಏನೊ ಸರಿಯಿಲ್ಲ. ಏನೋ ಮಿಸ್ ಮಾಡ್ತಾ ಇರುವ ಹಾಗೆ ಇತ್ತು. ಆದರೆ ಏನು ಅಂತ ಗೊತ್ತಾಗ್ತಾ ಇರಲಿಲ್ಲ. ಇವತ್ತು ಗಣತಂತ್ರ ದಿವಸ, ಆಫೀಸಿಗೆ ರಜೆ. ಹಾಸಿಗೆ ಮೇಲೆ ಮಲಗಿಕೊಂಡು ಯೋಚಿಸುತ್ತಿದ್ದ. ಏನಾಗಿದೆ ನನಗೆ, ಯಾಕೆ ಈ ಕಸಿವಿಸಿ??!!

ಅಷ್ಟರಲ್ಲಿ ಬಂತು ಮೆಸೇಜ್ ನಿನ್ನ ಜೊತೆ ಮಾತಾಡಬೇಕು”.

ಶೇಖರ್ ಅದನ್ನು ನೋಡಿದೊಡನೆ ಜೋರಾಗಿ ನಗಲು ಶುರು ಮಾಡಿದ. ಇದೆ ಅವನು ಮಿಸ್ ಮಾಡ್ತಾ ಇದ್ದಿದ್ದು. ಇಷ್ಟು ವರ್ಷದ ಸಂಬಂಧದಲ್ಲಿ, ಅವಳು ಬ್ರೇಕ್ ಅಪ್ ಅನ್ನೊದೂ, ಇವನು ಸಮಾಧಾನ ಮಾಡೋದೂ ಕೂಡ ಅವರಿಬ್ಬರೂ ಪ್ರೀತಿ ತೋರಿಸುವ ಒಂದು ಪರಿಯಾಗಿತ್ತು ಅಂತ ಈಗ ಅವನಿಗೆ ಮನವರಿಕೆಯಾಯಿತು, ಇಷ್ಟು ತಿಂಗಳು ಅವಳು ಬ್ರೇಕ್ ಅಪ್ ಮಾಡದಿದ್ದಾಗ, ಗಂಡ ಹೆಂಡತಿ ಉಪ್ಪಿನಕಾಯಿಗೆ ಜಗಳ ಮಾಡದಿದ್ದ ಹಾಗಾಯಿತು ಶೇಖರ್‍ಗೆ .

ತಕ್ಷಣ ಮೆಸೇಜ್ ಮಾಡಿದ “ಥ್ಯಾಂಕ್ಯೂ ಮುದ್ದು. ಇದಕ್ಕೆ ಕಾಯ್ತಾ ಇದ್ದೆ J ಇನೈದು ನಿಮಿಷದಲ್ಲಿ ಕಾಫಿ ಶಾಪ್ನಲ್ಲಿ ಸಿಗ್ತೀನಿ
ಕಾಮೆಂಟ್‌ಗಳು

 1. ಬಿಟ್ಟರೆ ಸಿಗೋಲ್ಲ.. ಸಿಕ್ಕರೆ ಬಿಡೋಲ್ಲ ಈ ರೀತಿಯ ಬಿಡಲಾರೆ ಇರಲಾರೆ ಭಾಂಧವ್ಯಗಳು ಕೆಲವೊಮ್ಮೆ ನಗೆಗಡಲಿಗೆ ತಳ್ಳುತ್ತವೆ. ಅನುಮಾನ ಅಥವಾ ಕೀಳರಿಮೆಯಿಂದ ಸಂಬಂಧಗಳು ಕೆಲವೊಮ್ಮೆ ಗಬ್ಬೆದ್ದು ಹೋಗಿರುತ್ತವೆ. ಒಬ್ಬರು ನಿಯತ್ತಾಗಿ ಆ ಸಮಸ್ಯೆಗಳ ಬಗ್ಗೆ ತಂಪಾಗಿ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಂಡರೆ.. ಆ ರೀತಿಯ ಸನ್ನಿವೇಶಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಅದನ್ನು ಸರಿ ಪಡಿಸುವ ನಿರ್ಧಾರ ತೆಗೆದುಕೊಂಡಾಗ ಜೀವನ ನಿಜಕ್ಕೂ ನಂದಗೋಕುಲ.

  ಇಲ್ಲಿ ಕಥಾನಾಯಕ.. ದುಡುಕಿಗೆ ಅವಕಾಶವಿದ್ದರೂ.. ನಿಧಾನವಾಗಿ ಪರಿಹರಿಸುವ ಅವನ ಪ್ರಯತ್ನ ಶ್ಲಾಘನೀಯ. ನಾಯಕಿಗೆ ತಿಳಿ ಹೇಳಿ.. ಅವಳ ದೌರ್ಬಲ್ಯವನ್ನೇ ಸರಿ ಪಡಿಸುವ ಹಾದಿಯಲ್ಲಿಯೇ ಅವಳ ಆ ದೌರ್ಬಲ್ಯವೇ ಇವನಿಗೆ ಒಂದು ಬಿಟ್ಟಿರಲಾರದ ಹವ್ಯಾಸವಾಗಿದ್ದು ಅವನ ಹೃದಯ ವೈಶಾಲ್ಯತೆ ತೋರಿಸುತ್ತದೆ..

  ಸೂಪರ್ ನಿವಿ ಇಷ್ಟವಾಯಿತು.. ಕಡೆಸಾಲುಗಳು ನಿಮ್ಮ ಸ್ಪೆಷಲ್ ಕಾಣುವಂತೆ ಮಾಡಿತು..

  ಪ್ರತ್ಯುತ್ತರಅಳಿಸಿ
 2. ತೆಲುಗು ಅಮರ ಚಿತ್ರ ಮಿಸ್ಸಮ್ಮ, ಅದರ ಅತ್ಯಮೋಘ ಈ ಗೀತೆ ಈಗ ನೆನಪಾಯಿತು:
  ಔನಂಟೆ ಕಾದನಿಲೇ
  ಕಾದಂಟೆ ಔನನಿಲೇ
  ಆಡವಾರಿ ಮಾಟಲಕು
  ಅರ್ಥಾಲೇ ವೇರುಲೇ...

  ಕಥನ ಶೈಲಿಗೆ ಫುಲ್ ಮಾರ್ಕ್ಸ್

  ಪ್ರತ್ಯುತ್ತರಅಳಿಸಿ
 3. ಹ್ಹ ಹ್ಹ ಹ್ಹಾ ಸೂಪರ್ ಕಥೆ... ಹುಸಿ ಮುನಿಸಿನ ನಿರೂಪಣೆ ನಗು ತರಿಸಿತು!

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು