ಪರಿಚಯದ ನೆರಳು


 
ಮುಗುಳ್ನಗೆಗಳು, ಕಣ್ಸನ್ನೆಗಳು, ಉಧ್ಗಾರಗಳು ಮತ್ತೆ ತುಂಬಿ ತುಳುಕುವಷ್ಟ ಜನರು. ಆ ಜನರ ಮಧ್ಯೆ ದುಪ್ಪಟ್ಟವನ್ನು ಕೈಬೆರಳಿಗೆ ಸುತ್ತುತ್ತಾ, ಗುಂಪಲ್ಲಿ ಯಾರನ್ನೊ ಹುಡುಕುತ್ತ ಇದ್ದ ನಿನ್ನ ಮುಖದ ಭಾವನೆಗಳೆಲ್ಲ ಪ್ರಶ್ನೆಗಳಲ್ಲಿ ಮುಳುಗಿದ್ದವು, ಪರಿಚಯದ ಮುಖವನ್ನು ಹುಡುಕುತ್ತಾ ಇದ್ದೆ ಅನಿಸುತ್ತೆ. ನನ್ನ ಸುತ್ತಾ ಮುತ್ತಾ ಹುಡುಕಿ, ಕೊನೆಗೆ ನನ್ನ ಮೇಲೆ ನಿಂತಿತು ಆ ನೋಟ. ಆ ಗೊಂದಲದ ನೋಟಕ್ಕೆ ಒಂದು ಸಮಾಧಾನವಿರಲಿ ಅಂತ ಒಂದು ಸಣ್ಣ ನಗೆ ನಕ್ಕಿದ್ದೆ ನಾನು.

ಎಲ್ಲೊ ನೋಡಿದ ಮುಖ, ಪರಿಚಯವಿದ್ದ ನಗೆಯಂತೆ ಕಂಡಿರಬೇಕು ನಾನು. ಅರೆ ಇದು????? ಎಂದು ನೆನಪಿಸಿಕೊಳ್ಳಲು ಬಹಳವೆ ಪ್ರಯತ್ನಿಸಿದಂತಿತ್ತು. ನೆನಪಿಲ್ಲದಿದ್ದರೇನಂತೆ, ಪರಿಚಯವಿರಬಹುದು ಎಂಬ ತೀರ್ಮಾನಕ್ಕೆ ಬಂದಂತೆ,

“ಹಲೊ, ನಾನು … ಅದೆ ನಾವು ಅಲ್ಲಿ ಅಲ್ಲವೆ??…..” ಎನ್ನುವಂತಹ ಒಂದು ನಗೆ ಬೀರಿದೆ ನೀನು.

“ನಾವು .. ಹೌದು ಹೌದು ಅಲ್ಲಿ ಅಲ್ಲವೆ ” ಎನ್ನುವಂತೆ ನಕ್ಕಿದ್ದೆ ನಾನು.

ನಿಜವಾಗಿಯೂ ನನಗೆ ಇವರ ಪರಿಚಯವಿದೆಯೆ, ಎಂಬ ಪ್ರಶ್ನೆ ಇತ್ತು ನಿನ್ನ ಭಂಗಿಯಲ್ಲಿ.

ನಿನ್ನ ಜೊತೆಗಾರರು ಸಿಕ್ಕಿದ ತಕ್ಷಣ ಸಮಾಧಾನದ ನಿಟ್ಟುಸಿರು  ಬಿಟ್ಟು ಅವರೆಡೆಗೆ ತಿರುಗಿದೆ. ನಡು ನಡುವೆ ತಿರುಗಿ ನನ್ನ ನೋಡಿ, ನೆನೆಪಿಸಿಕೊಳ್ಳುವ ನಿನ್ನ ಪ್ರಯತ್ನಕ್ಕೆ ಮೆಚ್ಚಿದೆ ನಾನು.

ಸ್ನೇಹಿತರೊಡನೆ ಹೊರಟು ನಿಂತ ನಿನ್ನ ಮುಖದಲ್ಲಿ “ನಾನಿನ್ನು ಬರ್ಲೆ” ಎನ್ನುವ ಭಾವ ತುಂಬಿದ್ದರೆ. “ಅರೆ ಹೊರೆಟಿರಾ?” ಎನ್ನುವ ಪ್ರಶ್ನೆ ಮೂಡಿತು ನನ್ನ ಕಣ್ಣಲ್ಲಿ.

ಕೊನೆಯದಾಗಿ ಜನರ ಮಧ್ಯೆ ಕರಗಿ ಹೋದೆ ನೀನು.

ನಾನು ನಿನಗೆ ಏನು ಅಲ್ಲ, ಸ್ನೇಹವಿಲ್ಲ ನಮ್ಮ ಮಧ್ಯೆ ಭಾಂದವ್ಯದ ಮೆಲುಕಿಲ್ಲ. ಕಡೆಪಕ್ಷ ಯಾರದ್ದೊ ಮೂಲಕ ಮೂಡಿದ ಅಪರಿಚಿತ ಪರಿಚಯವು ಅಲ್ಲ. ಎಲ್ಲೊ ಸಂತೆಯ ಮಧ್ಯೆ ಪರಿಚಯವಿರಬಹುದು ಎನ್ನುವ ಭಾವ ಹುಟ್ಟಿಸುವ ಪರಿಚಯದ ನೆರಳು ನಾನು.

ಮತ್ತೆಲ್ಲೊ ಇನ್ಯಾವುದೊ ಜನಜಂಗುಳಿ ಮಧ್ಯೆ ಮತ್ತ್ಯಾವುದೊ ಮುಖದಲ್ಲಿ ಮತ್ತೆ ಸಿಕ್ಕುವೆ, “ಅರೆ ನೀವು.. ಅದೆ ನಾನು ಅಲ್ಲಿ….” ಎನ್ನುವ ನಗೆಯನ್ನು ಬೀರಲು.

ಕಾಮೆಂಟ್‌ಗಳು

  1. ವಾಹ್ ...ಬಲು ಸೊಗಸಾಗಿದೆ. ಮೊದಲಿಗೆ ಈ ಬರಹಕ್ಕೆ ನೀಡಿದ ತಲೆ ಬರಹ "ಪರಿಚಯದ ನೆರಳು" ತುಂಬಾ ಹಿಡಿಸಿತು. "ಏನೀ ಸ್ನೇಹಾ ಸಂಬಂಧ ಎಲ್ಲಿಯದೋ ಈ ಅನುಬಂಧ" ಎನ್ನುವ ಹಾಡಿನಂತೆ ಎಲ್ಲೋ ನೋಡಿದ, ಮಾತಾಡಿದ ಅನುಭವ, ಅನುಭೂತಿ ಕೊಡುವ ಅನೇಕ ಚರ್ಯೆಗಳು ಕಾಣ ಸಿಗುತ್ತವೆ. ಆ ಭಾವಕ್ಕೆಲ್ಲ ಒಂದು ಚೌಕಟ್ಟು ಈ ನಿಮ್ಮ ಲೇಖನ. ಸರಳ ಸುಂದರ ಮಾತುಗಳಲ್ಲಿ ತೆರೆದಿಟ್ಟ ಭಾವ ಓದಿದ ಮೇಲೆ ಮನ ತುಳುಕಿದ್ದು ಸುಳ್ಳಲ್ಲ.. ಸೂಪರ್ ನಿವಿ!

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ಲೇಖನ ಮೇಡಂ, ನನ್ನದೂ ಒಂದು ಸಮಸ್ಯೆ ಇದೆ ನನಗೆ ಹೆಸರು, ಮುಖ ಚಹರೆ ಮತ್ತು ರಸ್ತೆಯ ರೂಟ್ ಅಷ್ಟಾಗಿ ನೆನಪಿರುವುದಿಲ್ಲ. ಹಲವಾರು ಸಂದರ್ಭದಲ್ಲಿ ಕಾರ್ಯಕ್ರಮ ಮುಗಿದ ಮೇಲೆ, ಆವಾಗ ಮೊದಲು ನಕ್ಕು ಕೈಕುಲುಕಿದವರ ನೆನಪು ತಟ್ಟನೆ ಬರುತ್ತದೆ. ರೈಲು ಹೋದ ಮೇಲೆ ಟಿಕೆಟ್ ಕೊಳ್ಳುತ್ತದೆ ನನ್ನ ಮಡ್ಡೀ ತಲೆ. :(

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು