ಆರಾಮ್ ಕುರ್ಚಿ

 
ಅಜ್ಜಿ ಮನೆ ಅಂದ ತಕ್ಷಣ ನಾನು ನೋಡಿದ ಎಲ್ಲರ ಮುಖದ ಮೇಲೆ ಯಾವುದೋ ಹಳೆ ನೆನಪು ಉಕ್ಕಿಬಂದ ಭಾವ ಇರುತ್ತದೆ. ಅಜ್ಜಿ ಮನೆಯ ಮೋಹವೇ ಅಂತಹುದು. ಆ ಹಂಚಿನ ಮನೆ, ಬೆಳಗಿನ ಜಾವದ ಮಸಕು ಮಸಕು ಬೆಳಕು, ಗಟ್ಟಿ ಮೊಸರು ಜೋನಿ ಬೆಲ್ಲ, ದೊಡ್ಡ ಅಂಗಳದ ಹಿಂದಿನ ಬೆಟ್ಟ, ಬೆಟ್ಟದ ಮೇಲಿನ ಮಾವಿನ ಮರ, ಆಡಲು ಜೋಕಾಲಿ, ಬೀಳಲು ಹುಲ್ಲಿನ ಹೊರೆ, ಬೇಸಿಗೆಯ ಬಿಸಿಯಲ್ಲಿ ತಂಪಿನ ಪಾನಕ, ಚಿನ್ನಿ ದಾಂಡು - ಮರ ಕೋತಿ, ಚೆನ್ನೆ ಮಣೆ - ಕಂಬ ಕಂಬ, ಮಧ್ಯಾಹ್ನದ ಹುಸಿ ನಿದ್ದೆ, ಸಂಜೆಯ ಬಾಯಿಪಾಠ, ರಾತ್ರಿ ಮಲಗಿದ ಮೇಲಿನ ಗುಸು ಗುಸು ಪಿಸು ಪಿಸು. 
 
ಆದರೆ ಇಷ್ಟೆಲ್ಲ ಆಕರ್ಷಣೆಗಳ ಮಧ್ಯ ನನ್ನ ಮತ್ತೆ ಉಳಿದ ಮಕ್ಕಳ ಮಧ್ಯ ಇದ್ದ ದೊಡ್ಡ ಸ್ಪರ್ಧೆ ಅಂದರೆ "ಯಾರು ಆರಾಮ್ ಕುರ್ಚಿ ಮೇಲೆ ಜಾಸ್ತಿ ಹೊತ್ತು ಹಕ್ಕು ಜಮಾಯಿಸುತ್ತಾರೆ ಅಂತ". 
 
ಮ್ಯೂಸಿಕಲ್ ಚೇರ್ ಆಟದ ತರಹ, ಯಾರಿಗೆ ಅವಕಾಶ ಸಿಗುತ್ತೋ ಅವರು ಆ ಕುರ್ಚಿಯ ಮಾಲಿಕರು. ಮತ್ತೆ ಅದರ ಮಧ್ಯೆ ಮೋಸ, ಕಳ್ಳಾಟ, ನಾನು ಮೊದಲು ಕೂತಿದ್ದು, ಎಷ್ಟು ಹೊತ್ತಿಂದ ಕೂತ್ತಿದ್ದೀಯಾ ಅನ್ನೊ ಎಳೆದಾಟಗಳು. 
 
ಪೇಟೆಯಲ್ಲಿ ಎಷ್ಟೆಲ್ಲೆ ಸೌಕರ್ಯವಿದ್ದವರಾದರು, ಆ ಹಳೆ ಆರಾಮು ಕುರ್ಚಿಯ ಬಗ್ಗೆ ಅದು ಎಂತ ಆಸೆ ಅಂತ ನಮಗೆ ಗೊತ್ತಿರಲಿಲ್ಲ. ಅಜ್ಜಿ ಮನೆ ಅಂದರೆ ಉಳಿದೆಲ್ಲದರ ಜೊತೆಗೆ ಆ ಕುರ್ಚಿಯ ಜಗಳ ಕೂಡ ಸೇರಿದ್ದು. 
 
ವರ್ಷಗಳನ್ನು ಕಳೆದಂತೆ ನಾವು ದೊಡ್ಡವರಾದಂತೆ ಆ ಕುರ್ಚಿಯ ಮೋಹವು ಕಮ್ಮಿಯಾಯಿತು. ಅದು ಮೂಲೆ ಸೇರಿ ಧೂಳು ಹಿಡಿಯಿತು. ಕೊನೆಗೆ ಒಂದು ದಿನ ಅದು ಹಾಳಾಗಿ ಅಟ್ಟ ಸೇರಿತು. ಯಾರು ಅದನ್ನು ಮಿಸ್ ಮಾಡಲಿಲ್ಲ ಯಾರ ಗಮನಕ್ಕೂ ಅದು ಬರಲಿಲ್ಲ. 
 
ಆದರೆ ಇಂದಿಗೂ ಅಜ್ಜಿ ಮನೆಗೆ ಹೋದರೆ ಒಮ್ಮೆ ಅದು ಇದ್ದ ಜಾಗದ ಕಡೆ ಕಣ್ಣು ಹಾಯಿಸುತ್ತೇನೆ. ಆ ಕುರ್ಚಿಯನ್ನು ಬಯಸುತ್ತೇನೆ, ಹುಡುಕುತ್ತೇನೆ. 
 
ಹಾಗೆ ನೋಡಿದರೆ, ನಮ್ಮ ಜೀವನದಲ್ಲಿ ಜನಗಳು ಹಾಗೇನೆ. ಒಮ್ಮೆ ಯಾರ ಗಮನ ನಮ್ಮ ಕಡೆ ಇರಬೇಕು ಅಂತ ಅಷ್ಟು ಹಾತೊರೆಯುತ್ತೇವೊ, ಹಕ್ಕು ಜಮಾಯಿಸುತ್ತೇವೆ, ಆದರೆ  ಕೆಲವೊಮ್ಮೆ ಅವರನ್ನುದಾಟಿ ಮುಂದೆ ಹೋಗಿಬಿಡುತ್ತೇವೆ. ಅವರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗುವ ಬದಲು ಅವರನ್ನು ಒಂದು ಮೂಲೆಯಲ್ಲಿ ಅಲಂಕಾರಕ್ಕೆ ಸೇರಿಸಿಬಿಡುತ್ತೇವೆ. ಅವರನ್ನು ನೆನಪಿನ ಅಂಗಳದ ಒಂದು ಪುಟ್ಟ ಅಲೆಯಂತೆ ನೆನೆಯುತ್ತೇವೆ. 
 
ಅದು ಯಾರು ಬೇಕಾದರು ಆಗಿರಬಹುದು. ನಮ್ಮ ಜೀವನದಲ್ಲಿ ನಮಗಾಗಿ ಇದ್ದವರು, ನಮಗಾಗಿ ಬಂದವರನ್ನು ನಾವು ಆರಾಮ್ ಕುರ್ಚಿಯನ್ನಾಗಿ ಮಾಡುವುದು ಬೇಡ. ಅಲ್ಲವೇ ???
 
 
 
   

ಕಾಮೆಂಟ್‌ಗಳು

  1. ಸುಂದರ ಕಥಾವಸ್ತು ಮತ್ತು ಅಷ್ಟೇ ಆಸಕ್ತಿಯುಕ್ತ ನಿರೂಪಣೆ.. ಆರಾಮ್ ಕುರ್ಚಿ - ಸುತ್ತಮುತ್ತ, ಅಜ್ಜಿ ಮನೆ, ಸರಳ ಚಿಕ್ಕ ಚೊಕ್ಕ ಲೇಖನ ಅಜ್ಜಿ ಮನೆ ನೆನಪಿನೊಂದಿಗೆ.

    ಪ್ರತ್ಯುತ್ತರಅಳಿಸಿ
  2. ಅಜ್ಜೀ ಮನೆ ನೆನಪು ತರಿಸಿದಿರಿ. ನಿಮಗೆ ಆರಾಮ ಕುರ್ಚಿಯಂತೆ ನಮಗೆ ನಡುಮನೆಯ ಆ ಉಯ್ಯಾಲೆ!

    ನೆನಪುಗಳಲ್ಲಿ ಹೂತು ಹೋಗಿದ್ದ ಆ ಮಧುರ ಗತವನ್ನು ಉತ್ಖಲಿಸಿದ ನಿಮಗೆ ಶರಣು.

    http://badari-poems.blogspot.in

    ಪ್ರತ್ಯುತ್ತರಅಳಿಸಿ
  3. ಅಜ್ಜಿಯ ಮನೆ ಈ ಪದವೇ ರೀತಿಯ ಪುಳಕ ಕೊಡುತ್ತದೆ. ಹಳೆಯದಾದರೂ ಸದಾ ಹೊಸ ನೆನಪುಗಳನ್ನು ಕೊಡುವ ಪರಿಸರ ಎಲ್ಲವು ಸೊಗಸೆನಿಸುತ್ತದೆ. ಕಾಡಿದ ಕಡೆಯ ಸಾಲುಗಳು "ನಮ್ಮ ಜೀವನದಲ್ಲಿ ನಮಗಾಗಿ ಇದ್ದವರು, ನಮಗಾಗಿ ಬಂದವರನ್ನು ನಾವು ಆರಾಮ್ ಕುರ್ಚಿಯನ್ನಾಗಿ ಮಾಡುವುದು ಬೇಡ. ಅಲ್ಲವೇ ???"
    ಲೇಖನವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತಿದೆ. ಅವಕಾಶವಾದಿ ಜಗತ್ತಿನಲ್ಲಿ... ಈ ರೀತಿಯ ಭಾವುಕತೆ ತುಂಬಿದ ಬರಹಗಳು... ಆರಾಮ ಕುರ್ಚಿಯಲ್ಲಿ ಕೂತು ಹಿಂದಕ್ಕೆ ಮುಂದಕ್ಕೆ ಓಲಾಡುವಾಗ ಕೊಡುವ ಸಂತಸವನ್ನು ಬೊಗಸೆಯಲ್ಲಿ ತುಂಬಿ ಕೊಡುತ್ತದೆ. ಇಷ್ಟವಾಯಿತು ಬರಹ.

    ಪ್ರತ್ಯುತ್ತರಅಳಿಸಿ
  4. ನಮ್ಮ ನಿನ್ನೆಗಳೆಡೆಗಿನ ತುಡಿತ ನಮ್ಮನ್ನು ಆರಾಮ ಖುರ್ಚಿಯಂತೆಯೇ ಕಾಡುತ್ತದೆ...
    ಬಾಲ್ಯವನ್ನು ನೆನೆವಂತೆ ಮಾಡಿದ ಚಂದದ ಬರಹ...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು