“ತಥಾಸ್ತು”

ನಾರದ ಮುನಿಗಳು ತಮ್ಮ ಎಂದಿನ ಸಂಚಾರಕ್ಕೆ ಹೊರಡಲು ಸಿದ್ಧವಾಗುತ್ತಿದ್ದರು, ಆದರು ಯಾಕೊ ಇಂದೇನೊ ಮರೆತೆ ನಾನು ಎನ್ನುವ ಭಾವನೆ. ಏನಿಲ್ಲ ಬಿಡು ಎಂದು ಅವರ ನಿತ್ಯ ಗಾನವಾದ “ನಾರಾಯಣ, ನಾರಾಯಣ” ಎಂದು ಹೊರಟೇಬಿಟ್ಟರು.

ಯಾಕೊ ಇಂದು ಭೂಲೊಕಕ್ಕೆ ಒಂದು ಭೇಟಿ ನೀಡಬೇಕು ಎನ್ನುವ ಮಹದಾಸೆ ಮೂಡಿತು ಅವರ ಮನದಲ್ಲಿ. ಸರಿ ಎಂದು ಅಂದುಕೊಂಡ ಹಾದಿಯಲ್ಲಿ ಮುನ್ನಡೆದರು.

ಆದರೆ ಇದೇನಿದು ಋಷಿ ಮುನಿಗಳೆಲ್ಲ ಕಂಗಾಲಾಗಿದ್ದಾರೆ, ನಿತ್ಯದ ಪೂಜೆ, ಪುನಸ್ಕಾರಗಳೆಲ್ಲ ನಿಂತಿವೆ. ಏನಿದು ಆಶ್ಚರ್ಯ !!! ಏನೆಂದು ವಿಚಾರಿಸೇಬಿಡೋಣವೆಂದು ಭೂವಿಗಿಳಿದು ಅಲ್ಲಿ ಕೈ ಕೈ ಹಿಸುಕುತ್ತ ಗಡಿಬಿಡಿಯಲ್ಲಿ ಓಡುತ್ತಿರುವ ಮುನಿವರ್ಯನನ್ನು ತಡೆದು ಕೇಳಿಯೇಬಿಟ್ಟರು.

ನಾರಾಯಣ ನಾರಾಯಣ, ಏನಿದು ಮುನಿವರ್ಯ ಹೊಮ ಹವನಗಳೆಲ್ಲ ನಿಂತಿವೆ, ನಿತ್ಯ ಪೂಜೆ ಪುನಸ್ಕಾರಗಳು ಕೂಡ ಪೂರ್ಣಗೊಳ್ಳಿಸದೆ, ಅದೆಲ್ಲಿಗೆ ಓಡುತ್ತಿರುವಿರಿ”

ಅಶ್ಚರ್ಯಗೊಂಡ ಮುನಿಗಳು ಗೌರವದಿಂದ ನಾರದನಿಗೆ ನಮಸ್ಕರಿಸಿ ನುಡಿದರು “ನಾರದ ಮುನಿಗಳು! ನೀವು ಬಂದದ್ದು ಒಳ್ಳೆಯದೆ ಆಯಿತು. ಈ ಸಂದರ್ಭದಲ್ಲಿ ನೀವೇ ನಮಗೆ ಸಹಾಯ ಮಾಡಬೇಕು. ಹಿಂದೆಂದೂ ಜರುಗಿರದ, ಕೇಳಿರದ ಪರಿಸ್ಥಿತಿ ಇಂದು ನಮಗೆ ಬಂದೊದಗಿದೆ. ಇಂದು ಯಾವ ದೇವತೆಗಳೂ ಅರ್ಗ್ಯವನ್ನು ಸ್ವೀಕರಿಸುತ್ತಿಲ್ಲ, ಯಾವ ಪೂಜೆಯಲ್ಲು ಅವರು ಪಾಲ್ಗೊಳ್ಳುತ್ತಿಲ್ಲ, ನಮ್ಮಿಂದ ಅದೇನು ಅಪಕಾರವಾಗಿದೆ ಎಂಬ ಪ್ರಶ್ನೆಗೆ ನಮಗೆ ಉತ್ತರವು ದೊರಕುತ್ತಿಲ್ಲ. ನೀವೆ ಒಂದು ದಾರಿ ತೋರಿ ನಮ್ಮನ್ನು ಕಾಪಾಡಬೇಕು ನಾರದರೆ”

ನಾರದರಿಗೂ ಇದನ್ನೆಲ್ಲಾ ಕೇಳಿ ತಲೆ ಕೆಟ್ಟು ಹೋಯಿತು. ಇಂದೇನು ವಿಶೇಷ, ಎಲ್ಲಾ ದೇವತೆಗಳು ನನಗೆ ತಿಳಿಸದೆ ಮುಷ್ಕರ ಹೂಡಿಬಿಟ್ಟರೆ ??!! ನಾರದರು ತಲೆ ಆಡಿಸಿದರು.. ಇಲ್ಲ ಇಲ್ಲಾ ನನಗೆ ತಿಳಿಸದೆ ಅದು ಹೇಗೆ ಸಾಧ್ಯ. ದೇವತೆಗಳು ಅಂದರೆ ಕೇಳಬೇಕೇ, ಏನು ಮಾಡಿದರು ಪ್ರಪಂಚಕ್ಕೆ ಡಂಗೂರ ಸಾರಿಕೊಂಡು ಮಾಡುವವರು. ಮುನಿಗಳಿಗೆ ಏನೋ ಒಂದು ಸಮಾಧಾನ ಹೇಳಿ, ಈ ಸವಾಲಿಗೆ ಉತ್ತರವನ್ನು ಹುಡುಕಲು ಹೊರಟರು. 

ಸ್ವರ್ಗದಲ್ಲಿ ಅಪ್ಸರೆಗಳೆಲ್ಲ ಕೈಚೆಲ್ಲಿ ಕೂತಿದ್ದಾರೆ ಆದರೆ ಯಾವ ದೇವತೆಯ ಸುಳಿವಿಲ್ಲ, ಕೈಲಾಸದಲ್ಲಿ ಅಡಿ ಇಟ್ಟರೆ ಭೂತಗಣಗಳನ್ನು ಬಿಟ್ಟರೆ ಇನ್ಯಾರು ಇಲ್ಲ. ಬ್ರಹ್ಮಲೋಕದಲ್ಲಿ ನಿಶಬ್ಧ, ತನ್ನೆಲ್ಲ ಸಮಸ್ಯೆಗಳಿಗೆ ಹಸನ್ಮುಖದಿಂದ ಉತ್ತರಿಸುವ ತನ್ನ ಆತ್ಮ ದೈವ ವಿಷ್ಣುವೇ ಇದಕ್ಕೆ ದಾರಿತೋರಿಸುತ್ತಾನೆ ಎಂಬ ನಂಬಿಕೆಯಲ್ಲಿ ನಾರದ ಮುನಿಗಳು ವೈಕುಂಠದ ದಾರಿ ಹಿಡಿದರು.

“ನಾರಾಯಣ ನಾರಾಯಣ  ಎನ್ನುತ್ತ ಅಡಿ ಇಟ್ಟ ತಕ್ಷಣ ನಾರದರು ಒಮ್ಮೆ ತಳಮಳಗೊಂಡರು, ಮುಕ್ಕೊಟಿ ದೇವತೆಗಳು ವೈಕುಂಠದಲ್ಲಿ ಅದೇನನ್ನೊ ಜೋರಾಗಿ ಚರ್ಚಿಸುತ್ತಿದ್ದರು.


ನಾರದರು ವಿಷ್ಣುವನ್ನು ಕಂಡೊಡನೆ “ನಾರಾಯಣ ನಾರಾಯಣ” ಎಂದು ಕೂಗುತ್ತಾ ಅವನ ಪಾದದೆಡೆಗೆ ಓಡಿದರು. ಕಳಕಳಿಯಿಂದ ಕೇಳಿದರು “ಪ್ರಭೂ ಇದೇನು ಇದು ವಿಚಿತ್ರ, ಎಲ್ಲಾ ದೇವ ದೇವತೆಯರು ಇಲ್ಲೇಕೆ ಸೇರಿದ್ದಾರೆ. ಭೂಲೋಕದಲ್ಲಿ ಭಕ್ತರೆಲ್ಲಾ ಕಂಗಾಲಾಗಿ ತಳಮಳಿಸಿದ್ದಾರೆ. ತಂದೆ ಇದೇನು ಸಮಸ್ಯೆ ಒದಗಿದೆ ನನಗೆ ತಿಳಿಯದಾಗಿದೆ. ಲೋಕದ ಪಗಡೆಯಾಟದ ಸೂತ್ರದಾರನೆ ಇಂದೇನು ವಿಶೇಷ?”

ನಾರಾಯಣ ನಗುತ್ತಾ ಹೇಳಿದ “ನಾರಾದ, ಇದೇನು ಮಗು ಲೋಕದ ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುವ ನಿನಗೆ ಇಂದೇನು ವಿಶೇಷ ಎಂದು ಮರೆತುಹೋಯಿತೆ?”

ನಾರದನಿಗೆ ಇನ್ನೂ ಅರ್ಥವಾಗದಿದ್ದನ್ನು ಕಂಡು ವಿಷ್ಣು ಮುಂದುವರೆಸಿದ “ನಮ್ಮನೆಲ್ಲ ಯಾವ ಯಾವ ಯುಗಗಳಿಂದನೋ ಏಳೆ ತಂದು, ಸಮಯದ ಚಕ್ರವನ್ನು ತನ್ನ ಬ್ಲಾಗ್ ಪ್ರಪಂಚದಲ್ಲಿ ಹಿಂದೂ ಮುಂದು ಮಾಡಿ, ನಿನ್ನ ಕೈಚಳಕವನ್ನು ಮನೆಯಲ್ಲಿ ಕೂತು ತನ್ನ ಬ್ಲಾಗ್‍ಗಳ ಮೂಲಕ ತಲೆ ಕೆಳಗಾಗಿ ಮಾಡಿ ತನ್ನ ಸ್ನೇಹಿತರ ಮನಗೆದ್ದವನ ಹುಟ್ಟು ಹಬ್ಬವಲ್ಲವೆ ಇಂದು. ಅವನ ನಗೆ, ಮನಸ್ಸು ಮತ್ತು ಕಮೆಂಟುಗಳಿಗೆ ಮನಸೋಲದವರೆ ಇಲ್ಲ. ಅಂಥಾ ಕಾಂತ ಕರೆದಾಗಲೆಲ್ಲ ಓಡಿ ಹೋಗುವ ನಮ್ಮನ್ನು ಅದೆಷ್ಟು ಸಾರಿ ಹುಸಿ ಮುನಿಸಿನಿಂದ ಪ್ರಶ್ನಿಸಿದ್ದೀಯಾ. ಆದರೂ ಅವನು ಕರೆದಾಗಲೆಲ್ಲ ತಿರಸ್ಕರಿಸದೆ ಅವನಿಗೆ ದರ್ಶನ ಭಾಗ್ಯ ಒದಗಿಸುವೆ. ಅಂಥಾ ಆಯಸ್ಕಾಂತದಂತಹ ವ್ಯಕ್ತಿ ಕಾಂತನ ಹುಟ್ಟು ಹಬ್ಬವನ್ನು ಮರೆತೆಯಾ?”

ನಾರದ ಒಮ್ಮೆಲೆ ಜಿಗಿದು ತಲೆ ಚಚ್ಚಿಕೊಂಡು ಹೇಳಿದ “ಅಯ್ಯೊ ಪ್ರಭು, ಎಷ್ಟು ಸಮಯದಿಂದ ಅನಿಸುತ್ತಿತ್ತು ಏನೊ ಮರೆತೆನೆಂದು. ಈಗ ತಿಳಿಯಿತು ಏನೆಂದು. ಆದರೆ ನೀವೆಲ್ಲಾ ಏನು ಚರ್ಚಿಸುತ್ತಿದ್ದೀರಿ ಈಗ?”

ನಾರದನ ಮಾತಿಗೆ ಪರಶಿವನೂ ತ್ರಿಶೂಲವನ್ನು ಕುಟ್ಟುತ ಹೇಳಿದ “ಅವನ ಹುಟ್ಟು ಹಬ್ಬಕ್ಕೆ ಏನು ಮಾಡುವುದು ಎಂದು ಚರ್ಚಿಸುತ್ತಿದ್ದೇವೆ. ನನಗೆ ಯೋಚಿಸಿ ಯೋಚಿಸಿ ತಲೆ ಕೆಟ್ಟುಹೋಗಿದೆ. ಈಗ ಸಿಟ್ಟು ಬರುತ್ತಿದೆ.”

ಶಿವನ ಮಾತು ಕೇಳಿ ಅವನ ಹತ್ತಿರ ನಿಂತ ದೇವಾನುದೇವತೆಗಳೆಲ್ಲ ಒಂದು ಹೆಜ್ಜೆ ಹಿಂದೆ ಸರಿದರು. ನಾರದ ಬಹು ಹೆದರಿಕೆಯಿಂದಲೇ ಶಿವನಿಗೆ ಸಮಾಧಾನಿಸಿದ “ದೇವ ನೀನು ಮಾತ್ರ ಕೋಪಗೊಳ್ಳದಿರು. ಈ ಪ್ರಪಂಚದಲ್ಲಿ ಉತ್ತರಿಸಲಾಗದ ಪ್ರಶ್ನೆಗಳಿಲ್ಲ”

ಸರಸ್ವತಿ ತನ್ನ ಕೋಮಲ ಸ್ವರದಲ್ಲಿ ನುಡಿದಳು “ಮಗು ನಾರದ ಹಾಗಾದರೆ ನೀನು ಒಂದು ಉಪಾಯ ತೋರು.”

ನಾರದ ಎಲ್ಲರಿಗೂ ನಮಸ್ಕರಿಸುತ್ತ ನುಡಿದ “ದೇವ ದೇವತೆಗಳೆ, ಯಾಕಿಷ್ಟು ಯೋಚನೆ. ಕಾಂತನ ಮನಸ್ಸು ಬಹಳ ದೊಡ್ಡದು, ಅವನು ನಿಮ್ಮ ಆಶಿರ್ವಾದವನ್ನು ಬಿಟ್ಟರೆ ಎಂದಿಗೂ ಬೇರೆನನ್ನು ಕೇಳಲಿಲ್ಲ. ಎಲ್ಲಾ ದೇವತೆಗಳು ಮನ ಬಿಚ್ಚಿ ಅವನನ್ನು ಹಾರೈಸಿ, ಅದೆ ನಾವು ಅವನಿಗೆ ಕೊಡಬಹುದಾದ ಅತಿ ದೊಡ್ಡ ಉಡುಗೊರೆ”

ನಾರದನ ಮಾತನ್ನು ಕೇಳಿ ಎಲ್ಲಾ ದೇವತೆಗಳು ಹೌದೆಂದು ತಲೆಯಾಡಿಸಿದರು. ಆಗ ನಗುಮುಖದ ನಾರಾಯಣನು ಹೇಳಿದ “ಹಾಗಾದರೆ ನೀನು ಶುಭಾಶಯವನ್ನು ಹೇಳಿಬಿಡು, ನಾವೆಲ್ಲಾ ತಥಾಸ್ತು ಎಂದು ಆಶಿರ್ವಧಿಸುತ್ತೇವೆ”

ಭೂಲೋಕದೆಡೆಗೆ ನೋಡುತ್ತ ನಾರದನೆಂದ “ಶ್ರೀಕಾಂತ, ಮನದ ತುಂಬ ಪ್ರೀತಿ, ಸ್ನೇಹ. ಕೈ ತುಂಬ ಕೆಲಸ ಸದಾ ಇರಲಿ. ನಕ್ಕು ನಲಿಸುವ, ಪ್ರೀತಿ ಸ್ನೇಹಗಳನ್ನು ಅನುಭವಿಸುವ ಅಗಣಿತ ಕ್ಷಣಗಳು ನಿನ್ನ ಜೀವನದಲ್ಲಿ ಬರಲಿ. ಅಕ್ಷರ, ರಾಗ, ತಾಳಗಳು ಎಂದೂ ನಿನ್ನ ಕೈ ಬಿಡದಿರಲಿ. ನಿನ್ನ ಜೀವನದಲ್ಲಿ ಎದೆಂದು ನಲಿವಿರಲಿ. ಇದೇ ನಮ್ಮೆಲ್ಲರ ಹಾರೈಕೆ, ಇದೇ ನಿನ್ನ ಹುಟ್ಟುಹಬ್ಬಕ್ಕೆ ನಾವು ಕೊರುವ ಶುಭಾಶಯ”


ಎಲ್ಲಾ ದೇವತೆಗಳು ನಗುಮುಖದಿಂದ ಕೈಎತ್ತಿ ಹರಸಿದರು “ತಥಾಸ್ತು”

ಕಾಮೆಂಟ್‌ಗಳು

  1. ಈ ತುಂಟ ಸಾಮಾನ್ಯನಲ್ಲಾ, ತನ್ನ ಅಕ್ಷರದ ಗಾರುಡಿ ಯಿಂದ ಮಲಗಿರುವ ರಂಗನಾಥನನ್ನು ಎಬ್ಬಿಸಬಲ್ಲಾ, ಬ್ರಹ್ಮನಿಗೆ ನಾಲ್ಕು ತಲೆಯಜೊತೆಗೆ ಮತ್ತೊಂದು ತಲೆಯನ್ನು ಜೋಡಿಸಬಲ್ಲಾ, ಸರಸ್ವತಿ ಕೂಡ ಇವನ ಅಕ್ಷರ ಜಾದೂ ಕಂಡು ಬೆರಗಾಗುವಂತೆ ಮಾಡಬಲ್ಲಾ , ಯಾವುದೋ ಪೌರಾಣಿಕ ಚಲನಚಿತ್ರದ ಸನ್ನಿವೇಶವನ್ನು ಇನ್ಯಾವುದೋ ಆಧುನಿಕ ಚಲನಚಿತ್ರದ ಸನ್ನಿವೇಶಕ್ಕೆ ಜೋಡಿಸಿ ನಿಮ್ಮ ಹುಟ್ಟುಹಬ್ಬಕ್ಕೆ ಸುಂದರವಾದ ಹಾರೈಕೆ ಬರೆಯಬಲ್ಲಾ ಅಕ್ಷರ ಮಾಂತ್ರಿಕ , ಒಳ್ಳೆಯ ಛಾಯಾಚಿತ್ರ ತೆಗೆದು ಸಂಭ್ರಮ ಪಡುವ ಕಲೆಗಾರ, ಗೆಳೆಯರೊಡನೆ ಬೆರೆತು ಎಲ್ಲರಿಗೂ ಒಳಿತನ್ನು ಬಯಸುವ ಆಯಸ್ಕಾಂತ ಇವರು, ಇನ್ನು ಬ್ಲಾಗ್ ಲೋಕದ ಹೆಣ್ಣುಮಕ್ಕಳಿಗೆ ಪ್ರೀತಿಯ ಅಣ್ಣಾ , ಉತ್ಸಾಹದ ಚಿಲುಮೆ, ಇವರ ಎಲ್ಲಾ ಚಟುವಟಿಕೆಯ ಹಿಂದಿನ ಸ್ಫೂರ್ತಿ ಇವರ ಪತ್ನಿ ಸವಿತಾ, ಹಾಗು ಮಗಳು ಶೀತಲ್ , ಸುಂದರ ಕುಟುಂಬದ ಚಂದದ ಸಂಸಾರ . ಬ್ಲಾಗ್ ಗೆಳೆಯರ ಯಾವುದೇ ಚಟುವಟಿಕೆ ಇರಲಿ ಅಲ್ಲಿ ಈ ಶ್ರೀಕಾಂತ್ ಇಲ್ಲದಿದ್ದಲ್ಲಿ ಯಾವುದೋ ಕೊರತೆ ಕಾಡುತ್ತದೆ . ಯಾವಾಗಲೂ ಮನಸ್ಪೂರ್ತಿ ನಗುವ ಈ ಮನುಷ್ಯನಲ್ಲಿ ಕೆಟ್ಟದ್ದನ್ನು ಗುರುತಿಸಲು ಹೋಗಿ ನಾನು ಸೋತಿದ್ದೇನೆ, ಜೊತೆಗೆ ಈ ಗೆಳೆಯನ ಸ್ನೇಹಕ್ಕೆ ಶರಣಾಗಿದ್ದೇನೆ, ಇಲ್ಲಿ ಬರೆದ ಮಾತುಗಳು ತೋರಿಕೆಯ ಹೊಗಳಿಕೆ ಪದಗಳಲ್ಲಾ, ಮನದ ಮೂಲೆಯಲ್ಲಿ ಅಡಗಿದ್ದ ಪ್ರೀತಿಯ ಚಿಲುಮೆಯಲ್ಲಿ ಉಕ್ಕಿಬಂದಿವೆ ಈ ಶುಭ ಸಂಭ್ರಮದಲ್ಲಿ . ಹೌದು ನಮ್ಮೆಲ್ಲರ ಪ್ರೀತಿಯ ಈ ಶ್ರೀಕಾಂತ್ ಮಂಜುನಾಥ್ ಗೆ ಇಂದು ಜನುಮದಿನ , ಪ್ರೀತಿಯ ಗೆಳೆಯ ನಿಮ್ಮ ಎಲ್ಲಾ ಸುಂದರ ಕನಸುಗಳು ನನಸಾಗಲಿ, ಎಂದೆಂದಿಗೂ ನಮ್ಮೆಲ್ಲರ ಪ್ರೀತಿಯ ಶ್ರೀಕಾಂತ್ ಆಗಿ ಜೊತೆಯಲ್ಲಿರಿ. ನಮ್ಮೆಲ್ಲರ ಶುಭ ಹಾರೈಕೆಗಳು ನಿಮಗೆ .nivedita v. good blog , thanks for this good wish to my friend.

    ಪ್ರತ್ಯುತ್ತರಅಳಿಸಿ
  2. ಇದಪ್ಪ ಅವರ ವರಸೆಯಲ್ಲೇ ಅವರಿಗೇ ಜನುಮದಿನ ಶುಭಾಶಯಗಳನ್ನು ಬ್ಲಾಗಿಸೋದು ಅಂತ ಅಂದರೆ, ನಮಗೂ ಖುಷಿಯಾಯಿತು.

    ಪ್ರತ್ಯುತ್ತರಅಳಿಸಿ
  3. ನಮಸ್ತೆ ..
    ಬಹುಶಃ ಮೊದಲ ಬಾರಿ ನಾನಿಲ್ಲಿಗೆ ಬಂದಿದ್ದು. ಬಿಲೇಟೇಡ್ ಅನ್ನಿಸಿದ್ರೂ ನಿಮ್ಮೀ ಭಾವಕ್ಕೊಂದು ನಮನವ ಹೇಳಲೇಬೇಕನಿಸ್ತು ನಂಗೆ..
    ಬರೆದ ಭಾವವೆಲ್ಲವೂ ಸತ್ಯವೇ..ಶ್ರೀಕಾಂತಣ್ಣನ ಜನುಮ ದಿನಕ್ಕೆ ನೀವಿತ್ತ ಪ್ರೀತಿಯ ಉಡುಗೊರೆ ನನ್ನ ಕಣ್ಣಂಚೂ ಒದ್ದೆಯಾಗಿಸಿಬಿಡ್ಟು..
    ಇಷ್ಟವಾಯ್ತು..ಖುಷಿಯಾಯ್ತು..
    ಇರಲಿರಲಿ ಈ ಸ್ನೇಹ ಚಿರಕಾಲ ಹೀಗೇ..

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು