ಹುಸಿ ಕನಸು

ಹೊರಗಡೆ ಜಿಟಿ ಜಿಟಿ ಮಳೆ, ರಸ್ತೆಯಲ್ಲಿ ಛತ್ರಿ ಹಿಡಿದು, ಹವಾಯಿ ಚಪ್ಪಲಿ ಧರಿಸಿ ಪಟ್ ಪಟ್ ಪಟ್ ಶಬ್ದ ಮಾಡುತ್ತಾ ಹೋಗವ ಜನರೇ ಜಾಸ್ತಿ. ಅಲ್ಲೇ ಮನೆ ಎದುರು ಖಾಲಿ ಸೈಟ್ನಲ್ಲಿ ಮಕ್ಕಳು ಆಡ್ತಾ ಇದ್ರು. ಬಾಗಿಲಲ್ಲಿ ನಿಂತು ನೋಡ್ತಾ ಇದ್ದ ಕುಸುಮ ಕೂಗಿದಳು "ಓಯ್, ಶಾಲೆಗೆ ಹೊಗೊಲ್ವೇನ್ರೋ, ಇನ್ನು ಆಡ್ತಾ ಇದ್ದೀರಾ"

ಅವನಿಗಿಂತ ದೊಡ್ಡದಾದ ಶರ್ಟು, ಲೂಸಾದ ಚಡ್ಡಿಯನ್ನು ಎಳೆಯುತ್ತಾ ಪುಟ್ಟು ಕೂಗಿದ "ಇವತ್ತು ರಜ ಆಂಟಿ, ಅದ್ಯಾರದ್ದೋ ಜಯಂತಿ ಅಂತೆ".

ಆಂಟಿ ಅಂತೆ ಆಂಟಿ, ನನಗೇನು ಅಷ್ಟು ವಯಸ್ಸಾಗಿದ್ಯಾ? ಈಗ ಬರೋ ಡಿಸೆಂಬರ್ಗೆ ಬರಿ..... ಹಾ...... ೨೪ ಆಗುತ್ತೆ. ೨೪? ಆಗಲೇ ಮದುವೆಯಾಗಿ ೬ ವರ್ಷವಾಯಿತು.

ಮಕ್ಕಳೆಲ್ಲ ಹೀಗೆ ಮಳೇಲಿ ಆಡಿದ್ರೆ ಜ್ವರ ಬರೋಲ್ವಾ, ಪಂಕಜಮ್ಮ ಎಲ್ಲಿ, ಪುಟ್ಟು ಇಷ್ಟು ಮಳೇಲಿ ಆಡ್ತಾ ಇದ್ದಾನೆ.

​ಹೂಂ ನಾನು ಪಿ.ಯು.ಸಿ ಓದಿದ್ರೆ ಅಂಗನವಾಡಿಯಲ್ಲಿ ಕೆಲಸ ಸಿಗ್ತಿತ್ತು. ನನಗೂ ಇವತ್ತು ರಜ ಇರ್ತಿತ್ತು. ಚಿಕ್ಕವಳಿದ್ದಾಗ ಶಾಲೆಗೆ ಹೋಗೋದೇ ಒಂದು ಸಂಭ್ರಮವಾಗಿತ್ತು. ನೀಲಿ ಲಂಗ, ಬಿಳಿ ಶರ್ಟು, ಮಡಿಸಿದ ಜಡೆ, ಸ್ನೇಹಿತೆಯ​ರೊಟ್ಟಿಗೆ ಹೋಗ್ತಾ ಇದ್ರೆ, ಮಳೆ, ಚಳಿ, ಬಿಸಿಲು ​ಏನೂ ಗಮನಕ್ಕೆ ಬರ್ತಾ ಇರ್ಲಿಲ್ಲ. ಶಾಲೆ ಅಂದ್ರೆ ನಮ್ಮ ಕನ್ನಡ ಮೇಷ್ಟ್ರು ನೆನಪಾಗ್ತಾರೆ. ಎಷ್ಟು ಗಮತ್ತಾಗಿದ್ರು, ಯಾವಾಗಲೂ ಟಿಪ್ ಟಾಪಾಗಿ ಬರೋರು. ನಮ್ಮನ್ನ ಬಾಸೆಯಿಂದ ಭಾಷೆಗೆ ಕರೆತಂದವರು. ಮದುವೆಯಾದ್ರೆ ಹಿಂಗಿರುವವರನ್ನೇ ಮದುವೆಯಾಗಬೇಕು ಅಂತ ಮನೇಲಿ ಹಠ ಮಾಡಿದ್ದೆ ನಾನು.

೧೦ನೆ ಕ್ಲಾಸ್ ಪಾಸಾದ ಮೇಲೆ ಅಮ್ಮ ಓದು ಬೇಡ, ಮಗು ಕಾಲೇಜ್ಗೆ ಅಂತ ೧೦ ಕಿ,ಮಿ ಹೋಗಿ ಬರಬೇಕು, ಅದರ ಬದಲು ಮನೇಲೆ ಇದ್ದು ಕೆಲಸ ಕಲಿಲಿ ಅಂದ್ಲು.  ನಂಗೇನು ಮಹಾ ಓದೋ ಹುಚ್ಚಿರಲಿಲ್ಲ. ಎಷ್ಟು ಸಂಬಂಧ ಬಂದಿದ್ವು, ಓದಿದ ಟಿಪ್ ಟಾಪ್ ಹುಡುಗನೇ ಬೇಕು ಅಂತ ಎಲ್ಲದಕ್ಕೂ ಬೇಡ ಅಂದಿದ್ದೆ.

ಅಮ್ಮಂಗೆ ಕೋಪ, ಅಣ್ಣಂಗೆ ಕಿರಿಕಿರಿ, ಅಪ್ಪ ಮಾತ್ರ ಸರಿ ಮಗಳೇ ಅಂತ ನನಗೆ ಇಷ್ಟವಾಗೋ ಹುಡುಗನ್ನ ಹುಡುಕಿದ್ದು. ಇವರು ನನ್ನ ನೋಡೋಕೆ ಬಂದಾಗ ಎಂಥ ಸಂಭ್ರಮ ಅಂತೀನಿ. ಹುಡುಗ ಕನ್ನಡದಲ್ಲಿ ಎಂ.ಎ ಮಾಡಿದ್ದಾನೆ. ಇನ್ನೇನು ಸರ್ಕಾರಿ ಶಾಲೇಲಿ ಟೀಚರ್ ಕೆಲಸ ಸಿಗೋ ಹಾಗಿದೆ ಅಂತ.

ಕಿಟಿಕಿ ಸಂದಿಯಿಂದ ಇವರನ್ನು ಮೊದಲ ಸಲ ಇಣುಕಿ ನೋಡಿದ್ದೆ. ಬಹಳ ನಾಚಿಕೆಯಾಗಿತ್ತು. ಎಷ್ಟು ಚಂದ ಕಾಣ್ತಾ ಇದ್ರೂ. ಸಿನಿಮಾ ​ಹೀರೋ ತರಹ. ಬಿಳಿ ಶರ್ಟು, ಕಪ್ಪು ಪ್ಯಾಂಟು, ಬಾಚಿದ ಕೂದಲು, ಸಣ್ಣ ಮೀಸೆ. ಅಬ್ಬ, ದೇವರಲ್ಲಿ ಎಷ್ಟು ಕೇಳಿದ್ದೆ, ಇವರು ನನ್ನ ಮೆಚ್ಲಿ ಅಂತ.

ಎರಡು ದಿನ ಬಿಟ್ಟು ಪೋನ್ ಮಾಡಿದ್ರು, ಒಪ್ಪಿಗೆ ಅಂತ. ೩ ತಿಂಗಳಲ್ಲಿ ಮದುವೇನೂ ಆಗಿ ಹೋಯಿತು.

ಹಮ್ ಎಷ್ಟು ಬೇಗ ೬ ವರ್ಷ ಆಗೇ ಹೋಯಿತು.

ಮಳೆ ಯಾಕೋ ನಿಲ್ಲೋ ಹಾಗೆ ಕಾಣಲ್ಲ. ಇನ್ನು ತಡ ಮಾಡಿದ್ರೆ ಅರ್ಧ ದಿನದ ಸಂಬಳ ಕಟ್ ಮಾಡ್ತಾರೆ. ಅಯ್ಯೋ ಇವರು ಛತ್ರಿ ರಿಪೇರಿ ಮಾಡ್ಸಿಕೊಂಡು ಬಂದರೋ  ಇಲ್ವೊ.

"ರೀ ​ನಿನ್ನೆ ಛತ್ರಿ ರಿಪೇರಿ ಮಾಡಿಸಿದ್ರಾ?" ಅಂತ ಕೇಳ್ತಾನೆ ಛತ್ರಿ ಬಿಚ್ಚಿ ನೋಡಿದಳು. ಸರಿನೆ ಮಾಡ್ಸಿಲ್ವೆ. "ರೀ?"

"ಇಲ್ಲ ಕಣೆ, ನನಗೆ ​ನಿನ್ನೆ ​ಡೈರೆಕ್ಟರ್ನ ​ನೋಡಬೇಕಿತ್ತು, ಅವರ ಹತ್ರ ಹೋಗುವಾಗ ಈ ಕಿತ್ತು ಹೋದ ಛತ್ರಿ ತಗೊಂಡು ಹೋಗೋಕೆ ನಾಚಿಕೆ ಆಗುತ್ತೆ. ಅದಕ್ಕೆ ತಗೊಂಡು ಹೋಗಿಲ್ಲ"

ಇವರು ಹೀಗೆ, ನನ್ನ ಮೆಚ್ಸಿಸೋಕಾದ್ರು ಮರೆತು ಹೋಯಿತು ಅಂತ ಸುಳ್ಳು ಹೇಳೋಲ್ಲ. ಇವರ ಈ ಗುಣವೇ ನನಗೆ ಬಲು ಇಷ್ಟ. ಅತ್ತಿಗೆಗೆ ಎಷ್ಟು ಹೇಳಿದ್ರು ಅರ್ಥವಾಗೋಲ್ಲ.

ಹಮ್ ಪಂಕಜಮ್ಮನ್ನೇ ಕೇಳ್ತೀನಿ ಛತ್ರಿ ಇದ್ಯಾ ಅಂತ. ಮತ್ತೆ ಬಾಗಿಲ ಬಳಿ ಬಂದು ಪುಟ್ಟುನ ಕರೆದಳು "ಲೋ ಪುಟ್ಟು ಅಮ್ಮ ಇದ್ದಾರೇನೋ ಮನೇಲಿ?"

ಮೂಗು ಒರೆಸುತ್ತಾ ಪುಟ್ಟ ಕೂಗಿದ "ಇಲ್ಲ ಆಂಟಿ, ಅಮ್ಮ ಅತ್ತೆ ಮನೆಗೆ ಹೋಗಿದ್ದಾರೆ"

ಅತ್ತೆ ಮನೆಗಾ!!! ಆರತಿಗೆ ಹೆರಿಗೆ ಆಯಿತು ಅನ್ಸುತ್ತೆ. ನನ್ನ ಮಡಿಲಲ್ಲೂ ಒಂದು ಕೂಸು ಇದಿದ್ರೆ ಎಷ್ಟು ಚೆನ್ನಾಗಿರ್ತಿತ್ತು.

ಮೊದಲ ರಾತ್ರಿ ಇವರು ಹೇಳಿದ್ರು, "ನೋಡು ಕುಸುಮ, ನನಗೆ ಇನ್ನು ಕೆಲಸ ಪಕ್ಕಾ ಆಗಿಲ್ಲ. ಮತ್ತೆ ಮುಂದೆ ನಾನು ದೊಡ್ಡ ಸಾಹಿತಿಯಾಗಬೇಕು ಅಂತ ಇದ್ದೀನಿ, ಸಿನಿಮಾಕೆ ಸಾಹಿತ್ಯ ಬರೀಬೇಕು ಅಂತಾನು ಯೋಚಿಸಿದ್ದೀನಿ. ಅದಕ್ಕೆ ಅದೆಲ್ಲಾ ಸಾಧಿಸೋವರೆಗೂ ನಾವು ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಇರ್ಬೇಕು. ಅದೆಲ್ಲ ಆದ ಮೇಲೆ ಮಕ್ಕಳು ಮಾಡಿಕೊಳ್ಳೋಣ. ಗೊತ್ತಾಯಿತಾ"

ಆಗ ಮಹಾ ಏನು ಅರ್ಥವಾಗಿರಲಿಲ್ಲ. ನಾನಂತು ಅವರು ಮಾತಾಡೋ ರೀತಿಗೆ ಮರುಳಾಗಿ ಅವರ ಧ್ವನಿ ಕೇಳ್ತಾ ಮೈ ಮರೆತಿದ್ದೆ. ಆದರೆ ಸುಮಾರು ಎರಡು ವರ್ಷ ಕಳೆದ್ರೂ ಮಕ್ಕಳು ಮಾಡಿಕೊಳ್ಳಲಿಲ್ಲ ಅಂತ ಜನ ಕೇಳೋಕೆ ಶುರು ಮಾಡಿದಾಗ ಇದನ್ನೇ ಮತ್ತೆ ಹೇಳಿದ್ರು. ಸಧ್ಯ ನಮ್ಮತ್ತೆಗೆ ನನ್ನ ಕಂಡರೆ ತುಂಬಾ ಇಷ್ಟ, ಚುಚ್ಚಿ ಮಾತಾಡಿಲ್ಲ. ಬೇರೆಯವರು ಹೀಗೆ ಹೇಳ್ತಾ ಇದ್ದಾರೆ ಏನು ಹೇಳ್ಬೇಕು ನಾನು ಅಂತ ಇವರನ್ನ ಒಂದು ಸಾರಿ ಕೇಳಿದ್ದೆ. ಇವರು ಸುಲಭವಾಗಿ ಅಂದಿದ್ರು, ಅದಕ್ಕೇನು ಸತ್ಯ ಹೇಳು ಅಂತ. ಹೀಗೆ ನಮಗೆ ಜೀವನದಲ್ಲಿ ಸಾಧಿಸೋದು ಬಹಳ ಇದೆ, ಈಗ ಮಕ್ಕಳು ಮಾಡಿಕೊಳ್ಳೋಷ್ಟು ಸಮಯವಿಲ್ಲ ಅಂತ. ಎಷ್ಟು ದೈರ್ಯ ಇವರಿಗೆ ಅಂತೀನಿ, ನಿಜ ಹೇಳೋಕೆ ಹಿಂದೆ ಮುಂದೆ ಯೋಚಿಸೊಲ್ಲ, ಇಂತವರನ್ನ ಹೇಗೆ ನಂಬದೆ ಇರೋದು. ಅವತ್ತು ಇವರು ಅದೇನೋ ಹೇಳಿದ್ರಪ್ಪ ಸತ್ಯ ಹೇಳೋ ಬಗ್ಗೆ. ..... ಹಮ್.... ಅದು...

"ರೀ, ಅದೇನೋ ಸತ್ಯ ಹೇಳೋ ಬಗ್ಗೆ ಒಂದು ಮಾತು ಯಾವಾಗಲು ಹೇಳ್ತಾ ಇರ್ತೀರಲ್ಲ, ಏನದು ?"

"ಏನೇ ಅದು ನಿನ್ನ ಗೋಳು, ಈಗ ಯಾಕೆ ಅದೆಲ್ಲ. ನಿನಗೆ ಹೊತ್ತಾಗಿಲ್ವಾ ಕೆಲ್ಸಕ್ಕೆ ಹೋಗೋದಕ್ಕೆ. ಅಥವಾ ಇವತ್ತು ಚಕ್ಕರ್ ಹಾಕೋಣ ಅಂತ ಯೋಚಿಸಿದ್ಯಾ?"

"ಇಲ್ಲಾರಿ ಹೊರಟೆ, ಯಾಕೋ ನೆನಪಾಯಿತು ಕೇಳ್ದೆ ಅಷ್ಟೇ"

" I rather tell the truth, than impress others - ಅಂದ್ರೆ ನಾನು ಬೇರೆಯವರನ್ನ ಮೆಚ್ಚಿಸೋದಕ್ಕಿಂತ ಸತ್ಯ ಹೇಳಲು ಇಚ್ಚಿಸುತ್ತೀನಿ" ಅಂತ ಅರ್ಥ.

ಹಾ ಅದೇ, ಅದರ ಪ್ರಕಾರನೆ ಇವತ್ತಿನ ತನಕ ಇವರು ನೆಡೆದು ಬಂದಿದ್ದು. ಹೌದು ಇವರಿಗೆ ಈಗ ಕೆಲಸ ಇಲ್ಲ, ಆಗಾಗ ಕುಡಿತಾರೆ, ಸಿಗರೇಟು ಸೆದ್ತಾರೆ, ಇಲ್ಲ ಏನೋ ಒಂದು ಬರಿತಾ ಇರ್ತಾರೆ. ಅದೆಲ್ಲಾ ಏನೇ ಇರಬಹುದು, ಇವತ್ತಿನ ತನಕ ನನ್ನ ಹತ್ರ ಇವರು ಸುಳ್ಳು ಹೇಳಿಲ್ಲ. ಬಹಳ ಪ್ರಾಮಾಣಿಕರು.

ಇವತ್ತು ನಾನು ಕೆಲಸ ಮಾಡಿ ಇವರನ್ನ ನೋಡ್ಕೋತಾ ಇದ್ದೀನಿ, ಆದರೆ ಬಹಳ ಬೇಗ ಇವರ ಕಥೆನಾ ಯಾವುದಾದರು ಬುದ್ಧಿವಂತ ಡೈರೆಕ್ಟರ್ ಇಷ್ಟ ಪಟ್ಟು ಸಿನಿಮಾ ಮಾಡ್ತಾನೆ ಆಗ ನನ್ನ ರಾಣಿ ಹಾಗೆ ನೋಡ್ಕೊತ್ತಿನಿ ಅಂತ ಹೇಳ್ತಾ ಇರ್ತಾರೆ. ಪ್ರತಿ ವಾರ ಗಣಪತಿ ದೇವಸ್ಥಾನಕ್ಕೆ ಹೋದಾಗ ಇದನ್ನೇ ಪ್ರಾರ್ಥಿಸೋದು ನಾನು.

ಅಮ್ಮ ಇವತ್ತು ಹೋದರೂ ಹೇಳ್ತಾಳೆ, "ಹೂವಿನ ಹಾಗಿ ಸಾಕಿ ಗಿಡುಗನ ಕೈಗೆ ಕೊಟ್ಟ ಹಾಗಾಯಿತು ಅಂತ." ಅಪ್ಪ 
​ಅಂತೂ ಏನು ಹೇಳೋಲ್ಲ. ಅಣ್ಣನಿಗೆ ಇವರು ಅಂದರೆ ಬಲು ಕೋಪ, ಅತ್ತಿಗೆ ಸೂಕ್ಷ್ಮವಾಗಿ ಒಮ್ಮೆ ಗಂಡನ್ನ ಬಿಟ್ಟು ಬಂದು ಬಿಡು.
​ನಿನ್ನ ವಯಸ್ಸಿಗೆ ಒಳ್ಳೆ ಹುಡುಗ ಸಿಗ್ತಾನೆ, ಇಂತವನನ್ನು ಕಟ್ಕೊಂಡು ಯಾಕೆ ಕಷ್ಟ ಪಡ್ತಿಯಾ ಅಂತ

ಆದ್ರೆ ಅವರಿಗೆ ಏನು ಗೊತ್ತು, ಬರಿ ಸುಳ್ಳು, ಕಪಟ ಮಾಡೋ ಗಂಡ ಆಗಿದ್ರೆ ಇವರು ಹೇಳಿದ ಹಾಗೆ ಬಿಟ್ಟು ಬಿಡ್ತಿದ್ದೆ. ಆದರೆ ನನ್ನ ಹತ್ರ ಸುಳ್ಳು ಕೂಡ ಹೇಳದ ಗಂಡನನ್ನ ಬಿಡು ಅಂದ್ರೆ. ಏನೋ ಕೆಟ್ಟ ಳಿಗೆ, ಜೀವನದಲ್ಲಿ ಏನೋ ಮಾಡ್ಬೇಕು ಅಂತ ಕೆಲಸ ಬಿಟ್ರು.

ಓ ಮಳೆ ಸ್ವಲ್ಪ ಕಮ್ಮಿ ಆದ ಹಾಗಿದೆ. ಈಗಲೇ ಹೊರಟರೆ, ಮತ್ತೆ ಜಾಸ್ತಿಯಾಗೊದ್ರೊಳಗೆ ಫ್ಯಾಕ್ಟರಿ ಸೇರಬಹುದು. ಪ್ಲಾಸ್ಟಿಕ್ ಕವರ್ನಾದ್ರು ತಲೆ ಮೇಲೆ ಇಟ್ಕೊಂಡು ಹೋಗ್ತೀನಿ. ಅಯ್ಯೋ ಮರೆತಿದ್ದೆ.

"ರೀ ಅಲ್ಲಿ ಕನ್ನಡಿ ಮುಂದೆ ಶೆಟ್ಟರ ಅಂಗಡಿಗೆ ಕೊಡೊ ಬಾಕಿ ಹಣ ಇಟ್ಟಿದ್ದೀನಿ. ಇವತ್ತು ಹೋಗ್ತಾ ಕೊಟ್ಟು ಹೋಗ್ತಿರಾ. ನನಗೆ ಆಗ್ಲೇ ತುಂಬಾ ತಡವಾಗಿದೆ"

"ನನಗೆ ತುಂಬಾ ಕೆಲಸ ಇತ್ತು...... ಸರಿ ಬಿಡು, ಮಧ್ಯಾಹ್ನ ರಾಘು ಮನೆಗೆ ಹೋಗ್ಬೇಕು ಆಗ ಕೊಟ್ಟು ಹೋಗ್ತೀನಿ. ಅಂದ ಹಾಗೆ ಇವತ್ತು ನಾನು ಬರೋದು ಸ್ವಲ್ಪ ತಡವಾಗುತ್ತೆ. "

"ಸರಿ ನಾನು ಹೊರಡ್ತೀನಿ. ಬಾಗಿಲು ಹಾಕೊಳ್ಳಿ"

ಹೇಗಿದ್ರು ಇವರು ಬರೋದು ಲೇಟಾಗುತ್ತೆ ಅಂದರೆ ನಾನು ಓ.ಟಿ ಮಾಡಿ ಬರ್ತೀನಿ, ಆಗಾಗ ಓ.ಟಿ ಕೆಲಸ ಒಪ್ಕೊಂಡ್ರೆ ಸ್ವಲ್ಪ ಹಣ ಜಾಸ್ತಿ ಬರುತ್ತೆ. 

ಅಬ್ಬ ಈ ಮಳೆ ಸಹವಾಸ ಸಾಕಪ್ಪ ಸಾಕು. ನಾಳೆ ಭಾನುವಾರ, ಹೀಗೆ ಮಳೆ ಬರ್ತಾ ಇದ್ರೆ ಹೊರಗೆ ಬರದೆ ಬೆಚ್ಚಗೆ ಬಿದ್ಕೊತ್ತೀನಿ. 

ರಾತ್ರಿ ಮನೆಗೆ ಬಂದ ಕುಸುಮ ಅಡುಗೆ ಕೆಲಸ ಮುಗಿದು ಮಲಗೋ ಸಮಯವಾದ್ರೂ ಗಂಡ ಬರಲಿಲ್ಲ ಇನ್ನೇನು ಮಾಡೋದು ಅಂತ ಗುಂಡಿ ಹಾಕಬೇಕು ಅಂತ ಇದ್ದ ಅವರ ಶರ್ಟನ್ನ ಕೈಗೆತ್ತುಕೊಂಡಳು.

ಟಿ.ವಿ ನೋಡ್ತಾ ಇದ್ದವಳಿಗೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಹಾಗೆ ಬೆನ್ನು ನೋವು ಅಂತ ಸೋಫಾದ ಮೇಲೆ ಒರಗಿದವಳಿಗೆ, ಬಾಗಿಲು ಬಡಿದ ಶಬ್ದ ಬಂದಾಗಲೆ ತಾನು ನಿದ್ದೆಗೆ ಜಾರಿದ್ದು ಅರಿವಾಗಿದ್ದು. 

ಬಾಗಿಲು ತೆರೆದು ತೂರಾಡುತ್ತಾ ಒಳ ಬಂದ ಗಂಡನನ್ನ ಕೈ ತೊಳೆಯಲು ಕಳಿಸಿ, ಊಟಕ್ಕೆ ಬಡಿಸಿ ಗಡಿಯಾರ ನೋಡಿದಾಗ ರಾತ್ರಿ ೧೨ ಮೀರಿತ್ತು. 

ಸದ್ದಿಲ್ಲದೆ ಊಟ ಮಾಡುತ್ತಿದ್ದ ಗಂಡನನ್ನು ಕೇಳಿದಳು "ರೀ ಹೋಗಿದ್ದ ಕೆಲಸ ಆಯಿತಾ?"

"ಹೋಗ್ಲಿ ರಾಘು ಏನಂದ?"

"ಇವತ್ತು ೩ ಗಂಟೆ ಓ.ಟಿ ತೊಗೋಬೇಕಾಯಿತು. ಬೆಳಗ್ಗೆ ಒಂದು ಗಂಟೆ ತಡವಾಗಿ ಹೋದೆ ಅಂತ ಸುಪರ್ವೈಸರ್ ೨ ಗಂಟೆ ಓ.ಟಿ ಮಾತ್ರ ಲೆಕ್ಕಕ್ಕೆ ಬರ್ಕೊಂಡ"

ಗಂಡ ಏನು ಪ್ರತಿಕ್ರಿಯೆ ನೀಡದೆ ಇರೋದನ್ನು ನೋಡಿ ಇವಳು ಸುಮ್ಮನಾದಳು. 

ಊಟ ಮುಗಿಸಿ ಕೈತೊಳೆಯಲು ಹೊರಟ ಗಂಡನನ್ನು ತಡೆದು ಕೇಳಿದಳು " ಅರೆ ಕೇಳೋದೇ ಮರತೆ, ಅಂಗಡಿ ಬಾಕಿ ಕೊಟ್ರಿ ತಾನೇ?"

ಒಂದು ಕ್ಷಣ ಬಿಟ್ಟು "ಹಮ್" ಎಂದು ಕೇಳಿ ಸಮಾಧಾನ ಪಟ್ಟ ಕುಸುಮ ಮನದಲ್ಲೆ ಹೇಳಿಕೊಂಡಳು "ಅಬ್ಬ ಇದೊಂದು ದೊಡ್ಡ ಜವಾಬ್ದಾರಿ ಕಳೆದ ಹಾಗಾಯಿತು."

ಭಾನುವಾರ ಬೆಳಗ್ಗೆ ಎದ್ದು ಬಾಗಿಲು ತೆರೆದಳು, ಮೋಡ ಕವಿದ ವಾತಾವರಣ, ಸೂರ್ಯ ಊರು ಬಿಟ್ಟು ಹೋದ ಹಾಗೆ ಚಳಿ. 

ಸಧ್ಯ ಮಳೆ ಬರ್ತಾ ಇಲ್ವಲ್ಲ. ಇವತ್ತು ಟೈಲರ್ ಅಂಗಡಿಯವನು ಕೊಟ್ಟ ಗುಂಡಿ ಕಾಜದ ಕೆಲಸ ಮುಗಿಸಿ ಬಿಡಬೇಕು. ಬಟ್ಟೆ ತೊಳದರೆ ಒಣಗಿಸೋಕೆ ಭಯ. ಆದ್ರೂ ಇವರದೊಂದು ಶರ್ಟು ಪ್ಯಾಂಟು, ನಂದೊಂದು ಸೀರೆ ತೊಳೆದು ಬಿಡ್ತೀನಿ. ನಾಳೆ ಎಲ್ಲಾದ್ರು ಡೈರೆಕ್ಟರು ಅವ್ರು ಇವ್ರು ಅಂತ ನೋಡೋಕೆ ಹೋದ್ರೆ ಬೇಕಾಗುತ್ತೆ ಇವರಿಗೆ.

ಬಟ್ಟೆ ತೊಳೆದು ಗಾಳಿಗಾದ್ರು ಆರಿಕೊಳ್ಳಲಿ ಅಂತ ಒಣಗಿಸಿ, ಒಳಗೆ ಗುಂಡಿ ಹೊಲೆಯುತ್ತ ಕೂತಿದ್ದಳು. ಗಂಡ ಬೆಳಗ್ಗೇನೆ ಹೊರ ಹೋಗಿಯಾಗಿತ್ತು. ಆಗಲೇ ಯಾರೋ ಕೂಗಿದ ಹಾಗಾಯಿತು. 

ಬಾಗಿಲ ಬಳಿ ಹೋಗಿ ನೋಡಿದ್ರೆ ಅಂಗಡಿ ಹುಡುಗ ಪ್ರಕಾಶ. 

"ಏನೋ ಪ್ರಕಾಶ ಇಲ್ಲಿ ತನಕ ಬಂದಿದ್ದಿಯಾ, ನಾನು ಸಾಮಾನೆನು ಹೇಳಿಲ್ವಲ್ಲ?"

"ಅಂಟಿ ... ಸಟ್ರು ಕಳಿಸ್ದ್ರು .. ಬಾಕಿ ಹಣ ಕೊಡಬೇಕಂತೆ"

"ನೆನ್ನೆ ನಮ್ಮ ಮನೆಯವರು ಬಂದು ಕೊಟ್ರಲ್ಲ!!!"

"ಇಲ್ಲವಲ್ಲ ಅಂಟಿ, ನೆನ್ನೆ ನಾನೇ ಇದ್ದೆ ಅಂಗಡಿಯಲ್ಲಿ ಇಡೀ ದಿನ, ನಿಮ್ಮ ಮನೆಯಿಂದ ಯಾರು ಬಂದಿಲ್ಲ. ನಾಳೆ ಒಳಗೆ ಬಾಕಿ ಕೊಡಲಿಲ್ಲ ಅಂದರೆ ಕಷ್ಟ ಆಗುತ್ತೆ ಅಂತ ಹೇಳು ಅಂದ್ರು" ಅಂತ ಹೇಳಿ ಅವನು ಓಡಿ ಹೋದ.

ಬಾಗಿಲು ಹಾಕಿದ ಕುಸುಮಾಳ ಮನದಲ್ಲಿ ಒಂದೇ ಮಾತು ಪ್ರತಿಧ್ವನಿಸುತ್ತಿತ್ತು "ಸುಳ್ಳು ಹೇಳಿದ್ರಾ ಇವರು!!!". ನಡುಗುವ ಹೆಜ್ಜೆ ಇಡುತ್ತಾ ರೂಮಿಗೆ ಹೋಗಿ ಸೂಟ್ಕೇಸಿನಲ್ಲಿ ಬಟ್ಟೆ ತುಂಬಲು ಶುರು ಮಾಡಿದಳು.


ಕಾಮೆಂಟ್‌ಗಳು

 1. ನಡುಗುವ ಹೆಜ್ಜೆ ಇಡುತ್ತಾ ರೂಮಿಗೆ ಹೋಗಿ ಸೂಟ್ಕೇಸಿನಲ್ಲಿ ಬಟ್ಟೆ ತುಂಬಲು ಶುರು ಮಾಡಿದಳು.

  classic lines

  ಶಾಲಾ ದಿನಗಳಲ್ಲಿ ಕಲ್ಲರಳಿ ಹೂವಾಗಿ ಅನ್ನುವ ಪಾಠ ಒಂದಿತ್ತು. ಬಂಗಾರಿ ಎನ್ನುವ ಪಾತ್ರ. ತನ್ನ ಕುಡುಕ ಗಂಡನನ್ನು ಹಾದಿಗೆ ತರುವ ಪಾತ್ರ. ಇಡಿ ಕಥೆಯಲ್ಲಿ ಒಬ್ಬಳೇ ಹೋರಾಡುತ್ತಾಳೆ ಮತ್ತು ಗೆಲ್ಲುತ್ತಾಳೆ.

  ಈ ಕಥೆಯಲ್ಲಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣುತ್ತ ಇದ್ದ ನಾಯಕಿಗೆ ತನ್ನ ಗಂಡನ ಗುಣಗಳಲ್ಲಿ ಮೊತ್ತ ಮೊದಲಿಗೆ ಇಷ್ಟವಾದದ್ದು ಪ್ರಾಮಾಣಿಕತೆ. ಸತ್ಯಸಂಧತೆ. ಯಾವಾಗ ಆ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿತೋ ಆಗ ಶುರುವಾಗುತ್ತದೆ ಜೀವನದ ತನ್ನ ನಿರ್ಧಾರ ತಪ್ಪು ಇರಬಹುದೇನೋ ಎಂದು .

  ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದರೂ, ತಾನು ದುಡಿದು ಗಂಡನನ್ನು ಸಾಕುತ್ತಿದ್ದರೂ, ಒಂದಿನಿತು ಬೇಸರಗೊಳ್ಳದ ನಾಯಕಿ, ಒಂದು ಸುಳ್ಳು ಅವಳ ಇಡೀ ಭರವಸೆಯ ಬುನಾದಿಯನ್ನೇ ಅಲ್ಲಾಡಿಸಿದ್ದು, ಆಕೆಯ ಪ್ರೀತಿಯ ಗೋಪುರಕ್ಕೆ ಬಡಿದ ಸಿಡಿಲಂತಾಗುತ್ತದೆ.

  ಪ್ರಪ್ರಥಮ ಬಾರಿಗೆ ಅಂತ್ಯವನ್ನು ನೋಡಿ, ಅರೆ ನೀವಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಅನ್ನಿಸಿತು. ಚಳಿಗೆ ಒಂದು ಕಪ್ ಕಾಫಿ ಕುಡಿದು ಮತ್ತೆ ಕೊನೆಸಾಲನ್ನು ಓದಿದೆ "ನಡುಗುವ ಹೆಜ್ಜೆ ಇಡುತ್ತಾ ರೂಮಿಗೆ ಹೋಗಿ ಸೂಟ್ಕೇಸಿನಲ್ಲಿ ಬಟ್ಟೆ ತುಂಬಲು ಶುರು ಮಾಡಿದಳು" ಆಗ ಅರ್ಥವಾಯಿತು.

  ನೀವಿ ಸ್ಪೆಷಲ್ ಮತ್ತೆ ಕಣ್ಣ ಮುಂದೆ

  ಪ್ರತ್ಯುತ್ತರಅಳಿಸಿ
 2. ಎಂಥಾ ತಿರುವು !!!! ತುಂಬಾ ಚೆನ್ನಾಗಿದೆ,ನಿವೇದಿತ ಅವರೆ !!!!! ಸೂಪರ್ !!!

  ಪ್ರತ್ಯುತ್ತರಅಳಿಸಿ
 3. ಬಹಳ ಪ್ರಾಮಾಣಿಕವಾದ ಪಾತ್ರ ಗಳ ನಿರ್ವಹಣೆ ಈ ಕಥೆಯಲ್ಲಿ ಆಗಿದೆ, ಇದು ಎಲ್ಲರ ಮನೆಯ ಕಥೆಯೂ ಆಗಿರುವ ಸಾಧ್ಯತೆ ಇದೆ, ಚಂದದ ನಿರೂಪಣೆ ಓದುಗರನ್ನು ಇದು ನಮ್ಮ ನಡುವಿನ ಕಥೆಯೇ ಎನ್ನುವಂತೆ ಸೆಳೆಯುತ್ತದೆ.

  ಪ್ರತ್ಯುತ್ತರಅಳಿಸಿ
 4. ಕಥನದ ಮೊದಲದ ಗೆಲುವು ಅದು ಓದುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿದೆ. ಈ ಕಥೆ ಅದರ ಸಾಲಿಗೆ ಸೇರುವಂತದು. ಭೇಷ್!

  ಪಾತ್ರಗಳ ನಿರ್ವಹಣೆ ಮತ್ತು ಕಥಾ ನಿರೂಪಣೆ ಎರಡಕ್ಕೂ ಸಮಾನ ಅಂಕಗಳು.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು