ಕಾಡಿಗೆಯ ಛಾಪು


ಬೆಳಗ್ಗಿನ ಕಾರ್ಯಗಳನ್ನು ಮುಗಿಸಿ, ಮುಖ ತೊಳೆದುಕೊಂಡು ಕನ್ನಡಿ ನೋಡಿದಳು. ಕಣ್ಣಲ್ಲಿ ಏನೋ ಹುಡುಕುವ ತವಕ, ನಗುವುದನ್ನೇ ಮರೆತಂತಿದ್ದ ತುಟಿಗಳು, ಹೊಳಪಿಲ್ಲದ ಕಂದು ಕಣ್ಣು, ನೆನ್ನೆ ಕಣ್ಣಿಗೆ ಹಚ್ಚಿದ ಕಾಡಿಗೆಯ ಛಾಪು ಇನ್ನು ಹಾಗೆ ಇತ್ತು.

ಒಂದು ನಿಟ್ಟುಸಿರು ಬಿಟ್ಟು ಕಣ್ಮುಚ್ಚಿ ತನ್ನ ಪ್ರತಿಬಿಂಬವನ್ನು ಗಮನಿಸಬಾರದು ಎನ್ನುವ ಗಟ್ಟಿ ನಿರ್ಧಾರ ಮಾಡಿ ಮುಖ ಒರೆಸಿಕೊಂಡಳು.

ಆಫೀಸಿಗೆ ತಯಾರಾಗಿ ತಿಂಡಿ ತಿಂದು ಎಲ್ಲವನ್ನು ಸ್ವಚ್ಛ ಮಾಡುವ ಹೊತ್ತಿಗೆ ಕ್ಯಾಬ್ ಬರುವ ಸಮಯವಾಗಿತ್ತು. ಲಗುಬಗೆಯಿಂದಲೇ ಮನೆಗೆ ಬೀಗ ಹಾಕಿ ಬೇಗೆ ಬೇಗೆ ಹೆಜ್ಜೆ ಹಾಕಿದಳು. ಇವತ್ತು ಸರಿಯಾದ ಸಮಯಕ್ಕೆ ಹೋಗಲೇ ಬೇಕು. ಇಲ್ಲವೆಂದರೆ ಇಷ್ಟು ದಿನ ಮಾಡಿದೆಲ್ಲ ಹಾಳಾಗುತ್ತೆ.

ಇನ್ನು ಸ್ವಲ್ಪ ದಿನವಷ್ಟೇ ಆಮೇಲೆ ಎಲ್ಲವು ಸರಿಯಾಗುತ್ತೆ. ತನ್ನ ಮನಸ್ಸಿಗೆ ತಾನೇ ಸಮಾಧಾನ ಹೇಳುತ್ತಾ ಹೆಜ್ಜೆ ಹಾಕಿದಳು. ಅಂತು ಕ್ಯಾಬ್ ಅಲ್ಲಿಗೆ ಬರೋದಕ್ಕೂ ಇವಳು ಅಲ್ಲಿಗೆ ಹೋಗೋದಕ್ಕೂ ಸರಿಯಾಗಿತ್ತು. ಸತತವಾಗಿ ಸುಮಾರು ೩ ತಿಂಗಳಿಂದ ಇವಳು ಕ್ಯಾಬ್ ಮಿಸ್ ಮಾಡದೆ ಇದದ್ದನ್ನ ಗಮನಿಸುತ್ತಿದ್ದ ಕ್ಯಾಬ್ ಡ್ರೈವರ್ ಒಂದು ಮುಗುಳ್ನಗೆಯನ್ನು ನೀಡಿದ. ಏನು ಪ್ರತಿಕ್ರಿಯೆ ನೀಡದೆ ತನ್ನ ಜಾಗಕ್ಕೆ ಹೋಗಿ ಕೂತಳು. ತನ್ನ ಜಾಗದಲ್ಲಿ ಕೂತು ಕಿವಿಗೆ ಇಯಾರ್ ಫೋನ್ ಹಾಕಿಕೊಂಡಳು, ಪ್ರತಿ ದಿನ ಅದೇ ಸೀಟು, ಅದೇ ಫೋನಿನಲ್ಲಿ ಕೇಳುವ ಅದೇ ಧ್ವನಿ "ಅಮ್ಮ ಐ ಲವ್ ಯು ಮಾ... ಯಾವಾಗ ಬರತ್ತಿಯಾ ನನ್ನ ನೋಡೋಕೆ... ಪ್ಲೀಸ್ ಬೇಗ ಬಾ ಅಮ್ಮ.. ಐ ಮಿಸ್ ಯು.. ಬೈ". 

ಕ್ಯಾಬ್ ನಿಂತಾಗ ದಿನವೂ ಹೋಗುವ ಅದೇ ಆಫೀಸು, ಅದೇ ಕ್ಯಾಬಿನ್, ಅದೇ ಕೆಲಸ. ವಾಪಸ್ ಬಿಕೋ ಎನ್ನುವ ಅದೇ ಮನೆ, ನಗು, ಮಾತು, ಕೊನೆ ಪಕ್ಷ ಜಗಳದ ಸದ್ದು ಕೇಳದೆ ಆ ಮನೆಯ ಗೋಡೆಗಳು ಕೂಡ ಮೂಕವಾಗಿದ್ದವೂ.

ಸಂಜೆ ಮನೆಗೆ ಬಂದ ಮೇಲೆ ದೈನಂದಿನ ಕಾರ್ಯಗಳನ್ನು ಮುಗಿಸಿ, ಅಕ್ಕ ಪಕ್ಕದ ಮನೆಯವರೆಲ್ಲ ಮಲಗಲು ಸಜ್ಜಾಗುವ ಹೊತ್ತಿಗೆ ಕಾಡಿಗೆ ಹಚ್ಚಿದ ಕಣ್ಣು, ಅವಳ ಅಂದಕ್ಕೆ ಒಪ್ಪುವ ಉಡುಗೆ, ಹೈ ಹೀಲ್ಡ್ ಹಾಕಿ ಕ್ಲಬ್ಬಿಗೆ ಹೊರಟಳು. ಪ್ರತಿ ರಾತ್ರಿ ಅದೇ ಕ್ಲಬ್ಬಿನ, ಅದೇ ಬಾರಿನ ಅದೇ ಕುರ್ಚಿ ಮೇಲೆ ಕೂತು, ಯಾರೊಂದಿಗೂ ಮಾತಾಡದೆ, ಕನಿಷ್ಠ ಪಕ್ಷ ತನ್ನ ಸುತ್ತ ಜನರಿದ್ದಾರೆ ಎಂದು ಗಮನ ಕೂಡ ಹರಿಸದೆ, ಅದೇ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಅದೇ ಧ್ವನಿ ಪದೇ ಪದೇ ಕೇಳುವುದು ಅವಳು ತನಗೆ ತಾನೇ ಹಾಕಿಕೊಂಡ ಕಡಿವಾಣ. ಮಧ್ಯ ಅವನ ಧ್ವನಿಯು ನೆನಪಾಗುತ್ತಿತ್ತು.

"ಪ್ಲೀಸ್ ನನ್ನ ಮಾತು ಕೇಳು, ನಿನಗೆ ಗಮನಕ್ಕೆ ಬರ್ತಾ ಇಲ್ಲ ಆದರೆ ನೀನು ಕುಡಿಯೋದು ಜಾಸ್ತಿಯಾಗಿದೆ."
"ಇಲ್ಲ ಖಂಡಿತ ಇಲ್ಲ.. ನನಗೆ ಗೊತ್ತು ನನ್ನ ಲಿಮಿಟ್ ಎಷ್ಟು ಅಂತ. ಇವತ್ತು,.... ಇವತ್ತು ಆಫಿಸ್ ಕೊಲಿಗ್ ಫೇರ್ ವೆಲ್ ಇತ್ತು.. ಅದಕ್ಕೆ...
"ಆದರೆ ನನಗೆ ಭಯ ಆಗ್ತಾ ಇದೆ. ಐ ಥಿಂಕ್ ಯು ಆರ್ ಬಿಕಂಮಿಂಗ್ ಆನ್ ಆಲ್ಕೋಹಾಲಿಕ್"
"ಓ ಪ್ಲೀಸ್ ಅಷ್ಟು ದೊಡ್ಡ ವಿಷಯ ಅಲ್ಲ .. ಈಗ ಅದೆಲ್ಲ ಬಿಡು...."

 ಇವಳನ್ನು ದಿನ ಗಮನಿಸುವ ಜನರಿಗೆ ಇವಳು ಏನು, ಯಾಕೆ ಎಂದು ಅರ್ಥವಾಗ್ತಾ ಇರಲಿಲ್ಲ. ಅವರಿಗೆ ಅರ್ಥಪಡಿಸುವ ಗೋಜಿಗೆ ಇವಳೆಂದು ಹೋಗಲಿಲ್ಲ.

ಬೆಳಗ್ಗೆ ಎದ್ದು ಮುಖ ತೊಳೆಯುವಾಗ ನೆನ್ನೆ ರಾತ್ರಿ ಹಚ್ಚಿದ ಕಾಡಿಗೆಯ ಛಾಪು.....ಕನ್ಮುಚ್ಚಿದವಳಿಗೆ ಪ್ರತಿ ದಿನದ ಹಾಗೆ ಅವನ ಕೊನೆಯ ಮಾತು ನೆನೆಪಾಯಿತು.

ಕಾಫಿ ಹೀರುತ್ತಾ ಹೇಳಿದ್ದ  "ನನಗೆ ಓವರ್ ಸೀಸ್ ಪ್ರಾಜೆಕ್ಟ್ ಸಿಕ್ಕಿದೆ. "
ತಲೆ ಬಾಚುತ್ತಿದ್ದವಳ ಕೈ ಒಮ್ಮೆ ತಡವರಿಸಿತ್ತು , "ಹೌದಾ ಎಲ್ಲಿ?? 
ತಲೆ ಬಾಗಿಸಿ ನುಡಿದಿದ್ದ "ಕ್ಯಾಲಿಫೋರ್ನಿಯಾದಲ್ಲಿ,"
"ಎಷ್ಟು ದಿನ?  "
"ಒಂದು ವರ್ಷ...."
ತಕ್ಷಣ ತಾನೇನು ಮಾಡಬೇಕು ಎಂದು ಯೋಚಿಸಿದ್ದು ನೆನಪಿತ್ತು "ಓ ಹಾಗಿದ್ರೆ ನಾನು ಸಬ್ಯಾಟಿಕಲ್ ಗೆ ಅಪ್ಲೈ ಮಾಡಬೇಕು...  ಯಾವಾಗ ಹೊರಡಬೇಕು?"
ತುಸು ಮೆಲುವಾಗಿ ತಡವರಿಸುತ್ತಲೇ ಹೇಳಿದ್ದ "ಅಕ್ಕನ ಮನೆ ಅಲ್ಲೇ ಇದೆ. ಅಮ್ಮ ಸಧ್ಯಕ್ಕೆ ಅಲ್ಲೇ ಇದ್ದಾರಲ್ಲ....
ಕಾಡಿಗೆ  ಹಚ್ಚಲು ಎತ್ತಿದ ಕೈ ನಿಂತಿತ್ತು "ಅದಕ್ಕೆ?"
"ಅದಕ್ಕೆ ನಾನು ಮಗ ಹೋಗ್ತಾ ಇದ್ದೀವಿ....."
ಸರ್ರನೆ ಹಿಂತಿರುಗಿ ನಡುಗುವ ಧ್ವನಿಯಲ್ಲೇ ಕೇಳಿದ್ದಳು. "ನೀನು ಮತ್ತೆ ಮಗ ?? ಮತ್ತೆ ನಾನು"
"ನೋಡು, ಐ ಲವ್ ಯು ಆದರೆ ನೀನು ನಿನ್ನ ಕುಡಿತ ಬಿಡೋ ತನಕ ನಾನು ನಿನ್ನ ಜೊತೆ ಮಗನನ್ನ ಒಬ್ಬನೇ ಬಿಡೋದಕ್ಕೆ ಆಗೋಲ್ಲ" ಎಂದ ಅವನ ಧ್ವನಿಯಲ್ಲಿ ಬೇಡಿಕೆ ಇತ್ತು. 
ಉತ್ತರಿಸಿದ ಇವಳ ಧ್ವನಿಯಲ್ಲಿ ಹತಾಶೆ "ಆದ್ರೆ ನಾನು ಟ್ರೈ ಮಾಡ್ತಾ ಇದ್ದೀನಿ. ನಿನಗೂ ಗೊತ್ತು ಇದು"
"ನಂಗೊತ್ತು. ಬಹುಷ ಈ ಸಮಯದಲ್ಲಿ ನಾವು ಹೋಗೋದರಿಂದ ನೀನು ಪ್ರಯತ್ನ ಮಾಡೋದನ್ನೇ ನಿಲ್ಲಿಸಬಹುದು. ಆದರೆ..... ಆದರೂ ನಾನು ರಿಸ್ಕ್ ತಗೊತ್ತೀನಿ ಯಾಕೆಂದರೆ ನಿನಗೆ ಮೊಟಿವೆಶನ್ ಇಲ್ಲ."
ಇದು ಬದಲಾಗದ ನಿರ್ಧಾರ ಎಂದು ತಿಳಿದು ರೋಧಿಸುವ ಮನದಲ್ಲೇ ಕೇಳಿದ್ದಳು "ಮೊಟಿವೆಶನ್ ?"
"ಹೌದು, ನಾವು ಹೋದ ಒಂದು ವರ್ಷ ನೀನು ಒಂದು ಹನಿ ಕುಡಿದ್ರೂ, ನಾವು ವಾಪಸ್ ಬರೋಲ್ಲ." ಕಣ್ಮುಚ್ಚಿ ಕಡ್ಡಿ ತುಂಡು ಮಾಡಿದಂತೆ ನುಡಿದಿದ್ದ. 

.........................

ಅಂದು ವರ್ಷದ ಕೊನೆಯ ದಿನ, ಕ್ಲಬ್ಬಿನಲ್ಲಿ ಸಿಕ್ಕಾಪಟ್ಟೆ ಜನ. ವರ್ಷದಲ್ಲಿ ನಡೆದ ಎಲ್ಲಾ ನೋವುಗಳನ್ನು ಮರೆತು, ಮತ್ತಿನಲ್ಲಿ ತೆಲಾಡುತ್ತಿದ್ದರು. ಇಂದು ಅವಳ ಕಿವಿಯಲ್ಲಿ ಇಯಾರ್ ಫೋನ್ ಇರಲಿಲ್ಲ, ಆದರೆ ಎಂದು ಕಾಣದ ಒಂದು ಹೊಳಪು ಆ ಕಾಡಿಗೆ ಹಚ್ಚಿದ ಕಂಗಳಲ್ಲಿ ಇತ್ತು. ಅಲ್ಲಿದ್ದವರಿಗೆ ಬರಿ ಒಂದು ವರ್ಷ ಮುಗಿದು ಇನ್ನೊಂದಕ್ಕೆ ಕಾಲಿಡುತ್ತಿದ್ದರು, ಆದರೆ ಇವಳಿಗೆ ಒಂದು ವರ್ಷದ ವನವಾಸ ಮುಗಿದು ನಾಳೆಯಿಂದ ತನ್ನ ಜೀವನಕ್ಕೆ ಹೊಸ ವ್ಯಕ್ತಿಯಾಗಿ ಹಿಂತಿರುಗುತ್ತಿದ್ದಳು. ಅವಳಿಗೆ ಗೊತ್ತಿತ್ತು, ಇನ್ನೆಂದು ಈ ಕ್ಲಬ್ಬಿಗೆ ತಾನು ಕಾಲಿಡುವುದಿಲ್ಲ ಎಂದು. ಅದಕ್ಕೆ ಏನೋ ಇವತ್ತು ತನ್ನ ಲೋಕದಲ್ಲಿ ಮೈ ಮರೆಯುವ ಬದಲು ಇವರ ಲೋಕದಲ್ಲಿ ಇವರ ಸಂತಸ ಹಂಚಿಕೊಳ್ಳುತ್ತಿದ್ದಳು. 

ರಾತ್ರಿಯಲ್ಲಾ ಪ್ಯಾಕಿಂಗ್ ಮಾಡಿ ಖಾಲಿ ಮನೆಯಲ್ಲಿ ಎಲ್ಲಾ ಕಡೆ ಓಡಾಡಿದಳು. ಅಷ್ಟರಲ್ಲಿ ಕರೆ ಗಂಟೆ. ...

ಅರೆ ಇಷ್ಟು ಹೊತ್ತಿಗೆ ಯಾರು ಬಂದಿರಬಹುದು ಎಂದು ಗಡಿಯಾರ ನೋಡುತ್ತಾ ಬಾಗಿಲೆಡೆಗೆ ಹೆಜ್ಜೆ ಹಾಕಿದವಳಿಗೆ ಗಂಟೆ ಇನ್ನು ಬೆಳಗ್ಗಿನ ೫.೩೦ ಎಂದು ತೋರಿಸುತಿತ್ತು.

ಅನುಮಾನದಿಂದಲೇ ಬಾಗಿಲು ತೆಗೆದವಳ ಎದುರಿಗೆ ಮುಗುಳ್ನಗೆ ಬೀರುತ್ತಾ ನಿಂತ ಗಂಡ ಮತ್ತೆ ಮಗನನ್ನು ನೋಡಿ ಏನು ತೋಚದೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಬಿಗಿದಪ್ಪಿದ ಗಂಡನ ಸಮಾಧಾನಕ್ಕೂ ತಗ್ಗದ ಅಳು, ಮುಗ್ಧ ನಗುವಿನೊಂದಿಗೆ ಇವಳ ಕಾಲನ್ನು ಅಪ್ಪಿದ ಮಗನನ್ನು ನೋಡಿ ಕಣ್ಣಿರಿನಲ್ಲೂ ಒಂದು ನಗು, ಮಗನನ್ನು ಎತ್ತಿ ಮುದ್ದಾಡಿದವಳ ಕಣ್ಣಲ್ಲಿ ಸಾವಿರ ಪ್ರಶ್ನೆಗಳೊಂದಿಗೆ ಗಂಡನ ಬಗ್ಗೆ ಕೃತಜ್ಞತೆ ತುಳುಕುತ್ತಿತ್ತು. ಇವಳ ಕಣ್ಣಿರನ್ನು ಒರೆಸಿದ ಅವನ ಕೈ ಬೆರಳಿನ ಅಂಚಿನಲ್ಲಿ ನೆನ್ನೆ ಹಚ್ಚಿದ ಕಾಡಿಗೆಯ ಛಾಪು ಮೂಡಿತ್ತು


ಕಾಮೆಂಟ್‌ಗಳು

  1. ಮನೋಬಲ ಈ ಪದಕ್ಕೆ ಫಲಕ ಹಾಕಿ ಹೀಗೆ ಇದ್ದರೆ ಜೀವನದಲ್ಲಿ ಸವಾಲನ್ನು ಗೆಲ್ಲಬಹುದು..ಜೀವನವನ್ನು ಹೇಗೆ ಹಸನುಗೊಳಿಸಬಹುದು ಎಂದು ನಿರೂಪಿಸುವ ಲೇಖನ..ಸೋತು ಹತಾಶ ರಾಗಿ ಸುಂದರವಾದ ಬದುಕನ್ನು ಹಾಳು ಮಾಡಿಕೊಂಡು ದುಶ್ಚಟಕ್ಕೆ ಅಡಿಯಳಾಗಬಹುದಾದ ಸಾಧ್ಯತೆಯನ್ನು ಪೂರ್ಣ ಯು ತಿರುವ ಮೂಡಿಸಿರುವುದು ನಿಮ್ಮ ಬರಹದ ಶಕ್ತಿ
    ಸೂಪರ್ ಸಿಬಿ

    ಪ್ರತ್ಯುತ್ತರಅಳಿಸಿ
  2. ನೀವ್ಸ್,
    ಮತ್ತೇನೋ ಆಗಬಹುದು ಅಂತ ಊಹಿಸುವಾಗಲೇ ಸುಖಾಂತ್ಯ ಕೊಟ್ಟಿದ್ದು ಖುಷಿಯಾಯ್ತು.
    ಸರಳ ನಿರೂಪಣೆ, ಇಷ್ಟವಾಯ್ತು :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು