ಹೀಗೊಂದು ಮಾತು ...
ಗುಲಾಬಿ ಬಣ್ಣದ ಲಕೋಟೆಯಲ್ಲಿ, ಸುವಾಸನೆ ಬೀರುವ ಅವಳ ಪತ್ರ. ಕೈಯಲ್ಲಿ ಹಿಡಿದವನಿಗೆ ನೇಣು ಶಿಕ್ಷೆ ಅಂಗಿಕರಿಸಿ ಬಂದ ಕಾನೂನು ಪತ್ರದಂತೆ ಅನಿಸುತ್ತಿತ್ತು. ಮೊನ್ನೆ ಜಗಳವಾದಾಗ ಅವಳ ಮುಖದ ಮೇಲಿದ್ದ ಭಾವ ಅವನಿನ್ನೂ ಮರೆತ್ತಿರಲಿಲ್ಲ.
ಬೆಳಗಿನಿಂದ ಅದನ್ನು ತೆರೆಯದೆ ಶತಪಥ ತಿರುಗುತ್ತ ಕಾಲ ಕಳೆದಿದ್ದ. ಏನೋ ಕೆಲಸದ ನೆಪ ಹೇಳಿಕೊಂಡು ಪತ್ರ ಓದುವುದನ್ನು ಮುಂದೆ ಹಾಕಿದ್ದ. ಈಗ ತನಗೆ ಹೇಳಿಕೊಳ್ಳಲು ಅವನ ಬಳಿ ಯಾವುದೇ ಕಾರಣವಿರಲಿಲ್ಲ. ಪತ್ರ ಓದಲೇ ಬೇಕು. ಅದನ್ನು ಕಣ್ಣಿಗೆ ಕಾಣದಂತೆ ಮುಚ್ಚಿಡಲೇ ?? ಅಥವಾ ಹರಿದು ಎಸೆದು ಬಿಡಲೇ?? ಎನ್ನುವ ಯೋಚನೆಗಳು ಸುಳಿದಿದ್ದರೂ, ಅವಳೇನು ಬರೆದಿರಬಹುದು ಅನ್ನುವ ಕುತೂಹಲ ಹಾಗೆ ಮಾಡಲು ಬಿಡಲಿಲ್ಲ.
"ಥತ್, ಇವಳು ಯಾವಾಗಲೂ ಹೀಗೆ, ಎಲ್ಲರ ಹಾಗೆ ಒಂದು ಇ-ಮೇಲ್ ಕಳಿಸಿದ್ದರೆ, ಏನು ಅಂತ ಗೊತ್ತಾಗುವುದರೊಳಗೆ ಓದಿ ಮುಗಿಸಬಹುದಿತ್ತು. ಇಲ್ಲ, ಅವಳು ನನಗೆ ಇದನ್ನು ಅಷ್ಟು ಸುಲಭ ಮಾಡೋಲ್ಲ. ಅವಳು ಪತ್ರ ಬರಿತಾಳೆ. ಅದು ಗುಲಾಬಿ ಬಣ್ಣದ ಲಕೋಟೆಯಲ್ಲಿ ಹಾಕಿ. ಮತ್ತೆ ಅದಕ್ಕೆ ಹೂವಿನ ಪರಿಮಳ ಬೇರೆ.!!!" ಸಿಟ್ಟಿನಿಂದ ತನ್ನಲ್ಲೇ ಗುರುಗುಟ್ಟಿದ.
ಕೊನೆಗೂ ಇನ್ನೇನು ತೋಚದೆ ಲಕೋಟೆ ಒಡೆದು ಕಾಗದ ಹೊರ ತೆಗೆದ. ಗಮ್ಮೆನ್ನುವ ಪರಿಮಳ, ಲಕೋಟೆಯಿಂದಲ್ಲ ಬಂದಿದ್ದು, ಪತ್ರದಿಂದ.
ಪತ್ರ ತೆಗೆದು ಅಳುಕುವ ಮನದಿಂದಲೆ ಓದಲು ಶುರು ಮಾಡಿದ.
"ಪ್ರೀತಿಯ........
ಹೇಗಿದ್ದೀಯಾ?
ಅದನ್ನು ಕೇಳೋಕೆ ಪತ್ರ ಬರಿಬೇಕಾ?? ಫೇಸ್ಬುಕ್ಕಿನಲ್ಲಿ ಕೇಳಬಹುದಿತ್ತು, ಇಲ್ಲ ಟ್ವಿಟ್ಟರಿನಲ್ಲಿ ಒಂದು ಕೂಗು, ವಾಟ್ಸಾಪಿನಲ್ಲಿ ಒಂದು ಮೆಸೇಜ್ ಆಗಿದ್ರು ಸಾಕು. ಅದು ಬೇಡ ಅಂದರೆ ಹಳೆ ಕಾಲದವರ ಹಾಗೆ ಒಂದು ಮೇಲ್ ಬರಿಬಹುದಿತ್ತು ಅಂತ ಬೈಕೋ ಬೇಡ.
ಪತ್ರ ಬರಿಯೋಕೆ ಒಂದು ಕಾರಣ ಇದೆ. ನಿನಗೆ ಹೀಗೊಂದು ಮಾತು ಹೇಳೋದಿತ್ತು.
ನಾನಿಲ್ಲಿ ಹೇಳುವ ವಿಷಯ ನಿನಗೆ ಗೊತ್ತಿಲ್ಲದ ವಿಷಯ ಅಲ್ಲ. ಆದರೆ ಯಾಕೋ ಇತ್ತೀಚೆಗೆ ನಿನಗೆ ಇದು ಹಿಡಿಸುತ್ತಿಲ್ಲ. ಅಥವಾ ಮೊದಲಿಂದಾನೂ ಹಿಡಿಸಿರಲಿಲ್ಲ ಆದರೆ ಈಗ ಹೇಳಿದ್ದಿಯಾ?? ನನಗೆ ಗೊತ್ತಿಲ್ಲ. ಆದರೆ ನನ್ನನ್ನು ಬದಲಾಯಿಸುವ ನಿನ್ನ ಪ್ರಯತ್ನಕ್ಕೆ ತಿಲಾಂಜಲಿ ಹಾಡು.
"ನಾನು" ನಾನಗಿರಲು ಇಷ್ಟ ಪಡ್ತೀನಿ, ನಿನ್ನ ಅನಿಸಿಕೆಯ "ನಾನು" ನಾನಲ್ಲ. ನನ್ನ ವ್ಯಕ್ತಿತ್ವ ಹೀಗಿರಲು ಹಲವಾರು ಕಾರಣ, ಘಟಣೆ, ಭಾವನೆ, ಅನಿಸಿಕೆಗಳಿವೆ. ಅದನ್ನು ಒಬ್ಬ ವ್ಯಕ್ತಿಗಾಗಿ, ನಿನ್ನ ಮೇಲೆ ನನಗೆ ಎಷ್ಟೇ ಪ್ರೀತಿಯಿದ್ದರು ಬದಲಾಯಿಸುವುದು ಸರಿಯಲ್ಲ, ಸಾಧ್ಯವೂ ಇಲ್ಲ.
ನಾನು ಹೀಗೆ ಕಣೋ. ಹಳೆ ನೆನಪುಗಳಲ್ಲಿ ಮುಳುಗಿರ್ತ್ತಿನಿ, ಮಳೆಯಲ್ಲಿ ಐಸ್ ಕ್ರೀಮ್ ತಿಂತ್ತೀನಿ, ಅಡುಗೆ ಮಾಡುವಾಗ ಜೋರಾಗಿ ಹಾಡ್ತೀನಿ. ಗಾಡಿಯಲ್ಲಿ ಹೋಗುವಾಗ ಪಕ್ಕದ ಗಾಡಿಯೋಂದಿಗೆ ಸಣ್ಣ ಸ್ಫರ್ದೆಗೆ ಇಳಿತ್ತೀನಿ, ಸಾವಿರ ಪ್ರಶ್ನೆ ಕೇಳ್ತೀನಿ ಅಷ್ಟೇ ಉತ್ತರಗಳನ್ನು ಕೊಡ್ತೀನಿ. ತುಂಬಾ ಭಾವನೆಗಳನ್ನು ಹೇಳಬೇಕು ಅನಿಸಿದಾಗ ಪತ್ರ ಬರಿತ್ತಿನಿ. ನಾನು ಹೇಗಿದ್ದೀನೋ ಹಾಗೆ ಖುಶಿಯಾಗಿದ್ದೀನಿ. ನನಗೆ ನಾನು ಇಷ್ಟವಾಗ್ತಿನಿ. ಐ ಲವ್ ಮೈ ಕಂಪನಿ.
ನಾನು ಹೀಗೆ ಅಂತ ಮೊದಲಿಂದಾನೂ ತೋರಿಸಿದ್ದೀನಿ, ಯಾವತ್ತು ಮುಚ್ಚಿಟ್ಟಿದ್ದೀನಿ ಹೇಳು?
ಆದರೆ ಈಗ ಯಾಕೆ ನನ್ನ ಬದಲಾಯಿಸಲು ಪ್ರಯತ್ನಿಸುತ್ತೀಯಾ?
ನಮ್ಮಿಬ್ಬರ ಮಧ್ಯ ಪ್ರೀತಿ ಇದೆ, ಬಾಂಧವ್ಯ ಇದೆ ಸರಿ. ನನಗೆ ಒಂದು ಮಾತು ಹೇಳೋಕೆ, ನಾನು ನಿನ್ನ ಮಾತು ಕೇಳಿಸಿಕೊಳ್ಳಬೇಕು ಎಂದು ಆಶಿಸುವ ಹಕ್ಕು ನಿನಗಿದೆ, ಆದರೆ ನಾನು ನಿನ್ನ ಮಾತಿನಂತೆಯೇ ಬದಲಾಗಬೇಕು ಎಂದು ಬಯಸುವ ಹಕ್ಕು ನಿನಗಿಲ್ಲ.
ನನ್ನ ಕೆಲವು ವಿಷಯ ನಿನಗೆ ಹಿಡಿಸೋಲ್ಲ ಅನ್ನೋದು ನಾನು ಒಪ್ತೀನಿ. ಅದರ ಬಗ್ಗೆ ಕೂತು ಮಾತಾಡೋಣ. ನಿನ್ನೊಂದಿಗೆ ಇರುವಾಗ ನಿನಗೆ ಉಸಿರುಗಟ್ಟದಂತೆ ನಾನು ನೆಡದುಕೊಳ್ತಿನಿ, ಆದರೆ ಅದಕ್ಕಾಗಿ ನಾನು ನನ್ನತನವನ್ನೇ ಬದಲಿಸಲು ಸಾಧ್ಯವಿಲ್ಲ.
ನನ್ನ ಮಾತು ನಂಬು, ನನ್ನ ಬದಲಾಯಿಸಿದರೆ ನಿನಗೂ ಖುಷಿ ಸಿಗುವುದಿಲ್ಲ, ನೀನು ಒಪ್ಪದಿದ್ದರೂ, ನನ್ನ ವ್ಯಕ್ತಿತ್ವದ ಇದೆಲ್ಲ ಸಣ್ಣ ಪುಟ್ಟ ತಲೆಹರಟೆಗಳನ್ನು ಸೇರಿಸಿಯೇ ನೀನು ನನ್ನ ಪ್ರೀತಿಸಿದ್ದು. ಅದರ ಬಗ್ಗೆ ನನಗೆ ನಂಬಿಕೆ ಇದೆ.
ನಾನು ಹೀಗಿದ್ದರೆ ನಿನಗೆ ನನ್ನ ಜೊತೆ ಬದುಕೋದಕ್ಕೆ ಸಾಧ್ಯವಿಲ್ಲ ಅಂತಾದರೆ, ಬಾಗಿಲು ತೆರೆದಿದೆ, ನಾನು ನಿನ್ನ ಕಟ್ಟಿ ಹಾಕೋಲ್ಲ.
ನೀನು ಹೋದರೆ ನನಗೆ ದುಃಖ ಆಗೋಲ್ಲ ಅಂತ ಅಲ್ಲ. ಖಂಡಿತ ದುಃಖವಾಗುತ್ತೆ. ನಿನ್ನ ಮುಖ, ನಿನ್ನ ನಗು, ನಿನ್ನ ಅಪ್ಪುಗೆ, ನಿನ್ನ ನೆನಪು ಬೆಂಬಿಡದೆ ಕಾಡುತ್ತೆ. ಆದರೆ ಸಮಯ ಕಳೆದಂತೆ ನನ್ನ ಹಳೆ ನೆನಪುಗಳಲ್ಲಿ ನೀನು ಸೇರಿಬಿಡ್ತೀಯಾ.
ಆಗಾಗ ನಿನ್ನ ನೆನೆದು ಒಂದು ಮುಗುಳ್ನಗೆ.
ಹಠ ಮಾಡಬೇಡ. ಸ್ವಲ್ಪ ಯೋಚಿಸು.
ನಾನು ಪ್ರಶ್ನೆ ಕೇಳೋದು ಕಮ್ಮಿ ಮಾಡಿದಾಗ "ಏನಾಯಿತು" ಅಂತ ಕೇಳ್ತೀಯ, ಅವತ್ತು ಮಳೆಯಲ್ಲಿ ಸಿಕ್ಕಾಗ ಕೊಡಿಸಿದ ಐಸ್ ಕ್ರೀಮಿನ ರುಚಿ ನೀನು ಮರೆತಿರಲು ಸಾಧ್ಯವೇ ಇಲ್ಲ. ಆ ಕೊಬ್ಬು ತೋರಿಸಿದ ಬೈಕಿನವನನ್ನು ಅವತ್ತು ರೆಸ್ ಮಾಡಿ ಸೋಲಿಸಿದಾಗ ಎಷ್ಟು ನಕ್ಕಿದ್ದೆ ನೀನು. .....
ನೀನಿಷ್ಟು ಬಿಟ್ಟು ಕೊಡು, ನಾನಿಷ್ಟು ಬಿಡ್ತೀನಿ. ನೀನು ಸ್ವಲ್ಪ ಸಹಿಸ್ಕೋ ನಾನು ಸ್ವಲ್ಪ ಸುಧಾರ್ಸ್ತಿನಿ. ಪ್ರೀತಿಲಿ ಹಕ್ಕು ಒಂದೆ ಅಲ್ಲ ಹೊಂದಾಣಿಕೆ ಕೂಡ ಬೇಕು ಆಲ್ವಾ.
ಇಂತಿ ನಿನ್ನ ಪ್ರೀತಿಯ...... "
ಕಾಗದ ಮಡಿಚಿದವನ ಕಣ್ಣಲ್ಲಿ ಏನೋ ಹೊಳಪು.
ತುಟಿಯ ಮೇಲಿನ ನಗು ಬೀಗುತ್ತಿತ್ತು "ನಾನು ಆರಿಸಿದ ಹುಡುಗಿ ಇವಳು"
"ನೀನು ಹೋದರೆ ನನಗೆ ದುಃಖ ಆಗೋಲ್ಲ ಅಂತ ಅಲ್ಲ. ಖಂಡಿತ ದುಃಖವಾಗುತ್ತೆ. ನಿನ್ನ ಮುಖ, ನಿನ್ನ ನಗು, ನಿನ್ನ ಅಪ್ಪುಗೆ, ನಿನ್ನ ನೆನಪು ಬೆಂಬಿಡದೆ ಕಾಡುತ್ತೆ. ಆದರೆ ಸಮಯ ಕಳೆದಂತೆ ನನ್ನ ಹಳೆ ನೆನಪುಗಳಲ್ಲಿ ನೀನು ಸೇರಿಬಿಡ್ತೀಯಾ"
ಪ್ರತ್ಯುತ್ತರಅಳಿಸಿಪ್ರೀತಿಯೆಂಬ ಮಾಯೆ ಅಡಗಿ ಕೂತಿರುವುದು ಈ ಮೇಲಿನ ಸಾಲಿನಲ್ಲಿ.. ಹೊಡೆದಾಡಿ ಬಡಿದಾಡಿ, ಕೂಗಾಡಿ ಕಿರುಚಿದರೂ ಸಿಗದ ಒಂದು ಪ್ರೀತಿಯ ಝಲಕ್ ಇಲ್ಲಿದೆ.. ಜೀವದಲ್ಲಿ ಹೊಂದಾಣಿಕೆ ಇಲ್ಲದೆ ಏನೂ ಇಲ್ಲ.. ಯಾರೂ ಪರಿಪೂರ್ಣರಲ್ಲ.. ಇದ್ದದ್ದನ್ನು ಇದ್ದ ಹಾಗೆ ಪ್ರೀತಿಸೋದು ಬದುಕಿನ ಲೇಖನ.. ಆ ಲಕ್ಷಣವನ್ನು ಹುಡುಗ ಹುಡುಗಿ ಇಬ್ಬರೂ ಹೊದ್ದುಕೊಳ್ಳಲು ನಿಂತದ್ದು.. ಈ ಲೇಖನಕ್ಕೆ ಒಂದು ಸುಂದರ ಚೌಕಟ್ಟನ್ನು ಕೊಟ್ಟಿದೆ.
ಒಂದೇ ಉಸಿರಿಗೆ ದಬಕ್ ಅಂತ ಬೀಳುವ ಬರಹದ ಶೈಲಿ ಇಷ್ಟವಾಯಿತು ನಿವಿ
Wow mast article, neenu bittu hodare..... Pyarada line galu ishta aadavu.
ಪ್ರತ್ಯುತ್ತರಅಳಿಸಿ