ಅಂಗೈ ಅಗಲದ ಆಕಾಶ


Courtesy: Google images
ಸಾಗರದ ರೈಲ್ವೆ ಸ್ಟೇಶನ್ನಲ್ಲಿ ನಿಂತು ರಾತ್ರಿ ಬೆಂಗಳೂರಿಗೆ ಹೊರಡುವ ರೈಲು ಕಾಯುತ್ತಿರುವಾಗ ಮನದಲ್ಲಿ ಏನನ್ನೊ ಬಿಟ್ಟು ಹೋಗುತ್ತಿರುವ ಭಾವನೆ. ಕಣ್ಣೆತ್ತಿ ನೋಡಿದರೆ ಆಕಾಶದ ತುಂಬಾ ಚೆಲ್ಲಿದ ನಕ್ಷತ್ರಗಳ ಹೊಳಪು. ಅಷ್ಟೆಲ್ಲಾ ನಕ್ಷತ್ರ ಬೆಂಗಳೂರಿನಲ್ಲಿ ಕಂಡು ವರ್ಷಗಳ ಮೇಲಾಯಿತು. ನನ್ನವರ ಕಡೆ ನೋಡಿ ಹೇಳಿದೆ “ಇದಿಷ್ಟೆ ಆಕಾಶವನ್ನು ಕದ್ದು ನಮ್ಮ ಮನೆ ಮೇಲೆ ಯಾಕೆ ಇಡಬಾರದು ಅಂತ”. ಅವರು ಸುಮ್ಮನೆ ನಕ್ಕು ಮೇಲೆ ಕಣ್ಣು ಹಾಯಿಸಿ ಒಂದು ನಿಟ್ಟುಸಿರು ಬಿಟ್ಟರು. ಅಮೇಲೆ ಅಂದರು “ಏನೇ ಆಗಲಿ ಊರಿನ ವ್ಯಾಮೋಹವನ್ನು ಬಿಡುವುದು ಕಷ್ಟ ಕಣೆ”
ನಾನು ಮನದಲ್ಲೆ ಅಂದುಕೊಂಡೆ ನಾವು ಎಂಥಾ ಹೇಡಿಗಳು ಅಂತ. ನಮಗೆ ಊರು ಬಿಟ್ಟು ಹೋಗುವಾಗ ಇಂತಾ ಪರಿಸರ, ಇಲ್ಲಿನ ಜನರ ಔದಾರ್ಯತೆ, ಇಲ್ಲಿನ ಶಾಂತತೆ ಎಲ್ಲಾದನ್ನು ಬಿಡುವುದಕ್ಕೆ ಮನಸ್ಸೆ ಬರೊಲ್ಲ. ನಮ್ಮ ಲಗೇಜ್ ಜೊತೆಗೆ ಮನೆಯಲ್ಲಿ ಪ್ರೀತಿಯಿಂದ ಒತ್ತಾಯ ಮಾಡಿ ಕಳಿಸಿದ ಬಾಳೆಹಣ್ಣು, ಹಳಸಿನಕಾಯಿ ಚಿಪ್ಸ್ ಕಂಡೊಡನೆ ಮನ ತುಂಬಿ ಬರುತ್ತೆ. ಆದರೆ ರೈಲು ಹಿಡಿದು ಮನೆಗೆ ಬಂದು ಉಸ್ಸಪ್ಪ ಅಂತ ಹಾಸಿಗೆ ಮೇಲೆ ಮಲಗಿದಾಗ ನನ್ನವರು “ಲೇ, ಎಲ್ಲೆ ಹೋಗಲಿ, ಮನೆಗೆ ಬಂದು ನಮ್ಮ ಹಾಸಿಗೆ ಮೇಲೆ ಮಲಗಿದಾಗಲೆ ಕಣೆ ಕಣ್ಣ್ ತುಂಬಾ ನಿದ್ದೆ ಬರೊದು” ಎಂದು ಹೇಳುವಾಗ ಹೌದು ಅನಿಸುತ್ತೆ.
ನಾನು ಎಷ್ಟೊ ಹಳ್ಳಿ – ಪೇಟೆ ವಾದಗಳಲ್ಲಿ ಪಾಲ್ಗೊಂಡಿದ್ದೀನಿ. ಕೆಲವು ಸಾರಿ ಹಳ್ಳಿ ಕಡೆ ವಾದ ಮಾಡುತ್ತಾ ಇಲ್ಲಿ ನೆಮ್ಮದಿ ಇದೆ, ಶಾಂತಿ ಇದೆ, ಪರಿಶುದ್ಧತೆ ಇದೆ ಅಂತ ಗಟ್ಟಿ ಧ್ವನಿ ಮಾಡಿದ್ದರೆ ಹಾಗೆ ಪೇಟೆ ಕಡೆ ವಾದ ಮಾಡುತ್ತಾ ಇಲ್ಲಿ ಅವಕಾಶವಿದೆ, ಸವಲತ್ತುಗಳಿವೆ, ಬೆಳವಣಿಗೆ ಇದೆ ಅಂತ ಕೆಂಗಣ್ಣು ಬಿಟ್ಟಿದ್ದೀನಿ. ಹೆಚ್ಚಿನ ಸಾರಿ ಹಳ್ಳಿ ಚಂದ ಅಂತ ಪೇಟೆಯವರು, ಪೇಟೆ ಬೇಕು ಅಂತ ಹಳ್ಳಿಯವರು ವಾದ ಮಾಡುತ್ತಾರೆ. ಪೇಟೆಯವರಿಗೆ ನೂರಾರು ಮೈಲಿಗಳು ದೂರವಿದ್ದು ಹೊಳೆಯುವ ನಕ್ಷತ್ರಗಳ ಸುಖ ಬೇಕಾದರೆ, ಹಳ್ಳಿಯಲ್ಲಿದ್ದವರಿಗೆ ಮನುಷ್ಯ ರಚಿಸಿದ ನೂರಾರು ಬೆಳಕುಗಳು ಹೊಳಪು ಬೇಕು.
ದೂರದ ಬೆಟ್ಟ ನುಣ್ಣಗೆ ಅನ್ನೊ ಹಾಗೆ, ಒಂದು ಜಾಗದಲ್ಲಿ ಬೇರು ಬಿಟ್ಟು, ನೆಲೆಸಿ, ಬದುಕಿ ಬೇಕಾದಷ್ಟು ನೆನಪುಗಳನ್ನು ಮೈತುಂಬಿಸಿಕೊಂಡ ನಮಗೆ ಬೇರೆಲ್ಲೊ ಆಕಾಶ ಬಿರಿದು ಸುರಿಯುತ್ತಿರುವ ಮಳೆಗೆ ಮೈಯೊಡ್ಡಿ ನಿಲ್ಲುವುದು ಕಷ್ಟ. ನಾವು ಹೀಗೆ ನಮ್ಮ ಕಿಡಿಕಿ ಅಂಚಿನಿಂದ ಅಲ್ಲಿ ಸುರಿಯುತ್ತಿರುವ ಮುಂಗಾರನ್ನು ಕಣ್ಣ್ತುಂಬಿಸಿಕೊಂಡು ಅಲ್ಲಿನ ಅಂಗೈ ಅಗಲದ ಆಕಾಶಕ್ಕೆ ಕೈ ಚಾಚುತ್ತೇವೆ.

ಕಾಮೆಂಟ್‌ಗಳು

  1. ಹಳ್ಳಿಯವರೆಲ್ಲಾ ಪೇಟೆ ಚಂದ ಎನ್ನುವುದಾಗಲಿ, ಪೇಟೆಯವರೆಲ್ಲಾ ಹಳ್ಳಿ ಚಂದ ಎನ್ನುವುದಾಗಲಿ ಆಗೊಲ್ಲ..ಆದರೆ ಇಬ್ಬರಿಗೂ ಅದಲು ಬದಲಾದಷ್ಟು ದಿನ ಖುಷಿ ಇರುತ್ತೆ ಅದೇ ಗುಂಗಿನಲ್ಲಿ ತೇಲಾಡ್ತಾರೆ... ಕೊನೆಗೆ..ಅವರವರ ಜಾಗವೇ ಅವರಿಗೆ ಸರಿ ಎನ್ನಿಸುತ್ತೆ. ಒಂದು ನಿಜ ವಯಸ್ಸಾದಂತೆ ಶಾಂತ, ಶುದ್ಧ ಹಳ್ಳಿವಾತಾವರಣ ಇಬ್ಬರಿಗೂ ಇಷ್ತ ಆಗುತ್ತೆ... ಬಹಳ ಚನ್ನಾಗಿದೆ ನಿವಿ ಲೇಖನ ಎರಡೂ ಭಾವಗಳನ್ನು ಅಳೆದು ತೂಗಿ ನಿರೂಪಿಸಿದ ಶೈಲಿ ಇಷ್ಟ ಆಯ್ತು.

    ಪ್ರತ್ಯುತ್ತರಅಳಿಸಿ
  2. ನಗರದ ಬೀದಿ ದೀಪಗಳು ಮತ್ತು ಪ್ರಖರ ಜಾಹೀರಾತು ಫಲಕಗಳಿಗೆ ಹಾಕುವ ದೀಪಗಳು ಆಕಾಶಕ್ಕೆ ಚಿಮ್ಮಿ, ಆಕಾಶವನ್ನು ಮುಸುಕು ಮಾಡುತ್ತದೆ. ಅದಕ್ಕಾಗಿಯೇ ನಮಗೆ ನಗರಗಳಲ್ಲಿ ನಕ್ಷತ್ರಗಳ ಸಂತೆ ಅಷ್ಟಾಗಿ ಕಾಣುವುದಿಲ್ಲ.

    ಊರಿನ ವ್ಯಾಮೋಹ ನನಗೆ ಬಿಟ್ಟೇ ಇಲ್ಲ ಅದಕ್ಕಾಗಿಯೇ ನಮ್ಮೂರಿಗೆ ಹೋಗೋ ವಿನಾಯಕ ಬಸ್ಸು ಬರುವ ಮುಖ್ಯ ರಸ್ತೆಯ ಪಕ್ಕದಲ್ಲೇ ಮನೆ ಮಾಡಿಕೊಂಡಿದ್ದೇನೆ. ಹೋಗ ಬೇಕು ಅನಿಸಿದಾಗ ನಾಲ್ಕು ಹೆಜ್ಜೆ ನಡೆದು ಮುಖ್ಯ ರಸ್ತೆಗೆ ಹೋಗಿ ನಿಂತರೆ ವಿನಾಯಕ ಬಸ್ಸು ಹಾಜರ್ರು. ಅದೃಷ್ಟವಿದ್ದರೆ ಸೀಟೂ ಸಿಕ್ಕೀತು! :-D

    ಒಳ್ಳೆಯ ಬರಹ.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಪ್ರತಿ ಬರಹ ಓದಿದಾಗಲೂ ಮನಸ್ಸು ತುಳುಕುವುದು ಸಹಜ. ಬರಹಗಳು ತಾವರೆ ಎಲೆಯ ಮೇಲಿನ ನೀರಿನಂತೆ ಇದ್ದರೂ.. ಅದು ಕಾಡುವ ಪರಿ ಅಪಾರ. ಪ್ರತಿಯೊಂದು ವಿಷಯವನ್ನು ಹೇಳಿರುವ, ಬಿಡಿಸಿಟ್ಟ ಭಾವ ಎಲ್ಲವು ಸಹಜವಾಗಿಯೇ ಮನಕ್ಕೆ ಹತ್ತಿರವಾಗಿ ಕಾಡುತ್ತದೆ. "ನಿವಿ" ಸ್ಪೆಷಲ್ ಮತ್ತೆ ಮೂಡಿ ಬಂದಿದೆ. ಯಾಕೋ ಕಾಣೆ ಎರಡು ದಿನದಿಂದ ನಾನು ನಾನಾಗಿರಲಿಲ್ಲ. ನಿಮ್ಮ ಬರಹ ಓದಿದ ಮೇಲೆ ಮತ್ತೆ ಮರಳಿ ಬಂದೆ ನನ್ನ ತಾಣಕ್ಕೆ.

    ತುಂಬಾ ಕಾಡಿದ ಸಾಲುಗಳು ಇವು

    "ನಮ್ಮ ಕಿಡಿಕಿ ಅಂಚಿನಿಂದ ಅಲ್ಲಿ ಸುರಿಯುತ್ತಿರುವ ಮುಂಗಾರನ್ನು ಕಣ್ಣ್ತುಂಬಿಸಿಕೊಂಡು ಅಲ್ಲಿನ ಅಂಗೈ ಅಗಲದ ಆಕಾಶಕ್ಕೆ ಕೈ ಚಾಚುತ್ತೇವೆ". ಹೇಳಬೇಕಾದ್ದುದನೆಲ್ಲ ಈ ಸಾಲುಗಳಲ್ಲಿ ಹೇಳಿ ಬಿಟ್ಟಿದ್ದೀರ. ನಿಮಗೆ ಒಂದು _/\_ !

    ಪ್ರತ್ಯುತ್ತರಅಳಿಸಿ
  4. “ಇದಿಷ್ಟೆ ಆಕಾಶವನ್ನು ಕದ್ದು ನಮ್ಮ ಮನೆ ಮೇಲೆ ಯಾಕೆ ಇಡಬಾರದು ಅಂತ”.
    ಎಂತಹ ಸೊಗಸಾದ ಆಲೋಚನೆ.... ಎಷ್ಟೋ ಸಲ ನನಗೂ ಇಂತಹ ಆಗದ
    ಾಲೋಚನೆಗಳು ಕಾಡುವುದುಂಟು.... ಆದರೆ ಒಂದು ಚಂದದ ಕಲ್ಪನೆ...

    ತುಂಬಾ ಸಹಜ ಸುಂದರ ಬರಹ...ಓದಿ ಖುಷಿಯಾಯ್ತು...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು