ಶರಧಿಯ ಮಡಿಲಲ್ಲಿ........ ಯಾವ ಮೋಹನ ಮುರಳಿ ಕರೆಯಿತೊ.
ಶರಧಿ,
ಸಮುದ್ರ, ಸಾಗರ, ಕಡಲು... ಹಲವು ಹೆಸರುಗಳ ಒಂದು ಮುಖವನ್ನು ನಾನು ಮಲ್ಪೆಯಲ್ಲಿ ಕಂಡೆ.
ಅಗಾಧವಾದ
ಸಾಗರದ ಅಂಚಿನಲ್ಲಿ ನಿಂತು, ಎಷ್ಟು ದೂರಾ ಕಣ್ಣು ಹಾಯಿಸಿದರೂ ಕಾಣುವ ಕೊನೆಯಿಲ್ಲದ ಕಡಲ ರಾಶಿ. ಮೈ
ಮರೆತು ನಿಂತು ನೋಡಿದೆ, ಸಮಯದ ಅರಿವಿಲ್ಲದೆ, ಪರಿವೆ ಇಲ್ಲದೆ.
ಉಸಿರೆಳೆದುಕೊಂಡರೆ
ಗಾಳಿಯಲ್ಲಿ ಬಿಸಿಲಿನ ಝಳಕ್ಕೆ ಆರಿದ ಉಪ್ಪು ನೀರಿನ ಮೆಲುಕು. ಬೀಸುತ್ತಿದ್ದ ಗಾಳಿಗೆ ಹಾರಾಡುತ್ತಿದ್ದ
ಕೂದಲೊಂದಿಗೆ ಮನವು ಹೊಯ್ದಾಡುತ್ತಿತ್ತು. ಪುಟ್ಟ ದೊಡ್ಡ ಅಲೆಗಳು ದಡವನ್ನೇ ಹೊತ್ತೊಯ್ಯುವಂತೆ ರಭಸದಿಂದ
ಅಪ್ಪಳಿಸುತ್ತಿದ್ದವು.
ನಿಟ್ಟುಸಿರೆಳೆದು
ಮರಳ ದಡದ ಮೇಲೆ ಕೂತು, ಮಂಡಿಯ ಮೇಲೆ ಕೈ ಊರಿಕೊಂಡು ಕೂತವಳಿಗೆ ಬೇರೆಯದೇ ಪ್ರಪಂಚಕ್ಕೆ ಸಾಗಿದ ಭಾವ.
ಎಷ್ಟೋ
ವರ್ಷಗಳ ನಂತರದ ಭೇಟಿ ಅಲ್ಲವೆ ! ನನ್ನ ಮತ್ತೆ ಶರಧಿಯ ಮಧ್ಯೆ ಶುರುವಾಯಿತು, ಅಡೆ ತಡೆಗಳಿಲ್ಲದ ಮಾತುಕತೆ.
“ಬಂದೆಯಾ
?? ಬರಲೇ ಬೇಕಾಯಿತು ಅಲ್ಲವೇ ನನ್ನ ಬಳಿ. ನನ್ನ ಸೆಳತವೇ ಹಾಗೆ” ಎಂದು ಗಹಗಹಿಸಿದಂತಿತ್ತು ಅದರ ಭೋರ್ಗರೆತ.
ಸುಮ್ಮನೆ
ಮುಗುಳ್ನಕ್ಕೆ ನಾ, ಮನದಲ್ಲೆ ಹೇಳುತ್ತಾ “ನಿನ್ನ ಸೆಳತವೋ, ನಿನ್ನ ನಶೆಯೋ. ನೊಡೋಣ!!! ನಾನು ತಡೆಯಬಲ್ಲೆನೇ
ಅದರ ಪ್ರಭಾವ" ಎಂದು.
ಸಾಗರದ
ಮಾತುಗಳೆ ಹಾಗೆ, ರಮಿಸುತ್ತವೆ, ಅಣಕಿಸುತ್ತವೆ, ಸಿಟ್ಟಿಗೇರಿಸುತ್ತವೆ, ಶಾಂತಿ ತರುತ್ತದೆ, ಇಲ್ಲವೆ
ನಮ್ಮದೇ ಭಾವನೆಗಳನ್ನ ನಮಗೆ ಪ್ರತಿಬಿಂಬಿಸುತ್ತವೆ.
ಅಂತಹದೆ
ಒಂದು ಭಾವ ಪ್ರತಿಭಾವದ ವ್ಯವಹಾರ ಶುರುವಾಗಿತ್ತು ನಮ್ಮ ಮಧ್ಯೆ.
ಸುತ್ತಲಿನ
ಜನರ ಕೇಕೆ, ನಗು, ಕೂಗಿನ ನಡುವೆ ಕೂತು ದಿಟ್ಟಿಸುತ್ತಿದ್ದ ನಾನು ಒಂಟಿ. ಸಮಯದ ಜಾರುವಿಕೆಯ ಅರಿವಿಲ್ಲದೆ
ಸಾಗಿತ್ತು. ಹೊತ್ತು ಕಳೆದಂತೆ, ಎಲ್ಲಾ ಕೂಗು, ಕೇಕೆ, ನಗು ಕಡಲಿನ ಅಬ್ಬರದಲ್ಲಿ ಅಡಗಿ ಹೋಯಿತು. ಎಲ್ಲೆಡೆ
ಬರಿ ಸಮುದ್ರದ ಗಡಸು ಧ್ವನಿ ಮತ್ತೆ ಅಲೆಗಳ ಕಲರವ ಮತ್ತೆ ನಡು ನಡುವ ರಭಸ ಹೆಚ್ಚಿಸುವ ಗಾಳಿ.
ದಿಗಂತದ
ಗಡಿಯನ್ನು ದಾಟಿ ಹಬ್ಬಿದ ಸಾಗರದ ಅಗಾಧತೆ ನನ್ನನ್ನು ಮೂಕಳನ್ನಾಗಿ ಮಾಡಿತು. ಅಂತಹ ದೊಡ್ಡ ಸಮುದ್ರದ ಮುಂದೆ ನಾವೆಷ್ಟು ಚಿಕ್ಕವರು
ಎಂಬ ಭಾವ, ಅದರ ಅಬ್ಬರದ ಮುಂದೆ ನನ್ನ ಅಹಂ ಚೂರಾದಂತೆ ಭಾಸವಾಯಿತು.
ತಲೆ
ಕುಡುವಿ ಒಮ್ಮೆ ಸುತ್ತಲೂ ನೋಡಿದೆ. ಸುತ್ತಲೆಲ್ಲಾ ಇದ್ದ ಅದೇ ಜನರ ಜಾತ್ರೆ, ಏನೂ ಬದಲಾಗಿರಲಿಲ್ಲ.
ಆದರೆ ಮೊದಲಿನ ಹಾಗೂ ಇರಲಿಲ್ಲ. ಅವರ ಕೂಗು ಕೇಳುತ್ತಿತ್ತು. ಆದರೆ ಅದನ್ನು ನಾನು ಗ್ರಹಿಸುತ್ತಿರಲಿಲ್ಲ,
ಎಲ್ಲೋ ನಮ್ಮ ಮಧ್ಯೆಯ ಒಂದು ಸೇತುವೆ ಮುರಿದುಬಿದ್ದಂತಿತ್ತು. ಎಲ್ಲೋ ಒಂದು ಕೊಂಡಿ ಕಳಚಿದಂತೆ. ಹೆಡ್
ಫೋನ್ಸ್ ತೆಗೆದಿಟ್ಟಂತೆ. ಎಷ್ಟು ಹಾಯ್ ಎನಿಸಿತು ಒಂದು
ಕ್ಷಣ.
“ನೀನು
ಮಾತಿಗಿಳಿದಿದ್ದು ನನ್ನೊಂದಿಗೆ ನೆನಪಿರಲಿ” ಎಂದು ಶರಧಿ ನೆನಪಿಸಿದಂತಿತ್ತು.
“ಮಾತು??!!
ನಿನ್ನ ನನ್ನ ಮಧ್ಯೆ ಎಲ್ಲಿಯ ಮಾತು. ಬರಿ ಜಗ್ಗಾಟ. ಹಿಡಿತಕ್ಕಾಗಿ ಹೋರಾಟ” ಎನ್ನುತಿತ್ತು ನನ್ನ ಮನ.
ಕಡಲೆಡೆಗೆ
ಇದ್ದ ನನ್ನ ಭಯವಿಲ್ಲದ ಮೂಕ ಮಾತು ಅದಕ್ಕೆ ಹಿಡಿಸಲಿಲ್ಲ ಅನಿಸುತ್ತೆ. ನಿಧಾನವಾಗಿ ಅಲೆಗಳ ರಭಸ ಹೆಚ್ಚಿದಂತಾಯಿತು.
ಸ್ವಲ್ಪ ಹಿಂದೆ ಜರುಗಿ ಕೂತೆ. ಮತ್ತೆ ಅದೆ ಗಹಗಹಿಸಿದ ನಗು. ಕೇಕೆಯ ಅಬ್ಬರ.
“ನೀನು
ನನ್ನ ಸೋಲಿಸಲಾರೆ” ಎಂಬ ಮಾತನ್ನು ಚೀರಿ ಹೇಳಬೇಕೆಂದಿದ್ದೆ. ಆದರೆ ಕ್ರಮೇಣ ಅದರ ಅಬ್ಬರದಲ್ಲೂ ಒಂದು
ಸಂಗೀತ ಕಂಡಿತು, ಅದರ ಧ್ವನಿ ನನ್ನ ರಮಿಸಿದಂತಿತ್ತು, ಅದರ ಸೆಳೆತಕ್ಕೆ ನಾನು ಮೈಮರೆತೆ. ಕಣ್ಣು ಮುಚ್ಚಿ
ಅನುಭವಿಸಿದೆ ಆ ನವಿರಾದ ಭಾವ.
“ಯಾವ ಮೋಹನ ಮುರಳಿ ಕರೆಯಿತೊ, ದೂರ ತೀರಕೆ ನಿನ್ನನು..
ಯಾವ ಬೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನೂ....”
ಮೋಹನನ
ಮುರಳಿ ರಾಗಕ್ಕೆ ಮೈ ಮರೆತು ಹಾಡುತ್ತಾ, ಆಡುತ್ತಿದ್ದ ಗೋಪಿಕೆಯರ ಹಾಗಾಗಿತ್ತು ನನ್ನ ಮನ.
ಸಮುದ್ರಕ್ಕೆ
ಜೀವವಿದೆ ಎನ್ನುವ ನಂಬಿಕೆ ಇದ್ದವಳಿಗೆ, ಅದರ ರಾಗ, ಭಾವ ನಶೆಯೇರಿಸುತ್ತಿತ್ತು.
“ನಾ
ಒಳಗೆ ಬರಲೆ??!!” ಎನ್ನುವ ಮುಗುಳ್ನಗೆಯ ಪ್ರಶ್ನೆಯನ್ನು ಅಲೆಗಳು ತುಂಟತನದಿಂದ ಕೂಡಿದ ಮೆಲು ಧ್ವನಿಯಲ್ಲಿ
ಕೇಳಿದವು.
ಅಬ್ಬರಸಿ
ಬೊಬ್ಬೆರೆಯುತ್ತಿದ್ದ ಸಾಗರಕ್ಕೂ, ಮನದೊಳಗೆ ಹೆಜ್ಜೆ ಇಡಲು ಅಪ್ಪಣೆ ಕೇಳುತ್ತಿದ್ದ ಶರಧಿಗೂ ಅಜಗಜಾಂತರ
ವ್ಯತ್ಯಾಸ.
“ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ”
ನಿಧಾನವಾಗಿ
ಸಾಗರ ನನ್ನ ಆವರಿಸಿದಂತಿತ್ತು. ನನ್ನ ಸುತ್ತ ಮುತ್ತಲೆಲ್ಲಾ ಸಮುದ್ರ, ನಾನು ಸಮುದ್ರದ ಮಧ್ಯೆ ಕುಳಿತ
ಅನುಭವ. ಮಾತುಕತೆಯ ಗಂಭೀರತೆ ಹೆಚ್ಚಾದಂತೆ, ಸಮುದ್ರ ನನ್ನ ಮೈ ಮನಸನೆಲ್ಲ ಆವರಿಸಿ, ಕಬಳಿಸಿದಂತಿತ್ತು.
ಅಪ್ಪಳಿಸುತ್ತಿದ್ದ ಅಲೆಗಳು ಮನಸ್ಸಿನ ಬಾಗಲನ್ನು ತಟ್ಟುತಿತ್ತು. ಮನಸಿನ ಸುತ್ತಲಿದ್ದ ಬೇಲಿ ಮುರಿಯಲು ಹವಣಿಸಿದಂತಿತ್ತು.
“ಸಪ್ತ ಸಾಗರದಾಚೆ ಎಲ್ಲೋ
ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೇ?”
ಬಾಗಿಲನ್ನು
ತೆಗೆದು ಒಳ ಅಹ್ವಾನಿಸಲು ಅಂಜಿಕೆ ಆದರೆ ಬರ ಮಾಡಿಕೊಳ್ಳದಿರಲು ಸಾಧ್ಯವಿಲ್ಲದ ಸೆಳೆತ. ಸ್ವಾಗತಿಸಿದ
ಸಾಗರವು ತನ್ನ ರಭಸವನ್ನು ಸ್ವಲ್ಪವೂ ತಗ್ಗಿಸದೆ ನನ್ನೊಳಗೆ ಅಪ್ಪಳಿಸಿತು.
ನುಗ್ಗಿದ
ಸಾಗರದ ಧ್ವನಿ ಕಿವಿಯಲ್ಲಿ ತುಂಬಿತ್ತು. ನಿಧಾನವಾಗಿ ಶಾಂತವಾದ ಕಡಲ ಬಾಹುಗಳಲ್ಲಿ ನನ್ನ ಹತ್ತಾರು ದಿಕ್ಕಿಗೆ
ಓಡುವ ಮನಸ್ಸು. ಒಂದೊಂದೇ ಭಾವ, ನೆನಪು, ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿ, ತೂಗಿ, ಅಳೆದು, ಸುರಿದು,
ಪರಿಶೀಲಿಸಿ, ಶೋಧಿಸಿ, ಭೇದಿಸಿ ಪ್ರಶ್ನಿಸಿತು ನನ್ನ.
ಎಂದೋ
ದಡದಾಚೆಗೆ ಬೀಸಿ ಎಸೆದ ಚಾವಿಗಳನ್ನು ಹುಡುಕಿ ತಂದು, ಮನಸ್ಸಿನ ಕತ್ತಲು ಕೋಣೆಗಳನೆಲ್ಲ ತೆರೆಯಿತು.
ಮಬ್ಬುಗಟ್ಟಿ, ಮಾಸಲಾದ ಹತ್ತಾರು ನೆನಪುಗಳು ಅದಕ್ಕೆ ಅಂಟಿದ ಕೋಟಿ ಕೋಟಿ ಭಾವಗಳು. ಭಾವಗಳಲ್ಲಿ ಅಡಗಿದ
ಮುಖಗಳು.
ಕಣ್ಣು
ಮುಚ್ಚಿ ಕೂತವಳ ಕಣ್ಣಂಚಿನಲಿ ನಿಂತ ನೀರು ತುಳುಕಲು ಬಿಡಬಾರದೆಂಬ ಹಟ ನನ್ನದು. ಆ ಹನಿಯನ್ನು ತುಳುಕಿಸಿ,
ಅದರೊಂದಿಗೆ ನನ್ನ ಕತ್ತಲನ್ನು ಕಳುಹಿಸುವ ಸಾಹಸ ಅದರದ್ದು.
ನೀರು
ತುಳುಕಿತು.......
ನಾ
ಸೋತೆ.
“ವಿವಶವಾಯಿತು ಪ್ರಾಣ – ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ”
ಅದರ
ಭೋರ್ಗರೆತ ತಗ್ಗಿ, ಅಲೆಗಳ ಪುಟ್ಟ ಕಲರವ ಮಾತ್ರ ಉಳಿದಾಗ ಮನದಲ್ಲಿ ಏನು ಉಳಿದಿರಲಿಲ್ಲ. ಎಲ್ಲಾ ಖಾಲಿಯಾದ
ಭಾವ. ಆದರೆ ಒಂಟಿತನವಿರಲಿಲ್ಲ. ಒಂದು ತರಹದ ಶಾಂತಿ ಅವರಿಸಿದಂತಿತ್ತು. ಎಲ್ಲವೂ ಮುಗಿದ ಮೇಲೆ ಬಿಡುವ
ನಿಟ್ಟುಸಿರಿನ ಶಾಂತಿ.
ಕೊನೆಗೂ
ಶರಧಿಯೆ ಗೆದ್ದಿದ್ದು. ಆದರೆ ತಾನು ಗೆದ್ದು ನನ್ನನ್ನು ಗೆಲ್ಲಿಸಿದ ಸಮುದ್ರಕ್ಕೆ ಮನದಲ್ಲೆ ನಮಿಸಿದೆ.
ಕಣ್ಣು ಬಿಟ್ಟು ನೋಡಿದೆ. ಕಣ್ಣೆದುರು ಇದ್ದ ಮಂಜಿನ ಪೊರೆ ಮಾಯವಾಗಿತ್ತು.
ಮನಸ್ಸಿಲ್ಲದ
ಮನಸಿನಿಂದ ಈ ಲೋಕಕ್ಕೆ ವಾಪಸ್ ಬಂದೆ, ಕ್ರಮೇಣ ಸುತ್ತಲಿನ ಶಬ್ದಗಳು ಗ್ರಹಿಕೆಗೆ ಬಂದವು. ಎಲ್ಲವೂ ಹಾಗೆ
ಇತ್ತು, ಏನು ಬದಲಾಗಿರಲಿಲ್ಲ. ಆದರೆ ಏನೊ ಬದಲಾದ ಭಾವ. ಎಲ್ಲವನ್ನು ಬೀಳ್ಕೊಟ್ಟವಳಿಗೆ ತನ್ನತನ ಬಿಡಲು
ಸಾಧ್ಯವಾಗಲಿಲ್ಲ. ಅದೇ ಭಾವಗಳು, ಅದೇ ನೆನಪುಗಳು, ಅದೇ ತೀರದ ಆಸೆಗಳು, ಅದೇ ಮುಗಿಯದ ಕಥೆಯ ಕವಲುಗಳು.
ಎಲ್ಲವೂ ಅಲ್ಲೆ ಇದ್ದವೂ, ಆದರೆ ಅವಗಳ ಹಿಡಿತ ಕಮ್ಮಿಯಾಗಿತ್ತು.
ದೂರದಿಂದ
ಕೇಳಿತು ಕೂಗು “ಅಮ್ಮ....!!”
“ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು”....
ಎದ್ದು
ಕಡಲಿಗೆ ಬೆನ್ನು ಹಾಕಿ ಹೊರಟವಳಿಗೆ ತಿರುಗಿ ನೋಡುವಷ್ಟು ಮೋಹವನ್ನೂ ಉಳಿಸದೆ ಕಳುಹಿಸ ಕೊಟ್ಟ ಸಾಗರಕ್ಕೆ
ಒಂದು ನಗೆಯ ಬಿಳ್ಕೊಡುಗೆಯನ್ನಿಟ್ಟು ಬಂದೆ.
ಇಂದಿಗೂ
ಕಣ್ಣು ಮುಚ್ಚಿ ಉಸಿರೆಳೆದುಕೊಂಡರೆ ಸಾಗರವೇ ನುಗ್ಗಿ ಬಂದು ಆವರಿಸದಂತಹ ಭಾವ.
ಕಡಲು ಒಡಲಿನಷ್ಟೇ ಅಗಾಧ.. ಪ್ರತಿಯೊಂದು ದೊಡ್ಡ ದೊಡ್ಡ ವಸ್ತುವಿಗೆ ಹೋಲಿಕೆಯಾಗಿ ನಿಲ್ಲೋದು ಈ ಕಡಲು. ಅಗಾಧ ಜಲರಾಶಿಯನ್ನೇ ಹೊಂದಿದ್ದರು ಅದಕ್ಕೆ ಅಹಂ ಇರುವುದಿಲ್ಲ. ಅದರ ಮುಂದೆ ಅಹಂ ಅಂದರೆ ಒಂದೇ ಸಲಕ್ಕೆ ನಮ್ಮನ್ನು ಆಪೋಶನ ತೆಗೆದುಕೊಂಡು ಬಿಡುತ್ತದೆ.
ಪ್ರತ್ಯುತ್ತರಅಳಿಸಿಅಂಥಹ ಶರಧಿಯ ಮುಂದೆ ತಲೆಬಾಗಿಸಿ ಸೋಲಿಸಿದರು ಗೆಲುವೆಂಬ ಭಾವ ಹೊರಸೂಸುವ ಆ ಅಲೆಗಳು.. ನಮ್ಮನ್ನು ತೃಣ ಮಾತ್ರ ಎಂದುಕೊಳ್ಳದೆ ಬರಸೆಳೆದು ಅಪ್ಪಿಕೊಳ್ಳುವ ವಿಶಾಲ ಸಾಗರದ ಜೊತೆಯಲ್ಲಿನ ಮಾತುಕತೆಗಳು ನಿಜಕ್ಕೂ ಸಮಾಧಾನ ನೀಡುವುದು ಸುಳ್ಳಲ್ಲ.
ಕಲಕಿ ಹೋದ ಮನಸ್ಸನ್ನು ತುಳುಕಿಸುವ ಸಾಮರ್ಥ್ಯ ಹೊಂದಿರುವ ಈ ಸಮುದ್ರವನ್ನು ಆಪ್ತ ಗೆಳೆಯನ್ನಾಗಿ ಮಾಡಿಕೊಂಡು ಅದರ ಜೊತೆಯಲ್ಲಿನ ಮಾತುಗಳನ್ನೂ ಹಿತ ಮಿತವಾಗಿ ಬಡಿಸಿರುವ ನಿಮ್ಮ ತಾಕತ್ ಪೂರ್ಣ ಬರಹಕ್ಕೆ ಸಲಾಂ,.
ಸುಂದರ ಹಾಡನ್ನು ಅಲೆಗಳ ಜೊತೆಯಲ್ಲಿ ಹೊತ್ತು ತರುವ ಕಪ್ಪೆ ಚಿಪ್ಪಿನ ಹಾಗೆ ಹೊಂದಿಸಿ ಸಮೀಕರಿಸಿ ಬರೆದಿರುವ ನಿಮ್ಮ ಶೈಲಿ ಸೂಪರ್,
ಇಷ್ಟವಾಯಿತು,,,,ನಿವಿ ಬರಹ.. ಕಡೆಯಲ್ಲಿ ಮಗ ಕರೆದಾಗ ಹೇಳುವ ಆಹ್.. ಸೂಪರ್.. ಸುಂದರ ಚಪ್ಪಾಳೆ ನಿಮ್ಮ ಬರಹಕ್ಕೆ ಮತ್ತು ನಿಮ್ಮ ತುಳುಕಿದ ಮನಕ್ಕೆ
ಕಡಲೊಡನೆ ಮಾತಿಗಿಳಿದ ನಿಮ್ಮ ಬರಹವು ನಮಗೂ ಅಲ್ಲಿಗೊಮ್ಮೆ ಯಾತ್ರಿಸಲು ಪ್ರೇರೇಪಿಸುವಂತಿದೆ.
ಪ್ರತ್ಯುತ್ತರಅಳಿಸಿಎಂ. ಗೋಪಾಲಕೃಷ್ಣ ಅಡಿಗರ ಅದ್ಭುತ ರಚನೆಯನ್ನು ಹದವಾಗಿ ಬೆರೆಸಿಕೊಟ್ಟಿದ್ದೀರ.
ಅರೆ ನಾನೊಬ್ಬ ಮಾತ್ರಹೀಗೆ ಅಂದುಕೊಂಡಿದ್ದೆ, ನಿಮಗೂ ಈತರಹದ ಹವ್ಯಾಸ ಇದೆಯಾ,ನಿಮ್ಮ ಲೇಖನದಲ್ಲಿನ ಪ್ರತಿ ಪದಗಳನ್ನುಓದುತ್ತಿದ್ದರೆ ನಾನೇ ಕಡಲಿನ ಜೊತೆ ಮಾತನಾದುತ್ತಿರುವಂತಹ ಅನುಭವ ಆಯಿತು. ಅದರಲ್ಲೂ "ಯಾವ ಮೋಹನ ಮುರಳಿ ಕರೆಯಿತು" ಕಡಲಿನ ಸಂಭಾಷಣೆಯಲ್ಲಿ ಬಳಸಿಕೊಂಡಿರುವುದು ನಿಮ್ಮ ಮನಸಿನ ಪರಿಶುದ್ಧ ಭಾವನೆಗಳ ಮೆರವಣಿಗೆ ದರ್ಶನಮಾಡಿಸುತ್ತದೆ. ಬಹಳಖುಷಿಯಾಯ್ತು
ಪ್ರತ್ಯುತ್ತರಅಳಿಸಿ