ಪುಟಗಳಲ್ಲಿ ಭಾವನಿಹಾರಿಕಳ ಕಣ್ಣಲ್ಲಿ ಒಂದು ಜಾರದ ಹನಿ ಮನೆ ಮಾಡಿತ್ತು. ಈ ದಿನವನ್ನು ಅವಳು ಬಹಳ ಸಲ ಊಹಿಸಿದ್ದಳು, ಯೋಚಿಸಿದ್ದಳು, ಹೀಗೆ ಪ್ರತಿಕ್ರಿಯಿಸಬೇಕು ಅಂತ ನಿರ್ಧರಿಸಿದ್ದಳು.. ಆದರೆ ಅಂತಹ ದಿನ ಎದುರು ಬಂದಾಗ, ಅವಳ ನಿರ್ಧಾರಗಳು, ಯೋಚನೆಗಳು, ಊಹೆಗಳು ಎಲ್ಲಾ ಮರೆತು ಹೋದವು ಅವನೆದುರು.
ಬರೆಯಲಾರೆ ಎಂದು ಮುಚ್ಚಿಟ್ಟ ಡೈರಿಯನ್ನು ಮತ್ತೆ ತೆರೆದಳು

ನಿನ್ನ ಕಂಡೆ ಇವತ್ತು, ಮುಗಿದು ಹೋಯಿತು ಕೊನೆಗೂ, ಇಷ್ಟು ದಿನ ಕಾದಿದ್ದು, ಹೆದರಿದ್ದು ಎಲ್ಲಾ ಮುಗಿತು. ಮತ್ತೆ ನಾವು ಒಂದೆ ಜಾಗದಲ್ಲಿ ನಿಂತಿದ್ದೆವು. ಒಂದು ನಗು, ಒಂದು ಪರಿಚಯ. ನಿನ್ನ ಧ್ವನಿ ಮತ್ತೆ ಕೇಳಿದೆ, ಆಮೇಲೆ ನೀನು ಹೊರೆಟುಹೋದೇ. ನೀನು ಬಂದಿದ್ದು ನಿಜವಾ ಎಂದು ಪ್ರಶ್ನಿಸುವಂತಾಯಿತು ನನಗೆ.
ನೀನಿನ್ನೂ ನನ್ನ ಕ್ಷಮಿಸಿಲ್ಲ. ನಾನು ಕೊಟ್ಟಿದ್ದು ಕ್ಷಮಿಸುವಷ್ಟು ಸಣ್ಣ ನೋವಲ್ಲ ಅಂತ ಗೊತ್ತು ನನಗೆ. ನಿನಗೆ ನಿರಾಶೆ ಮಾಡುವಲ್ಲಿ ನನ್ನ ವ್ಯಕ್ತಿತ್ವದ ದೌರ್ಬಲ್ಯವನ್ನು ಪ್ರದರ್ಶಿಸಿದ್ದೆ. ಅದು ಆತ್ಮ ವಿಶ್ವಾಸದಿಂದ ತುಂಬಿದ ನಿನ್ನ ವ್ಯಕ್ತಿತ್ವ ಸಹಿಸಲಿಲ್ಲ. ಒಮ್ಮೆ ನಮ್ಮಷ್ಟು ಬಿಚ್ಚು ಮನಸ್ಸಿನ ಪ್ರೀತಿ ಬೇರೆಯೆಲ್ಲೂ ಇರಲಿಲ್ಲ, ನಮ್ಮ ಭಾವನೆಗಳ ತಾಳೆ ಮೇಳ ಹಾಗೆ ಹೊಂದಿತ್ತು. ಆದರೆ ಈಗ ನಾವು ಅಪರಿಚಿತರು, ಅಪರಿಚಿತರಿಗಿಂತ ಕಡೆ ಏಕೆಂದರೆ ಬಹುಶಃ ನಮ್ಮ ಪರಿಚಯ ಮತ್ತೆಂದೂ ಆಗದು. ಇದು ನಿರಂತರ. ಈ ರಾತ್ರಿ ನಾನು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು.

“ನಿಹಾರಿಕ !!” ಎನ್ನುವ ಉದ್ಗಾರ ಹೊರಟಿತು ರಜತನ ಬಾಯಿಂದ. ಒಂದು ಕ್ಷಣದಲ್ಲಿ ಕಳೆದ ವರ್ಷಗಳ ಲೆಕ್ಕ ಹಾಕಿತು ಮನಸ್ಸು. ಕೋಣೆಯಲ್ಲಿ ಅತ್ತಿತ್ತ ಓಡಾಡುತ್ತಿದ್ದವನು, ಕೈ ಕುಡುವಿಕೊಂಡ ಮನಸ್ಸು ಗಟ್ಟಿ ಮಾಡಿಕೊಂಡ. ಏನೋ ನೆನಪಾದಂತೆ ತನ್ನ ಬೀರೂವಿನ ಮೇಲಿರುವ ಬಾಕ್ಸಿನಲ್ಲಿ ತನ್ನ ಹಳೆ ಡೈರಿಯನ್ನು ಹುಡುಕಿದ. ಪುಟಗಳಲ್ಲಿ ನೆನಪು ಅಚ್ಚಿಳಿದು ಕೂತಿದ್ದವು. ಬಹುಶಃ ಬರೆದರೆ ಮನಸ್ಸು ಹಗುರಾಗಬಹುದು ಎನಿಸಿತು ರಜತ್‍ಗೆ. ಎಷ್ಟೊ ವರ್ಷದ ಹಳೆ ಡೈರಿಯಲ ಹೊಸ ಹಾಳೆಯಲ್ಲಿ ಮತ್ತೆ ಬರೆದ.

ನಾನಿನ್ನೂ ಅವಳನ್ನು ಕ್ಷಮಿಸಿಲ್ಲ. ಅವಳನ್ನು ಇಂದು ಕಂಡ ತಕ್ಷಣ ತಿಳಿತು ನಂಗೆ. ಮತ್ತೆ ಅವಳಿದ್ದ ವಾತಾವರಣವನ್ನು ಹಂಚಿಕೊಂಡಿದ್ದು, ಹಳೆ ನೆನಪುಗಳು ಕಾಡ್ತಾ ಇದೆ. ಅವಳಲ್ಲಿ ಇನ್ನು ಆ ಬೇರೆಯವರ ಮಾತು ಕೇಳೊ ಚಟ ಇದ್ಯಾ? ಅವಳು ಇನ್ನು ಅಷ್ಟೆ ಮುಗ್ಧಳಾಗಿದ್ದಾಳಾ? ಅವಳು ಅಪರಿಚಿತಳ ಈಗ?? ಅಥವ ಪರಿಚಿತಳ?? ಅಥವ ಅಪರಿಚಿತ ಪರಿಚಿತಳ??
ಯಾಕಿನ್ನು ಅವಳು ಕಾಡ್ತಾಳೆ??!!”

“ಈಗ ನನಗೆ ಅರ್ಥವಾಗಿದೆ. ನೀನೆಂದು ನನ್ನ ಕ್ಷಮಿಸೊಲ್ಲ ಅಂತ. ನಮ್ಮ ನೆನ್ನೆಯನ್ನು ಇನ್ನು ಮರೆತಿಲ್ಲ ನೀನು. ಸಮಯ ಎಲ್ಲವನ್ನು ಮರೆಸುತ್ತದೆ ಅಂತ ಯಾರೊ ಹೇಳಿದ ನೆನಪು, ನನಗಿನ್ನು ಅನುಭವಾಗಿಲ್ಲ ಅದರ ಬಗ್ಗೆ. ಆದರೆ ನಿನ್ನ ಮಾತು ಹೇಳ್ತಾ ಇದೆ ನಿನ್ನ ಮನಸ್ಸು ಬೇರೆಯವರೆಡೆಗೆ ಬಾಗುತ್ತಿದೆ ಅಂತ. ಆದರೂ, ನಿನಗೆ ನಾನು ಕಾಣದೆ ಇರೊದಿಲ್ಲ ಅಲ್ವೆ. ನನ್ನ ದುಃಖ, ಪಶ್ಚಾತಾಪಕ್ಕೆ ಒಂದು ಉತ್ತರ ಹೇಳದೆ ಇರಲಾರೆ ನೀನು . ನಿನ್ನ ಗುಣವೆ ಅಂಥದು, ನಿನ್ನ ಮನಸ್ಸು ಅಷ್ಟು ದೊಡ್ಡದು. ಅರ್ಥವಾಗ್ತಾ ಇದೆ ನಂಗೆ, ಈಗ ಪ್ರಯೋಜನವಿಲ್ಲದೆ.”

“ಅವಳ ಕಣ್ಣಲ್ಲಿ ನೋವು ಮನೆ ಮಾಡಿದಂತಿದೆ. ನನ್ನೆಡೆಗೆ ಅವಳ ನಿಲುವು ಪಶ್ಚಾತಾಪದಿಂದ ಕೂಡಿದೆ. ಅದಕ್ಕೆ ಪ್ರತಿಕ್ರಿಯಿಸಬೇಕು ಅಂತ ಮನ ಹಂಬಲಿಸುತ್ತೆ. ಆದರೆ ಸಾಧ್ಯವಿಲ್ಲ. ನನ್ನಿಂದ ಅವಳಿಗೆ ಸಮಧಾನ ಮಾಡಲು ಸಾಧ್ಯವಿಲ್ಲ.”

“ನಾನೆಲ್ಲೂ ಹೋಗಲಾರೆ ಅನ್ನೊ ದೃಢ ನಂಬಿಕೆ ಇತ್ತು ನಿನಗೆ. ಕೈ ಕೊಡವಿಬಿಟ್ಟೆ . ಕೊನೆಯ ಬಾರಿ ನಿನ್ನನ್ನು ತಾಕಿದ ಈ ಬೆರಳು ತುದಿಗಳಲ್ಲಿ ಇನ್ನು ಬಿಸಿ ಆರಿಲ್ಲ. ಆದರೆ ನಿನ್ನ ಮನಸ್ಸು ತಣ್ಣಗಾಗಿದೆ, ಅದರ ಅಲೆಗಳು ನನ್ನ ಬೆರಳ ತುದಿಯವರೆಗೆ ತಾಕುತ್ತಿದೆ.”

“ಮನಸ್ಸು ಕುದಿಯುತ್ತಿದೆ. ಅಲ್ಲಿ ಹೋಗಲಾರೆ, ಹೋಗದೆ ಇರಲಾರೆ. ಅವಳನ್ನು ನೋಡಲಾರೆ, ನೋಡದೆ ಇರಲಾರೆ. ಸುಕನ್ಯಳ ಬಗ್ಗೆ ಯೋಚಿಸಿ ಸುಮ್ಮನಾಗುತ್ತೀನಿ. ಇಲ್ಲಾ ಅಂದ್ರೆ ಎಂದೋ ಹೊರೆಟು ಬಿಡುತ್ತಿದೆ.”

“ಅತ್ತೆ ಬಂದಿದ್ದರು ಇವತ್ತು. ನನಗೊಂದು ಸಂಬಂಧ ಬಂದಿದೆಯಂತೆ. ಒಮ್ಮೆ ಇವರ ಮಾತಿಗೆ ಕಟ್ಟು ಬಿದ್ದು ನಿನನ್ನು ಕಳೆದುಕೊಂಡಿದ್ದೆ. ಆದರೆ ಇವರನ್ನು ದೂರಲ್ಲ ನಾನು. ಇಲ್ಲಿ ದೋಷಿ ನಾನು. ನನಗೆ ನಂಬಿಕೆ ಇರಬೇಕಿತ್ತು.
“ಸಂಬಂಧ ಚೆನ್ನಾಗಿದೆ ಒಪ್ಪಿಕೊ” ಎಂದು ಹೇಳಲು ಬಂದಿದ್ದರು. ಏನು ಉತ್ತರಿಸಲಿಲ್ಲ ನಾನು. ಉತ್ತರ ಕೊಡಲು ಸಾಧ್ಯವಿಲ್ಲ ನನ್ನ ಹತ್ರ.
ಅಂದು ನೀನು ಬಂದಿದ್ದೆ, ಸುಕನ್ಯಳ ಜೊತೆ. ಪಕ್ಕದಮನೆಯವಳಾದರೂ ಸ್ವಂತ ತಂಗಿಯ ಸಮಾನ ಅವಳು ನಂಗೆ. ಚೆನ್ನಾಗಿ ನೋಡಿಕೊಳ್ತೀಯ ಅಲ್ವ ಅವಳನ್ನು ಅಂತ ಕೇಳಬೇಕೆಂದಿದ್ದೆ. ಆದರೆ ನಿನ್ನ ಕಣ್ಣುಗಳು, ಬೇರೆ ಏನೊ ಮಾತಾಡಿದಂತಿತ್ತು. ನನ್ನೆದುರು ಮುಜುಗರವಿರಬೇಕು ಅನಿಸಿತು. ಹಾಗಾದರೆ ನಾನು ಇನ್ನು ನಿನ್ನಲ್ಲಿ ಒಂದು ಸಣ್ಣ ಭಾವವನ್ನಾದರೂ ಹುಟ್ಟಿಸುತ್ತೀನಾ? ದ್ವೇಷವಾದರೂ ಸರಿ, ನಾನಿದ್ದೀನಿ ಅಂತ ನೀನು ಗುರುತಿಸಿದರೆ ಅದೆ ನನ್ನ ಕ್ಷಮೆ ಅಂದುಕೊಳ್ತೀನಿ.”

“ಸುಕನ್ಯಳ ಜೊತೆ ಅವಳ ಮನೆಗೆ ಹೋಗಿದ್ದೆ. ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅವಳ ಮನೆಯೊಳಗೆ ಕಾಲಿಟ್ಟಿದ್ದೆ. ಆದರೆ ಅವಳು ಅಲ್ಲಿದ್ದಿದ್ದು...... ಈಗಲೂ ಅವಳಿದ್ದ ಜಾಗದಲ್ಲಿ ಅವಳನ್ನು ಬಿಟ್ಟು ಬೇರೇನನ್ನು ಗಮನಿಸಲಾರೆ ನಾನು. ಯಾಕೆ ಇಷ್ಟು ದುರ್ಬಲವಾಗುತ್ತೆ ಮನಸ್ಸು ಅವಳನ್ನು ಕಂಡು. ೮ ವರ್ಷದ ಅಭ್ಯಾಸ ಯಾಕೆ ಅವಳನ್ನು ಕಂಡೋಡನೆ ಮುರಿದುಬೀಳುತ್ತೆ.
ಆದರೆ ಅವಳ ಬದಲಾಗಿದ್ದಾಳೆ. ಅವಳ ಯೋಚನೆಗಳು ಬದಲಾಗಿವೆ, ಅವಳಲ್ಲಿ ಒಂದು ಧೃಡತೆ ಬಂದಿದೆ. ಅವಳಲ್ಲಿ ಒಂದು ಗಾಂಭೀರ್ಯತೆ ಇದೆ. ಆದರೆ ಅವಳ ಮುಗ್ಧತೆ, ಅವಳ ನಗು..... ಇಲ್ಲ, ನಾನಿನ್ನು ಗಮನಿಸುವುದಿಲ್ಲ... ಇಲ್ಲ”

“ಧೋ ಅಂತ ಮಳೆ, ಅಂಗಡಿಯ ಮುಂಭಾಗದ ಚಾವಣಿ ಕೆಳಗೆ ನಿಂತು ಮಳೆ ತೆಳುವಾಗಲೂ ಕಾಯ್ತಾ ಇದ್ದೆ. ಹನಿಗಳು ಹಿಂದೊಮ್ಮೆ ಹೀಗೆ ಸಿಕ್ಕಿಕೊಂಡಿದ್ದೇವು ಅಂತ ನೆನಪಿಸಿತು. ಅಷ್ಟರಲ್ಲಿ, ನೀನು ಬಂದು ನಿಂತೆ ನನ್ನ ಪಕ್ಕ. ನಿಂತ ಅಷ್ಟು ಹೊತ್ತು ಒಂದು ಮಾತಿರಲಿಲ್ಲ. ನೀನು ಸರಿಯಾಗಿ ನನ್ನ ಕಡೆ ನೋಡಲೂ ಇಲ್ಲ. ನಾನು ನಿನ್ನ ಬಿಟ್ಟು ಬೇರೆಲ್ಲೂ ನೋಡಲಿಲ್ಲ. ಬೆರಳ ತುದಿ ತಾಕುತ್ತಿತ್ತು, ಜನ ಜಂಗುಳಿ ನೂಕುತ್ತಿತ್ತು. ಮಳೆ ತೆಳುವಾಗುವಷ್ಟರಲ್ಲಿ ನಾನು ಗುಂಪಿನಲ್ಲಿ ಸಿಕ್ಕಿದ ಮತ್ತೊಂದು ಜೀವಿ ನಿನಗೆ ಅಷ್ಟೆ ಅನಿಸಿತು. ಆದರೆ ತೆಳುವಾದ ತಕ್ಷಣ ನೀನು ಆಟೋ ಕರೆದು, ತಾಕುತ್ತಿದ್ದ ಕೈ ಬೆರಳುಗಳನ್ನು ಹಿಡಿದು ಆಟೋದಲ್ಲಿ ಕೂರಿಸಿ, ಅವನಿಗೆ ಮನೆ ವಿಳಾಸಿ ತಿಳಿಸಿ ಕಳಿಸಿಕೊಟ್ಟೆ ನನ್ನ. ಹೊರಡುವ ಮುನ್ನ ಒಂದು ಕ್ಷಣ ನಿನ್ನ ಕಣ್ಣ ನನ್ನ ಕಣ್ಣು ತಾಕಿತು. ಮೊದಲಿನ ಹಾಗೆ ಅಲ್ಲೆ ಒಂದು ಕ್ಷಣದಲ್ಲಿ ಒಂದು ಸಣ್ಣ ಮಾತುಕತೆ. ಆಟೋ ಮುಂದೆ ಹೋದಾಗ ಬಗ್ಗಿ ತಿರುಗಿ ನೋಡಿದ್ದೆ ನಾನು. ನೀನು ನಿನ್ನ ಕಾರಿನ ಒಳಗೆ ಕೂರುತ್ತಿದ್ದೆ.
ಏನು ಅರ್ಥ ಮಾಡಿಕೊಳ್ಳಬೇಕು ಅಂತ ಗೊತ್ತಾಗುತ್ತಿಲ್ಲ. ಇದು ಮನುಷ್ಯತ್ವವೊ, ನಿನ್ನ ಪ್ರೇಮದ ಅಳಿದುಳಿದ ಚೂರೊ, ಪರಿಚಯದ ಜವಾಬ್ದಾರಿಯೊ ಅಥವ ಸುಕನ್ಯಾಳ ಆತ್ಮಿಯತೆಯೊ??!!”

“ನಿರೀಕ್ಷಣೆ ಇಲ್ಲದ ಮಳೆಯಲ್ಲಿ, ಎದುರುನೋಡದ ಅವಳನ್ನು ಎದುರುಗೊಂಡೆ... ಅಂಗಡಿ ಮುಂದೆ ನಿಂತಿದ್ದಳು, ಉಟ್ಟಿದ ಸೀರೆ ಮೊಣಕಾಲಿನವರೆಗೆ ನೆಂದಿತ್ತು. ಆದರೆ ಅದರ ಬಗ್ಗೆ ಅವಳ ಗಮನವಿರಲಿಲ್ಲ. ಹಾಗೆ ಅವಳನ್ನು ಗಮನಿಸದಂತೆ ಕಾರಿನಲ್ಲಿ ಹೋಗುವವನಿದ್ದೆ ನಾನು. ಅದ್ಯಾವ ಅಗೋಚರ ಶಕ್ತಿ ತಡಿಯಿತೊ ಕಾಣೆ. ಕಾರಿಳಿದು ಅವಳ ಬಳಿ ನಿಂತೆ. ತಾಕುತ್ತಿದ್ದ ಕೈಬೆರಳುಗಳಲ್ಲಿ ಅದೇ ಹಳೆ ಸ್ಪರ್ಶ ಜ್ಞಾನವಿತ್ತು. ಮಳೆ ಕಮ್ಮಿಯಾದ ತಕ್ಷಣ ಅವಳನ್ನು ಆಟೋ ಹತ್ತಿಸಿ ಕಳಿಸಿದೆ. ..... ಯಾಕೆ ಇನ್ನು ಅವಳಲ್ಲಿ ನನ್ನ ಮನ ಕಲಕುವ ಶಕ್ತಿ ಇದೆ”

“ನಾಳೆ ಹಬ್ಬ, ಯಾಕೋ ಮತ್ತೊಮ್ಮೆ ಸಜ್ಜಾಗಲು ಸವರಿಸುತ್ತಿದೆ ಮನಸ್ಸು. ಆರಿಸಿದ ಹಸಿರು ಸೀರೆಯನ್ನು ಪ್ರೀತಿಯಿಂದಲೇ ಬದಿಗಿಟ್ಟು ಮನಸ್ಸಿಗೆ ಬುದ್ಧಿ ಹೇಳಿದೆ. ಇದು ಸಲ್ಲದು ಎಂದು. ಎಷ್ಟು ಸಮಯ ಕಳೆದಿದೆ, ನಮ್ಮ ಮಧ್ಯೆ ಎಷ್ಟು ಅಂತರ ಬಂದಿದೆ ಆದರೂ ಒಂದು ಸಣ್ಣ ಪ್ರೊತ್ಸಾಹಕ್ಕೆ ನನ್ನ ಮನಸ್ಸು ಮತ್ತೆ ಹೋಯ್ದಾಡುತ್ತಿದೆ. ಬಹುಷಃ ನಾನು ಮನಸ್ಸಿನ ಮಾತನ್ನು ಬಿಟ್ಟು ಬುದ್ಧಿಗೆ ಲಗಾಮು ಕೊಡುವುದು ಒಳ್ಳೆಯದು. ನಾಳೆ ಅತ್ತೆ ಹೇಳಿದ ಗಂಡು ಮನೆಗೆ ಬರುತ್ತಿದ್ದಾನೆ. ಬಹುಷಃ ಇದೇ ಸರಿಯಾದ ದಾರಿಯಿರಬಹುದೇನೊ ಅನ್ನೊ ಅನುಮಾನ ಬರುತ್ತಾ ಇದೆ.”

“ಸುಕನ್ಯ ಹಬ್ಬಕೆ ಮನೆಗೆ ಕರೆದಿದ್ದಾಳೆ. ಹೋಗದೆ ಇರಲಾರೆ. ಸುಕನ್ಯಳ ಮನೆಯ ಆರ್ಕಷಣೆಗಿಂತ, ಅವಳನ್ನು ನೋಡಬಹುದೇನೊ ಅನ್ನೊ ಕುತೂಹಲ ನನ್ನನ್ನು ಆಳುತ್ತಿದೆ. ಹೇಗೆ ಕಾಣಬಹುದು ಸಿಂಗರಿಸಿಕೊಂಡು ಅವಳು??!!”

 “ಇಷ್ಟು ವರ್ಷಗಳಾದ ಮೇಲೆ ಮೊದಲ ಬಾರಿಗೆ ನೀನು ನನ್ನನ್ನು ಕಣ್ಣೆತ್ತಿ ನೋಡಿದ್ದೀಯಾ. ಯಾಕಿವತ್ತು ಇಷ್ಟು ಆಸಕ್ತಿ ನನ್ನಲ್ಲಿ??!! ಕೊನೆಗೂ ನನ್ನ ಕ್ಷಮಿಸಿದ್ದೀಯಾ ಅಥವಾ .... ಅಥವಾ ನಿನಗೆ ನೊವು ಕೊಟ್ಟ ಮನಸ್ಸು ಸಂತೋಷ ಹುಡುಕಿಕೊಂಡು ಹೊರಟಿದೆ ಅನ್ನೊ ಸಿಟ್ಟೊ??!!... “

“ಅವಳನ್ನು ನೋಡಲು ಗಂಡು ಬಂದಿದ್ದ ಇವತ್ತು. ಹಳದಿ ಬಣ್ಣದ ಸೀರೆಯಲ್ಲಿ ಅವಳು........... ಇದೆ ಸರಿಯಾದ ದಾರಿ, ಅವಳದೆ ಬೇರೆ ದಾರಿ ನನ್ನದೆ ಬೇರೆ ದಾರಿಯೆಂದು ಬಹಳ ಹಿಂದೇನೆ ನಿರ್ಧಾರವಾಗಿದೆ. ಆದರೂ ಯಾಕೊ ಮನಸ್ಸಿಗೆ ಬೆಂಕಿ ಹಾಕಿದಂತಾಯಿತು ಇವತ್ತು.”

“ಸುಕನ್ಯಳಿಗೆ ಹುಷಾರಿಲ್ಲ, ಅವಳ ಆರೋಗ್ಯ ವಿಚಾರಿಸಲು ಹೋದವಳಿಗೆ ಎದುರು ಕಂಡೆ ನೀನು. ಅವಳನ್ನು ಕಂಡರೆ ನಿಂಗೆ ಬಹಳ ಇಷ್ಟವಲ್ಲವೆ. ಕಾಣುತ್ತಿತ್ತು ನಿನ್ನ ಆರೈಕೆಯಲ್ಲಿ. ನೀನು ಅವಳಿಗೆ ಸರಿಯಾದವನು.”

“ಸುಕನ್ಯಳಿಗೆ ಹುಷಾರಿಲ್ಲ. ಅವಳ ಅರೈಕೆಯಲ್ಲಿ ತೊಡಗಿದ್ದೆ ನೀನು. ಸುಕನ್ಯಳ ಕಡೆ ಇದ್ದ ನಿನ್ನ ಮಮತೆ ಕಣ್ಣಿಗೆ ಕಟ್ಟಿದಂತಿದೆ. ಬರಿ ಸುಕನ್ಯಳ ಕಡೆ ಒಂದೆ ಅಲ್ಲ. ಇಷ್ಟು ದಿವಸದಲ್ಲಿ ನಾನು ನೋಡಿದ್ದೆ ಅವಳ ಮಾತು, ಅವಳ ನಡೆ. ಬೇರೆಯವರಿಗೆ ಒಂದು ಎಳ್ಳಷ್ಟು ನೋವು ಮಾಡಲು ಇಷ್ಟಪಡಲ್ಲ ಅವಳು. ಇಷ್ಟು ವರ್ಷ ಸಿಟ್ಟಿನಲ್ಲಿ ಕಟ್ಟಿಕೊಂಡ ಅವಳ ರೂಪ ತಪ್ಪೇನೊ ಅನಿಸುತ್ತಿದೆ. ಅಷ್ಟು ವರ್ಷದ ಹಿಂದೆ ನನ್ನ ಸಿಟ್ಟಿಗೆ ತಲೆ ಕೊಟ್ಟು ಅವಳು ತಪ್ಪು ಮಾಡಿದವಳು ಅಂತ ನಿರ್ಧರಿಸುವಲ್ಲಿ ತಪ್ಪು ಮಾಡಿದ್ನಾ ನಾನು ??!!”

“ಸುಕನ್ಯಳ ಮದುವೆ ಮಾತುಕತೆ ಶುರುವಾಗಿದಿಯಂತೆ. ಸುಖವಾಗಿರು ಗೆಳೆಯ. ಅವಳು ಬಹಳ ಒಳ್ಳೆಯವಳು. ಸಾಮಾನ್ಯವಾಗಿ ದಿನ ನೀನು ನಿನ್ನ ಸ್ನೇಹಿತನ ಜೊತೆ ಬಂದು ಹೋಗುವುದನ್ನು ನನ್ನ ಕೋಣೆಯ ಕಿಟಕಿಯಿಂದ ಕಾಣಬಲ್ಲೆ. ಅವಳು ನಿಂಗೆ ಸರಿಯಾದ ಜೋಡಿ. ಅವಳಿಗೆ ಒಳ್ಳೆ ಮನಸ್ಸಿದೆ, ಆತ್ಮ ವಿಶ್ವಾಸವಿದೆ ಎಲ್ಲಾ ರೀತಿಯಲ್ಲೂ ನಿನಗೆ ಹೊಂದಿಕೆಯಾಗುತ್ತಾಳೆ.
೧೯ ವರ್ಷದವಳಾಗಿದ್ದ ನನಗೂ ಈಗನ ನನಗೂ ತುಂಬಾ ವ್ಯತ್ಯಾಸವಿದೆ. ನೀನು ಹೆಚ್ಚು ಕಡಿಮೆ ಹಾಗೆ ಇದ್ದೀಯಾ. ಆದಕ್ಕೆ ಸುಕನ್ಯ ನಿಂಗೆ ಸರಿಯಾದ ಜೋಡಿ. ನಮ್ಮ ಮಧ್ಯೆ ೮ ವರ್ಷಗಳಲ್ಲಿ ಸಾವಿರ ವರ್ಷದ ಅಂತರ ಮೂಡಿದೆ. ಅವಳೇ ಸರಿಯಾದ ಜೋಡಿ“

“ಅಂತು ಇಷ್ಟು ತಿಂಗಳ ಮಾತುಕತೆ, ದೊಡ್ಡವರನ್ನು ಒಪ್ಪಿಸಿದ್ದು, ಎಲ್ಲಾದಕ್ಕೂ ಇಂದು ಕೊನೆಯಾಯಿತು. ಇನ್ನು ದೊಡ್ಡವರು ನಿರ್ಧರಿಸುತ್ತಾರೆ ಎಲ್ಲವನ್ನು. ಮನಸ್ಸು ಹರ್ಷಗೊಂಡಿದೆ. ಆದರೆ ಇನ್ನು ಆ ನೆಪದಲ್ಲಿ ನಾನು ಅಲ್ಲಿ ಹೋಗಲಾರೆ, ಬಹುಷಃ ಇದೆ ಒಳ್ಳೆಯದೇನೊ... ನಂಗೇನು ಅರ್ಥವಾಗ್ತಾ ಇಲ್ಲ.
ಇಷ್ಟು ತಿಂಗಳಲ್ಲಿ ಒಂದು ಮಾತು ಅರ್ಥವಾಗಿದೆ ನಂಗೆ ಅಂದು ಅವಳೇನೆ ಮಾಡಿರಬಹುದು. ಆದರೆ ನಾನು ಅವಳಿಗೆ ಸಮಯ ಕೊಡಬೇಕಿತ್ತು. ೧೯ ವರ್ಷದ ಹುಡುಗಿ ತಾನಾಗೆ ತನ್ನ ಮದುವೆಯ ನಿರ್ಧಾರವನ್ನು ಮಾಡುವಷ್ಟು ಪಕ್ವ ಮನಸ್ಸು ಹೊಂದಿರುತ್ತಾಳೆ ಎಂದು ತಿಳಿದಿದ್ದು ತಪ್ಪು. ಸಹಜವಾಗೆ ಅವಳ ಅತ್ತೆಯ ಸಲಹೆಯನ್ನು ಕೇಳಿ, ನಾನು ಬೇಡ ಅಂದವಳನ್ನು ಇನ್ನೆಂದು ಕ್ಷಮಿಸುವುದಿಲ್ಲ ಅಂತ ಎದ್ದು ಬಂದಿದ್ದು ತಪ್ಪು.”

“ಇಂದು ನೀ ಬಂದಿದ್ದೇಯಂತೆ ನಿನ್ನ ಸ್ನೇಹಿತನೊಂದಿಗೆ. ಮದುವೆ ಕಾಗದ ಕೊಡಲು. ನನ್ನ ಹೆಸರಿಗೆ ಪ್ರತ್ಯೇಕವಾಗಿ ಕಾಗದ ಕೊಟ್ಟಿದ್ದೀಯಾ. ಅದು ಇನ್ನು ನನ್ನ ಕನ್ನಡಿ ಮುಂದಿದೆ. ಇಷ್ಟು ದ್ವೇಷವೇ ನನ್ನ ಕಂಡು. ಆ ಕಾಗದ ಒಡೆದು ನೋಡುವಷ್ಟು ಧೈರ್ಯವಿಲ್ಲ ನನ್ನಲ್ಲಿ. .....
ನಿನಗೆ ನನ್ನ ಕಂಡರೆ ಸಿಟ್ಟಿದೆ ಅಂತ ಗೊತ್ತು, ಸ್ವಲ್ಪ ದ್ವೇಷವೂ ಇರಬಹುದು. ನಾನಿದ್ದೀನಿ ಅಂತ ನೀನು ಗುರುತಿಸೊದಕ್ಕೂ ಇಷ್ಟ ಪಡೊದಿಲ್ಲ ಅಂತ ತಿಳಿದಿರುವಾಗ. ಹೀಗೆ ನಿನ್ನ ಮದುವೆ ಕಾಗದ, ನನಗಾಗಿ ಅಂತ?? ಯಾಕೆ ಈ ಕ್ರೌರ್ಯ??“

ರಭಸದಿಂದ ಮುಚ್ಚಿದಳು ತನ್ನ ಡೈರಿಯನ್ನು ನಿಹಾರಿಕ. ಅವನನ್ನು ಕಳೆದುಕೊಂಡ ಸಮಯದಿಂದ, ಈ ಡೈರಿಯ ಅವಳ ಸಂಗಾತಿಯಾಗಿದ್ದು. ಆದರೆ ಯಾಕೊ ಇಂದು ಇದರಿಂದಲೂ ಸಮಾಧಾನ ಸಿಗಲಿಲ್ಲ ಅವಳಿಗೆ.
ಅವಳ ಹೆಸರು ಬರೆದು ಅವನು ಕೊಟ್ಟ ಮದುವೆ ಆಮಂತ್ರಣ ಪತ್ರ ಅವಳನ್ನು ಅಣಕಿಸುತಿತ್ತು.
ಒಡೆದು ನೋಡಿ ಬಿಡು. ಅಕ್ಷರಗಳಲ್ಲಿ ನೋಡಿದಾಗ ಇದು ನಿಜವೆಂದು ಮನ ನಂಬುತ್ತೆ, ಇಲ್ಲ ಕೊನೆಯ ತನಕ ತನ್ನ ಆಸೆ ಬಿಡುವುದಿಲ್ಲ. ಇದು ಮುಗಿದು ಹೋಗಲಿ  ಪೂರ್ಣವಾಗಿ ಎಂದಿತು ಬುದ್ಧಿ. ಆದರೆ ಮನಸ್ಸು ಒಪ್ಪಲಿಲ್ಲ. ಅಲ್ಲಿ ಕಾಡುತ್ತಿದ್ದ ನೋವು ಬಿಡಲಿಲ್ಲ.
ಹೇಗೆ ತಿರುಗಿದರು ಆ ಪತ್ರ ಅವಳನ್ನೆ ನೋಡಿತ್ತಿರುವಂತೆ ಭಾಸವಾಯಿತು ಅವಳಿಗೆ. ಕೊನೆಗೆ ಹರಿದು ಹಾಕಲೂ ಕೈಗೆತ್ತುಕೊಂಡಳು. ಹರಿಯಲು ಮನಸ್ಸಾಗಲಿಲ್ಲ.

ಇಲ್ಲ ನಾನು ಅವನಿಗೆ ಕೇಡು ಬಯಸುವುದಿಲ್ಲ ಮತ್ತೆ ಮದುವೆ ಹೆಣ್ಣು ಸುಕನ್ಯ. ಸ್ವಂತ ತಂಗಿಯ ಸಮಾನ. ಅವಳ ಮದುವೆಯ ಆಮಂತ್ರಣ ಪತ್ರವನ್ನು ಹೇಗೆ ಹರಿಯಲಿಇದೆ ಯೋಚನೆಯನ್ನು ಮನದಲ್ಲಿ ಧೃಡವಾಗಿ ನೆಲೆಸಿಕೊಂಡು ಲಕೋಟೆ ಬಿಡಿಸಿದಳು.
ಮದುವೆಯ ಆಮಂತ್ರಣ ಪತ್ರದೊಂದಿಗೆ ಇದ್ದದ್ದು ಒಂದು ಪತ್ರ.....

 “ನಿಹಾರಿಕ,
ಇನ್ನು ನನಗೆ ತಡೆಯಲಾಗುತ್ತಿಲ್ಲ. ನೀನು ನನ್ನ ಆತ್ಮವನ್ನು ಭೇದಿಸಿದ್ದಿ. ಅರ್ಧ ನೋವಿನಲ್ಲಿದ್ದೀನಿ ಅರ್ಧ ಇನ್ನು ಆಶಿಸುತ್ತಿದ್ದೀನಿ. ನಾನು ನಿಂಗೆ ನ್ಯಾಯ ಮಾಡಿಲ್ಲ, ತಿರಸ್ಕರಿಸಿದ್ದೀನಿ, ಕೋಪಿಸಿಕೊಂಡಿದ್ದೀನಿ, ದೂರ ಮಾಡಿದ್ದೀನಿ ಆದರೆ ನನ್ನ ಭಾವನೆಗಳ ಮೂಲ ಬದಲಾಗಿಲ್ಲ. ನಾನು ಮತ್ತೆ ನನ್ನನ್ನು ನಿನಗೆ ಅರ್ಪಿಸುತ್ತಿದ್ದೀನಿ, ನನ್ನ ಹೃದಯ ೮ ವರ್ಷದ ಹಿಂದೆ ಇರುವುದಕ್ಕಿಂತ ಇಂದು ಜಾಸ್ತಿ ನಿನ್ನದಾಗಿದೆ. ನಿನ್ನ ಬಿಟ್ಟು ಇನ್ಯಾರನ್ನು ನಾನು ಪ್ರೀತಿಸಿಲ್ಲ. ನಿನಗಾಗಿ ನಾನು ಇಲ್ಲಿಗೆ ಬಂದೆ ಇವರಿಗೆ ಸಹಾಯ ಮಾಡಲು. ನಿನಗಾಗಿ ಮಾತ್ರ ನಾನು ಯೋಚಿಸುವುದು, ಯೋಜಿಸುವುದು. ನಿನಗೆ ಕಾಣ್ತಾ ಇಲ್ವ ಇದು. ನನಗೆ ಇನ್ನು ಬರೆಯಲು ಆಗ್ತಾ ಇಲ್ಲ. ನಾನು ಹೋಗುತ್ತಿದ್ದೇನೆ, ನನ್ನ ವಿಧಿ ತಿಳಿಯದೆ. ಒಂದು ನೋಟ, ಒಂದು ಅಕ್ಷರ ಸಾಕು. ಆದರೆ ದಯವಿಟ್ಟು ನಾನು ತಡ ಮಾಡಿದೆ ಅನ್ನಬೇಡ. ನನ್ನೆಡೆಗಿದ್ದ ನಿನ್ನ ಭಾವನೆಗಳು ಮುಗಿದಿವೆ ಅಂತ ಹೇಳಬೇಡ. ಅದೇ ಜಾಗದಲ್ಲಿ ಕಾದಿರುತ್ತೀನಿ. ಒಮ್ಮೆ ಬಾ...”
ಕಾಗದ ಓದ ಬೀಳದೆ ಇಷ್ಟು ದಿನ ಕೂತ ಹನಿ ಕೊನೆಗೂ ಜಾರಿತು, ಒಂದು ಸಣ್ಣ ನಗು. ಕಾಗದದ ಅಕ್ಷರಗಳ ಮೇಲೆ ಕೈಯಾಡಿಸಿದಳು. ತಕ್ಷಣ ಅನುಮಾನ ಹುಟ್ಟಿತು ಕಾಗದದ ಜೊತೆಗಿದ್ದ ಆಮಂತ್ರಣ ಪತ್ರವನ್ನು ತೆಗೆದು ನೋಡಿದಳು,

“ಚಿ| ಸೌ| ಸುಕನ್ಯ ಮತ್ತೆ ಚಿ | ಸಂತೋಷ”

ಎರಡನ್ನು ಎದೆಗವಚಿಕೊಂಡು ಮನ ಪೂರ್ತಿ ಅತ್ತಳು ನಿಹಾರಿಕ


“ ಅವಳು ಬಂದಿದ್ದಳು.............................”  

ಕಾಮೆಂಟ್‌ಗಳು

 1. ಏಕ ಪಾತ್ರಾಭಿನಯದ ಸೊಗಸು ನೋಡುಗರಿಗೆ ಇಷ್ಟವಾದರೂ ಅ ಪಾತ್ರ ಮಾಡುವವರಿಗೆ ಒಂದು ಸವಾಲೇ ಸರಿ. ಎರಡು ಅಥವಾ ಅನೇಕ ಪಾತ್ರಗಳ ಸಂಭಾಷಣೆ.. ಭಾವ.. ಆ ಪಾತ್ರಗಳ ಒಳತೋಟಿ.. ಎಲ್ಲವನ್ನು ಅರಿತು ಬೆರೆತು ಕಲಸಿ ಅಭಿನಯ ನೀಡುವುದು ಸುಲಭದ ಕೆಲಸವಲ್ಲ..

  ಅಂಥಹ ಸವಾಲನ್ನು ಇಷ್ಟು ನಾಜೂಕಾಗಿ ಓದುಗರ ಮನ ಮುಟ್ಟಿಸುವ ಕಾರ್ಯದಲ್ಲಿ ನಿವಿ ಮತ್ತೊಮ್ಮೆ ಗೆದ್ದಿದ್ದಾರೆ.

  ಪ್ರೀತಿ ಎನ್ನುವುದು ಒಂದು ಕ್ಷಣಕ್ಕೆ ಹುಟ್ಟಿದರು ಅದಕ್ಕೆ ಅಂತ್ಯಮಾತ್ರ ಇಲ್ಲವೇ ಇಲ್ಲ.. ಪ್ರೀತಿ ದ್ವೇಷವಾದರೂ ಅದು ಪ್ರೀತಿಯ ಇನ್ನೊಂದು ಮಗ್ಗಲೇ ಆಗಿರುತ್ತದೆ. ಇದಕ್ಕೆ ಸಾಕ್ಷಿ ರಜತ್ ಮಾತುಗಳು.. ನಿಹಾರಿಕಾಳ ಒಳ ತುಡಿತ.

  ಸೂಪರ್ ನಿವಿ ಹಂತಹಂತವಾಗಿ ಅಮಲೇರಿಸುತ್ತಾ ಕಟ್ಟ ಕಡೆಯಲ್ಲಿ ನಿಮ್ಮ ಸ್ಪೆಷಲ್ ಇಟ್ಟಿರುವುದು ಸೂಪರ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ಕಥೆ ನಿಮ್ಮ ಸಹಾಯವಿಲ್ಲದೆ ಮುಗಿಸಲು ಸಾಧ್ಯವಿರಲಿಲ್ಲ. ತುಂಬಾ ತುಂಬಾ ಥ್ಯಾಂಕ್ಸ್ :D

   ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು