ಜಾರಿದ ಹನಿ

google images

"ಗುಬ್ಬಚ್ಚಿ"
"ಮಾತಾಡಬೇಡ... ಮಾತಾಡ್ಸಲು ಬೇಡ"
"ಪ್ಲೀಸ್ ಸ್ವಲ್ಪ ನನ್ನ ಮಾತು ಕೇಳು"
"ಇಲ್ಲ, ಕೇಳೋಲ್ಲ "
"ಯಾಕೆ ಇಷ್ಟು ಸಿಟ್ಟು??"
"ಇಲ್ಲಾಂದ್ರೆ ನಾನೋಬ್ಳು ಇದ್ದೀನಿ ಅಂತ ನಿನ್ನ ಗಮನಕ್ಕೆ ಬರೋದಾದ್ರೂ ಹೇಗೆ ?"
"ಗುಬ್ಬಚ್ಚಿ....ಸಾರಿ ಕಣೋ ಬರೋಕೆ ಆಗಿಲ್ಲ."
"ನೋಡು ನನಗೆ ನಿನ್ನ ಕಾರಣಗಳನ್ನ ಕೇಳೋಕೆ ಇಷ್ಟ ಇಲ್ಲ."
"ಎಲ್ಲಾ ನೀನೆ ಹೇಳಿಬಿಟ್ರೆ ಹೇಗೆ? ನೋಡು ನನ್ನ ಟೈಮ್ ಸರಿಯಿಲ್ಲ ಅನ್ಕೋ. ಯಾಕೋ ಏನು ಸರಿಯಾಗ್ತ ಇಲ್ಲ .. ಪ್ಲೀಸ್ ನನ್ನ ಅರ್ಥ ಮಾಡ್ಕೋ. ನಾ ಹೇಳಿದ್ದೆ ನನಗೆ ಕಷ್ಟವಾಗ್ತಾ ಇದೆ. ತಲೆ ಓಡ್ತಾ ಇಲ್ಲ ಅಂತ"
"ಅರ್ಥ ಮಾಡ್ಕೋ??.. ಓ ಸರಿ ಬಿಡು, ನಾ ಇನ್ನು ಏನು ಹೇಳಲ್ಲ. ಬೈ"
"ಗುಬ್ಬಚ್ಚಿ??"

ವಾಟ್ಸಪ್ ನಿಂದ ಹೊರಬಂದು, ಫೋನ್ ಆಫ್ ಮಾಡಿದಳು. ಅವಳಿಗೆ ಗೊತ್ತಿತ್ತು, ಅವನು ಏನೋ ತಲೆ ಬಿಸಿಯಲ್ಲಿದ್ದಾನೆ, ಹೇಳಿಕೊಳ್ಳದಿದ್ದರೆ ಏನಂತೆ, ಅವನಿಗೆ ಏನೋ ಕಾಡ್ತಾ ಇದೆ ಅಂತ. ತಾನು ಬಹಳ ಸ್ವಾರ್ಥಿಯಾಗ್ತಾ ಇದ್ದೀನಿ ಅಂತಾನು ಅವಳಿಗೆ ಗೊತ್ತು. ಆದ್ರೆ ಮನಸ್ಸಿಗೆ ಕೆಲವು ಸಾರಿ ಮೆದುಳಿನ ಈ ಲಾಜಿಕ್ ಅರ್ಥವಾಗೋಲ್ಲ. ಯಾರನ್ನಾದರು ಹಚ್ಚಿಕೊಂಡರೆ ಹೀಗೆ ಅಪ್ಪಿ ಅವಚಿ ಮನದೊಳಗೆ ಅಡಗಿಸಿಕೊಂಡು ಬಿಡುತ್ತೆ. 

ಫೋನನ್ನ ಹಾಸಿಗೆ ಮೇಲೆ ಬಿಸಾಕಿ ಅತ್ತಿಂದ ಇತ್ತ ಶತಪಥ ತಿರುಗಿದಳು. ಹೋಗಿ ಒಂದು ದೊಡ್ಡ ಲೋಟ ನೀರು ಕುಡಿದಳು, ಸಮಾಧಾನವಾಗಲಿಲ್ಲ. ಗಮನವೆಲ್ಲ ಫೋನಿನ ಮೇಲೆ ಇತ್ತು. ಆದರು ಮನಸ್ಸು ಗಟ್ಟಿ ಮಾಡಿಕೊಂಡು ಆನ್ ಮಾಡದೆ ಕಂಪ್ಯೂಟರ್ ಮುಂದೆ ಕೂತಳು. ಐದು ನಿಮಿಷ ಅಂತ ಗಂಟೆಗಟ್ಟಲೆ ಕೂರುತ್ತಿದ್ದವಳಿಗೆ ಇವತ್ತು ೫ ನಿಮಿಷವೂ ಗಂಟೆಯ ಹಾಗೆ ಭಾಸವಾಯಿತು. ಅರ್ಧ ಗಂಟೆ ಹಾಗೂ ಹೀಗೂ ಮಾಡಿ ಕಳೆದವಳಿಗೆ ತಡೆಯಲಾಗದೆ ಫೋನ್ ಆನ್ ಮಾಡಿದಳು. 

ವಾಟ್ಸಾಪಿನಲ್ಲಿ ಒಂದೇ ಒಂದು ಮೆಸೇಜ್ ಬಂದಿತ್ತು

"ನಾನು ಏನು ಹೇಳಿದ್ರೂ ಸರಿಯಾಗೋಲ್ಲ. ಈಗ ನಾನು ಏನು ಮಾಡಬೇಕು, ನಿನ್ನ ಜೊತೆ ಹೇಗಿರಬೇಕು ಅಂತ ನೀನೆ ಹೇಳಿಬಿಡು?"

ಇದನ್ನು ಓದಿದವಳಿಗೆ ಸಿಟ್ಟೆಲ್ಲ ಕರಗಿ ಕಣ್ಣೀರಾಗಿ ಹರಿದು ಹೋಯಿತು. ನನಗೆ ಬೇಜಾರ್ ಯಾಕಾಯಿತು ಅನ್ನೋದು ಅರ್ಥವಾಗದೆ ಇರೋ ಸ್ಥಿತಿಗೆ ಗೆಳತನ ಬಂದು ನಿಂತಿದೆ ಅನ್ನುವ ಮಾತು ಅವಳಿಗೆ ಸಹಿಸಲಾಗಲಿಲ್ಲ. 

ಪರದೆಯ ಮೇಲೆ ನೋಡಿದ ಹಾಗೆ ಅವನೊಂದಿಗೆ ಹಂಚಿಕೊಂಡ ಕ್ಷಣಗಳೆಲ್ಲಾ ಒಮ್ಮೆ ಅವಳ ಮನಸ್ಸನ್ನು ಹಾದು ಹೋಯಿತು. 

ಬೇಡ ಇನ್ನು ಇದಕ್ಕೆ ಉತ್ತರಿಸಿ ಉಳಿದಿರುವ ಸ್ವಲ್ಪ ಮಾನವನ್ನು ಹರಾಜಿಗೆ ಹಾಕೋದು ಬೇಡ ಅನಿಸಿದರು. ಸ್ನೇಹದ ಮುಂದೆ ಅದೇನೂ ಅಲ್ಲ ಅನಿಸಿತು. ಕೊನೆ ಬಾರಿಯಾದರೂ ಪರವಾಗಿಲ್ಲ, ಅವನಿಗೆ ಬಿಡಿಸಿ ಹೇಳಲೇ ಬೇಕು ಅಂತ ಮೆಸೇಜ್ ಬರೆದಳು

"ನೀನು ಇದಕ್ಕೆ ಉತ್ತರ ಕೊಡದಿದ್ರೂ ಆಯ್ತು. ಬರಿ ನನ್ನ ಮಾತು ಕೇಳಿದ್ರೆ ಸಾಕು. ನನಗೆ ನಿನ್ನ ಪರಿಸ್ಥಿತಿ ಅರ್ಥವಾಗಿಲ್ಲ ಅಂತಾಗಲಿ ಅಥವಾ ನೀನು ಹೇಗಿದ್ರು ಪರವಾಗಿಲ್ಲ ನಾನು ಮುಖ್ಯವಾಗಬೇಕು ಅನ್ನೋ ಸ್ವಾರ್ಥ ಯೋಚಿಸಿ ನನ್ನ ಮನಸ್ಸಿಗೆ ಬೇಸರವಾಗಿದ್ದಲ್ಲ. 

ನಾವು ಮನಸ್ಸಿನಲ್ಲಿ ಯಾರಿಗಾದ್ರೂ ಜಾಗ ಕೊಟ್ಟರೆ ಅದಕ್ಕೆ ಜೊತೆಯಾಗಿ ಕೆಲವು ಹಕ್ಕುಗಳನ್ನು ಕೊಡ್ತೀವಿ. ಅಷ್ಟು ಗೌರವ ಆ ಸ್ಥಾನಕ್ಕೆ ಕೊಡಲೇಬೇಕು. ಹಾಗೆ ಕೆಲವೊಮ್ಮೆ ಆ ಗೌರವ ಸಿಗದಿದ್ದಾಗ ಆ ಸ್ಥಾನವನ್ನು ಬಿಟ್ಟು ಕೊಟ್ಟು ದೂರ ನಿಲ್ಲೋದೇ ಮೇಲು. 

ಇವತ್ತು ನೀ ಬರದಿದ್ದಕ್ಕೆ ಬೇಸರವಿಲ್ಲ, ಆದರೆ ಬರದೆ ಇದ್ರೂ ವಿಷಯ ತಿಳಿಸುವಷ್ಟು ಸಂಯಮ ಇರಲಿಲ್ಲ. ಇವಳು ಎಲ್ಲಿಗೆ ಹೋಗ್ತಾಳೆ ಇಲ್ಲೇ ಎಲ್ಲೋ ಇರ್ತಾಳೆ ಅನ್ನೋ ಹಾಗೆ ಇತ್ತು ನಿನ್ನ ವರ್ತನೆ. ನೀನು ಏನೋ ಯೋಚನೆಯಲ್ಲಿ ಇದ್ದೀಯಾ ಅಂದ ಮಾತ್ರಕ್ಕೆ ನೀನು ಕೊಟ್ಟ ನೋವಿಗೆ ಅದು ಉತ್ತರವಲ್ಲ. ಇಷ್ಟು ದಿನ ನೀನು ಮೌನವಾಗಿದ್ದೆ, ಮಾತಾಡೋಕೆ ಆಗಲ್ಲ ಅಂದೆ, ಸ್ವಲ್ಪ ಸಮಯ ದೂರವಿರು ಅಂದೆ, ಎಲ್ಲಾದಕ್ಕೂ ನಾನು ಸರಿ ಅಂದೆ. ಅದರಲ್ಲೇನೋ ದೋಡ್ಡತನ ಇದೆ ಅಂತ ಅಲ್ಲ. ಆದ್ರೆ ಇದೆಲ್ಲಾದಕ್ಕೂ  ಸರಿ ಅಂದ ಮಾತ್ರಕ್ಕೆ ನಾನು ಲೆಕ್ಕಕ್ಕೆ ಇಲ್ಲ ಅನ್ನುವ ಹಾಗೆ ವರ್ತಿಸಿದೆ. ಇಲ್ಲಿಗೆ ಹೋದೆ, ಅಲ್ಲಿಗೆ ಬಂದೆ ಇಂದ ಇವತ್ತೇನು ತಿಂದೆ ಅನ್ನುವ ತನಕ ಹಂಚಿಕೊಂಡವನು ನೀನು, ಕಡೆ ಪಕ್ಷ ಸಿಗೋಕೆ ಆಗಲ್ಲ ಅಂತ ಹೇಳೋ ಅಷ್ಟು ಸಮಯ ಸಿಗಲಿಲ್ಲ.  ಆದ್ರೆ ಆತ್ಮ ಗೌರವ ಅನ್ನೋ ಒಂದು ಭೂತಾನ ಬೆನ್ನಿಗೆ ಕಟ್ಟಿಕೊಂಡಿರುವವಳು ನಾನು. ಕ್ಷಮಿಸು ಈ ಸಾರಿ ಅದು ನನಗೆ ಮುಖ್ಯ. ನನ್ನ ಮೆಚ್ಚಿದವನು ನೀನು, ನಾನು ಹೀಗೆ ಸ್ಥಾನವಿಲ್ಲದೆ ಕಡೆ ಇರೋದನ್ನ ನೀನು ನೋಡೋಕೆ ಆಗುತ್ತಾ?  

ನೀ ಬರೋ ಮುಂಚೆನೂ ನಾನು ಇದ್ದೆ. ನೀ ಇಲ್ಲದಿದ್ದರೂ ನಾನು ಇರುವೆ. ಯಾವಾಗ ನಿನಗೆ ನನ್ನ ಬೇಸರ ಅರ್ಥವಾಗುತ್ತೋ ಅಂದು ನನ್ನ ಪ್ರೀತಿ ಅರ್ಥವಾಗುತ್ತೆ. ತಿರುಗಿ ನೋಡಿದ್ರೆ ನಾನು ಇಲ್ಲೇ ಇರ್ತ್ತೀನಿ. ನನ್ನ ಪ್ರೀತಿ, ನಿನ್ನ ಬಗ್ಗೆಗಿನ ಗೌರವ ಹಾಗೆ ಇರುತ್ತೆ. ಆದರೆ ನಾನು ಜೊತೆ ಬೇಡ ಎಂದು ಸಾರಿ ಸಾರಿ ಹೇಳುವ ಕಡೆ ನಾನು ಇರಲು ಸಾಧ್ಯವಿಲ್ಲ ?.... ಕ್ಷಮಿಸು. "

ಇಷ್ಟನ್ನು ಕಳಿಸಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟಳು. ಕಣ್ಣಲ್ಲಿ ತುಂಬಿದ ಹನಿ ತುಳುಕದೆ ಕಾಯ್ತಾ ಇತ್ತು. ಮನಸ್ಸಿನ ತುದಿಯಲ್ಲಿ ಎಲ್ಲೋ ಕಡ್ಡಿ ಮುರಿದಂತೆ ಹೇಳಬಾರದಿತ್ತು ಅಂತ ಇದ್ದರೂ ಕೆಲವು ಪರಿಸ್ಥಿತಿಗಳೇ ಹಾಗೆ ಅಂತ ಮನಸ್ಸು ಗಟ್ಟಿ ಮಾಡಿಕೊಂಡಳು. ಕಣ್ಣಿನ ರೆಪ್ಪೆ ಮುಚ್ಚಿದಾಗ ಜಾರಿದ ಹನಿಯಲ್ಲಿ, ಅವನಿಗೆ ಅರ್ಥವಾಗಿರಬಹುದು ಅನ್ನುವ ಆಸೆಯೂ ಜಾರಿತು. 

ಕಾಮೆಂಟ್‌ಗಳು

  1. ಬಂದೂಕದ ಗುಂಡುಗಳಿಗೆ ಎದೆ ಕೊಡಬೇಕು.. ಇಲ್ಲವೇ ಗುಂಡುಗಳನ್ನು ಹಾರಿಸುತ್ತಲೇ ಇರಬೇಕು.. ಮನದೊಳಗೆ ಅಡಗಿ ಕೂತ ಆಕ್ರೋಶ, ಬೇಸರ, ದುಗುಡ ದುಮ್ಮಾನಗಳು ಒಮ್ಮೆಲೇ ಬರ ಬರ ಅಂಥಾ ಹಾರಿಬಿಡುವಾಗ, ಮನಸ್ಸು ನಿರಾಳವಾಗುತ್ತದೆ. ಆದರೆ ಮನಸ್ಸಿಗೆ ಅರಿವಿರುತ್ತದೆ, ಬಂಧಗಳಿಗೆ ಬೇಕಿರುವುದು ಒಂದು ಸಣ್ಣ ಅಲ್ಪ ವಿರಾಮ.. ಪೂರ್ಣ ವಿರಾಮವಲ್ಲ ಎಂದು.

    ಕಥಾನಾಯಕಿಯ ಜೀವನದಲ್ಲಿ ನೆಡೆದಿರುವುವ ಒಂದು ಘಟನೆ, ಆಕೆಯ ಪುಟ್ಟ ಜ್ವಾಲಾಮುಖಿಗೆ ಕಾರಣವಾಗಿರಬಹುದು.. ಇಲ್ಲಿ ಆಕೆಯ ಸ್ವಾರ್ಥವಿಲ್ಲ.. ಮತ್ತೆ ಸ್ವಾರ್ಥಿಯೂ ಅಲ್ಲ.. ಕೇವಲ ಒಂದು ಹೆಜ್ಜೆ ಹಿಂದಿಟ್ಟು ಮತ್ತೆ ಜೋಡಿ ಹೆಜ್ಜೆ ಜೊತೆಯಲ್ಲಿ ಸಾಗುವ ಅಸೆ ಆಕೆಯದು.. ಒಂದು ಪುಟ್ಟ ಅಲ್ಪ ವಿರಾಮ ಇನ್ನೊಂದು ಬಿಂದುವನ್ನು ಸೇರಿಸಬಲ್ಲದು ಅನ್ನಿಸುತ್ತದೆ.

    ಒಂದು ಪುಟ್ಟ ಸನ್ನಿವೇಶಕ್ಕೆ ತುಂಬಿರುವ ಭಾವ, ಪದಗಳ ಪ್ರಯೋಗ.. ಆ ತೀವ್ರತೆ ಸೂಪರ್ ಅನ್ನಿಸುತ್ತದೆ..
    ಸಿಬಿ ಸ್ಪೆಷಲ್.. ಸೂಪರ್ ಎಗೈನ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು