ಅರ್ಪಿತಾ, ವೀಣಾ ಮತ್ತೆ ನಾನು ............

ಏನು ಮಾಡಲಿ ಅಂತ ಯೋಚಿಸುತ್ತ ಬೆಳಗ್ಗಿಂದ ತಲೆ ಕೆಡಿಸಿಕೊಂಡಿದ್ದೆ. ಕೀ ಬೋರ್ಡ್ ಮುಂದೆ ಅದೆಷ್ಟು ಸಾರಿ ಕೂತು ಬರಿಯೋಕೆ ಶುರು ಮಾಡಿ ಸೋತ್ನೋ... 

ಕೊನೆಗೂ ಒಂದೇ ಒಂದು ಒಳ್ಳೆ ಲಯ ಸಿಗ್ಲಿಲ್ಲ ಬರಿಯೋದಕ್ಕೆ. ಪೂರ್ತಿಯಾಗಿ ತಲೆ ಕೆಟ್ಟು ಚಿತ್ರಾನ್ನ ಆಗಿ ಉಪಯೋಗವಿಲ್ಲ.. ಈ ಸಾರಿ ಬರಿಯೋಲ್ಲ ಅಂತ ನಿರ್ಧರಿಸೋ ಹೊತ್ತಿಗೆ ಕೇಳಿತು .... 
ಅದೇ ಚುಮುಚುಮು ಚಳಿಲಿ ಚಾ ಕುಡಿದ ಹುಡುಗಿ. ಅರ್ಪಿತಾ..... 
"ಅಲ್ಲ ನಿವಿ...." 
ತಕ್ಷಣ ನಾ ತಡೆದೆ "ಆರೇ ನಿವಿ ಅಲ್ಲ.. ಸಿಬಿ. ಸಿಬಿ.. .. "
"ಓಕೆ ಓಕೆ .. ಸಿಬಿ.....ಯಾಕಿಷ್ಟು ಟೆನ್ಸ್ ಆಗಿದ್ಯಾ?... ಬರಿಯೋಕೆ ಶುರು ಮಾಡಿದ್ರೆ ಏನಾದ್ರೂ ಬರುತ್ತೆ ಬಿಡು."
"ಏನಾದ್ರೂ ಬರಿಯೋದಾದ್ರೆ ಮೊದ್ಲೇ ಬರಿತ್ತಿದ್ದೆ ಕಣೆ. ಇಷ್ಟೆಲ್ಲ ತಲೆ ಕೆಡಿಸಿಕೊಳ್ತಿರ್ಲಿಲ್ಲ. ಯಾರಿಗಾಗಿ ಬರಿತ್ತಿದ್ದಿನಿ ಅನ್ನೋದು ಮರೆತು ಹೋಯ್ತಾ?"
"ಓ ಅದು ಸರಿ ಅನ್ನು. ಆದರೆ ನಿಜವಾಗಿ ಅವರ ಬಗ್ಗೆ ಹೆಮ್ಮೆ ಆಗುತ್ತೆ, ಎಷ್ಟು ವಿಚಾರಗಳನ್ನ ಎಷ್ಟು ಸುಲಲಿತವಾಗಿ ಹೇಳ್ತಾರೆ ಆಲ್ವಾ?"
"ಹೌದು, ಅದಕ್ಕೆ ತಾನೇ ಭಯ ಆಗ್ತಿರೋದು. ಈಗಂತು ಅವರು ಬೇರೆ ಬೇರೆ ತರಹದ ಶೈಲಿಗಳಲ್ಲೂ ಪ್ರವೀಣರಾಗಿದ್ದಾರೆ. ಹಾಗಿರುವಾಗ ನಾವು ಏನೋ ಒಂದು ಗೀಚೋಕೆ ಆಗುತ್ತಾ?"
"ಹಮ್.. ಈಗೇನು ಮಾಡೋದು?" ಅಂತ ಅವಳು ನನ್ನ ಪಕ್ಕ ಗಲ್ಲಕ್ಕೆ ಕೈಯೂರಿ ಕೂತಳು .......
"ನನಗೊಂದು ಉಪಾಯ ಹೊಳಿತು ಸಿಬಿ" ಅವಳ ದೊಡ್ಡ ದೊಡ್ಡ ಕಣ್ಣನ್ನ ಬಿಡ್ತಾ ಮಂದಹಾಸ ಬೀರಿದಳು
ಕೆಲವು ಸಾರಿ ಅರ್ಪಿತಾ ಕರ್ತರ್ನಾಕ್ ಅನ್ನೋ ಐಡಿಯಾಗಳನ್ನ ಕೊಡ್ತಾಳೆ. ಸರಿ ಕೇಳೆ ಬಿಡೋಣ ಅಂತ "ಏನು?" ಅಂದೆ 

"ನಾವು ವೀಣಾಳನ್ನ ಕರಿಯೋಣ" ಅದ್ಭುತವಾದ ಸಾಧನೆ ಮಾಡಿದ ಒಂದು ಹೆಮ್ಮೆ ಅವಳ ಧ್ವನಿಯಲ್ಲಿತ್ತು. 
ಉಪಾಯ ಚೆನ್ನಾಗಿದ್ರೂ ಸಾಧ್ಯಾನ ಅನ್ನೋ ಪ್ರಶ್ನೆ ... ಅರ್ಪಿತಾ ನನ್ನ ಕಲ್ಪನೆಯಿಂದ ಹುಟ್ಟಿದವಳು, ಅವಳನ್ನ ಬೇಕಾದಾಗ ಕರಿಯೋದು ಸುಲಭ. ಆದರೆ ವೀಣಾ ....... ??

"ಸಾಧ್ಯಾನ?? " ಕೇಳಿದೆ ಇವಳನ್ನ ... 
ಇದು ಒಂದು ಪ್ರಶ್ನೆನಾ ಅನ್ನೋ ಹಾಗೆ ನೋಡಿ ಹೇಳಿದಳು "ಖಂಡಿತ ... ಅವರು ಕರೆದಾಗ ನಾ ಹೋಗೋಲ್ವಾ?"
"ಅದು ಹೌದು.. ನನಗೂ ವೀಣಾ ಅಂದ್ರೆ ತುಂಬಾ ಇಷ್ಟ .. ಇರು ಹಾಗೆ ಮಾಡ್ತೀನಿ.." 
ಮನದಲ್ಲೇ ವೀಣಾಳನ್ನ ನೆನೆದೆ.. ಹೆಸರಿನಷ್ಟೇ ಮಧುರವಾದ ಧ್ವನಿಯಲ್ಲಿ  "ಹೈ" ಅಂದ್ಲು
ನಾನು ಅರ್ಪಿತಾ ಸೇರಿ ನಮ್ಮ ತೊಂದರೆ ವಿವರಿಸಲು ಶುರು ಮಾಡಿದೆವು  "ನೀನೆ ಹೇಳು ಏನು ಮಾಡೋದು ಅಂತ ? ನಿನಗೇ ಗೊತ್ತು ಅವರು ತುಂಬು ಹೃದಯದವರು,   ಎಲ್ಲರನ್ನು ನಮ್ಮವರು ಎಂದು ತಿಳಿದು ಪ್ರೀತಿಸುವವರು, ಅದ್ಭುತ ಬರಹಗಾರರು, ಆತ್ಮೀಯ ಸ್ನೇಹಿತರು, ಪುಟ್ಟ ಸಂತೋಷಗಳನ್ನು ಮನ ಬಿಚ್ಚಿ ಅನುಭವಿಸುವವರು ಹಾಗೆ ಹುಟ್ಟು ಸಾವಿನ ಗುಟ್ಟನ್ನು ಯೋಚಿಸುವವರು, ಇವರ ಹುಟ್ಟು ಹಬ್ಬ ಇಂದು... ಹುಟ್ಟು ಹಬ್ಬಕ್ಕೆ ಸಂದೇಶದಿಂದ ಹಿಡಿದು, ಕವನ, ಪ್ರೇಮ ಕಥೆ, ಭಯಾನಕ ಕಥೆ, ಸಿನಿಮಾ, ಹಾಡು, ಪೋಟೋಗ್ರಫಿ ಎಲ್ಲಾದರ ಬಗ್ಗೆ ಬರೆದವರಿಗೆ ಮನಮುಟ್ಟೋ ಹಾಗೆ ಏನಂತ ಬರಿಯೋದು?"

ವೀಣಾ ನಸುನಗುತಲೇ ಹೇಳಿದಳು, "ನಿಮ್ಮ ಪ್ರಶ್ನೆಯಲ್ಲೇ ಉತ್ತರ ಇದೆ. ಅವರ ಮನ ಮುಟ್ಟಬೇಕು ಅಂದರೆ, ತುಂಬು ಮನದಿಂದ ಬರಿಯೋದು ಅಷ್ಟೇ"

ಕಾರ್ಟೂನ್ ಚಿತ್ರದಲ್ಲಿ ಏನಾದ್ರೂ ಹೊಳೆದಾಗ ಹತ್ತುವ ಲೈಟ್ ಬಲ್ಬ್ ಹಾಗೆ ನಮ್ಮ ತಲೆ ಮೇಲು ಬಲ್ಬ್ ಹತ್ತಿತು. ಅಂತು ನಾವು ಮೂರು ಕೂತು ಇದನ್ನ ಬರಿತಾ ಇದ್ದೀವಿ ಶ್ರೀ.

ನಮ್ಮೆಲ್ಲರಿಂದ ಹುಟ್ಟು ಹಬ್ಬಕ್ಕೆ ಹೃದಯದಿಂದ ಶುಭಾಶಯಗಳು. ಗುರಿ ಮುಟ್ಟುವ ವರ್ಷವಿದು ಎಂದು ನಿರ್ಧರಿಸಿಯಾಗಿದೆ. ನಿಮ್ಮೆಲ್ಲ ಗುರಿಗಳನ್ನು ನೀವು ಒಂದು ಹೆಜ್ಜೆಗೂ ಕಷ್ಟ ಪಡದೆ ತಲುಪುವಂತಾಗಲಿ. ನಿಮ್ಮ ಮುಖದ ಮಂದಹಾಸ ಎಂದೂ ತಗ್ಗದಿರಲಿ, ಕೀಲಿ ಮಣೆ ಮೇಲೆ ಹರಿದಾಡಿ ಜಾದೂ ಮಾಡುವ ನಿಮ್ಮ ಕಲೆ ಬತ್ತದಿರಲಿ. ನಿಮ್ಮ ಮನದಲ್ಲಿ ತುಂಬಿ ಹರಿಯುವ ಪ್ರೀತಿ ವಾತ್ಸಲ್ಯ ಎಂದೂ ಇಂಗದಿರಲಿ. ಇದನ್ನು ಮನ ತುಂಬ ಹಾರೈಸಿ ಆ ನಿಮ್ಮ ಬಾಸ್ ಹತ್ರ ಈಡೇರಿಸು ಎಂದು ಅಪ್ಲಿಕೇಶನ್ ಹಾಕಿ ಒಪ್ಪಿಸಿ ಆಗಿದೆ. 

ಹ್ಯಾಪಿ ಹ್ಯಾಪಿ ಬರ್ತಡೆ 

ಕಾಮೆಂಟ್‌ಗಳು

  1. ಏನು ಹೇಳಲಿ ಈ ಪ್ರೀತಿಗೆ ವಿಶ್ವಾಸಕ್ಕೆ.. ಚಿರ ಋಣಿ.. ನೀವು ಸೃಷ್ಟಿಸಿದ ಅದ್ಭುತ ಪಾತ್ರ ಅರ್ಪಿತಾ.. ನನಗೆ ಹತ್ತಿರವಾದ ಪಾತ್ರ ವೀಣಾ.. ಇಬ್ಬರೂ ಕಿತ್ತಾಡದೆ.. ಹೊಂದಿಕೊಂಡು ನನಗೆ ದೇವರೇ ಕಳಿಸಿದ ಗೆಳತೀ ಸೇರಿಕೊಂಡು ಸೃಷ್ಟಿಸಿದ ಈ ಅದ್ಭುತ ಸಾಲುಗಳು, ಘಟನೆಗಳು ನನ್ನ ಹೃದಯವನ್ನು ಇನ್ನಷ್ಟು ಹಗುರ ಮಾಡಿತು.

    ನಿಮ್ಮ ಗೆಳೆತನಕ್ಕೆ.. ನಿಮ್ಮ ಬರವಣಿಗೆಗೆ.. ನಿಮ್ಮ ಸ್ನೇಹದ ವಲಯಕ್ಕೆ ನನ್ನ ಸಲಾಂ..

    ಧನ್ಯೋಸ್ಮಿ .. ಹೇ ಇದು ಸಂಜೀವಿನಿ ಪರ್ವತದಲ್ಲಿ ಇರುವ ಒಂದು ಚಿಕ್ಕ ತೃಣವಾಗುತ್ತದೆ.. ಆದರೂ.. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು