ಪುಟ್ಟ ನೆನಪು


ನಿನ್ನ ಎಲ್ಲೆಲ್ಲೊ  ಹುಡುಕಾಡಿದೆ , ಬಟ್ಟೆಯಲ್ಲಿ , ಪುಸ್ತಕದಲ್ಲಿ , ಚಿತ್ರದಲ್ಲಿ , ಕವಿತೆಯಲ್ಲಿ , ಕತೆಯಲ್ಲಿ, ಹಾಡಲ್ಲಿ, ರಾತ್ರಿಯಲ್ಲಿ, ಹಗಲಲ್ಲಿ .............. 
 
ಕಾಣಲಿಲ್ಲ ನೀನು  ಎಂಥ ಹುಚ್ಚು ಹುಡುಕಾಟ ಎಂದು ನಸುನಕ್ಕೆ ನಾನು. ಯಾರು ಬಂದರು ನೀನೆ ಬಂದೆ ಎಂದು ಮನಸ್ಸು  ಕುಣಿದಾಡುತ್ತಿತ್ತು. ನೀನಲ್ಲ ಎಂದು ಗೊತ್ತಾದಾಗ ಸೋತು ಸುಮ್ಮನಾಯಿತು. ಮತ್ತೆ ಅದನ್ನು ಒಲಿಸಿ ನಗುವಂತೆ ಮಾಡಲು ಲಂಚ ಕೊಡಬೇಕಾಯಿತು. ಇದ್ದರು ಇಲ್ಲದಂತೆ ಇಲ್ಲದೆಯೂ ಇಲ್ಲೇ ಇರುವಂತೆ ಇರುವ ನೀನು ಎಲ್ಲೋ ಬಾಗಿಲ ಹಿಂದೆ ಹುಡುಕಿದರೆ ಸಿಗುವೆಯಾ?
ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡು ಬೇರೆಲ್ಲೋ ಇರುವಂತೆ ನಟಿಸುವ ಕಳ್ಳ ನೀನು, ನಿನ್ನ ಹೇಗೆ ಹಿಡಿಯುವುದು ಎಂದು ಕೇಳಿದರೆ ಮನಸ್ಸನ್ನು ಕೇಳು ಎನ್ನುವ ಚತುರ ಮಾತುಗಾರ ನೀನು. ನೀನು ಇಲ್ಲೆಲ್ಲೂ ಇಲ್ಲ ಎಂದು ಇನ್ನೇನು ನಂಬಬೇಕು ಅಷ್ಟರಲ್ಲಿ 'ನಾನಿಲ್ಲಿ' ಎಂದು ಚಂಗನೆ ಎಲ್ಲಿಂದಾನೊ ಮುಂದು ಬರುವೆ. ನಾನೇನು ಮಾಡುತ್ತಿದ್ದರೆ ನಿನಗೆ ಗಮನ ಕೊಡೋದಿಲ್ಲ ಎನ್ನುವಂತೆ ದುರುಗುಟ್ಟಿ ನೋಡುವೆ. ನಿನ್ನೆಡೆಗೆ ನೋಡಿದರೆ ಮಗುವಂತೆ ನಕ್ಕು ಕೈ ತಪ್ಪಿಸಿ ಓಡಿ ಬಿಡುವೆ. ಅರೆ ! ಎಲ್ಲಿ ಹೋದ ಎಂದು ಯೋಚಿಸುವಷ್ಟರಲ್ಲಿ ಹಿಂದಿನಿಂದ ಬಂದು ಅಪ್ಪಿ ಮುದ್ದಾಡುವೆ. ದಿನವೆಲ್ಲ ಹೀಗೆ ಕಾಡಿಸಿ ಕಾಯಿಸಿ ಓಡಾಡಿಸುವ ನಿನ್ನ ಮಧುರ ನೆನಪು ಸದಾ ಹೀಗೆ ಇರಲಿ ನನ್ನೊಳಗೆ. 
 

ಕಾಮೆಂಟ್‌ಗಳು

  1. ರಾಜ ನನ್ನ ರಾಜ ಚಿತ್ರದ ನಿನದೆ ನೆನಪು ದಿನವು ಮನದಲ್ಲಿ ಹಾಡು ನೆನಪಿಗೆ ಬಂತು. ಪುಟ್ಟ ನೆನಪನ್ನು ಅಂಬೆಗಾಲಿಡುವ ಪದಗಳಲ್ಲಿ ವರ್ಣಿಸುತ್ತಲೇ ಅದರ ಸುತ್ತಲೂ ಚಿಕ್ಕ ಪರಿಧಿ ಕಟ್ಟುವ, ಪ್ರೀತಿ ಮಮಕಾರ ಹಾಕುವ ಬೇಲಿ ಇಷ್ಟವಾಯಿತು. ಅಕ್ಷರಗಳು ಸುಂದರವಾದ ಪದಗಳಾದಾಗ ಕೊಡುವ ಸಂತಸ ನಿಮ್ಮ ಈ ಪುಟ್ಟ ಲೇಖನದಲ್ಲಿ ಕಾಣ ಸಿಗುತ್ತದೆ. ಮುಂದುವರೆಯಲಿ ಪಯಣ! ಸೂಪರ್ ಆಗಿದೆ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು