ಸ್ಮಶಾನ ಮೌನ

ಪ್ಯಾರ್ಗೆ ಆಗ್‍ ಬುಟ್ಟೈತೆ . ಓ ನಮ್ದೂಕೆ ಪ್ಯಾರ್ಗೆ ಆಗ್ ಬುಟ್ಟೈತೆ..” ಅಂತ ಕಣಕಣಿಸಿದ ಫೋನ್ ದಿಕ್ಕಿಗೆ ಒಂದು ಕೆಂಗಣ್ಣು ಬಿಟ್ಟು ತನ್ನ ಮತ್ತು ಫೋನಿನ ಯಜಮಾನರು ಎಲ್ಲಿ ಹೋದರು ಅಂತ ಕಣ್ಣಾಡಿಸಿದರು ಶಾಂತಮ್ಮ. ಆರಾಮ ಕುರ್ಚಿ ಮೇಲೆ ಪೇಪರ್ ಹಿಡಿದುಕೊಂಡು ತೂಕಡಿಸುತ್ತಾ  ಕೂತ ಗಂಡನ ನೋಡಿ ಮುಸಿ ಮುಸಿ ನಕ್ಕರು ಅಡುಗೆಮನೆಯಲ್ಲೆ....

ಬಿಸಿ ಬಿಸಿ ಕಾಫಿ ತಗೊಂಡು ಹೋಗಿ ಅವರ ಮುಂದಿನ ಟೇಬಲ್ ಮೇಲಿಟ್ಟು ತಟ್ಟಿ ಎಬ್ಬಿಸಿ ನುಡಿದರು "ರೀ ಕಾಫೀ .... ನಿಮ್ಮ ಫೋನ್ ಹೊಡ್ಕೋತಾ ಇತ್ತು. ಅದೇನು ಹಾಡು ಅಂತ ಹಾಕಿದ್ದೀರಿ... ಥೂ ಅಸಹ್ಯ... ಯಾವುದಾದ್ರೂ ದೇವರನಾಮನಾದ್ರೂ ಹಾಕ್ಬಾರ್ದೆ ... ನಮ್ಮ ವೆಂಕಟೇಶನ ಫೋನ್ ನೋಡಿ ಎಷ್ಟು ಸುಂದರವಾಗಿ ನಮೋ ವೆಂಕಟೇಶಾಅಂತ ಹಾಡುತ್ತೆ... ಹಾ ಕುಡಿರಿ ಕಾಫೀ ತಣ್ಣಗಾಗುತ್ತೆ ಮತ್ತೆ...

ಶ್ರೀನಿವಾಸರಾಯರು ಕನ್ನಡಕ ತೆಗೆದು ಕಣ್ಣುಜ್ಜುತ್ತಾ ಹೆಂಡತಿಯ ಮಾತುಗಳನ್ನು ಕೇಳಿದರು... ಎಷ್ಟು ಕಿವಿಯೊಳಗೆ ಹೋಯ್ತೂ  ಎಷ್ಟು ಅವರ ಬೋಳು ತಲೆಯ  ಮೇಲಿಂದ ಹೋಯ್ತು ಅಂತ ಯಾರಿಗೂ ತಿಳಿಯಲಿಲ್ಲ.. ಗೊಣಗುತ್ತಿದ್ದ ಹೆಂಡತಿಯ ಮಾತುಗಳ ಕಡೆಗೆ ಗಮನ ಕೊಡದೆ, ರಾಯರು ಕನ್ನಡಕ ಹಾಕಿಕೊಂಡು ಒಂದು ಕೈಯಲ್ಲಿ ಕಾಫಿ ಹೀರುತ್ತಾ, ಯಾರಪ್ಪಾ ಫೋನ್ ಮಾಡಿದ್ದು ಅಂತ ನೋಡಿದ್ರು..

ಮಿಸ್ಡ್ ಕಾಲ್ ಕೊಟ್ಟ ವ್ಯಕ್ತಿಯ ಹೆಸರನ್ನು ನೋಡಿ ಸ್ವಲ್ಪ ತಬ್ಬಿಬ್ಬಾದರು.. ಇವರು ಯಾವತ್ತೂ ಫೋನ್ ಮಾಡೋಲ್ವಲ್ಲಾಅಂದುಕೊಳ್ತಾನೆ ನಂಬರ್ ಡಯಲ್  ಮಾಡಿದ್ರೂ

ಹೆಲೊ ಭಟ್ರೆ, ಏನ್....
.............................................
ಕಾಫಿ ಕೆಳಗಿಟ್ಟು ರಾಯರು ಕೇಳಿದರು ಯಾವಾಗಾಯಿತು?”
....................
ತಿಳಿಸಿದಕ್ಕೆ ಥ್ಯಾಂಕ್ಸ್ ಕಣಪ್ಪ, ಏನಾದ್ರೂ ಸಹಾಯ ಬೇಕಿದ್ರೆ ಕೇಳು
...............

ಕನ್ನಡಕ ತೆಗೆದು ಕುರ್ಚಿ ಮೇಲೆ ಇಟ್ಟು, ಹಾಗೆ ಒರಗಿಕೊಂಡು, ಕಾಫಿನೂ ಮರೆತ ಶ್ರೀನಿವಾಸ ರಾಯರೂ ನೆನಪುಗಳ ಲಹರಿಯಲ್ಲಿ ಮುಳುಗಿದರು

ಶಾಂತಮ್ಮ ಕಾಫಿ ಕಪ್ ತಗೆದುಕೊಳ್ಳಲು ಕೈವರೆಸುತ್ತಾ ಅಡುಗೆಮನೆಯಿಂದ ಬಂದು ನೋಡಿದರು, ತಣ್ಣಗಾದ ಕಾಫಿ ಟೇಬಲ್ ಮೇಲೆ ಹಾಗೇ ಇತ್ತು, ಇತ್ತ ರಾಯರು ಕಣ್ಣು ಬಿಟ್ಟ್‍ಕೊಂಡು ಏನೊ ಯೋಚಿಸುತ್ತಿದ್ದರು.

ಗಂಡ ಏನೋ ಬೇಜಾರಲ್ಲಿರುವುದನ್ನು ಗಮನಿಸಿದ ಶಾಂತಮ್ಮ ಕಳಕಳಿಯಿಂದ ಕೇಳಿದರು ಯಾಕ್ರೀ, ಏನಾಯಿತು.. ಕಾಫಿ ಯಾಕೆ ಕುಡಿದಿಲ್ಲ... ಹಾಲು ಹುಳಿಯಾಗಿದಿಯೇ ಅಥವಾ ಸಕ್ಕರೆ ಸಾಲಲಿಲ್ವೆ??”

ರಾಯರು ಕಣ್ಣೊರೆಸುತ್ತೆ ಎದ್ದು ಕೂತು ಭಾರದ ಧ್ವನಿಯಲ್ಲಿ ಉತ್ತರಿಸಿದರು ನಮ್ಮ ದತ್ತಾತ್ರಯ ಭಟ್ರು ಹೋಗ್ ಬಿಟ್ರಂತೆ ಕಣೆ, ಅವರ ಮಗ ಫೋನ್ ಮಾಡಿದ್ದ ವಿಷಯ ತಿಳಿಸೋಕೆ

ಶಾಂತಮ್ಮ ಅಲ್ಲೆ ಕುರ್ಚಿ ಮೇಲೆ ಕೂತು ಕೇಳಿದರು ಅಯ್ಯೊ ರಾಮ, ಏನಾಗಿತ್ತಂತೆ  ಅವರಿಗೆ ಹುಷಾರಿರಲಿಲ್ವ ಹೇಗೆ??!!”

ರಾಯರು ತಲೆ ಆಡಿಸುತ್ತಾ ಹೇಳಿದರು ಇಲ್ವೆ, ಅವರು ಒಂದು ವಾರದಿಂದ ವಾಕಿಂಗಿಗೆ ಬರ್ತಾ ಇರಲಿಲ್ಲ, ವಾತಾವರಣ ಬದಲಾಗಿದ್ದದಕ್ಕೆ ಜ್ವರನೋನೆಗಡಿನೋ ಬಂದಿರಬೇಕು ಅಂದುಕೊಂಡಿದ್ದೆ.... ಹಾರ್ಟ್ ಅಟ್ಯಾಕ್ ಅಗಿತ್ತಂತೆ ....”

ಶಾಂತಮ್ಮ ಹತ್ತಿರ ಕೂತು ಗಂಡನ ಕೈ ಅಮುಕಿ ಸಮಾಧಾನಿಸಿದರು ಯಾರ ಯಾರ ಋಣ ಎಲ್ಲಿವರೆಗೆ ಅಂತ ಗೊತ್ತಿರೊಲ್ಲ ಬಿಡಿ..... ತುಂಬು ಜೀವನ ನೆಡೆಸಿ, ಮಕ್ಕಳು ಮೊಮ್ಮಕ್ಕಳನ್ನು ಎತ್ತಿ ಆಡಿಸಿ, ಸುಖವಾಗಿ ಹೋಗಿದ್ದಾರೆ.. ನೀವು ಬೇಜಾರಾಗಬೇಡಿ

ರಾಯರು ಹೌದೆಂದು ತಲೆ ಆಡಿಸಿ, ಉಸ್ ಅಂತ ಉಸಿರು ಬಿಡುತ್ತಾ ಎದ್ದರು. ಅವರೊಂದಿಗೆ ಶಾಂತಮ್ಮನು ಅಡುಗೆ ಮನೆಗೆ ಹೋಗಲು ಎದ್ದರು.

ರಾಯರು ರೂಮಿನ ಬಾಗಿಲಿನ ತನಕ ಹೋಗಿ ಹಿಂತಿರುಗಿ, ಅಡುಗೆಮನೆ ಕಡೆಗೆ ಹೊರಟ ಹೆಂಡತಿಯನ್ನು ಕೇಳಿದರು ಮತ್ತೆ ನಾವು ಅವರ ಮನೆಗೆ ಹೋಗಬೇಕಾ ಈಗ

ಶಾಂತಮ್ಮ ಒಂದು ಕ್ಷಣ ಯೋಚಿಸಿ ಹೇಳಿದರು ಅವರ ಮನೆ ಬರಿ ಎರಡು ಬೀದಿ ಆಚೆಗಿದೆ, ಮತ್ತೆ ನಿಮಗೆ ವರ್ಷಗಳಿಂದ ಪರಿಚಯ. ಹೋಗದೇ ಇರೋಕೆ ಆಗೊಲ್ಲಾ  ಕಣ್ರೀ. ಬೇಗ ತಯಾರಾಗಿ, ಒಟ್ಟಿಗೆ ಹೋಗಿ ಕೊನೆ ದರ್ಶನ ಮಾಡಿ ಬರೋಣ

ರಾಯರು ಒಮ್ಮೆ ತಮ್ಮ ಬೋಳು ತಲೆ ಮೇಲೆ ಕೈಯಾಡಿಸುತ್ತ, ಅನುಮಾನದಿಂದ ಕೇಳಿದರು ಆದರೆ ಅಲ್ಲಿ ಹೋಗಿ ಏನ್ ಮಾತಾಡ್ಬೇಕು, ಏನ್ ಮಾಡ್ಬೇಕು ಅಂತ ನಂಗೆ ಗೊತ್ತಿಲ್ಲ ಕಣೆ.. ಒಂಥರ ಮುಜುಗರವಾಗುತ್ತೆ

ಶಾಂತಮ್ಮ ರೇಗಿಕೊಂಡೆ ಹೇಳಿದರು ಸಾಕು ಸುಮ್ಮಿರಿ, ನೀವೇನು ಎಳೆ ಮಗುನಾ, ಮತ್ತೆ ಅಲ್ಲಿ ನಿಮ್ಮ ಮೇಲೆ ಯಾರಿಗೂ ಗಮನವಿರೊಲ್ಲ. ಸ್ವಲ್ಪ ಸಾಂತ್ವಾನದ ಮಾತಾಡಿ ಬರೋದು ನಮ್ಮ ಧರ್ಮ. ಮತ್ತೆ ಭಟ್ರ ಮಗ ತುಂಬಾ ಹಚ್ಚಿಕೊಂಡಿದ್ದಾನೆ ಅಂತ ಹೇಳಿದ್ರಿ. ಅವನಿಗೆ ನಿಮ್ಮನ್ನು ನೋಡಿದ್ರೆ ಸಮಾಧಾನವಾಗಬಹುದು. ಬನ್ನಿ ಮಕ್ಕಳ ಹಾಗೆ ರಗಳೆ ಮಾಡಬೇಡಿ ಈಗ

ಸರಿಯೆಂದು ಒಳ ಹೋದ ರಾಯರು, ಎರಡು ನಿಮಿಷ ಬಿಟ್ಟು ಶಾಂತಮ್ಮನನ್ನು ಹುಡುಕಿಕೊಂಡು ಅಡುಗೆಮನೆಗೆ ಬಂದರು ಅಲ್ವೆ ಶಾಂತೂ, ನಾನು ಪಂಚೆ ಉಡಬೇಕಾ ಅಥವಾ  ಪ್ಯಾಂಟ್ ಹಾಕಬೇಕಾ ಅಂತ??!!”

ಶಾಂತಮ್ಮ ಮಾಡಿದ ಅಡುಗೆನೆಲ್ಲಾ ಮುಚ್ಚಿಟ್ಟು ಹೇಳಿದರು ಅದೇನು ಅನುಕೂಲವೊ ಅದನ್ನು ಹಾಕಿಕೊಳ್ಳಿ, ನಾವೇನೂ ಮದುವೆ ಮನೆಗೆ ಹೋಗ್ತಾ ಇಲ್ಲ, ವಸ್ತ್ರ ಶಾಸ್ತ್ರ ನೋಡಿಕೊಂಡು ಹೋಗೊಕೆ.ಇಷ್ಟು ಹೇಳಿ ಅವರು ತಯಾರಾಗಲೂ ರೂಮಿಗೆ ನೆಡೆದೇಬಿಟ್ಟರು.

ರಾಯರು ಕೂಡ ಅವರ ಹಿಂದೆ ಕುರಿಮರಿ ತರಹ ತಲೆ ಕೆರೆಯುತ್ತಾ  ಹೋದರು. ಅಂತು ಇಂತು ಇನ್ನು ಹತ್ತು ಹಲವು ಪ್ರಶ್ನೋತ್ತರಗಳ ಮಧ್ಯೇ ರಾಯರೂ ಶಾಂತಮ್ಮನೂ ಭಟ್ರ ಮನೆ ಕಡೆಗೆ ಹೊರಟರು. ಮನೆ ಬಹಳ ದೂರವಿಲ್ಲ ಅಂತ ನೆಡೆದುಕೊಂಡೇ ಹೊರಟರು.

ಭಟ್ರ ಮನೆ ಹತ್ತಿರವಾದಂತೆ ಶಾಂತಮ್ಮ ಗಂಡನಿಗೆ ಪಿಸುಗುಟ್ಟಿದರು ಅಲ್ಲಾ ಕೇಳೊದು ಮರೆತೆ, ಅಂತ್ಯಕ್ರೀಯೆ ಈಗಲೆ ಮಾಡ್ತಾರಾ ಹೇಗೆ ಅಂತ??”

ಇಲ್ಲಾ ಕಣೆ, ಮಗಳು ಹೈದರಬಾದಿನಿಂದ ಇನ್ನೂ ಬರಬೇಕು, ಬಂದ ತಕ್ಷಣ ಕಾರ್ಯ ಮುಗಿಸಿಬಿಡ್ತಾರೆ

ಭಟ್ಟರ ಮನೆ ಮುಂದೆ ನಿರೀಕ್ಷಿದಷ್ಟು ಜನವಿರಲಿಲ್ಲ. ಕಾಂಪೌಂಡ್ ಗೋಡೆ ಮೇಲೆ ಮೊಮ್ಮಗ ಕೂತು ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಿದ್ದ. ಗೇಟಿಂದ ಒಳ ಹೋದ ದಂಪತಿಗಳು ಚಪ್ಪಲಿ ಬಿಚ್ಚುವಾಗ ಆ ಹುಡುಗನ ಪರ್ಸ್ ಕೆಳಗೆ ಬಿದ್ದಿರುವುದು ರಾಯರ ಕಣ್ಣಿಗೆ ಬಿತ್ತು. ಹೆಂಡತಿಯ ಹತ್ತಿರ ನೀನು ಹೋಗಿರೂ ನಾನು ಪರ್ಸ್ ಕೊಟ್ಟು ಬರ್ತೀನಿ ಅಂತ ಹೇಳಿ ರಾಯರು ಹುಡುಗನೆಡೆಗೆ ಹೊರಟರು. ಪರ್ಸನ್ನು ಕೈಗೆತ್ತಿಕೊಂಡು ಇನ್ನೇನು ಕರಿಬೇಕು ಅಂತ ಕೈಯೆತ್ತಿದಾಗ ಹುಡುಗನ ಮಾತು ಕೇಳಿಸಿತು, ತನ್ನ ಸ್ನೇಹಿತನಿಗೆ ವಿವರಿಸುತ್ತಾ ಇದ್ದ ನಾನು ರೆಕಾರ್ಡ್ ಕೊಡೋಕೆ ಟೈಮ್ ಕೇಳಬಹುದು ಕಣೋ. ನಮ್ಮ ತಾತ ತೀರಿ ಹೋದ್ರಲ್ಲ, ಈಗ ಎಲ್ಲಾ ಲೆಕ್ಚರರ್‍ಗಳು ಸ್ವಲ್ಪ ಸಿಂಪಥಿ ಕೊಡ್ತಾರೆ.......

ಇನ್ನು ಅವನ ಮಾತನ್ನು ಕೇಳಲು ಇಷ್ಟವಿಲ್ಲದೆ ರಾಯರು ಸುಮ್ಮನೆ ಆ ಪರ್ಸನ್ನು ಅವನ ಪಕ್ಕ ಇಟ್ಟು ವಾಪಸ್ ಬಂದರು. ಹುಡುಗನ ಮಾತುಗಳು ಇನ್ನೂ ಕಿವಿಯಲ್ಲಿ  ಗೂಯ್‍ಗುಡ್ತಾ ಇತ್ತು, ರಾಯರು ಕಾಲು ಒರೆಸುತ್ತ ಒಳನೆಡೆದರು.

ಭಟ್ಟರ ದೇಹವನ್ನು ಹಾಲಿನಲ್ಲಿ ಗಾಜಿನ ಪೆಟ್ಟಿಗೆಯಲ್ಲಿಟ್ಟಿದ್ದರೂ, ಅವರ ಮುಖದಲ್ಲಿ ಜೀವದ ಕಳೆ ಇರಲಿಲ್ಲ. ನಿರ್ಜೀವ ಶರೀರವನ್ನು ನೋಡಿದ ಕ್ಷಣ ರಾಯರ ಕಣ್ಣುಗಳು ತಂತಾನೇ ತುಂಬಿಕೊಂಡವೂ ಆದರೆ ತುಳುಕಲಿಲ್ಲ. ರಾಯರಿಗೆ ಭಟ್ಟರ ಮಾತು ನೆನಪಾದವು ರಾಯರೇ ಜೀವ ಇರೋ ತನಕ ನಗಬೇಕು ಕಣ್ರೀ, ಸತ್ತ ಮೇಲೆ ನಕ್ಕರೆ ಯಾರಿಗೂ ಕಾಣೋಲ್ಲ .” ಬಹಳ ತಮಾಷೆ ಮನುಷ್ಯರಾಗಿದ್ದರು ಭಟ್ಟರು. ಯಾವಾಗ್ಲೂ ನಗು, ಜೋಕು, ಮಾತು, ಹರಟೆ. ಮಕ್ಕಳು,ಮೊಮ್ಮಕ್ಕಳನ್ನು ಕಂಡರೆ ಅತಿಯಾದ ಪ್ರೀತಿ, ಅವರ ಪ್ರತಿ ಗೆಲುವನ್ನು ಎಲ್ಲಾರಲ್ಲಿಯೂ ಹಂಚಿಕೊಂಡು ಹೆಮ್ಮೆ ಪಡುತ್ತಿದ್ದರು. ಜೀವನೋತ್ಸಾಹಿಗಳಾಗಿದ್ದ ಅಂಥ ಭಟ್ಟರೂ ಇನ್ನು ಇಲ್ಲ ಅನ್ನೋ  ಸಂಕಟ ರಾಯರಿಗೆ ಈಗ ಕಾಡ ತೊಡಗಿತು.

ಅವರ ದೇಹಕ್ಕೆ ನಮಸ್ಕರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಈ ಕಡೆಗೆ ಬಂದು, ತನ್ನ ವಾಕಿಂಗ್ ಸ್ನೇಹಿತರೊಂದಿಗೆ ಮಾತುಕತೆಗೆ ಇಳಿದರು. ಸುಮಾರು ಹೊತ್ತಾದರೂ ಶಾಂತಮ್ಮ ಕಣ್ಣಿಗೆ ಕಾಣದಿದ್ದಾಗ ಅವರನ್ನು ಹುಡುಕಿಕೊಂಡು ಹೊರಟರು, ಹಾಲಿನಲ್ಲಿ, ಅಡುಗೆ ಮನೆಯಲ್ಲಿ ಶಾಂತಮ್ಮ ಕಾಣಲಿಲ್ಲ. ಮಹಡಿ ಮೇಲಿನ ರೂಮಿನಲ್ಲೇನಾದರೂ  ಭಟ್ಟರ ಹೆಂಡತಿ ಜೊತೆ ಇರಬಹುದು ಅಂತ ಮೆಟ್ಟಿಲನ್ನು ಹತ್ತಿದರು. ರೂಮಿನ ಬಾಗಿಲನ್ನು ಇನ್ನೇನು ತಟ್ಟಬೇಕು ಅಂತ ಕೈಯೆತ್ತಿದರು, ಒಳಗಿನಿಂದ ಭಟ್ಟರ ಮಗನ ಜೋರು ಧ್ವನಿ ಕೇಳಿಸಿತು ನೋಡಿ ರಚನ, ನಮ್ಮ ತಂದೆ ತೀರಿ ಹೋದ ನೆಪಕ್ಕೆ ನಾನು ಕ್ಲೈಂಟ್ ಬಳಿ ನಾಳೆಗೆ ಮೀಟಿಂಗ್ ಮುಂದೆ ಹಾಕಿದ್ದೀನಿ. ಈಗ ನಿಮಗೆ ನಾಳೆ ತನಕ ಸಮಯವಿದೆ. ಪ್ಲೀಸ್ ಆ ಪ್ರೆಸೆಂಟೇಷನ್ ಮುಗಿಸಿಬಿಡಿ. ಹಾಗೆ ... ಒಂದು ನಿಮಿಷ..... ಲೇ ಜ್ಯೋತಿ ಸಂಜೆ ಎಷ್ಟು ಹೊತ್ತಿಗೆ ಎಲ್ಲಾ ಕಾರ್ಯ ಮುಗಿಯುತ್ತೆ ಅಂತ ಅಮ್ಮ ಹೇಳಿದ್ರೂ??!!........

ರಾಯರಿಗೆ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳುವ ಮನಸ್ಸಿರಲಿಲ್ಲ. ತಲೆಯಲ್ಲಿ ಹುಳಬಿಟ್ಟಂತೆ ಸಾವಿನ ಮನೆಯ ವಾತಾವರಣ ಅವರನ್ನು ಕಾಡುತಿತ್ತು. ಅಂತು ಶಾಂತಮ್ಮನನ್ನು ಹುಡುಕಿ, ಭಟ್ಟರ ಹೆಂಡತಿಯೊಂದಿಗೆ ನಾಲ್ಕು ಮಾತಾಡಿ, ಅಲ್ಲಿಂದ ಹೊರಟೆ ಬಿಟ್ಟರು.

ಗಂಡ ತುಂಬಾ ಯೋಚನೆಯಲ್ಲಿರುವುದನ್ನು ಕಂಡು ಶಾಂತಮ್ಮ ಕೇಳಿದರು ತುಂಬಾ ಮನಸ್ಸಿಗೆ ಹಚ್ಕೊಳ್ಳಬೇಡಿ, ಸಮಯ ಬಂದಾಗ ಎಲ್ಲಾರೂ ಹೋಗಲೆ ಬೇಕು ಅಲ್ವೆ

ಹೆಂಡತಿಯ ಮಾತಿಗೆ ರಾಯರು ಏನು ಉತ್ತರ ಕೊಡಲಿಲ್ಲ. ಮನೆಗೆ ಬಂದು ಸ್ನಾನ ಮಾಡಿ, ಉಂಡು ಮಲಗಿ. ಸಂಜೆ ರಾತ್ರಿಯಾದಾಗಲೂ ರಾಯರು ಏನು ಮಾತಾಡಿದ್ದಾಗ ಶಾಂತಮ್ಮನಿಗೆ ದಿಗಿಲಾಯಿತು. ಸಾವು ಭಟ್ಟರ ಮೆನೆಯದಾದರೂ ಸ್ಮಶಾನ ಮೌನ ರಾಯರ ಮನೆಯಲ್ಲಿತ್ತು.

ಮಲಗೋಕೆ ಅಂತ ಹಾಸಿಗೆ ಸರಿ ಮಾಡುವಾಗ ಶಾಂತಮ್ಮ ಗಂಡನನ್ನು ನಿಧಾನವಾಗಿ ಕೇಳಿದರು ಯಾಕ್ರೀ ಇಷ್ಟು ಸುಮ್ಮನಿದ್ದೀರಿ??. ಏನು ಅಷ್ಟು ಯೋಚನೆ ನಿಮಗೆ. ಭಟ್ಟರ ಸಾವನ್ನು ಇಷ್ಟು ಮನಸ್ಸಿಗೆ ತಗೊಂಡ್ರಾ. ಹೇಳಿ ಏನಾಯಿತು ಅಂತ. ನಿಮ್ಮನ್ನು ನೋಡಿದ್ರೆ ನಂಗೆ ಗಾಬರಿಯಾಗ್ತಾ ಇದೆ

ರಾಯರು ನಿಟ್ಟುಸಿರು ಬಿಟ್ಟು ಹೆಂಡತಿಯನ್ನು ಕರೆದು ಹಾಸಿಗೆಯ ಮೇಲೆ ಕೂರಿಸಿ ತಾನು ಭಟ್ಟರ ಮಗ ಮತ್ತೆ ಮೊಮ್ಮಗನ ಮಾತುಗಳನ್ನು ಕೇಳಿದನ್ನು ಹೇಳಿದರು. ಎಲ್ಲಾ ಹೇಳಿಯಾದ ಮೇಲೆ ಶಾಂತಮ್ಮನ ಕಡೆ ತಿರುಗಿ ಕೇಳಿದ್ರೂ ಅಲ್ವೆ ನಾಳೆ ನಮ್ಮ ಕಾಲನೂ ಮುಗಿದಾಗ ನಮ್ಮ ಮಕ್ಕಳು ನಮಗೆ ಇಷ್ಟೆ ಗೌರವ ಕೊಟ್ರೆ ಹೇಗೆ ಅಂತ. ಭಟ್ಟರು ಬದುಕೆಲ್ಲ ಮಗ ಮಗಳ ಏಳಿಗೆಗಾಗೆ ದುಡಿದರು. ಎಷ್ಟು ಹೆಮ್ಮೆಯಿಂದ ಮಾತಾಡ್ತಾ ಇದ್ರು ಗೊತ್ತಾ ಮಕ್ಕಳ ಬಗ್ಗೆ. ಯಾಕೊ ಇದೆಲ್ಲ ಯೋಚನೆ ಬಂದು ಮನಸ್ಸಿಗೆ ಬೇಜಾರಾಗಿದೆ ಕಣೇ.

ಶಾಂತಮ್ಮ ಒಂದು ನಿಮಿಷ ಬಿಟ್ಟು ಹೇಳಿದ್ರೂ ನೋಡಿ ನಮ್ಮ ಮಕ್ಕಳು ನಮ್ಮ ಸಾವನ್ನು ಎದುರಿಸಿದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಅಂತ ನಂಗೆ ಗೊತ್ತಿಲ್ಲ,  ಆದರೆ ಹಿಂದೊಮ್ಮೆ ನೀವೇ ಹೇಳಿದ ನೆನಪು ಬದುಕಿರೊ ತನಕ ನಗಬೇಕು ಕಣೆ, ಸತ್ತ ಮೇಲೆ ನಕ್ಕರೆ, ಯಾರಿಗೂ ಕಾಣೋದು ಕೂಡ ಇಲ್ಲಅಂತ... ಹಾಗೆ ಕಣ್ರಿ ಸಾಯೋ ತನಕ ನೆಮ್ಮದಿಯಿಂದ ಇದ್ದು ಬಿಡೋಣ..ನಾವು ಸತ್ತ ಮೇಲೆ ನಾವೆಲ್ಲಿರ್ತ್ತೀವಿ ಈ ದೇಹದಲ್ಲಿ, ಮಕ್ಕಳು ಈ ಖಾಲಿ ದೇಹವನ್ನು ಏನು ಮಾಡ್ತಾರೆ ಅಂತ ನೊಡೋಕೆ. ಜೀವನ ಈಗ ನೆಮ್ಮದಿಯಾಗಿದೆ, ಹೀಗೆಲ್ಲ ಯೋಚಿಸಿ ಅದನ್ನು ಹಾಳು ಮಾಡಿಕೊಳ್ಳೊದು ಬೇಡ. ಹೀಗೆ ಇದ್ದುಬಿಡೋಣ. ಬನ್ನಿ ತುಂಬಾ ಹೊತ್ತಾಯಿತು, ಮಲಗಿಕೊಳ್ಳಿ..

ಅಷ್ಟು ಹೇಳಿ ಹೊರಗೆ ಲೈಟ್ ಆಫ್ ಮಾಡಲು ಹೋದರೂ ಶಾಂತಮ್ಮ. ಹೆಂಡತಿ ಹೋದ ಕಡೆನೇ ನೋಡ್ತಾ ನಿಧಾನವಾಗಿ ರಾಯರ ಮುಖದಲ್ಲಿ ಮುಗುಳ್ನಗೆ ಅರಳಿತು. ಮೇಲೆ ನೋಡುತ್ತಾ ಅಂದರು ಗೊತ್ತಾಯಿತು ಭಟ್ಟರೆ, ಗೊತ್ತಾಯಿತು ಬಿಡಿ

ಕಾಮೆಂಟ್‌ಗಳು

  1. ಸ್ಮಶಾನ ವೈರಾಗ್ಯ ಸಹಜ.. ಅರೆ ಅವರು ಹೋದರು ನಂತರ ನಮ್ಮದು ಎಂದು ಕೊಂಚ ಕಾಲ ತಲೆ ಬಾಗಿಸಿ ಯೋಚಿಸಿ ಮತ್ತೆ ತಮ್ಮ ತಮ್ಮ ಕಾಯಕಗಳಲ್ಲಿ ತೊಡಗಿಕೊಳ್ಳುವುದು... ಮಾಮೂಲಿ ಭಾವ. ಇದು ಎಲ್ಲರಲ್ಲೂ ಸಹಜವೇ.

    ಕೆಲವೊಂದು ಅಗಲಿಕೆ ನಮ್ಮ ಮನದ ಭಾವನೆಗಳನ್ನು ಮತ್ತು ಮನದ ಬುಡವನ್ನೇ ಅಲುಗಾಡಿಸುವುದು.. ಇಹಲೋಕ ತ್ಯಜಿಸಿದ ವ್ಯಕ್ತಿಯ ಸಂಬಂಧಿಕರ ನಡುವಳಿಕೆಗಳು ಬೆಚ್ಚಿ ಬೀಳಿಸುತ್ತವೆ.. ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ ಎನ್ನುವಂತೆ ಇಂತಹ ಘಟನೆಗಳನ್ನು ತಮ್ಮ ಅನುಕೂಲಕ್ಕಾಗಿ ತಿರುಚಿ.. ಸಾವಿನಲ್ಲೂ ಲಾಭ ಅಥವಾ ನುಸುಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗಳು ಕೊಂಚ ಮನಸ್ಸನ್ನು ಅಳುಗಾಡಿಸುತ್ತವೆ..

    ಯಾರಿಗೆ ಇರೋಲ್ಲ ಕೆಲಸ.. ಯಾರೂ ಈ ಪ್ರಪಂಚದಲ್ಲಿ ಬಿಡುವಾಗಿದ್ದಾರೆ ಎಲ್ಲರೂ ಒಂದು ಕಡೆಗೆ ಓಡುತ್ತಲಿರುವವರೇ.. ಕಳೆದು ಹೋದ ಜೀವಿಗಳ ಒಡನಾಟದ ನೆನಪು ಅವರಿಗೆ ಮಾತ್ರ ಅರಿವಾಗುತ್ತದೆ.

    ಇರುವಾಗ ನಗುತ್ತ ಇದ್ದರೇ ಸಾಕು ಆಮೇಲೆ ಮುಂದಕ್ಕೆ ಏನಾದರೂ ಮಾಡಿಕೊಳ್ಳಲಿ.. ಸುಂದರ ತತ್ವ.. ಖಾಸಗಿ ವಾಹನಗಳಲ್ಲಿ ಪಯಣಿಗರು ಕಾಯುತ್ತ ನಿಂತಾಗ ಮಾತ್ರ ವಾಹನದ ಚಾಲಕರು "ಬನ್ನಿ ಸರ್ ಒಳಗೆ ಬನ್ನಿ ಸರ್" ಎನ್ನುತ್ತಾರೆ ಒಂದು ಕ್ಷಣ ಒಳ ಹೋಗಿ ನಿಮ್ಮಪಯಣದ ಹಣ ಕೊಟ್ಟ ನಂತರ ಅವರ ಬದಲಾವಣೆಯ ಮಾತುಗಳು "ಎಷ್ಟು ಸಲ ಹೇಳ್ಬೇಕು .. ಹೋಗ್ರಿ (ಕೆಲವೊಮ್ಮೆ ಏಕ ವಚನ) ಕಣ್ಣು ಕಾಣೋಲ್ವ" ಎನ್ನುತ್ತಾರೆ..

    ಮನವನ್ನು ಕಲಕಿ ಅಲುಗಾಡಿಸಿದ ಬರಹ ಇಷ್ಟವಾಯಿತು ನಿವಿ ಮತ್ತೊಮ್ಮೆ ನಿಮ್ಮ ಲೇಖನದ ಕಡೆ ಸಾಲುಗಳು ಗಮನಸೆಳೆದವು.. ಸೂಪರ್

    ಪ್ರತ್ಯುತ್ತರಅಳಿಸಿ
  2. 'ಬದುಕಿರೊ ತನಕ ನಗಬೇಕು ಕಣೆ, ಸತ್ತ ಮೇಲೆ ನಕ್ಕರೆ, ಯಾರಿಗೂ ಕಾಣೋದು ಕೂಡ ಇಲ್ಲ’
    ಬರೆದಿಟ್ಟುಕೊಳ್ಳಬೇಕಾದ ನೀತಿ ಮಾತು.

    ಒಂದು ಸಾವಿನ ಪರಿಧಿಯಲ್ಲಿ ವಿವಿದ ಮನಸ್ಸುಗಳ ಲೆಕ್ಕಾಚಾರಗಳು ಮನ ಮುಟ್ಟುವಂತೆ ದಾಖಲಿಸಿದ್ದೀರಿ.

    ಬಹುಶಃ ರಾಯರಷ್ಟೇ ನಾನೂ ಪತ್ನಿಗೆ ಅವಲಂಭಿತನು

    Best of best: ರಾಯರ ರಿಂಗ್ ಟೋನ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು