ಕತ್ತಲೆಯ ಕವನ

ಕತ್ತಲೆಯ ಕವನವನ್ನು ಬರೆಯುತ್ತೇನೆ. ಬೆಳಕಿನ ಭಾಷೆ ಅರ್ಥವಾಗದು ನನಗೆ. ಬೆಳಕಿನ ಅಂಗಳದ ಮೂಲೆಯಲ್ಲಿನ ಕತ್ತಲಿನ ಭಾಗ ನಾನು. ಆದರೆ ನಾನು ಇದ್ದೇನೆ  ನನಗೂ ಒಂದು ಅಸ್ಥಿತ್ವವಿದೆ, ನನಗೆ ಒಂದು ಬದುಕಿದೆ. ಅಂದು ಕತ್ತಲು ಕವಿಯುತ್ತಿರುವ ಸಮಯದಲ್ಲಿ ಅಮ್ಮ ಅಂದಿದ್ದಳು, "ಮಗು ಅಂಜದಿರು, ಕತ್ತಲಿನ ಜೊತೆಗಾರರು ಬೆಳಕಿನ ಸವಾರರಗಿಂತ ಗಟ್ಟಿಗರು" ಅಂತ. 
 
ಕಣ್ಣಂಚಿನಲ್ಲಿ ಕಾಣದನ್ನು ಬೆರಳ ತುದಿಗಳಿಂದ ಪರಿಚಯಿಸಿಕೊಂಡೆ, ಬಣ್ಣಗಳನ್ನು ತಿಳಿಯದಿದ್ದರೇನು ಧ್ವನಿಗಳಲ್ಲಿ ಮೈಮರೆತೆ. ಕಣ್ಣು ಕುಕ್ಕುವ ಬೆಳಕಿನಲ್ಲಿ ಕಾಣುವ ವಸ್ತುಗಳೇ ಪ್ರಪಂಚ ಅಂತ ತಿಳಿದವರ ಮಧ್ಯೆ ನನ್ನೊಳಗಿನ ಪ್ರಪಂಚವನ್ನು ಅರಿತುಕೊಂಡೆ. 
 
ಹೇಗೆ ತಿಳಿಸಲಿ ಅವರಿಗೆ ಬೆಳಕಿನ ಸರದಾರರೆ ನಿಮಗೆಲ್ಲ ಇರುವುದು ಒಂದೆ ಪ್ರಪಂಚ, ಆದರೆ ಕತ್ತಲ ಸಮ್ರಾಟರಾದ ನಮಗೊಬ್ಬೊಬ್ಬರಿಗೂ ನಮ್ಮದೇ ಆದ ಸ್ವಂತ ಪ್ರಪಂಚವಿದೆ ಎಂದು. 
 
ನಿಮ್ಮ ಕಣ್ಣಿಂದ ಕಾಣುವ ಪ್ರಪಂಚ ನನಗೆ ಕಾಣಲು ಸಿಗಲಿಲ್ಲ ಎಂದು ಈಗ ದುಃಖ ಪಡಬೇಡಿ. ನನ್ನ ಪ್ರಪಂಚವನ್ನು ನಾನು ಸುಂದರವಾಗಿಯೆ ಅರಿತಿದ್ದೇನೆ. 
 
ಮುಸ್ಸಂಜೆ ಹೊತ್ತಿಗೆ ಅಮ್ಮ ನನ್ನ ಕೋಣೆಯಲ್ಲಿ ದೀಪ ಹಚ್ಚುವಾಗ ಕೇಳುತ್ತಿದೆ. "ನನಗ್ಯಾಕಮ್ಮ ಬೆಳಕು" ಎಂದು. ಅಮ್ಮ ನಸು ನಕ್ಕು ಅಂದಿದ್ದಳು "ಹುಚ್ಚ! ನಿನಗಲ್ಲವೋ ಬೆಳಕು. ಇದು ನನಗೆ. ನೀನೇನು ಕತ್ತಲನ್ನು ಗೆದ್ದ ಬಿಟ್ಟೆ ಆದರೆ ನಾನಿನ್ನು ಬೆಳಕಿನ ಗುಲಾಮಳು". 
 
ಅಯ್ಯೋ ಅವರಿಗೆ ಕಾಣುವುದಿಲ್ಲವಂತೆ ಪಾಪ ಎಂದು ಮರುಕ ಪಡುತ್ತಾರೆ ನನ್ನ ಸುತ್ತಲಿನ ಜನ. ಕಣ್ಣಿದ್ದು ಇನ್ನೊಬ್ಬ ಸಹಜೀವಿಯ ತೊಳಲನ್ನು ಕಾಣದವರನ್ನು ನೆನೆದು ದುಃಖಿಸುತ್ತೇನೆ ನಾನು. 
 
ಅದೋ ಕೇಳುತ್ತಿದ್ದೀಯಾ ! ಆ ಅಮ್ಮನ ಕರುಳಿನ ಅಳಲು. ಅವಳ ಕಂದನ ಕತ್ತಲನ್ನು ಹೋಗಲಾಡೀಸಲಾಗದ ಅವಳ ನಿಸ್ಸಹಾಯಕತೆ ಕಾಣುತ್ತಿಲ್ಲವೆ ನಿಮಗೆ ? ಕಣ್ಣೀರು ನುಂಗಿ ಮಗುವನ್ನು ಅಪ್ಪಿಕೊಂಡು ಹೇಳುತ್ತಿದ್ದಾಳೆ ಕೇಳಿ "ಮಗು ಅಂಜದಿರು, ಇನ್ನಮೇಲೆ ಕತ್ತಲೆ ನಿನ್ನ ಜೊತೆಗಾರ"............. 

ಕಾಮೆಂಟ್‌ಗಳು

  1. ಮೊದಲ ಕನ್ನಡ ಲೇಖನ ನಿವಿ, ಇಷ್ಟ ಆಯ್ತು,,, ಕಣ್ಣಿನ ಬೆಳಕಿಂದ ವಂಚಿತರ ಮನೋಭಾವದ ಮನಮುಟ್ಟುವ ಅನಾವರಣ... ಶುಭವಾಗಲಿ. ಇನ್ನೂ ಹೆಚ್ಚಿನ ಲೇಖನಗಳು ಮೂಡಿಬರಲಿ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಭಾವಪೂರ್ಣ ಕಥೆಗಳನ್ನು ಓದಿದ್ದ ನಮಗೆ ಕವನದ ರಸಗವಳ ನೀಡಿದ್ದೀರಾ. ಕಾಣುವ ಕತ್ತಲೆಯ ಜೊತೆ ಕಾಣದ ಪ್ರಪಂಚವನ್ನು ಕಣ್ಣ ಮುಂದೆ ಕಾಣಿಸುವ ಭಾವ ತುಂಬಿರುವ ಈ ಕವನದ ತಾಕತ್ ಸೂಪರ್.
    "ನೀನೇನೋ ಕತ್ತಲನ್ನು ಗೆದ್ದು ಬಿಟ್ಟೆ ಆದರೆ ನಾನಿನ್ನೂ ಬೆಳಕಿನ ಗುಲಾಮಳು... " ಈ ಸಾಲುಗಳು ನಮ್ಮನ್ನು ಕುಬ್ಜರನ್ನಾಗಿ ಮಾಡಿಬಿಡುವ ಗುಣ ಹೊಂದಿದೆ.. ಮತ್ತು ತುಂಬಾ ಕಾಡುವ ಸಾಲುಗಳು ಕೂಡ. ಅಭಿನಂದನೆಗಳು ಮುಂದುವರೆಯಲಿ ನಿಮ್ಮ ಭಾವಲಹರಿ.

    ಪ್ರತ್ಯುತ್ತರಅಳಿಸಿ
  3. ನಿಜ ..ಪ್ರತಿಯೊಬ್ಬರೂ ತನ್ನಲ್ಲಿನ ಕತ್ತಲನ್ನ ಹುಡುಕೋರೆ ...ಹುಡುಕಿದಾಗ ಸಿಗೋದು ಒಂದಿಷ್ಟು ಸಿಂಪತಿ ಮಾತ್ರ
    ಇವತ್ತಿನ ತನ್ನ ಕುಶಿಯನ್ನು ಕೊಲ್ಲೋ ಗುಣ ಆ ಕತ್ತಲಿನದು..ಚೆನ್ನಾಗಿದೆ ಭಾವ ಪೂರ್ಣ ಬರಹ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. I agree with you, people don't know how to separate the emotions of sympathy and empathy. They normally show sympathy instead of empathy. A blind person is also a whole person and within himself he has built his universe with as much care and diligence as everybody else. Thank you for your wonderful words

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು