ನಾ ನೋಡಿದ ಭಕ್ತ ಪ್ರಹ್ಲಾದ ...

ಕಾಲೇಜಿನಲ್ಲಿರುವಾಗ ಅಮ್ಮ ಯಾವಾಗ್ಲೂ ಹೇಳ್ತಾ ಇರ್ತಿದ್ರು, ನಿನಗೆ ಒಂದು ಮಗುವಾಗಲಿ ಆಗ ನನ್ನ ಕಷ್ಟ ಅರ್ಥವಾಗುತ್ತೆ ಅಂತ. ಇದು ಈಗ ಯಾಕೆ ನೆನಪಾಯಿತು ಅಂದ್ರೆ, ಇವತ್ತು ಅಣ್ಣಾವ್ರು ನಟಿಸಿದ ಭಕ್ತ ಪ್ರಹ್ಲಾದ ಸಿನಿಮಾ ನೋಡ್ತಾ ಇದ್ವಿ. ಅದು ಎಷ್ಟನೆ ಸಾರಿನೂ ಆ ಸಿನಿಮಾ ನೋಡ್ತಾ ಇರೋದು, ಆದ್ರೆ ಮೊದಲ ಬಾರಿಗೆ ಹಿರಣ್ಯಕಷ್ಯಪುನ್ನ ನೋಡಿ ಅಯ್ಯೋ ಪಾಪ ಅನಿಸಿತು. 

ನಾನು ರಾಕ್ಷಸರ ಪರ, ದೇವರ ವಿರುದ್ಧ, ಅಸ್ತಿಕತೆ, ನಾಸ್ತಿಕತೆ ... ಇಷ್ಟೆಲ್ಲಾ ದೊಡ್ಡ ವಿಷಯ ಮಾತಾಡ್ತಾ ಇಲ್ಲ.  ಪಾಪ ಯಾಕೆ ಅನಿಸಿತು ಅಂದ್ರೆ, ಈಗ ತಾಯಿ ಆದ ಮೇಲೆ ಅವನ ಒದ್ದಾಟ ನನಗೆ ಅರ್ಥವಾಗುತ್ತೆ. 

ಈಗ ಈ ಕಥೆಯಲ್ಲಿ ರಾಕ್ಷಸ, ದೇವರು, ಒಳ್ಳೆಯದು ಕೆಟ್ಟದು ಎಲ್ಲಾದನ್ನು ತೆಗೆದು, ಬರಿ ಅಪ್ಪ ಮಗನ (ಮಂಗನ) ಗಮನಿಸಿ ನೋಡಿ. ಮಗ ಕೈಗೆ ಸಿಗ್ತಾ ಇಲ್ಲ ಅಂತ ತಲೆ ಕೆಡಿಸಿಕೊಳ್ಳುವ ಅಪ್ಪ, ಅಪ್ಪ ಹೇಳೋದಲ್ಲ ತಪ್ಪು ಅಂತ ವಾದಿಸುವ ಮಗ. 

ಇನ್ನು ಸ್ವಲ್ಪ ನೈಜಿಕತೆ ಹತ್ತಿರವಾಗಬೇಕು ಅಂದರೆ ಟೀನೇಜ್ ಮಕ್ಕಳಿರುವ ಯಾವುದೇ ಅಪ್ಪ ಅಮ್ಮನನ್ನು ಕೇಳಿ ನೋಡಿ. ಅಪ್ಪನನ್ನು ಹಿರನ್ಯಕಷ್ಯುಪುವಿಗೂ ಮೀರಿದ ಧೂರ್ತ ಅಂತಾನೆ ನೋಡ್ತಾರೆ. 

ಇಲ್ಲಿ ಅಪ್ಪ, ಮಕ್ಕಳು ಮತ್ತೆ ಹರಿ (ಮಕ್ಕಳ ಸ್ನೇಹಿತರು, ಮಗನ ಹಠ, ಇತ್ಯಾದಿ). ಈ ಕಣ್ಣಿನಲ್ಲಿ ಒಮ್ಮೆ ಮತ್ತೆ ನೋಡಿ, ನಿಮಗೂ ಅಯ್ಯೋ ಪಾಪ ಅನ್ಸುತ್ತೆ. ಹರಿಯಿಂದ ಮಗ/ಮಗಳು  ಹಾಳಾದ, ಹರಿ ಎಷ್ಟು ಒಳ್ಳೆಯವನು ಅಂದರು ನಂಬದ ಅಪ್ಪ, ಮಧ್ಯ ಸಿಕ್ಕಿ ಒದ್ದಾಡುವ ಅಮ್ಮ, ಮಕ್ಕಳ ಮೇಲೆ ಮಮತೆ ಮರೆಯಲಾರೆ, ಗಂಡನ ವಿರುದ್ಧ ಹೋಗಲಾರೆ (ಅಂದ ಹಾಗೆ ನಮ್ಮ ಮನೆಯಲ್ಲಿ ನಾನು ಹಿರಣ್ಯಕಶ್ಯಪು)

ಮಗ ನಾನು ಹೇಳಿದ್ದನ್ನು ಹಠ ಮಾಡದೆ ಕೇಳಬೇಕು, ಆರೇ ಇಷ್ಟು ಜೀವನ ನೋಡಿದ ನನಗೆ ಗೊತ್ತಿರದ ವಿಷಯ ಯಾವುದು, ಅದರಲ್ಲಿ ಸರಿ ತಪ್ಪು ವಾದ ಮಾಡುವ ಅವಶ್ಯಕತೆ ಏನಿದೆ ಅನ್ನೋದು ಹಿರಣ್ಯನ ಪ್ರಶ್ನೆ. ಇದನ್ನು ನಾನು ವಿವರಿಸುವ ಅಗತ್ಯವೇ ಇಲ್ಲ ಬಿಡಿ. 

ತನ್ನ ಮಾತು ಕೇಳದಿದ್ದಕ್ಕೆ ಅಪ್ಪ ನಾನಾ ಶಿಕ್ಷೆ ವಿಧಿಸುತ್ತಾನೆ (ಪಾಕೆಟ್ ಮನಿ ಇಲ್ಲ, ಬೈಕ್ ಇಲ್ಲ, ಸಿನಿಮಾ ಬೇಡ, ಟ್ರಿಪ್ ಬೇಡ....). ನನ್ನ ಮಗನ ವಿಷಯದಲ್ಲಿ ಟಿ.ವಿ. ಇಲ್ಲ, ಚಾಕೊಲೆಟ್ ಇಲ್ಲ, ಕೈ ಕಟ್ಟಿ ಬಾಯಿ ಮೇಲೆ ಬೆರಳು ಇಡು.
ಇಷ್ಟಾದ್ರೂ "ನಾರಾಯಣ ಹರಿ ನಾರಾಯಣ" ಅಂತ ಹರಿಯ ಜಪ ಮಾಡುವ ಮಗ. 

ಹರಿ ಭಕ್ತನಾಗಿ ಎಲ್ಲರ ಮನ ಗೆಲ್ಲುವ ಪ್ರಹ್ಲಾದ ಅಪ್ಪನ ಕಣ್ಣಿಗೆ ಮಾತ್ರ ಶತ್ರು. ಎಲ್ಲರ ಹತ್ರ ಮುದ್ದಾಗಿ ಮಾತಾಡಿ ಮನ ಗೆಲ್ಲುವ ಆದಿಯ ಕಿತಾಪತಿಯ ಏಕೈಕ ಸಾಕ್ಷಿಯಾಗಿ ನನ್ನ ನೋಡಿ ಯಾರಿಗೂ ಪಾಪ ಅನಿಸೋದಿಲ್ಲ.

ಪ್ರಹ್ಲಾದನ ಜಪ ಜಾಸ್ತಿ ಮಾಡುವ ಹಿರಣ್ಯ, ನನ್ನ ಹಾಗೆ, ಎಷ್ಟು ಹೊತ್ತಿಗೂ ಮಗ ಆದಿ ಜಪ. ಏನು ಮಾಡಿದ, ಏನು ಹೇಳಿದ, ಎಲ್ಲಿ ಹೋದ, ಎಲ್ಲಿ ಬಂದ.

ಕೊನೆಗೆ ಇಂತ ಮಗನ ಹೆತ್ತಿದ್ದಕ್ಕೆ ಕಯಾದು ಕೈಯಲ್ಲಿ ಮಗನಿಗೆ ವಿಷ ಕುಡಿಸುವ ಹಿರಣ್ಯ. ನನಗೆ ಅವರಂತ ತದ್ರೂಪು ಮಗನ ಕೊಟ್ಟಿದ್ದಕ್ಕೆ ಅವರ ಕೈಲೆ ಮಗನಿಗೆ ಬೇಡ ಹೇಳಿಸುವ ನಾನು. ನೋಡಿ ಎಷ್ಟು ಹೋಲುತ್ತೆ ನಮ್ಮ ಜೀವನ  

ನೀವು ಒಮ್ಮೆ ನನ್ನ ದೃಷ್ಟಿಕೋನದಿಂದ ಭಕ್ತ ಪ್ರಹ್ಲಾದ ನೋಡಿ. 

ಹೇಳಿ ಮತ್ತೆ ನಿಮಗೆ ಪಾಪ ಅನಿಸೋದಿಲ್ವಾ ಅಂತ. ಕೇವಲ ೬ ವರ್ಷವಿರುವ ನನ್ನ ಮಗ ನನ್ನ ಹತ್ರ ವಾದ ಮಾಡ್ತಾನೆ ತಾನು ಹೇಳಿದ್ದು ಸರಿ ಅಂತ, ಇನ್ನು ಅವನು ಟೀನೆಜಿಗೆ ಬಂದಾಗ ಏನಾಗಬಹುದು ನನ್ನ ಗತಿ .... "ನಾರಾಯಣ ಹರಿ ನಾರಾಯಣ" ಅಂತ ನಾನು ಜಪ ಮಾಡಬೇಕು ಅಷ್ಟೇ. 


ಕಾಮೆಂಟ್‌ಗಳು

  1. ನೋಡುವ ನೋಟ
    ಮಾಡುವ ಊಟ
    ಸಿಕ್ಕುವ ಪಾಠ

    ಎಂದಿಗೂ ನಮ್ಮನ್ನು ಕಾಯುತ್ತದೆ

    ಅಣ್ಣಾವ್ರ ಚಿತ್ರವನ್ನು ಬೇರೆ ದೃಷ್ಟಿಯಿಂದ ನೋಡಿದ್ದು ಖುಷಿ ನೀಡಿತು ಇದು ನಿಮ್ಮ. ಲಹರಿಗಿಂತ ಭಿನ್ನ.

    ಹೇಳಿರುವ ಎಲ್ಲಾ ಮಾತುಗಳು ನಿಜ

    ಬೇಗ ಪ್ರೇರಣೆ ಹೊಂದುವ ವಯೋಮಾನ...ರಕ್ಷಣೆ ಮಾಡುವ ಹಿರಿಯ ಜೀವ...ಸುಂದರ ಸೆಣೆಸಾಟದ ಬರಹ ನಿವಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು