ದ್ವಂಧ್ವ


ಗೀತ ಕ್ಲಿನಿಕ್ ಬಾಗಿಲಿನಲ್ಲಿ ನಿಂತಿದ್ದಳು, ಕಣ್ಣೆತ್ತಿ ನೋಡಿದರೆ ಕಾರ್ಮೋಡಗಳ ಕತ್ತಲಲ್ಲಿ ಮರೆಯಾದ ಬೆಳಕು, ಮಧ್ಯಾಹ್ನದ ಮೂರು ಘಂಟೆಗೇ ಸಂಜೆಗತ್ತಲ ಅನುಭವ.   ಆದರೆ ಇದ್ಯಾವುದೂ ಅವಳ ಗಮನಕ್ಕೆ ಬರಲಿಲ್ಲ. ಸೋನೆ ಮಳೆ ಸುರಿಯಲು ಶುರುವಾದಾಗಲೂ ಅವಳ ಹೆಜ್ಜೆ ನಿಲ್ಲಲಿಲ್ಲ. ಗೀತ ತನ್ನದೇ ಲೋಕದಲ್ಲಿ ನಡುಗುತ್ತಿದಳು, ಅವಳಿಗೆ ಹೊರಗಿನ ಚಳಿ ತಾಕಿರಲಿಲ್ಲ. ಸ್ವಲ್ಪ ದೂರ ನೆಡೆದು ಅಲ್ಲೇ ಇದ್ದ ಉದ್ಯಾನದ ಕಡೆ ಅವಳ ಗಮನ ಹರಿಯಿತು. ಹೋಗಿ ಅಲ್ಲಿನ ಕಲ್ಲಿನ ಬೆಂಚಿನ ಮೇಲೆ ಕೂತವಳ ಕಣ್ಣಂಚಿನಲ್ಲಿ ಅಳಲು. ಮನದಲ್ಲಿ ಪ್ರಶ್ನೆಗಳು. ಬಿದ್ದ ಹನಿ ಮಳೆಯಲ್ಲಿ ಬೆರೆತು ಹೋಯಿತು, ಗಾಳಿಯ ರಭಸಕ್ಕೆ ಅವಳ ಮನವೇ ಹೊಯ್ದಾಡಿತು.

"ಕಣ್ಣಂಚಿನಾ ಹನಿ ಮಳೆಯಲ್ಲಿ ಬೆರೆತು ಹೋಗಲಿ ಗೆಳೆಯ, ಕೈಯೆತ್ತಿ ಒರಸದಿರು
ಮೂಕ ಮೌನವನೊಮ್ಮೆ ತಿಳಿದು ಸಂತೈಯಿಸಿ, ಏನೆಂದು ಪ್ರಶ್ನಿಸದಿರು 
ನನ್ನೊಳಗೆ ನಾ ಹುಡುಕುವೆನಿಂದು, ಉತ್ತರಗಳು, ಕಾರಣಗಳು 
ಯಾರು ಇರದಿದ್ದರೆನಂತೆ, ನೀ ನನ್ನ ಜೊತೆಯಾಗಿರು.... " 

ಆದರೆ ರವಿ ನಿಜವಾಗಿಯೂ ಇದರಲ್ಲಿ ನನ್ನ ಜೋತೆಯಾಗಿರ್ತಾನ?? ಅನ್ನೋ ಪ್ರಶ್ನೆ ಅವಳನ್ನು ಕಾಡುತಿತ್ತು. ನೆಂದ ಮೈ ನಡುಗಿ ನೆನಪಿಸಿದಾಗ ಎದ್ದು ತನ್ನ ಕಾರಿನ ಕಡೆ ನೆಡೆದಳು.

ಮನೆಯೊಳಗೆ ಕಾಲಿಟ್ಟೊಡನೆ ಅತ್ತೆಯ ಕಾಳಜಿಯ ಬೈಗುಳ "ಅರೆರೆ ಇದೇನೇ ಇಷ್ಟು ನೆಂದಿದ್ದಿಯಾ, ಕಾರ್ ತಗೊಂಡು ಹೋಗಿದ್ದೆ ಆಲ್ವಾ?" ಕೇಳಿ ಅವಳ ಮನ ಮತ್ತೂ ನೊಂದಿತು. ಇವರಿಗೆ ಹೇಗೆ ತಿಳಿಸಲಿ ನಾನು ಎಂದು ನೆನೆದೆ ಮೂಕವಾದಳು.
"ಕಾರ್ ಹತ್ತೋದ್ರೊಳಗೆ ನೆಂದು ಬಿಟ್ಟೆ ಅಮ್ಮ. ಪರವಾಗಿಲ್ಲ ಬಿಡಿ ಈಗ ಬಟ್ಟೆ ಬದಲಿಸಿಬಿಡ್ತೀನಿ" ಅಂತ ಕಣ್ಣಿರು ತುಳುಕುವುದರೊಳಗೆ ಒಳಗೆ ಓಡಿದಳು.

ಬಟ್ಟೆ ಬದಲಾಯಿಸಿ, ಮನಸನ್ನು ಸಮಾಧಾನಿಸಿ ರೂಮಿಂದ ಹೊರಬರುವ ಹೊತ್ತಿಗೆ ಅತ್ತೆ ಬಿಸಿ ಬಿಸಿ ಕಾಫಿ ಮತ್ತೆ ತಿಂಡಿ ತಯಾರಿಸಿದ್ದರು. ಭಾವುಕತೆಗೆ ಬಲಿಯಾಗುವುದರೊಳಗೆ ಕಾಫಿ ಕೈಗೆತ್ತಿಕೊಂಡಳು.

ಅತ್ತೆ ಅವಳ ಹತ್ತಿರ ಕೂತು ಮೆಲು ದನಿಯಲ್ಲಿ ಕೇಳಿದರು "ಯಾಕಮ್ಮಾ ತುಂಬಾ ಸುಸ್ತಾದ ಹಾಗೆ ಕಾಣ್ತಾ ಇದ್ದೀಯಾ?".
"ಇಲ್ಲ ಅಮ್ಮಾ, ಸ್ವಲ್ಪ ಆಯಾಸ ಅಷ್ಟೆ. ಅಕ್ಷರ ರಾತ್ರಿಯೆಲ್ಲಾ ಹೊರಳಾಡ್ತಿದ್ಳು ಅದಕ್ಕೆ ನಿದ್ದೆ ಸರಿ ಆಗಿಲ್ಲಾ"
"ಸ್ವಲ್ಪ ಹೊತ್ತು ಹೋಗಿ ಮಲಗು ಹಾಗಾದ್ರೆ...  ಹೋಗು"
"ಬೇಡ ಅಮ್ಮ ಇನ್ನೇನು ರವಿ ಬಂದು ಬಿಡ್ತಾರೆ, ರಾತ್ರಿ ಬೇಗ ಮಲಗ್ತೀನಿ ಅಷ್ಟೆ. ನೀವು ಚಿಂತಿಸಬೇಡಿ." ಅಂತ ಒಂದು ಪುಟ್ಟ ನಗೆ ನೀಡಿದಳು ಅತ್ತೆಯನ್ನು ಓಲೈಸಲು.
"ಸರಿ ಹಾಗಾದ್ರೆ ನಾನು ಮತ್ತೆ ನಿನ್ನ ಮಾವ ದೇವಸ್ಥಾನಕ್ಕೆ ಹೋಗಿ ಬರ್ತೀವಿ. ಬರ್ತಾ ಸವಿತಾಳ ಮನೆಗೆ ಹೋಗಿ ಬರ್ತೀವಿ ಆಯ್ತಾ"
ಮೆಲ್ಲಗೆ ಹೂಂ ಗುಟ್ಟಿದಳು ಗೀತ.
ಅತ್ತೆ ಮಾವನನ್ನು ಕಳಿಸಿ ಮತ್ತೆ ಬಂದ ಕೂತವಳ ತಲೆಯಲ್ಲಿ ಪ್ರಶ್ನೆಗಳ ಮಹಾ ಪೂರ. ಆಡುತಿದ್ದ ಮಗಳನ್ನು ಎತ್ತಿ ಮುದ್ದಾಡಿದಳು. ಮಗಳನ್ನು ಅಪ್ಪಿದಾಗ ಸಿಗುವ ತೃಪ್ತಿ ಇಂದು ಅವಳ ಕೈ ಜಾರುತ್ತಿತ್ತು.  ಎಲ್ಲೋ ಏನೋ ಕಳೆದು ಹೋಗುವುದು ಎನ್ನುವ ಭಾವ.
ತನಗೆ ಸರಿ ಅಂತ ಕಾಣುತ್ತಿರುವ ನಿರ್ಧಾರ ಸರಿಯಲ್ಲವೇನೋ ಅನ್ನೋ ಕಳವಳ. ರವಿಯ ಪ್ರತಿಕ್ರಿಯೆ ಹೇಗಿರಬಹುದು ಅನ್ನೋ ಭಯ. ಯೋಚಿಸಿತ್ತಾ ಕೂತವಳಿಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಬಾಗಿಲು ತಟ್ಟಿದ ಸಪ್ಪಳವಾದಾಗಲೆ ಅವಳಿಗೆ ತನ್ನ ಅರಿವು ಮತ್ತೆ ಮೂಡಿದ್ದು.
ಬಂದಿದ್ದು ರವಿ ಅಂತ ತಕ್ಷಣ ತಿಳಿದರೂ, ಕಾಲೆತ್ತಿ ಇಡಲು ಹಿಂಜರಿಯುತ್ತಿದ್ದಳು. ಬಾಗಿಲು ತೆಗೆದಾಗ ಸುಂದರವಾಗಿ ನಗೆ ಬೀರುತ್ತಿದ್ದ ತನ್ನ ಗಂಡನನ್ನು ನೋಡಿ ಅಳು ತಡೆಯಲಾಗಲಿಲ್ಲ ಗೀತಾಳಿಗೆ.

ಎಂದಿನಂತೆ ಬಾಗಿಲು ತೆಗೆದೊಡನೆ ಕಾಣುವ ಮುದ್ದು ನಗುವಿನ ಹೆಂಡತಿಯನ್ನು ನಿರೀಕ್ಷಿಸುತ್ತಿದ್ದ ರವಿ ತಡಬಡಾಯಿಸಿ ಹೋದ. ತಕ್ಷಣ ಒಳಬಂದ ಅವಳನ್ನಪ್ಪಿ ಹಿಡಿದು ಕೇಳಿದ
"ಯಾಕೆ ಗೀತಾ ಏನಾಯಿತು? ನೀನು ಹುಷಾರಿದ್ದೀಯಾ? ಅಕ್ಷರ? ಅಮ್ಮ? ಅಪ್ಪ?." ಎಲ್ಲಾ ಪ್ರಶ್ನೆಗಳಿಗೂ ತಲೆ ಅಲ್ಲಾಡಿಸುತ್ತಿದ್ದವಳನ್ನು ನೋಡಿ ಅವನಿಗೆ ದಿಕ್ಕು ತೋಚದಂತಾಯಿತು.
"ಮತ್ತೆ ಯಾಕೆ ಅಳ್ತಿದ್ದೀಯಾ ?" ಅಂತ ಮತ್ತೂ ಗಟ್ಟಿ ಕೇಳಿದ. ಆಗಲೂ ಉತ್ತರ ಸಿಗದಿದ್ದಾಗ ಬಾಗಿಲು ಹಾಕಿ ಹೆಂಡತಿಯನ್ನು ಮಲ್ಲಗೆ ನಡೆಸಿಕೊಂಡು ಸೋಫಾದ ಮೇಲೆ ಕೂರಿಸಿ, ತಾನು ಅವಳು ಅಳು ನಿಲ್ಲುವವರೆಗೂ ಅವಳನ್ನು ಅಪ್ಪಿ ಹಿಡಿದು ಕೂತ. ಮನಸ್ಸಿನಲ್ಲಿ ಏನು ದುಗುಡವಿದಿಯೊ ಅದು ಕಳೆದುಹೋಗಲಿ ಅಂತ.

ಪ್ರೀತಿಯ ಗಂಡ ಅಪ್ಪಿ ಹಿಡಿದು ಸಂತೈಸಿದಾಗ ಗೀತಾಳಿಗೆ ಅವರೊಂದಿಗೆ ಮನ ಬಿಚ್ಚಿ ಮಾತಾಡಲು ದೈರ್ಯವೇನೊ ಬಂತು, ಆದರೂ ಅವರ ಪ್ರತಿಕ್ರಿಯೆ ನೆನೆದು ಮನ ಅಳುಕಿತು. ಅಳು ಬಿಕ್ಕಳಿಕೆಗೆ ತಿರುಗಿದಾಗ ರವಿ ನಿಧಾನವಾಗಿ ಹೆಂಡತಿಯ ಕಣ್ಣನ್ನು ಒರೆಸಿ ಮತ್ತೆ ಕೇಳಿದ "ಈಗ ಹೇಳ್ತೀಯಾ ಏನಾಯಿತು ಅಂತ?"
ರವಿ ಮೃದು ಮಾತು, ಅವರ ತಾಳ್ಮೆಯನ್ನು ಕಂಡು ಗೀತಾ ಮತ್ತೆ ಮನಸ್ಸು ಮಾಡಿ ಹೇಳಲು ನಿರ್ಧರಿಸಿದಳು.
"ರವಿ ಹಿಂದಿನ ವಾರ ಡಾಕ್ಟರ್ ಹತ್ರ ಹೋಗಿದ್ದೆ. ನನ್ನ ಮನಸ್ಸಿನಲ್ಲಿ ಏನು ಅನುಮಾನವಿತ್ತೋ ಅವರು ಅದನ್ನೆ ಹೇಳಿದ್ರು. ಬ್ಲಡ್ ಟೆಸ್ಟಿಗೂ ಕೊಟ್ಟು ಬಂದೆ. ಇವತ್ತು ರಿಸಲ್ಟ್ ಬಂತು. ನನ್ನ ಅನುಮಾನವನ್ನು ನಿಜ ಅಂತ ನಿರೂಪಿಸಿತು... ನಾನು ಗರ್ಭಿಣಿ"

ಮೊದಲು ಗೀತಾ ಮಾತಾಡಲು ಶುರುಮಾಡಿದಾಗ ರವಿಗೆ ಇವಳು ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಗೊತ್ತಾಗಲಿಲ್ಲ. ಅವಳು ಹೇಳುತ್ತಿದ್ದ ಪರಿ ನೋಡಿ ಅವನು ಇನ್ನೇನೊ ಅನಾಹುತವಾಗಿದೆ ಅಂತ ನೆನೆದು ಭಯಗೊಳ್ಳುತ್ತಿದ್ದ. ಆದರೆ ತಾನು ಗರ್ಭಿಣಿ ಅಂತ ಗೀತಾ ಹೇಳಿದ ತಕ್ಷಣ ಮನಸ್ಸಿನಿಂದ ಒಂದು ಭಾರವನ್ನೇ ಇಳಿಸಿದ ಹಾಗಾಯಿತು. ನಿಧಾನವಾಗಿ ಅವಳು ಹೇಳಿದ ವಿಷಯ ಮನದಲ್ಲಿ ಇಳಿದಂತೆ ಖುಷಿಯ ಭಾವ ಅಲೆಅಲೆಯಾಗಿ ಎದ್ದು ಬಂತು.

ತಾನು ಹೇಳಿದ ಮಾತುಗಳನ್ನು ಕೇಳಿದ ಮೇಲೆ ರವಿಯ ಮುಖದಲ್ಲಿನ ಭಾವಗಳ ಆಟವನ್ನು ನೋಡುತ್ತಾ ಇದ್ದ ಗೀತಾಳಿಗೆ ಒಂದು ಮಾತು ಸ್ಪಷ್ಟವಾಯಿತು. ರವಿಗೆ ತಾನು ಹೇಳಿದ್ದು ಅರ್ಥವಾಗಲಿಲ್ಲ ಅಂತ.
ರವಿ ಮುಖ ಆನಂದದಿಂದ ಅರಳಿತು, ನಗುತ್ತ ಹೆಂಡತಿಯನ್ನು ಅಪ್ಪಿ ಹೇಳಿದ "ಅಯ್ಯೋ ಹುಚ್ಚಿ, ಅದಕ್ಕೆ ಇಷ್ಟು ಅಳಬೇಕಾ. ವಿಚಿತ್ರ ನೀನು ಖುಷಿಯಲ್ಲಿ ಅಳ್ತೀಯಾ, ಸಿಟ್ಟು ಬಂದಾಗ ವಟಗುಟ್ತೀಯಾ. ನನಗೆ ಎಷ್ಟು ಖುಷಿಯಾಗ್ತಿದೆ ಗೊತ್ತಾ. ಥ್ಯಾಂಕ್ಯೂ ಕಣೆ. ನೀನು ನನ್ನ ಪ್ರಪಂಚನಾ ಸಂತೋಷದಲ್ಲಿ ತೇಲಿಸಬೇಕು ಅಂತಾನೇ ಬಂದವಳು"
ರವಿಯ ಒಂದೊಂದು ಮಾತು ಅವಳ ಎದೆಯಲ್ಲಿ ಚೂರಿ ಹಾಕಿದ ಹಾಗೆ ತಾಕುತ್ತಿತ್ತು. ಅವರು ಹೀಗೆ ಪ್ರತಿಕ್ರಿಯಿಸುತ್ತಾರೆ ಅಂತಾನೆ ಅವಳು ಭಯ ಪಟ್ಟಿದ್ದಳು. ಆದರೂ ಅವಳ ನಿರ್ಧಾರವನ್ನು ಅವಳು ತಿಳಿಸಲೇ ಬೇಕು.
ಅಪ್ಪಿ ಹಿಡಿದ ಗಂಡ ಭುಜದ ಮೇಲೆ ಒರಗಿ ಸಣ್ಣ ದನಿಯಲ್ಲಿ ಅಂದಳು "ಆದರೇ ನನಗೆ ಈ ಮಗು ಬೇಡಾ"
ಒಂದು ಕ್ಷಣ ರವಿ ವಿಗ್ರಹದಂತೆ ಕಲ್ಲಾಗಿಬಿಟ್ಟ. ಅವನ ಮೈಯಲ್ಲಿನ ಬಿಸಿ ಹರಿದುಹೋಗುವುದು ಗೀತಾಳಿಗೆ ತಿಳಿಯುತ್ತಿತ್ತು. ಅವಳು ಇನ್ನೂ ಗಟ್ಟಿಯಾಗಿ ಅಪ್ಪಿ ಹಿಡಿದಳು ಗಂಡನನ್ನು. ಆದರೆ ಅವರ ಮೈ ಸೋತು ಸಡಿಲಗೊಂಡಿದ್ದು ನಿಲ್ಲಿಸಲಾಗಲಿಲ್ಲ. ತಟ್ಟನೆ ಅವಳನ್ನು ಒದರಿ ಎದ್ದು ನಿಂತ ರವಿಯ ಕಣ್ಣಲ್ಲಿ ನೋವು, ಪ್ರಶ್ನೆ."ಯಾಕೆ??"
ಗೀತಾಳ ಮನದಲ್ಲೂ ಅದೇ ಪ್ರಶ್ನೆ ಎದ್ದು ನಿಂತಿತ್ತು. ನಾನು ಕಾರಣ ಹೇಳಿದರೆ ಅರ್ಥ ಮಾಡಿಕೊಳ್ಳುವರೇ ಇವರೂ ಎನ್ನುವ ಅನುಮಾನ ಬೇರೇ.
ಆದರೆ ರವಿಗೆ ತಿಳಿಸಲಾರದೆ ಇರಲಾರೆ, ತನ್ನನ್ನು ಸ್ವಾರ್ಥಿ ಅಂತ ತಿಳಿದರೂ ಪರವಾಗಿಲ್ಲ ಅಂತ ನಿರ್ಧರಿಸಿ ಹೇಳಿದಳು.
"ರವಿ ನಾನಿದಕ್ಕೇ ತಯಾರಾಗಿಲ್ಲ. ಅಕ್ಷರಳಿಗೆ ಇನ್ನು ೨ ವರ್ಷ ಈಗಷ್ಟೆ ತುಂಬಿದೆ. ಅತ್ತೆ ಮಾವನ ಆರೋಗ್ಯನೂ ಸರಿ ಇರೂಲ್ಲಾ. ಹೇಗೆ ನಿಭಾಯಿಸಬೇಕು ನಾನು. ಮತ್ತೆ ಇನ್ನೂ ಒಂದು ದೊಡ್ಡ ಕಾರಣ ಅಂದ್ರೆ  ನನಗೆ ಪಿ.ಎಚ್.ಡಿ ಸೀಟ್ ಸಿಕ್ಕಿದೆ ಅಂತ ಮೇಲ್ ಬಂದಿದೆ. ನನ್ನ ಜೀವನದ ಕನಸು ಅದು ಅಂತ ನಿಮಗೂ ಗೊತ್ತು. ಅದಕ್ಕೆ ನಾನು ಈ ನಿರ್ಧಾರಕ್ಕೆ ಬಂದೆ."
ಅಲ್ಲಿವರೆಗೆ ಶಾಂತನಾಗಿ ಮಾತುಗಳನ್ನು ಕೇಳುತ್ತಿದ್ದ ರವಿ ಒಂದು ಸಾರಿ ಕೆಂಡಮಂಡಲವಾದ "ಅಂದ್ರೆ ಕೇವಲ ಒಂದು ಸೀಟ್‍ಗೊಸ್ಕರ ನನ್ನ ಮಗುನಾ ... ನನ್ನ ಮಗುನಾ..... "
ಅವರಿಗೆ ಆ ವಾಕ್ಯ ಪೂರ್ತಿ ಮಾಡೋಕೂ ಆಗದಿದ್ದನ್ನು ನೋಡಿ ಗೀತಾಳಿಗೆ ಮನ ತುಂಬಿ ಬಂತು. ಮೆಲು ದನಿಯಲ್ಲಿ ಅಂದಳು "ನಿಮ್ಮ ಮಗುನಾ ಸಾಯಿಸ್ತೀನಿ ಅಂತಾನಾ"
ರವಿಯ ಮುಖ ಸಿಟ್ಟಿನಿಂದ ಕೆಂಪಾಗಿತ್ತು. ಅಪ್ಪನ  ಏರು ದನಿ ಕೇಳಿ ಅಕ್ಷರ ಅಳಲು ಶುರು ಮಾಡಿದಳು. ಗೀತಾ ಹೋಗಿ ಅವಳನ್ನು ಎತ್ತಿ ಅಪ್ಪಿದಾಗ ಅಕ್ಷರ ಸುಮ್ಮನಾದಳು. ತನ್ನ ತೊದಲು ನುಡಿಗಳಲ್ಲಿ ಅಮ್ಮನ ಪ್ರಶ್ನಿಸಿದಳು "ಅಮ್ಮ, ಅಪ್ಪ ಬೈತಾಲಾ??" ಅವಳ ಈ ಕಳಕಳಲಿ ಮಾತುಗಳು ಗೀತಾಳ ಮನಸ್ಸುನ್ನು ಅತಿ ಹತ್ತಿರದಿಂದ ತಾಕಿತು.
"ಮುದ್ದು ಮಾತುಗಳಲ್ಲಿ ಹೀಗೆ ಕೇಳದಿರು ಕಂದ,
ಉತ್ತರಿಸಲಾರೆ ನಾ ನಿನ್ನ ಕಂಗಳನ್ನ...
ಹೇಗೆ ಹೇಳಲಿ ನಿನಗೆ, ತಿಳಿಸಲಿ ಯಾವ ರೀತಿ
ನಿನ್ನದೆ ರೂಪವನ್ನು ಹೊಸಕುವ ಭೀತಿ...."

ಅವಳಿಗೆ ಹೇಗೆ ಉತ್ತರಿಸಬೇಕು ಅಂತ ತಿಳಿಯದೆ, ಮಗಳನ್ನು ಮತ್ತೊಮ್ಮೆ ಅಪ್ಪಿ ಹಿಡಿದಳು. ಅಷ್ಟರಲ್ಲಿ ರವಿ ಸಿಟ್ಟಿನಂತೆ ಹೇಳಿದ "ಈ ತರಹ ನಿರ್ಧಾರ ತೆಗೆದುಕೊಳ್ಳೊಕೆ ನಿನಗೆ ಮನಸ್ಸಾದರೂ ಹೇಗೆ ಬಂತು, ಅಕ್ಷರ ನೋಡು ಎಷ್ಟು ಮುದ್ದಾಗಿ ಅಮ್ಮ ಅಂತಾಳೆ. ಅವಳ ಮೇಲೆ ನಿಜವಾಗಿಯು ನಿನಗೆ ಮಮತೆ ಇದ್ಯೋ ಇಲ್ವೊ ಅಂತಾ ಅನುಮಾನ ಬರುತ್ತೆ."
ಅಲ್ಲಿವರೆಗೆ ರವಿಯ ಸಿಟ್ಟನ್ನು ಅರ್ಥ ಮಾಡಿಕೊಂಡು ತನ್ನ ದುಃಖವನ್ನು ಬದಿಗೆ ಸರಿಸಿ, ಅವರಿಗೆ ಹೇಗೆ ಸಮಾಧಾನ ಮಾಡುವುದು ಅಂತ ಯೋಚಿಸುತ್ತಿದ್ದ ಗೀತಾಳಿಗೆ ರವಿಯ ಈ ಮಾತುಗಳು ಸಿಟ್ಟಿಗೆಬ್ಬಿಸಿದವು. ಒಂದೊಂದು ಪದ ಅವರ ಬಾಯಿಂದ ಹೊರಬಂದಂತೆ ಅವಳ ನೋವು ಸಿಟ್ಟು ಏರುತ್ತಾ ಬಂತು.
ಅಕ್ಷರಳನ್ನು ಆಡಲು ಕೆಳಗೆ ಬಿಟ್ಟು, ರವಿಯ ಕೈ ಹಿಡಿದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ಅಂದಳು "ನನಗೆ ಮಮತೆ ಇಲ್ಲವೇ, ಅಕ್ಷರ ಕಡೆಗೆ ಇರುವ ನನ್ನ ಪ್ರೀತಿಯ ಮೇಲೆ ಅನುಮಾನವೆ ನಿಮ್ಗೆ?? ಯಾಕೆ ರವಿ ಅಲ್ಲಿಗೆ ಯಾಕೆ ನಿಂತ್ರಿ, ಹೇಳಿ ನಾನು ಹೆಣ್ಣೆ ಅಲ್ಲಾ, ನನಗೆ ಪ್ರೀತಿ, ಮಮಕಾರ ಪದಗಳ ಅರ್ಥವೆ ಗೊತ್ತಿಲ್ಲಾ. ನಾನು ಸ್ವಾರ್ಥಿ, ಬರಿ ನನ್ನ ಸುಖವೊಂದೇ ಯೋಚಿಸಿತ್ತೀನಿ. ಇಷ್ಟು ದಿನ ಪ್ರೀತಿಯ ನಾಟಕವಾಡಿ ನಿಮಗೆಲ್ಲ ಮೋಸ ಮಾಡಿದ್ದೀನಿ ಅಂತಾನೂ ಹೇಳಿ ಮುಗಿಸಿ."
ಗೀತಾಳ ಮಾತುಗಳನ್ನು ಕೇಳಿ ರವಿಗೆ ಸಿಟ್ಟಿನ ಭರದಲ್ಲಿ ಆಡಿದ ಮಾತುಗಳು ಅವಳಿಗೆ ತುಂಬಾ ನೋವುಂಟು ಮಾಡಿತು ಎಂದು ತಿಳಿದು ಕಷ್ಟವಾಯಿತು. ರವಿ ಅವಳನ್ನು ಸಂತೈಸಲು ಪ್ರಯತ್ನಿಸಿ ಹೇಳಲು ಪ್ರಯತ್ನಿಸಿದರು "ಹಾಗಲ್ಲ ಗೀತಾ ನಾನು  ಹೇಳಿದ್ದು......."
ಆದರೆ ಅವರ ಮಾತನ್ನು ಗೀತಾ ಮಧ್ಯದಲ್ಲೆ ತಡೆದು ಹೇಳಿದಳು "ಇರಿ ನಾನು ನನ್ನ ಮಾತುಗಳನ್ನು ಮುಗಿಸ್ತೀನಿ. ನಾನು ಮದುವೆಗೆ ಮೊದಲೆ ನಿಮಗೆ ಹೇಳಿದ್ದೆ. ಪಿ.ಎಚ್.ಡಿ ಮಾಡಬೇಕು ಅನ್ನುವುದೇ ನನ್ನ ಜೀವನದ ಗುರಿ, ಇದಕ್ಕೆ ನೀವು ಸಹಕರಿಸಿದರೆ ನಾನು ಮದುವೆಯಾಗಲು ಸಿದ್ದ ಅಂತ, ಆಗ ನೀವು ಏನು ಹೇಳಿದ್ರಿ, ಸರಿ ನಿಮ್ಮ ಗುರಿ ಮುಟ್ಟಲು ನನ್ನ ಕೈಲಾದ ಎಲ್ಲ ಸಹಾಯ ನಿಮಗಿದೆ. ಜೀವನದಲ್ಲಿ ಒಂದು ಗುರಿ ಇಟ್ಟಕೊಂಡವರನ್ನು ಕಂಡ್ರೆ ನನಗೆ ತುಂಬಾ ಗೌರವ ಅಂದ್ರಿ. ನಾನು ಅದನ್ನು ನಂಬಿದೆ. ಮದುವೆಯಾಗಿ ೨ ವರ್ಷದಲ್ಲಿ ನಾನು ನಿಮ್ಮ ಹೆಂಡ್ತಿಯಾಗಿ, ಅತ್ತೆ ಮಾವನಿಗೆ ಮಗಳಾಗಿ ನಿಮಗೆ ಬೇಕಾದ ಹಾಗೆ ಇದ್ದೆ. ಹಿಂದಿನ ಸಾರಿ ಪಿ.ಎಚ್.ಡಿಗೆ ಅಪ್ಲೈ ಮಾಡಬೇಕು ಅಂತ ಇದ್ದಾಗ ನೀವು ಹೇಳಿದ್ರಿ ಅಪ್ಪ ಅಮ್ಮಂಗೆ ಮೊಮ್ಮಗು ನೋಡುವ ಆಸೆ ಒಂದು ಮಗುವಾಗಬಿಡ್ಲಿ ಅಂತ. ನನಗೆ ಮಕ್ಕಳ ಆಸೆ, ನಿಮ್ಮ ಮಾತು ಸರಿ ಅನ್ನಿಸ್ತು ಸರಿ ಅಂದೆ. ಆದರೆ ಈಗ, ಈಗೇನಿದೆ ನಿಮ್ಮ ಹತ್ರ ಕಾರಣ. ಈ ಮಗು ಬೇಕು ಅಂತ ನಾವು ಪ್ಲಾನ್ ಮಾಡಿಲ್ಲ. ಎಷ್ಟು ಉಪಾಯ ಬಳಸಿದ್ರು ಸಾವಿರಾರಲ್ಲಿ ಒಬ್ಬರಿಗೆ ಅದು ಕೆಲಸ ಮಾಡೊಲ್ಲ, ನಾನು ಗರ್ಭಿಣಿಯಾದೆ........." ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ ಅವಳಿಗೆ ಒಮ್ಮೆ ರಭಸವಾಗಿ ಮಳೆ, ಗುಡುಗು ಬಂದು ನಿಂತ ಹಾಗಾಯಿತು. ರವಿ ಕೂಡ ಏನು ಹೇಳದೆ ತಲೆ ತಗ್ಗಿಸಿ ನಿಂತಿದ್ದ. ಮತ್ತೆ ಗೀತಾ ಮೆಲು ದನಿಯಲ್ಲಿ ಹೇಳಿದಳು.
"ನನಗೆ ಇನ್ನೊಂದು ಮಗು ಬೇಡವೆ ಬೇಡ ಅಂತ ಅಲ್ಲಾರಿ. ನನಗೂ ಮಕ್ಕಳ ಆಸೆ ಇದೆ. ಅಕ್ಷರಳಂತಹ ಇನ್ನೊಂದು ಪುಟ್ಟ ಮಗುವನ್ನು ಹೆತ್ತು ಮುದ್ದಾಡುವ ಬಯಕೆ ಇದೆ. ಆದರೆ ನನ್ನ ಜೀವನದ ಕನಸು ನನಸಾಗುವುದರಲ್ಲಿ ಇದೆ. ಅದಲ್ಲದೆ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿ. ಬೇಡದ ವಾತಾವರಣದಲ್ಲಿ ಈ ಪುಟ್ಟ ಜೀವವನ್ನು ತಂದು ನಾವು ಅದಕ್ಕೆ ಅನ್ಯಾಯ ಮಾಡಬಾರದು. ಸ್ವಲ್ಪ ಸಮಾಧಾನದಿಂದ ಯೋಚಿಸಿ ರವಿ."
ರವಿ ಏನಾದ್ರು ಹೇಳುವ ಮುಂಚೆ ಗೀತಾ ರೂಮಿನಡೆಗೆ ಹೆಜ್ಜೆ ಹಾಕಿದಳು. ಹೊರಗಡೆ ಇನ್ನು ಮಳೆ ಬೀಳ್ತಾನೇ ಇತ್ತು. ಅತ್ತೆ ಮಾವ ಬರುವ ಹೊತ್ತಾಗಿತ್ತು. ಗೀತ ನಿಟ್ಟುಸಿರು ಬಿಟ್ಟು ಮತ್ತೆ ಹೊರ ನೋಡಿದಳು, ಮಳೆಯ ರಭಸ ಕಮ್ಮಿಯಾಗಿತ್ತು, ಅವಳ ಮನದಲ್ಲೂ ಭಾವನೆಗಳ ರಭಸ ತಗ್ಗಿತ್ತು. ತಾನು ರವಿಯೊಂದಿಗೆ ಹಾಗೆ ಮಾತಾಡಬಾರದಿತ್ತು ಅಂತ ಅವಳಿಗೆ ಅನಿಸಿದ್ರು, ತನ್ನ ಭಾವನೆಗಳನ್ನು ಮುಚ್ಚು ಮರೆಯಿಲ್ಲದೆ ಸ್ಪಷ್ಟವಾಗಿ ಹೇಳಿದ್ದು ಸರಿ ಅಂತಾನೂ ಗೊತ್ತಿತ್ತು. ಈಗ ಈ ವಿಷಯ ತಿಳಿದು ಅತ್ತೆ ಮಾವ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಅವಳ ಚಿಂತೆಯಾಗಿತ್ತು.

ಕಾರಿನ ಶಬ್ದವಾದದ್ದು ಕೇಳಿ ಗೀತಾ ರೂಮಿನಿಂದ ಅಡುಗೆಮನೆ ಕಡೆ ನಡೆದಳು. ಅತ್ತೆ ಮಾವ ಬಂದು ರವಿಯನ್ನು ಮಾತಾಡಿಸಿ, ಅಕ್ಷರಳನ್ನು ಮುದ್ದಿಸಿ, ಸವಿತಾಳ ಮನೆ ವಿಷಯ ತಿಳಿಸುವ ಹೊತ್ತಿಗೆ ಗೀತಾ ಕಾಫಿ ತಿಂಡಿ ರೆಡಿ ಮಾಡಿ ಹೊರ ತಂದಿದ್ದಳು. ರವಿಯ ಮುಖದಲ್ಲಿ ಯಾವುದೇ ಕೋಪ ಕಾಣದೆ ಅವರು ಧೀರ್ಘಾಲೋಚನೆಯಲ್ಲಿರುವುದನ್ನು ಗಮನಿಸಿದಳು. ಕಾಫಿ ಕೊಟ್ಟು ಅಕ್ಷರಳಿಗೆ ತಿಂಡಿ ತಿನ್ನಿಸಿ, ಅವಳನ್ನು ಮಲಗಿಸಲು ಒಳ ಕರೆದುಕೊಂಡು ಹೋದಳು ಗೀತಾ.
ಮಗುವನ್ನು ಮಲಗಿಸಿ ಬರುವ ಹೊತ್ತಿಗೆ, ವಿಷಯ ಎಲ್ಲಾರಿಗೂ ತಿಳಿದಿದೆ ಎಂದು ಅವರ ಮುಖಚರ್ಯೆಯಲ್ಲೇ ತಿಳಿಯಿತು. ಒಂದು ಕ್ಷಣ ಮನ ಹಿಂಜರಿದರೂ, ಗೀತಾ ಧೈರ್ಯವಾಗಿ ಅವರನ್ನು ಎದುರಿಸಲು ಮುಂದೆ ಹೋಗಿ ಕುಳಿತಳು. ರವಿ ಕಿಟಕಿಯ ಕಡೆ ಮುಖ ಮಾಡಿ ನಿಂತಿದ್ದರು, ಅತ್ತೆ ಕಣ್ಣಲ್ಲಿ ನೀರು, ಮಾವ ನಿರಾಶೆಗೊಂಡಂತೆ ಕಂಡರು. ಗೀತಾಳಿಗೆ ಇವರಿಗೆಲ್ಲಾ ಹೇಗೆ ತಿಳಿಸಲಿ ನನ್ನ ಮನದ ಭಾವನೆ ಅಂತ ತಿಳಿಯಲಿಲ್ಲ. ನಾನು ತಪ್ಪು ಮಾಡ್ತಿಲ್ಲಾ ಅಂತ ಕೂಗಿ ಹೇಳಬೇಕು ಅನಿಸಿತು ಅವಳಿಗೆ. ಆದರೆ ಮೌನದ ಮೊರೆ ಹೋಗಬೇಕಾಯಿತು.
ಮಾವ ಏನು ಹೇಳದೆ ಸುಮ್ಮನೆ ಎದ್ದು ತಮ್ಮ ಕೋಣೆಗೆ ಹೋದಾಗ, ಮತ್ತೆ ಅವರ ಹಿಂದೆ ಅತ್ತೆyU ಹೋದಾಗ, ಗೀತಾಳ ಮನಸ್ಸು ಸ್ವಲ್ಪ ಸ್ವಲ್ಪಾನೆ ಚೂರಾದ ಹಾಗಾಯಿತು.

ರಾತ್ರಿ ಊಟಕ್ಕೆ ತಯಾರಿಸಿ, ಡೈನಿಂಗ್ ಟೇಬಲ್ ಮೇಲೆ ಇರಿಸಿದರೂ ಯಾರಿಗೂ ಊಟ ಮಾಡುವ ಮನಸ್ಸಿರಲಿಲ್ಲ, ಮನೆಯಲ್ಲಿ ಸ್ಮಶಾನ ಮೌನ, ಇನ್ನೂ ಹುಟ್ಟದೇ ಇರುವ ಮಗುವಿನ ಸಾವಿನ ಮೌನರೋದನೆ ಆಗಲೇ ಶುರುವಾಗಿತ್ತು. ಗೀತಾ ಎದ್ದ ಮಗಳಿಗೆ ಊಟ ಮಾಡಿಸಿ ಸ್ವಲ್ಪ ಹೊತ್ತು ಆಡಲು ಬಿಟ್ಟು ಕಂಪ್ಯೂಟರ್ ಮುಂದೆ ಕೂತಳು. ತನ್ನ ಮೇಲನ್ನು ತೆಗೆದು, ಸೀಟ್ ಕೊಟ್ಟವರಿಗೆ ನಿರಾಕರಿಸಿಬಿಡಬೇಕು ಅಂತ ಹೊಸ ಮೈಲ್ ತೆಗೆದಳು, ಆದರೆ ಬರೆಯಲು ಮನಸ್ಸು ಬಿಡಲಿಲ್ಲ. ಹಾಗೆ ಕಂಪ್ಯೂಟರ್ ಮುಂದೆ ಕೂತವಳಿಗೆ, ಮಾವ ಬಂದಿದ್ದು ಗೊತ್ತಾಗಲಿಲ್ಲ.

"ಏನಮ್ಮ ಮಾಡ್ತಾ ಇದ್ದೀಯಾ?" ಅಂತ ಅವರು ಕಳಕಳಿಯಿಂದ ಕೇಳಿದಾಗ, ಅವಳು ಬೆಚ್ಚಿ ಹಿಂತಿರುಗಿದಳು. "ಏನಿಲ್ಲ ಮಾವ ಪಿ.ಎಚ್.ಡಿ ಸೀಟ್ ನಿರಾಕರಿಸಿ ಅವರಿಗೊಂದು ಮೇಲ್ ಕಳಿಸ್ತಾ ಇದ್ದೀನಿ". ಇಷ್ಟು ಹೇಳುವಷ್ಟರಲ್ಲಿ ಅವಳ ಕಣ್ಣಿಂದ ನೀರು ತುಳುಕಿತು.
ಅವರು ಪ್ರೀತಿಯಿಂದ ತಲೆ ಸವರಿ "ಬೇಡಮ್ಮ, ಕಷ್ಟಪಟ್ಟ ಓದಿ ಸೀಟ್ ಪಡ್ದಿದ್ದೀಯಾ, ಹಾಗೆಲ್ಲ ಅದಕ್ಕೆ ಅವಮಾನ ಮಾಡಬೇಡ. ನಿಮ್ಮಪ್ಪ ನಿನ್ನ ಮದುವೆ ವಿಷಯ ಮಾತಾಡೋಕೆ ಹೋದಾಗ ಹೆಮ್ಮೆಯಿಂದ ಹೇಳಿದ್ರು ನೀನು ಎಷ್ಟು ಬುದ್ಧಿವಂತೆ, ಪಿ.ಎಚ್.ಡಿ ಮಾಡುವಾಸೆ ಇದೆ ಅಂತ. ನನ್ನ ಸೊಸೆ ಇಷ್ಟು ಓದಿದ್ದಾಳೆ, ಜೀವನದಲ್ಲಿ ಒಂದು ಗುರಿ ತಲುಪುವ ಅಸೆ, ತಾಕತ್ತು ಇದೆ ಅಂತ ನಾನು ಬಹಳ ಹೆಮ್ಮೆ ಪಡ್ತೀನಿ"
"ಅಂದರೆ ನನ್ನ ನಿರ್ಧಾರಕ್ಕೆ ನೀವು...."
"ನೀನು ಒಳ್ಳೆಯವಳು ಗೀತಾ, ಒಳ್ಳೆ ಸೊಸೆ, ಒಳ್ಳೆ ಅಮ್ಮ, ಒಳ್ಳೆ ಹೆಂಡ್ತೀ ಕೂಡಾ. ಇಷ್ಟು ವರ್ಷ ನಮಗಾಗಿ ಎಲ್ಲವನ್ನೂ ಮಾಡಿದೆ. ಇಂದು ನಿನ್ನ ಬಾರಿ ಬಂದಾಗ ನಾನು ನಿನ್ನ ತಡೆಯಲು ಇಷ್ಟ ಪಡೋಲ್ಲಾ. ಯಾರು ನಿನ್ನ ಜೊತೆ ಇರದಿದ್ದರೂ ನಾನು ನಿನ್ನ ಬೆಂಬಲವಾಗಿರ್ತೀನಿ, ನೀನು ಹೆದರಬೇಡಮ್ಮ"
"ಥ್ಯಾಂಕ್ಸ್ ಮಾವ, ತುಂಬಾ ತುಂಬಾ ಥ್ಯಾಂಕ್ಸ್", ಅವರು ಅವಳು ಭುಜ ತಟ್ಟಿ ಹೊರ ನಡೆದರು. ಅಕ್ಷರಳಿಗೆ ನಿದ್ದೆ ಬರುವ ಹಾಗಿದುದ್ದನ್ನು ನೋಡಿ ಮಲಗಿಸಲು ಗೀತಾ ಅವಳನ್ನು ಎತ್ತಿ ಕೊಂಡಳು. ಪುಟ್ಟ ಕಂದನನ್ನು ಹಿಡಿದು ಮುದ್ದಾಡಿ ಮಲಗಿಸುವ ಪ್ರಯತ್ನದಲ್ಲಿರುವಾಗ ರವಿ ಒಳಗೆ ಬಂದ, ಅಮ್ಮ ಮಗಳ ಆಟವನ್ನು ನೋಡಿ, ಅವನ ಮುಖ ಕಪ್ಪಿಟ್ಟಿತು. ಒಂದು ಮಾತಾಡದೆ ಹೋಗಿ ಮಲಗಿದವನನ್ನು ನೋಡಿ ಗೀತಾಳಿಗೆ ಕಣ್ಣ್ ತುಂಬಿ ಬಂದವು ಆದರೆ ಮಾವ ಹೇಳಿದ ಮಾತನ್ನು ಕೇಳಿ ಧೈರ್ಯ ತೆಗೆದುಕೊಂಡಳು.
ಮರುದಿನ ಬೆಳಗ್ಗೆ ರವಿ ಸುಮ್ಮನೆ ಎದ್ದು ರೆಡಿಯಾಗಿ ಯಾರಿಗೂ ಹೇಳದೆ ಆಫೀಸಿಗೆ ಹೊರಟುಹೋದ. ಮಾಡಿದ ತಿಂಡಿಯನ್ನು ತಿನ್ನದೇ ಹೋಗಬಹುದು ಅಂತ ನಿರೀಕ್ಷಿಸಿದ್ದ ಗೀತಾಳಿಗೆ ರವಿ ನಿರಾಶೆ ಮಾಡಲಿಲ್ಲ. ಅಕ್ಷರಳ ದೇಖುರೇಖಿನಲ್ಲಿದ ಗೀತಾಳ ಬಳಿ ಅವಳ ಅತ್ತೆ ಬಂದು ಕೂತರು.
ಅವರು ಸಿಟ್ಟು, ದುಃಖ, ನಿರಾಶೆ ಎಲ್ಲವನ್ನೂ ಎದುರಿಸುವುದಕ್ಕೆ ತಯಾರಾಗಿ ಅವರೆಡೆಗೆ ತಿರುಗಿದ ಗೀತಾಳಿಗೆ ಎದುರಾಗಿದ್ದು ಅವರ ಪ್ರಶಾಂತವಾದ ಮುಖ. ಆಶ್ಚರ್ಯ ಕೂಡಿದ ಕಂಗಳಲ್ಲಿ ಅವಳು ತನ್ನ ಅತ್ತೆಯನ್ನು ನೋಡಿದಳು. ಅವರು ತಮ್ಮ ಕಾಳಜಿಯಿಂದ ಕೂಡಿದ ಮೆಲುದನಿಯಲ್ಲಿ ಹೇಳಿದರು "ನನಗೆ ನಿಮ್ಮ ಮಾವನಷ್ಟು ಓದು, ವಿದ್ಯೆ ಇಲ್ಲಮ್ಮ, ಅವರಷ್ಟು ಬುದ್ಧಿವಂತಿಕೆಯಾಗಲಿ, ಮಾತುಗಾರಿಕೆ ಕೂಡ ಇಲ್ಲ. ನೆನ್ನೆ ರವಿ ವಿಷಯ ತಿಳಿಸಿದಾಗ ಆಕಾಶವೆ ತಲೆ ಮೇಲೆ ಬಿದ್ದ ಹಾಗೆ ಅನಿಸಿದ್ದು ನಿಜ ಆದರೆ ರಾತ್ರಿ ಇವರು ನನಗೆ ಎಲ್ಲಾ ತಿಳಿಸಿ ಹೇಳಿದ್ರು. ಅವರ ವಿವರಣೆ ಕೇಳಿದ ಮೇಲೆ ನನಗೆ ನಿನ್ನ ಮನಸ್ಸಿನ ಅರಿವಾಯಿತು. ನೋಡಮ್ಮ ಗೀತಾ ನೀನು ಬೇರೆಯಲ್ಲ ನನ್ನ ಮಗಳು ಬೇರೆಯಲ್ಲ. ನಿನಗೆ ಇದೇ ಸರಿ ಅನಿಸಿದ್ರೆ, ನನಗೆ ಅರ್ಥವಾಗದಿದ್ದರೇನಂತೆ ನಾನು ನಿನ್ನ ಜೋತೆಯಾಗಿರ್ತೀನಿ. ಒಳ್ಳೆದಾಗಲಮ್ಮ"
ಇಷ್ಟು ಹೇಳಿ ಉತ್ತರವನ್ನು ಬಯಸದೆ ಅತ್ತೆ ಎದ್ದು ಹೋದಾಗ, ಗೀತಾಳಿಗೆ ನೂರು ಆನೆ ಬಲ ಬಂದಂತಾಯಿತು. ಆದರೂ ಯಾರ ಬೆಂಬಲವನ್ನು ಮೊದಲು ಅಪೇಕ್ಷಿಸಿದ್ದಳೊ ಅವರೆ ಮುನಿಸಿಕೊಂಡಾಗ ಎಷ್ಟು ಬಲ ಬಂದರೂ ಕುಗ್ಗಿದ ಅನುಭವವಾಯಿತು ಅವಳಿಗೆ. ಆದರೆ ಮನಸ್ಸು ಗಟ್ಟಿ ಮಾಡಿಕೊಂಡು ತನ್ನ ಡಾಕ್ಟರ್‌ಗೆ ಫೋನ್ ಮಾಡಿ ಮರುದಿನವೆ ಸಮಯ ಕಾದಿರಿಸಿದಳು. ಇನ್ನು ರವಿ ಒಪ್ಪಲಿ ಬಿಡಲಿ ಅವಳು ಮುಂದುವರಿಯಲೇ ಬೇಕು. ಮನಸ್ಸಿನಲ್ಲಿ ಒಂದು ಭಾರ ಇಳಿಸಿದ ಭಾವವಿದ್ದರೂ, ದುಃಖವೇನೂ ಕಮ್ಮಿ ಇರಲಿಲ್ಲ. ಅವಳು ಮಗು ಬೇಡ ನಿರ್ಧರಿಸಿದ ಮಾತ್ರಕ್ಕೇ ಅವಳ ತಾಯ್ತನ ಮಿಡಿಯಲಿಲ್ಲ ಅಂತ ಅರ್ಥವಲ್ಲ. ಮಗುವನ್ನು ಕಳೆದುಕೊಳ್ಳವ ನೋವು ಎಲ್ಲಾರಿಗಿಂತ ಅವಳಿಗೆ ಜಾಸ್ತಿ ಇತ್ತು. ಎಷ್ಟೆಂದರೂ ಅವಳು ತಾಯಿಯಲ್ಲವೆ. ಆದರೆ ಕೆಲವು ನಿರ್ಧಾರಗಳು ಕಠಿಣವಾದರೂ ಅನಿವಾರ್ಯ. ಆ ಅನಿವಾರ್ಯದ ಭಾರ ಇನ್ನೂ ಅವಳ ಮನದ ಮೇಲಿತ್ತು.
ಅತ್ತೆಗೆ ಮರುದಿನ ಡಾಕ್ಟರ್ ಹತ್ರ ಹೋಗುವ ಸಂಗತಿ ತಿಳಿಸಿ, ಅಕ್ಷರಳ ಕೆಲಸ ನಿರ್ವಹಿಸುತ್ತಿದ್ದಳು. ಸಂಜೆ ಮಾಮೂಲಿನಂತೆ ರವಿ ಮನಗೆ ಬರಲಿಲ್ಲ. ಎಲ್ಲಾರು ಊಟ ಮಾಡಿ ಮಲಗಲು ಸಜ್ಜಾಗುತ್ತಿದ್ದಾಗ ರವಿ ಮನಗೆ ಬಂದರು, ಬಂದ ಕೂಡಲೆ ತನ್ನ ರೂಮಿಗೆ ಹೋಗಿ ಮಲಗಿಕೊಂಡರು. ಗೀತಾಳು ಅವರನ್ನು ಮಾತಾಡಿಸಲು ಹೋಗಲಿಲ್ಲ.
ಮರುದಿನ ರವಿ ಏಳುವ ಹೊತ್ತಿಗೆ ಆಫೀಸಿಗೆ ಲೇಟಾಗಿತ್ತು. ತನ್ನನ್ನು ಏಕೆ ಯಾರೂ ಎಬ್ಬಿಸಲಿಲ್ಲ ಅಂತ ನೋಡಿದರೆ, ಮನೆಯಲ್ಲಿ ಅಪ್ಪ ಮತ್ತೆ ಅಕ್ಷರ ಮಾತ್ರ ಇದ್ದರು. ರವಿಯ ಮುಖ ನೋಡಿದ ತಕ್ಷಣ ಅಪ್ಪ ಒಂದು ಭಾರವಾದ ನಿಟ್ಟುಸಿರಿನೊಂದಿಗೆ ಅವನಿಗೆ ಒಂದು ಪತ್ರ ನೀಡಿದರು. ನೀಡುವಾಗ ಅವರ ಕಂಗಳಲ್ಲಿ ಇದ್ದ ನಿರಾಶೆ ನೋಡಿ ರವಿಗೂ ನಾಚಿಕೆಯಾಯಿತು. ಪತ್ರವನ್ನು ಭಯದಿಂದಲೆ ಓದಲು ತೆರೆದ. ಅದರಲ್ಲಿ ಗೀತಾ ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು.
"ಪ್ರೀತಿಯ ರವಿ,
ನಾನು ಅತ್ತೆಯೊಂದಿಗೆ ಡಾಕ್ಟರ್ ಹತ್ರ ಹೋಗ್ತಾ ಇದ್ದೀನಿ. ನನ್ನ ನಿರ್ಧಾರಕ್ಕೆ ಅಪ್ಪ, ಅಮ್ಮ ಇಬ್ಬರೂ ಒಪ್ಪಿದ್ದಾರೆ. ಆದರೆ ಯಾರು ಒಪ್ಪದಿದ್ದರೂ ನೀವು ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ನನ್ನ ಬೆನ್ನೆಲುಬಾಗಿ ಇರುವಿರೆಂದು ತುಂಬಾ ಆಶಿಸಿದ್ದೆ. ಆದರೆ ಯಾಕೊ ಮೊದಲ ಸಾರಿ ನಮ್ಮ ಮಧ್ಯ ಇರುವ ಸ್ನೇಹದ ಬಗ್ಗೆ ಅನುಮಾನ ಹುಟ್ಟಿದೆ. ಪ್ರೀತಿಯ ಬಗ್ಗೆ ಅಲ್ಲ. ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಾ ಅಂತ ತಿಳಿದಿದೆ ನನಗೆ, ನನ್ನ ಗಂಡನಾಗಿ, ನನ್ನ ಪ್ರೀತಿಯಾಗಿ ನಿಮ್ಮ ಪ್ರತಿಕ್ರಿಯೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಅದಕ್ಕೆ ಸ್ಪಂದಿಸಲೂಬಲ್ಲೆ. ಆದರೆ ನನ್ನ ಆತ್ಮ ಸ್ನೇಹಿತನಾಗಿ ನಿಮಗೆ ನನ್ನ ಅಳಲು ತಿಳಿಯಲಿಲ್ಲವೇ?. ನನ್ನ ಕನಸುಗಳನ್ನು, ಆಸೆಗಳನ್ನು ಹುರಿದುಂಬಿಸಿ, ಪ್ರೇರೇಪಿಸಿ, ಪ್ರೊತ್ಸಾಹಿಸಿದ ಆ ನನ್ನ ಸ್ನೇಹಿತ ಎಲ್ಲಿ.  ಇಂದು ನನಗೆ ಅವರ ಅವಶ್ಯಕತೆ ಇದೆ, ಇಂದು ನನಗೆ ನಿಮ್ಮ ಸ್ನೇಹ, ಪ್ರೀತಿ, ಸಹಕಾರದ ಅವಶ್ಯಕತೆ ಎಲ್ಲಾದಕ್ಕಿಂತ ಜಾಸ್ತಿ ಇದೆ. ರವಿ, ನೀವು ನಿಮ್ಮ ಮಗುವನ್ನು ಕಳೆದುಕೊಳ್ಳುತ್ತಿದ್ದೀರಿ ನಿಜ, ಆದರೆ ನಾನು ಕೂಡ ನನ್ನ ಕರುಳ ಕುಡಿಯನ್ನು ಕಳೆದುಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡರೂ ನಾನು ಅಮ್ಮನಲ್ಲವೇ.
ಇಂತಿ ನಿಮ್ಮ ಬರುವನ್ನು ಕಾಯುತ್ತಿರುವ
ಗೀತಾ"
 ಗೀತಾಳ ಮಾತುಗಳನ್ನು ಓದಿ, ರವಿಗೆ ತನ್ನ ತಪ್ಪಿನ ಅರಿವಾಯಿತು. ಇನ್ನು ಒಂದು ಸರಿಯಾದ ಆಕಾರವನ್ನು ಪಡೆಯದ ಮಗುವಿಗಾಗಿ ತಾನು ತನ್ನದೆ ಹೆಂಡತಿಯನ್ನು, ತನ್ನ ಪ್ರೀತಿಯನ್ನು ಹೀಗೆ ದೂರ ಮಾಡಿದೆನೆ? ಈ ಪ್ರಶ್ನೆ ಅವನ ಮನದೊಳಗೆ ಬಂದೊಡನೆ ಗೀತಾಳನ್ನು ಈ ಕೂಡಲೆ ಕಂಡು ಕ್ಷಮೆ ಯಾಚಿಸಬೇಕೆನ್ನುವ ತವಕ ಹುಟ್ಟಿತು ಅವನ ಮನದಲ್ಲಿ.
ರವಿಯ ಮುಖದ ಭಾವಗಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ನೋಡುತ್ತಿದ್ದ ಅವನ ತಂದೆಯ ಮುಖದ ಮೇಲೆ ಶಾಂತಿಯ ನಗೆ.
ರವಿ ತನ್ನ ಅಪ್ಪನ ಕಡೆ ತಿರುಗಿ "ಅಪ್ಪ, ಅದು.. ನಾನು ... ಗೀತಾ.."
ಅವನು ವಾಕ್ಯ ಪೂರ್ತಿ ಮಾಡುವ ಸ್ಥಿತಿಯಲ್ಲಿಲ್ಲ ಅಂತ ತಿಳಿದ ಅವನ ತಂದೆ ಹೇಳಿದರು "ಹೋಗಪ್ಪ ಹೋಗು, ಅಲ್ಲಿ ಗೀತಾ ಕಾಯ್ತಾ ಇರ್ತಾಳೆ, ನಾನು ಅಕ್ಷರಳನ್ನು ನೋಡ್ಕೊಳ್ತೀನಿ"
ರವಿ ಎದ್ದ ಸ್ಥಿತಿಯಲ್ಲೇ ಓಡಿದ. ಗೀತಾ ಆಪರೇಶನ್‍ಗೆ ಒಳ ಹೋಗುವ ಮುಂಚೆ ಅವಳನ್ನು ನೋಡಿ, ತಾನು ಅವಳ ಜೊತೆಯಿದ್ದೀನಿ ಅಂತ ತಿಳಿಸಬೇಕೆನ್ನುವ ಆತುರದಲ್ಲಿದ್ದ.
ಆಸ್ಪತ್ರೆ ತಲುಪಿದ ತಕ್ಷಣ ಅವನ ಕಣ್ಣು ಅವರನ್ನು ಅಲ್ಲಿ ಇಲ್ಲಿ ಹುಡುಕಾಡಿತು, ಅಲ್ಲೆ ಚೇರಿನ ಮೇಲೆ ತನ್ನ ತಾಯಿ ಕೂತಿದ್ದನ್ನು ನೋಡಿ ಅವರೆಡೆಗೆ ಓಡಿದ. ಹೋದ ಉಸಿರಿನಲ್ಲೆ ಅಮ್ಮನನ್ನು ಪ್ರಶ್ನಿಸಿದ "ಅಮ್ಮ.... ಗೀತಾ??"
ಅವನ ಆತುರದ ಮುಖಭಾವನ್ನು ನೋಡಿ ಅವನ ತಾಯಿ ಅಂದರು "ಸುಧಾರ್ಸ್ಕೊ ರವಿ, ಗೀತಳನ್ನು ರೆಡಿ ಮಾಡ್ತಾ ಇದ್ದಾರೆ, ಇನ್ನೇನು ಕರೆದುಕೊಂಡು ಹೋಗ್ತಾರೆ" ಅಂದರು.
ಅಲ್ಲೆ ಅವರ ಬಳಿ ಇದ್ದ ಛೇರಿನಲ್ಲಿ ಕುಸಿದು ಕುಳಿತು, ಒಂದು ಧೀರ್ಘವಾದ ಉಸಿರನ್ನು ಎಳೆದುಕೊಂಡ ರವಿ.
ಅವನ ತಾಯಿ ಅವನ ಕೈ ಮೇಲೆ ಕೈಯಿಟ್ಟು ಕಳಕಳಿಯಿಂದ ನೋಡಿದರು.
ರವಿ ತನ್ನ ಮನದ ಮಾತನ್ನು ಹೇಳಲು ಪ್ರಯತ್ನಿಸಿದ "ಅಮ್ಮಾ......" ಅಷ್ಟರಲ್ಲಿ ಅವನ ತಾಯಿ ಅಂದರು "ಪರವಾಗಿಲ್ಲ ಮಗು, ಈಗಲಾದರೂ ಬಂದ್ಯಲ್ಲಾ."  ಅಷ್ಟರಲ್ಲಿ ಗೀತಾಳನ್ನು ವೀಲ್ ಛೇರ್‍‍ನಲ್ಲಿ ಹೊರಕರೆದುಕೊಂಡು ಬಂದರು.
ಹೊರ ಬಂದ ಗೀತಾ ಅತ್ತೆಯೊಂದಿಗೆ ರವಿಯನ್ನು ನೋಡಿದ ತಕ್ಷಣ ಅವಳ ಮನದ ಮೇಲಿದ್ದ ಪೂರ್ತಿ ಭಾರ ಇಳಿದಂತಾಯಿತು. ಹತ್ತಿರ ಬಂದ ರವಿ ಏನನ್ನೋ ಹೇಳಲು ಪ್ರಯತ್ನಿಸಿದ ಆದರೆ ಗೀತಾಳೇ ಅವರನ್ನು ತಡೆದು ಅಂದಳು "ಶ್, ಶ್ ರವಿ ಏನು ಹೇಳಬೇಡಿ...ನೀವು ಇಲ್ಲಿ ಬಂದು ನನಗೆ ಎಲ್ಲವನ್ನು ಹೇಳಿದ ಹಾಗಾಯಿತು. ನೀವು ಬರುವುದು ನನಗೆ ಎಷ್ಟು ಮುಖ್ಯವಾಗಿತ್ತು ಅಂತ ನಾನು ನಿಮಗೆ ವಿವರಿಸಲು ಸಾಧ್ಯವಿಲ್ಲ. ನನಗೆ ಇಷ್ಟು ಬೆಂಬಲ ನೀಡಿದಕ್ಕೆ ನಾನು ನಿಮಗೆ ಚಿರಋಣಿ. ಥ್ಯಾಂಕ್ಸ್ ರವಿ"
ರವಿಗೂ ಗಂಟಲು ಕಟ್ಟಿದಂತಾಯಿತು. ಗೀತಾಳ ಕೆನ್ನೆಯನ್ನೊಮ್ಮೆ ಸವರಿ ಅವಳನ್ನು ಕಳಿಸಿಕೊಟ್ಟ. ಕಳಿಸಿಕೊಟ್ಟವನಿಗೆ ಮಗುವನ್ನು ಕಳೆದುಕೊಳ್ಳುವ ದುಃಖಕ್ಕಿಂತ ಹೆಂಡತಿಯ ಪ್ರೀತಿಯನ್ನು ಉಳಿಸಿಕೊಂಡ ಸಮಾಧಾನವಿತ್ತು.


(ಲೇಖಕಿ ಇಲ್ಲಿ ಗರ್ಭಪಾತದ ಪರವು ಅಲ್ಲ ವಿರೋಧವೂ ಅಲ್ಲ. ಇದೊಂದು ಕಾಲ್ಪನಿಕ ಕಥೆ ಅಷ್ಟೆ )

ಕಾಮೆಂಟ್‌ಗಳು

  1. ಕನ್ನಡದಲ್ಲಿ ನಿವಿ ವಿಶೇಷ ಹುರ್ರಾ...

    ನಿಮ್ಮ ಎಂದಿನ ಸೂಪರ್ ಟ್ವಿಸ್ಟ್ ಇಲ್ಲೂ ಇದೆ. ಇಷ್ಟವಾಯಿತು. ಪ್ರತಿ ಪಾತ್ರಗಳು ಜೀವಂತ ಅನ್ನಿಸುವಷ್ಟು ಸಹಜವಾಗಿದೆ. ಇದು ಕಾಲ್ಪನಿಕವಾದರೂ ಗುರಿಯ ಮಹತ್ವಾಕಾಂಕ್ಷೆ ಇರುವ ಕುಟುಂಬದಲ್ಲಿ ಈ ರೀತಿ ಘಟನೆಗಳು ಇರಬಹುದು. ಪ್ರತಿ ಪಾತ್ರಕ್ಕೂ ಕೊಟ್ಟಿರುವ ತೂಕ ಇಷ್ಟವಾಗುತ್ತದೆ. ಎರಡು ವರ್ಷದ ಹಸುಳೆಯಿಂದ ಹಿಡಿದು ವೃದ್ಧಾಪ್ಯದಲ್ಲಿರುವ ದಂಪತಿಗಳ ತನಕ ಅವರ ಮಾತುಗಳ ತೂಕ ಇಷ್ಟವಾಗುತ್ತದೆ. ರವಿಯ ಪಾತ್ರಧಾರಿ ಕಡೆ ತನಕವೂ ವ್ಯಕ್ತಿತ್ವದಲ್ಲಿ ವಾಮನನಾಗಿದ್ದವ ಅಂತ್ಯದಲ್ಲಿ ತ್ರಿವಿಕ್ರಮನಾಗುತ್ತಾನೆ. ಇದು ನಿಮ್ಮ ಕಥೆಗಳ ಸ್ಪೆಷಾಲಿಟಿ. ಸುಂದರ ಕಥನ ಅಷ್ಟೇ ಮುದ್ದಾದ ಅಂತ್ಯ. ಮತ್ತೆ ಆ ಅಂತ್ಯಕ್ಕೆ ನೆರವಾಗುವ ಸಾಂಧರ್ಭಿಕ ಕಾರಣಗಳು.. ಗೀತ ಹೇಳುವ ಕಾರಣಗಳು ಅದನ್ನು ಒಪ್ಪುವ ದೊಡ್ಡಮನಸ್ಸಿನ ಮಾವ, ನಂತರ ಅತ್ತೆ... ಎಲ್ಲವು ಸೊಗಸಾಗಿ ಮೂಡಿಬಂದಿವೆ. ಈ ಲೇಖನದಲ್ಲಿ ಬರುವ ಇನ್ನೊಂದು ಪಾತ್ರಧಾರಿ ಆ "ಪತ್ರ" ಅದಿಲ್ಲದೆ ಇದ್ದಿದ್ದರೆ ..... ಆಹಾ.. ಹೌದು ಕೆಲವೊಮ್ಮೆ ಮಾತುಗಳು ಹೇಳದ ವಿಷಯವನ್ನು ಮುದ್ರಿತ ಅಕ್ಷರಗಳು ಹೇಳುತ್ತವೆ..

    ಅಂತ್ಯದಲ್ಲಿ ನೀವು ಕೊಟ್ಟಿರುವ ಟಿಪ್ಪಣಿ ಸಹ ಬರಬಹುದಾದ ಟೀಕೆ ಟಿಪ್ಪಣಿಗಳಿಗೆ ಸಕಾರಣ ನೀಡುವ ನಿಮ್ಮ ಚತುರತೆ ಕೂಡ ಇಷ್ಟವಾಗುತ್ತದೆ.

    ಸುಂದರ ಬರಹ. ಮುಂದುವರೆಯಲಿ ನಿವಿ ಸ್ಪೆಷಲ್ ಇನ್ ಕನ್ನಡ :-)

    ಪ್ರತ್ಯುತ್ತರಅಳಿಸಿ
  2. ತುಂಬಾ ಮನಸ್ಸಿಗೆ ನಾಟಿದ ಕಥನ. ಯಾಕೋ ಮನಸ್ಸು ಮ್ಲಾನವಾಯಿತು.

    ಪ್ರತ್ಯುತ್ತರಅಳಿಸಿ
  3. ನಿವಿ ನಿಮ್ಮ ಆಂಗ್ಲ ಬರವಣಿಗೆಗೆ ಸೈದೂಗುವ ಕನ್ನಡ ಲೇಖನ ನನಗೆ ಬಹಳ ಇಷ್ಟವಾಯಿತು. ಕುತೂಹಲ ಹಿಡಿದಿಡುವ ಕಲೆ ಕರಗತ ನಿಮಗೆ. ಹೆಂಡತಿಯನ್ನು ತನ್ನದೇ ರೀತಿಯಲ್ಲಿ ಅರ್ಥಮಾಡಿಕೊಂಡ ಗಂಡಿನ ಮನದ ತುಯ್ದಾಟ ತಾನೇ ಹೆಣ್ಣಾಗಿ ತನ್ನಲ್ಲಿ ಪುಟಿದೇಳುವ ಗೊಂದಲಗಳು, ಸಂಸಾರ ಸಾಮರಸ್ಯ ಹೇಗೆ ಕಾಪಾಡಿಕೊಳ್ಳಬೇಕೆನ್ನುವ ಚಿಂತೆಯ ಗೀತಾಳ ಭಾವ ಎಲ್ಲವನ್ನೂ ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಿ. ನನಗೆ ಬಹಳ ಇಷ್ಟವಾದ ಭಾಗ:
    ಮೊದಲು ಗೀತಾ ಮಾತಾಡಲು ಶುರುಮಾಡಿದಾಗ ರವಿಗೆ ಇವಳು ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಗೊತ್ತಾಗಲಿಲ್ಲ. ಅವಳು ಹೇಳುತ್ತಿದ್ದ ಪರಿ ನೋಡಿ ಅವನು ಇನ್ನೇನೊ ಅನಾಹುತವಾಗಿದೆ ಅಂತ ನೆನೆದು ಭಯಗೊಳ್ಳುತ್ತಿದ್ದ. ಆದರೆ ತಾನು ಗರ್ಭಿಣಿ ಅಂತ ಗೀತಾ ಹೇಳಿದ ತಕ್ಷಣ ಮನಸ್ಸಿನಿಂದ ಒಂದು ಭಾರವನ್ನೇ ಇಳಿಸಿದ ಹಾಗಾಯಿತು. ನಿಧಾನವಾಗಿ ಅವಳು ಹೇಳಿದ ವಿಷಯ ಮನದಲ್ಲಿ ಇಳಿದಂತೆ ಖುಷಿಯ ಭಾವ ಅಲೆಅಲೆಯಾಗಿ ಎದ್ದು ಬಂತು.
    ಈ ಭಾಗದ ಹಿಂದು ಮುಂದಿನ ನಿರೂಪಣೆ.
    ನಿಮ್ಮಿಂದ ಇನ್ನೂ ಕನ್ನಡ ಲೇಖನಗಳು ಸಿಗಲಿ ಮತ್ತು ಕಾಯುತ್ತೇನೆ ಸಹಾ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು