ಬೆಸುಗೆಯ ಮಲ್ಪೆ
ಸುಮಾರು ದಿವಸದಿಂದ
ಮನೆಯವರಿಗೆ ಸೂಕ್ಷ್ಮವಾಗಿ ಎಲ್ಲಾದರೂ ಹೊಗೋಣ ಅಂತ ಸನ್ನೆ ಮಾಡ್ತಾನೆ ಇದ್ದೆ. ಅವರಿಗೆ ಅರ್ಥವೇ ಅಗಿರಲಿಲ್ವೊ
ಅಥವಾ ಅರ್ಥವಾಗಿ ಯಾಕೆ ಸಿಕ್ಕಿಕೊಳ್ಳುವುದು ಅಂತ ಸುಮ್ಮನಿದ್ದರೋ ಗೊತ್ತಿಲ್ಲ. ಅಂತೂ ಒಂದು ದಿನ ಬಾಯಿ
ಬಿಟ್ಟು ಕೇಳೆ ಬಿಟ್ಟೆ “ರೀ ಪ್ಲೀಸ್ ಎಲ್ಲಾದ್ರೂ ಟ್ರಿಪ್ ಹೊಗೋಣ, ಬೆಂಗಳೂರು ಬೋರ್ ಆಗ್ಬಿಟ್ಟಿದೆ”
ಅದೇನು ಯೋಚಿಸುತ್ತಿದ್ರೋ
ಒಮ್ಮೆಲೆ “ಸರಿ ಎಲ್ಲಿ ಅಂತ ಜಾಗ ನೋಡು ಹೊಗೋಣ” ಅಂದೇ ಬಿಟ್ರು. ನನ್ನ ಸ್ಮೈಲಂತು ಪೂರ್ತಿ ಆ ಕಿವಿಯಿಂದ
ಈ ಕಿವಿಯ ತನಕ ಇತ್ತು.
ಚಿಕ್ಕ ಮಂಗಳೂರು
– ಬೇಡ, ಆದಿಗೆ ಚಳಿ ಹತ್ತಿದ್ರೆ ಕಷ್ಟ
ಊಟಿ – ಹಿಂದಿನ ಸಲಾನು
ಅಲ್ಲೆ ಅಲ್ವಾ ಹೋಗಿದ್ದು
ಮುನ್ನಾರು – ನಮ್ಮ
ಬಡ್ಜೆಟ್ಗೆ ಬರೊಲ್ಲ
ಗೋವಾ – ತುಂಬಾ ದೂರ
ಮೈಸೂರು – ತುಂಬಾ
ಹತ್ರ
..........................................
ಹೀಗೆ ಸುಮಾರು ಜಾಗಗಳನ್ನು ಆರಿಸಿ, ಗುಣಿಸಿ, ಭಾಗಿಸಿ .... ಕೊನೆಗೂ ಯಾವುದು ನಿರ್ಧಾರವಾಗಿರಲಿಲ್ಲ.
ಅಪರೂಪಕ್ಕೆ ಒಳ್ಳೆ
ಕೆಲಸ ನನ್ನ ಕೈಯಿಂದ ಗೊತ್ತಿಲ್ಲದೆ ಆಗ್ಬಿಡುತ್ತೆ, ಹಾಗೆ ಬಹಳ ಸಮಯದ ಹಿಂದೆ Groupon ಅನ್ನೊ ಒಂದು
ವೆಬ್ಸೈಟಿಗೆ ಸೇರಿಕೊಂಡಿದ್ದೆ. ಅವರು ನಮ್ಮ ಮೈಲ್ನಲ್ಗಿ ಡಿಸ್ಕೌಂಟ್ಗಳ ಕೂಪನ್ ಕಳಿಸುತ್ತಾರೆ, ಅದರಲ್ಲಿ
ಬಂದ ಒಂದು ಕೂಪನ್ ಮಲ್ಪೆಯ “ಪ್ಯಾರಡೈಸ್ ಐಲ್” ಸ್ಪಾ ರೆಸಾರ್ಟ್ನಲ್ಲಿ ೨ ರಾತ್ರಿ ೩ ದಿನ ತಂಗಲು ಬಂದಿತ್ತು.
ನಮ್ಮ ಬಡ್ಜೆಟ್ಗೆ ಸರಿಯಾಗಿತ್ತು. ಹಾಗೆ ತುಂಬಾ ದೂರ/ಹತ್ರನೂ ಆಗಿರಲಿಲ್ಲ. ಅಂತೂ ೧೫ನೇ ತಾರೀಖಿನಿಂದ
ಅಲ್ಲಿ ಬುಕ್ ಮಾಡಿಯಾಯಿತು. ಅಲ್ಲಿ ತನಕ ಕಾರ್ ಡ್ರೈವ್ ಮಾಡಿಕೊಂಡು ಹೋಗುವುದು ಅಂತಾನೂ ನಿರ್ಧಾರವಾಯಿತು.
ಸರಿ ಮನೆಯಲ್ಲಿ ಗಡಿಬಿಡಿ
ಶುರು, ಯಾವ ಬಟ್ಟೆ, ಏನು ಲೋಷನ್, ಹಾಗೆ ವಾಟ್ಸಾಪ್ ಮತ್ತೆ ಫೇಸ್ಬುಕ್ನಲ್ಲಿ “ಯಿಪ್ಪಿಇಇಇಇಇಇ... ಮಲ್ಪೆ
ಟ್ರಿಪ್” ಅಂತ ಒಂದು ಕೂಗು ಹಾಕಿ, ಅಮ್ಮನಿಗೆ ವಿಷಯ ತಿಳಿಸಿ, ಹುಷಾರಾಗಿರ್ತೀವಿ ಅಂತ ಭರವಸೆ ಕೊಟ್ಟು.
ಬ್ಯಾಗ್ ಪ್ಯಾಕ್ ಮಾಡಿ ೧೪ರ ರಾತ್ರಿ ಮಲಗಿದಾಗ, ಹೊರಡುವ ಉತ್ಸಾಹದಲ್ಲಿ ನಿದ್ದೆ ಹತ್ತದು.
೫ ಗಂಟೆಗೆ ಎದ್ದು
ರೆಡಿಯಾಗಬೇಕಾದವಳು ೪ ಗಂಟೆಗೆ ಎದ್ದು ದಡಬಡಗುಡಿಸಿದೆ. ಅಂತು ಅದು ತಗೊಂಡ್ಯ, ಇದು ಬೇಡ್ವಗಳ ಮಧ್ಯ
ನಾವು ಮಲ್ಪೆ ದಾರಿ ಹಿಡಿದೆವು.
ನಮ್ಮ ರೂಟ್ ಇದ್ದದ್ದು
ಹೀಗೆ ಬೆಂಗಳೂರು-ಹಾಸನ-ಸಕಲೇಶಪುರ-ಮಂಗಳೂರು-ಉಡುಪಿ-ಮಲ್ಪೆ. ಭರ್ತಿ ೪೧೦ ಕಿ.ಮೀ ಹಾದಿ. ಸಿ.ಡಿ ತುಂಬಾ
ಹಾಡು, ಮನಸ್ಸಿನ ತುಂಬ ಉತ್ಸಾಹ, ಏನಾದರೂ ಈ ಟ್ರಿಪ್ ಚೆನ್ನಾಗಿ ಎಂಜಾಯ್ ಮಾಡಲೇಬೇಕು ಅನ್ನೋ ಹುಮ್ಮಸ್ಸಿನಿಂದ
ಸಾಗಿತ್ತು ನಮ್ಮ ಪಯಣ.
ಮಂಗಳೂರು ಹೈವೇಲಿ
ಹಾಸನ ದಾಟಿದ ಮೇಲೆ ಒಂದು ಪುಟ್ಟ ಹೈವೇ ರೆಸ್ಟೋರೆಂಟ್ನಲ್ಲಿ ನಮ್ಮ ತಿಂಡಿ. ಅಷ್ಟು ಹೊತ್ತಿಗೆ ಸೂರ್ಯ
ನಗುತ್ತಿದ್ದ, ಬಿಸಿಲು ಹಾಸುತ್ತಿದ್ದ. ಸನ್ ಗ್ಲಾಸೆಸ್ ಏರಿಸಿಕೊಂಡು ಮತ್ತೆ ಹೊರಟೆವು.
ದೋಣಿಗಲ್ ಇಂದ ಘಾಟ್
ಶುರುವಾಯಿತು. ಅಂದುಕೊಂಡಷ್ಟು ರಸ್ತೆ ಹಾಳಾಗಿರಲಿಲ್ಲ ಮತ್ತೆ ಸ್ಟಿರಿಯೋದಲ್ಲಿ ಆಮೀರ್ ಖಾನ್ ಸಿಮಿಮಾದ
“ಆಲ್ ಇಜ ವೆಲ್” ಹಾಡು ಬರ್ತಾ ಇತ್ತು. ಹಾಡಿನೊಂದಿಗೆ ನಾವು ಜೋರಾಗಿ ಹಾಡ್ತಾ ಘಾಟ್ ಇಳಿಯಲು ಶುರು
ಮಾಡಿದೆವು.
ತಿರುವು ಮುರುವು
ರಸ್ತೆಗಳು, ಒಂದು ಕಡೆ ಕಡಿದ ಬೆಟ್ಟ ಇನ್ನೊಂದು ಕಡೆ ಕಾಡು ತುಂಬಿದ ಪ್ರಪಾತ, ಗಟ್ಟಿ ಉಸಿರೆಳಿದುಕೊಂಡರೆ,
ಇಡೀ ನಿಸರ್ಗವೇ ಮೈಯೊಳಗಿಳಿದಂತಾಗುತ್ತದೆ. ಮಧ್ಯ ಮಧ್ಯ ನಿಲ್ಲಿಸಿ ನಮ್ಮ ಫೋಟೊ ತೆಗೆಯುವ ಚಟಿ ತೀರಿಸಿಕೊಳ್ಳುತ್ತಾ
ಹೋದೆವು.
ಕಾಡು ದಾಟಿದ ಮೇಲೆ
ಕಾಫಿ ತೋಟಗಳು ಕಣ್ಣ ತಣಿಸಿದವು, ಕಾಫಿ ಗಿಡಗಳು ಹೂ ಬಿಟ್ಟಿದ್ದವು, ಅದರ ಘಮ್ ಎನ್ನುವ ಸುವಾಸನೆ ಮೈ ಮನವನೆಲ್ಲ ತಣಿಸಿದವು. ಮಲ್ಲಿಗೆ ಮತ್ತೆ ಸಂಪಿಗೆ ಸುಗಂಧವನು
ಸೇರಿಸಿ ಮೇಲೆ ಜೇನುತುಪ್ಪವನ್ನು ಹಾಕಿದ ಹಾಗಿತ್ತು ಅದರ ಸುವಾಸನೆ.
ದಾರಿಯಲ್ಲಿ ಸಿಕ್ಕಿದ
ಊರು ಉಪ್ಪಿನಂಗಡಿ. ಅಲ್ಲಿ ಕೆಸರು ಗದ್ದೆ ಓಟವನ್ನು ಆಯೋಜಿಸಿದ್ದರು. ನಮಗಂತು ಒಂದು ಸುವರ್ಣ ಅವಕಾಶ
ಸಿಕ್ಕಿದಂತಾಯಿತು. ಸರಿ ನಾನು ಮತ್ತೆ ಚಿರು ಹೊರಟೆವು ಅದರ ಫೋಟೊಗಳನ್ನು ತೆಗೆಯಲು. ಸುಮಾರು ೭೦-೮೦
ಜೊತೆ ಕೋಣಗಳು ಇದ್ದವು ಭಾಗವಹಿಸಲು. ನಮಗೆ ಸ್ಪರ್ಧೆಯ ಓಟ ನೋಡಲು ಸಿಗಲಿಲ್ಲ ಆದರೆ ಅದಕ್ಕಿಂತ ಮುಂಚೆ
ನೆಡೆಯುವ ಅಭ್ಯಾಸದ ಓಟ ನೋಡಲು ಸಿಕ್ಕಿತು. ಒಂದು ತುದಿಯಿಂದ ಇನ್ನೊಂದು ತುದಿಯ ತನಕ ಆ ಕೆಸರಿನಲ್ಲಿ,
ಆ ಕೋಣಗಳು ಹುಲಿನೋ ಸಿಂಹವೋ ಬೆನ್ನು ಬಿದ್ದಿರುವ ಹಾಗೆ ಮತ್ತಿನಲ್ಲಿ ಓಡುತ್ತಿದ್ದವು. ಅದನ್ನು ಓಡಿಸುವ
ಅವರ ಪಾಲಕರಿಗೂ ಮತ್ತು ಹತ್ತಿದ ಹಾಗಿತ್ತು.
ಬಹಳ ದಿನಗಳ ಆಸೆಯಾಗಿತ್ತು
ಕೆಸರು ಗದ್ದೆಯ ಓಟವನ್ನು ಸೆರೆಹಿಡಿಯಬೇಕು ಎನ್ನುವುದು. ಅಂತೂ ಅಲ್ಲಿ ತೃಪ್ತಿಯಾಗುವಷ್ಟು ಫೋಟೊಗಳನ್ನು
ತೆಗೆದು ಕಬ್ಬಿನಹಾಲನ್ನು ಕಂಠಪೂರ್ತಿ ಕುಡಿದು ಹೊರೆಟೆವು. ಇಷ್ಟು ಹೊತ್ತಿಗೆ ಬಿಸಿಲು ಏರಿತ್ತು, ಧಗೆಯಾಗಲು
ಶುರುವಾಗಿತ್ತು. ಆದರೆ ಆ ಬಿಸಿಲು ನಮ್ಮ ಉತ್ಸಾಹವನ್ನು ಕಮ್ಮಿ ಮಾಡಲಿಲ್ಲ.
ಮಂಗಳೂರು ತಲುಪುವಷ್ಟರಲ್ಲಿ
ಸುಸ್ತ ಕಾಣಿಸಲು ಶುರುವಾಗಿತ್ತು, ಇನ್ನು ಸ್ವಲ್ಪವೇ ದೂರ ಎನ್ನುತ್ತಾ ಎಲ್ಲೂ ನಿಲ್ಲಿಸದೆ ಕಾರು ಓಡುತ್ತಲೇ
ಇತ್ತು.
ಆದರೆ ಮಂಗಳುರು ದಾಟಿದ
ಮೇಲೆ ಮಲ್ಪೆಯ ತನಕವು ಒಂದೇ ಒಂದು ಮೈಲಿಗಲ್ಲಾಗಲಿ, ದಾರಿಯ ವಿವರಗಳಾಗಲಿ, ಊರಿನ ವಿವರಗಳಾಗಲಿ ಇರಲಿಲ್ಲ.
ಸುಸ್ತು, ಬಿಸಲ ಧಗೆಯ ಮಧ್ಯೆ ಇದು ಸ್ವಲ್ಪ ಕಿರಿಕಿರಿಯೆನಿಸಿದರೂ, ರಜೆಗೆ ಬಂದಿದ್ದೇವೆ ಅನ್ನುವ ಹುಮ್ಮಸ್ಸು
ಇಳಿದಿರಲಿಲ್ಲ.
ಅಂತೂ ಉಡುಪಿ ದಾಟಿ
ಮಲ್ಪೆ ಇನ್ನು ಆರೇ ಕಿ.ಮೀ ಎಂದಾಗ ಧಗೆ, ಕಿರಿಕಿರಿಯ ಬದಲಿಗೆ ಒಂದು ಹುರುಪು ಮನೆ ಮಾಡಿತು. ಸುಮಾರು
ಮಧ್ಯಾಹ್ನ ೨.೩೦ರ ಹೊತ್ತಿಗೆ ನಮ್ಮ ರೆಸಾರ್ಟ್ ತಲುಪಿದೆವು. ಬೀಚಿನ ಎದುರಿಗೆ ಇತ್ತು ರೆಸಾರ್ಟ್ ಮತ್ತೆ
ಎಲ್ಲಾ ರೂಮುಗಳಿಂದ ಸಮುದ್ರ ಕಾಣುವಂತೆ ಇತ್ತು. ಒಂದು ಕ್ಷಣ ಸಮುದ್ರ ಕಂಡ ತಕ್ಷಣ, ಮೈ ಧಣಿವೆಲ್ಲ ಆರಿ
ಒಮ್ಮೆ ಆ ಉಪ್ಪು ಮಿಶ್ರಿತ ಗಾಳಿಗೆ ತಣ್ಣಗಾದ ಭಾವ. ಆದರೆ ಸುಡುವ ಸೂರ್ಯ ಮತ್ತೆ ನೆನಪಿಸಿದ ಸುಸ್ತಾಗಿದೆ
ಅಂತ.
ಚೆಕ್ ಇನ್ ಮಾಡಿ,
ತಣ್ಣಗೆ ಒಂದು ಸ್ನಾನ ಮಾಡಿ ನಾವು ಊಟ ಮಾಡಲು ಹೋದೆವು. ಸೊಂಪಾಗಿ ಊಟ ಮುಗಿಸಿ ಏ.ಸಿ ರೂಮಿನಲ್ಲಿ ಸುಸ್ತು
ನಿವಾರಿಸಿಕೊಳ್ಳಲು ಮಲಗಿದೆವು.
ಸಂಜೆ ಹೊತ್ತಿಗೆ
ಬೀಚಿಗೆ ಜನ ತುಂಬಲು ಶುರುವಾಯಿತು. ನಾವು ಎದ್ದು ಬೀಚಿಗೆ ಸೂಕ್ತವಾದ ಬಟ್ಟೆಗಳನ್ನು ಧರಿಸಿ, ಕ್ಯಾಮೆರಾ,
ಟ್ರೈಪಾಡ್ ಹಿಡಿದು ಹೊರೆಟೆವು.
ಆದಿಯನ್ನು ತುಂಬಾ
ಚಿಕ್ಕವನಿದ್ದಾಗ ಸಮುದ್ರ ತೋರಿಸಿದ್ವಿ ಆದರೆ ಅದು ಅವನ ನೆನಪಿನಲ್ಲಿ ಇರಲಿಲ್ಲ. ಅವನ ಪ್ರಕರ ಇದು ಅವನ
ಮೊದಲ ಅನುಭವ. ಅವನ ಖುಷಿ ನೋಡೆ ನಮ್ಮ ಖುಷಿ ಜಾಸ್ತಿಯಾಗಿತ್ತು. ಅಂಥಹ ಅಗಾದ ಸಮುದ್ರವನ್ನು ನೋಡಿ ಅವನಿಗೆ
ನಂಬಲು ಸಾಧ್ಯವಾಗಲಿಲ್ಲ. ಅಷ್ಟಲ್ಲದೆ ಅದರಲ್ಲಿ ನಾವು ಆಡಲು ಬಿಡುತ್ತೇವೆ ಅಂತ ಕೇಳಿ ಇನ್ನು ಉತ್ಸಾಹವೇರಿತು
ಅವನಿಗೆ. ಅಪ್ಪ ಮಗನನ್ನು ಆಡಲು ಬಿಟ್ಟು ನಾನು ಫೋಟೊ ಕ್ಲಿಕ್ಕಿಸುವ ಕಾರ್ಯಕ್ರಮವನ್ನು ಕೈಗೆತ್ತುಕೊಂಡೆ.
ಮುಳುಗುವ ಸೂರ್ಯ,
ರಜೆಯ ವಿಶ್ರಾಂತಿ, ವಿಶಾಲವಾದ ಸಮುದ್ರದಲ್ಲಿ ಗಂಡ
ಮತ್ತೆ ಮಗನ ಆಟದ ನಗು, ಕೇಕೆಗಳು. ಆ ಕ್ಷಣದಲ್ಲಿ ಜೀವನ ಹಾಯ್ ಎನಿಸಿತು.
ಆದರೆ ಆ ದಿನದ ಮುಖ್ಯ
ಆಕರ್ಷಣೆಯಾಗಿದ್ದು ಪ್ಯಾರಾ ಸೇಲಿಂಗ್, ನಾನು ಸಾಯೊ ಮುಂಚೆ ಪಡೆಯಲೇ ಬೇಕಂತಿರುವ ಅನುಭವಗಳಲ್ಲಿ
ಪ್ಯಾರಾ ಸೇಲಿಂಗ್ ಕೂಡ ಒಂದಾಗಿತ್ತು. ತುಂಬಾ ಹೆದರಿಕೆ ಇಲ್ಲದಿದ್ದರೂ, ಅಷ್ಟು ಎತ್ತರಕ್ಕೆ ಹೋಗುತ್ತೇವೆ
ಅಂದಾಗ ಮನುಸ್ಸು ಒಮ್ಮೆ ಜೋರಾಗಿ ಓಡಿದ್ದು ನಿಜ. ಆದರೆ ಮೇಲೆ ಹಾರಿದಾಗ ಒಂದು ಕ್ಷಣ ಅಲ್ಲಿ ನಿಂತಾಗ,
ನನ್ನ ಎಡಗಡೆ ಮುಳುಗುವ ಸೂರ್ಯ ನನ್ನ ಬಲಗಡೆ ಕೆಳಗೆ ಸಮುದ್ರ ತೀರದಲ್ಲಿ ಪುಟ್ಟ ಹುಳುಗಳ ಹಾಗೆ ಕಾಣುವ
ಜನ. ಉಸಿರು ಒಮ್ಮೆ ಜೋರಾಗಿ ಎಳೆದು ಬಿಟ್ಟಾಗ ಅನಿಸಿತು “Closest thing to flying” ಅಂತ.
ಸೋಮವಾರ ಬೆಳಗ್ಗೆ
ಬೇಗ ಎದ್ದು ನೋಡಿದೆ, ಅಪ್ಪ ಮಗ ಇನ್ನು ಸುಖ ನಿದ್ದೆಯಲ್ಲಿದ್ದರು. ನನ್ನ ನಿದ್ದೆ ಮುಗಿದಿತ್ತು, ಹಾಗೆ
ಸಮುದ್ರ ತೀರಕ್ಕೆ ವಾಕ್ ಮಾಡಲು ಹೋದೆ. ಸೂರ್ಯ ಇನ್ನು ಹುಟ್ಟುತ್ತಿದ್ದ, ಅಲ್ಲಿಲ್ಲಿ ಜನರು ವಾಕ್ ಮಾಡುತ್ತಿದ್ದರು,
ಒಂದು ಹುಡುಗರ ಗುಂಪು ನೀರಿನಲ್ಲಿ ಆಡುತ್ತಿದ್ದರು, ದೂರದಲ್ಲಿ ಮೀನು ಹಿಡಿಯುತ್ತಿದ್ದ ಒಂದು ದೋಣಿ,
ಹತ್ತಿರದಲ್ಲಿ ಮೀನು ಹಿಡಿದು ಬಂದ ಮೇಲೆ ಬಲೆಯನ್ನು ಪ್ಯಾಕ್ ಮಾಡಿ ದೋಣಿ ಜೋಪಾನ ಮಾಡುತ್ತಿದ್ದರು.
ಅಂದು ನಾವು ವಾಪಸ್ ಬೆಂಗಳೂರಿಗೆ ಹೊರಡುವವರಿದ್ದೆವು, ಅಂತು ಆಲ್ಲಿನ ಸಮುದ್ರಕ್ಕೆ, ಮರಳಿಗೆ, ಕಪ್ಪೆ
ಚಿಪ್ಪಿಗೆ, ಹುಟ್ಟುವ ಸೂರ್ಯನಿಗೆ, ಮಾತಾಡಿಸುವ ಅಲೆಗಳಿಗೆ ಒಂದು ಗುಡ್ ಬೈ ಹೇಳಿ, ಮನ ತೃಪ್ತಿಯಾಗುವಷ್ಟು
ನೋಡಿ, ಅವರಿಗೆಲ್ಲ ಬೆನ್ನು ಹಾಕಿ ಹೊರಟೆ.
ವಾಪಸ್ ಮಲ್ಪೆ–ಮಂಗಳೂರು-ಸುಳ್ಯ-ಸಂಪಾಜೆ–ಮಡಿಕೇರಿ-ಮೈಸೂರು-ಬೆಂಗಳೂರು
ಹಾದಿ ಹಿಡಿದೆವು. ಪುತ್ತೂರಿನಿಂದ ಸಂಪಾಜೆ ಘಾಟ್ ಶುರುವಾಗುವರೆಗೆ ರಸ್ತೆ ತುಂಬಾ ಹಾಳಾಗಿತ್ತು. ಆದರೆ
ಘಾಟ್ ಹತ್ತಿ ಮಡಿಕೇರಿಗೆ ತಲುಪುವಷ್ಟರಲ್ಲಿ ಸಿಟ್ಟೆಲ್ಲ ಕರಗಿತ್ತು, ಅಲ್ಲಿನ ತಣ್ಣಗಿನ ಗಾಳಿಗೆ ಮುಖವೊಡ್ಡಿ
ಕೂತಾಗ, ಏನೊ ತೃಪ್ತಿ ಸಿಕ್ಕಹಾಗಾಯಿತು. ಮಧ್ಯ ರಾತ್ರಿ
ಮನೆ ತಲುಪಿ ಉಸ್ಸಪ್ಪ ಅಂತ ಕೂತಾಗ ಮತ್ತೆ ಹುಟ್ಟುವ ಸೂರ್ಯನ ಎದುರಿಸುವ ಹುಮ್ಮಸ್ಸು ಮೈ ತುಂಬಿತ್ತು.
ಮನಸ್ಸು ಪ್ರಯಾಸಕರ ಎನ್ನಿಸಿದಾಗ ಪ್ರವಾಸಕ್ಕಿಂತ ಬೇರೆ ಉತ್ತಮ ಮಾರ್ಗವಿಲ್ಲ. ಸೊಗಸಾಗಿ ಬರೆಯುವ ನೀವು.. ಇಂಥಹ ಒಂದು ಅದ್ಭುತ ಎನಿಸುವ ತಾಣಗಳಿಗೆ ಹೋದರೆ ಪದಗಳ ಬರಹ.. ಮತ್ತು ನೆರಳಿನ ಮೇಲೆ ಬೆಳಕಿನ ಬರಹ ಎರಡರಲ್ಲೂ ಕಲೆ ಸಿದ್ಧಿಸಿರುವ ನಿಮಗೆ ನೀವೇ ಸಾಟಿ.
ಪ್ರತ್ಯುತ್ತರಅಳಿಸಿಮನಸ್ಸಿಗೆ ಸಮುದ್ರದ ಮುಂದೆ ನಿಂತಾಗ ಎದುರಲ್ಲಿ ಏಳುತ್ತಿರುವ ಅಲೆಗಳ ಹಾಗೆ ಮನದ ತರಂಗಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಾ.. ಅರೆ ನಾನಿರುವಾಗ ಬೆಸುಗೆಯಾಗಳು ಇನ್ಯಾರು ಬೇಕು ಎನ್ನುತ್ತದೆ..
ಸುಂದರ ಚಿತ್ರಗಳು... ಕಂಬಳದ ಚಿತ್ರ.. ಬಾನಲ್ಲಿ ಬಾನಾಡಿಯಾಗಿ ನಲಿದ ಆ ಕ್ಷಣ.. ಪ್ರತಿ ಕ್ಷಣವನ್ನು ಖುಷಿಯಿಂದ ಆಸ್ವಾದಿಸುವ ಆದಿ.. ಮಕ್ಕಳ ಜೊತೆ ಮಗುವಾಗುವ ಚಿರು.. ಇದನ್ನೆಲ್ಲಾ ಅಚ್ಚುಕಟ್ಟಾಗಿ ಚಿತ್ರಿಸಿ ಒಪ್ಪವಾಗಿ ಜೋಡಿಸುವ ನಿವಿ.. ಆಹಾ ಒಂದು ಸುಂದರ ಲೇಖನ.
ಸೂಪರ್ ನಿವಿ.. ಸರಳವಾದ ನಿರೂಪಣೆ.. ನಿಮ್ಮ ಹಾಸ್ಯ ಪ್ರಜ್ಞೆ ಬಿಟ್ಟು ಕೊಡದೆ ಅಲ್ಲಿಯೂ ಚಿಮ್ಮಿಸುವ ನಗೆ ಬುಗ್ಗೆ.. ಸೂಪರ್ ಸೂಪರ್,,, ಮತ್ತೊಮ್ಮೆ ನಿವಿ ಸ್ಪೆಷಲ್ ಅದು ಪ್ರವಾಸ ಮಾಲಿಕೆಯಲ್ಲಿ
ಒಳ್ಳೆಯ ಪವಾಸ ಕಥನ.
ಪ್ರತ್ಯುತ್ತರಅಳಿಸಿಮಲ್ಪೆ ಕಡೆ ನನ್ನ ಮನಸು ಸೆಳೆಯಿತು.
ಚಿತ್ರಗಳೂ ಇಷ್ವಾದವು.
ಕೆಸರು ಗದ್ದೆ ಓಟ ಪಕ್ಕಾ ಗ್ರಾಮೀಣ ಕ್ರೀಡೆ.
Very nice trip :) nanagu hogabeku anista ide... photos superb agide... ishta aitu :)
ಪ್ರತ್ಯುತ್ತರಅಳಿಸಿ