ಹಕ್ಕಿ ಮರಿ

ಒಂದು ಜೀವಿಯನ್ನು ಕಾಪಾಡಿದಾಗ ಸಿಗುವ ಸಂತೃಪ್ತಿ ವರ್ಣಿಸಲು ಅಸಾಧ್ಯ. ಒಂದು ಅಸಹಾಯಕ ಪುಟ್ಟ ಜೀವಿಯನ್ನು ಉಳಿಸುವ ಅವಕಾಶ ಇತ್ತೀಚಿಗೆ ನಮಗೂ ಸಿಕ್ಕಿತು.

ಮಗ ಅಮ್ಮನ ಜೊತೆ ಊರಿಗೆ ಹೋದ ಅವಕಾಶ ಬಿಡಬಾರದು ಎಂದು "ಅವೆಂಜರಸ್" ಮೂವಿಗೆ ಬುಕ್ಕ್ ಮಾಡಿದ್ವಿ. ಪಾಸ್ತ ಮಾಡೋಣ ಅಂತ ನೋಡಿದ್ರೆ ಟೊಮಾಟೊ ಖಾಲಿ. ಸರಿ ಚಿರುನ ಅಂಗಡಿಗೆ ಓಡಿಸಿದೆ. ಮನೆ ಬಳಿಯ ಅಂಗಡಿ ಮುಚ್ಚಿದೆ ಅಂತ ಚಿರು ಗಾಡಿ ಹತ್ತಿ ಇನ್ನೊಂದು ಅಂಗಡಿಗೆ ಅಂತ ಹೋದರು, ಆ ಅಂಗಡಿಯಲ್ಲಿ ಜನ ತುಂಬಾ ಇದ್ದಾರೆ ಅಂತ ಎಂದು ಭೇಟಿ ಕೊಡದ, ಯಾರ ಗಮನವೂ ಬೀಳದ ಜಾಗದಲ್ಲಿರುವ ತರಕಾರಿ ಅಂಗಡಿಗೆ ಹೋದರು.

ಖರೀದಿ ಮಾಡಿ ದುಡ್ಡು ಕೊಡಲು ಕೌಂಟರ್ ಹತ್ರ ಬಂದಾಗ ಅವರ ಕಂಪ್ಯೂಟರ್ ಮೇಲೆ ಒಂದು ಮರಿ ಮಡಿವಾಳ  (ಮ್ಯಾಗ್ ಪೈ ರಾಬಿನ್) ಹಕ್ಕಿಯನ್ನು ಕೂರಿಸಿಕೊಂಡಿದ್ದರು.

ಚಿರು ವಿಚಾರಿಸಿದಾಗ, ಗೊತ್ತಾಗಿದ್ದು ಆ ಹಕ್ಕಿ ಪಕ್ಕದ ಖಾಲಿ ಸೈಟಿನಿಂದ ಈ ಅಂಗಡಿಯವರ ಬೈಕ್  ಮೇಲೆ ಬಂದು ಕೂತಿತ್ತು ಎಂದು. ಇವರು ತಕ್ಷಣ ಹೇಳಿದ್ರು ಅದನ್ನು ನೀವು ಸಾಕಲು ಸಾಧ್ಯವಿಲ್ಲ, ಈ ಹಕ್ಕಿ ಹುಳುಗಳನ್ನು ತಿನ್ನುತ್ತೆ, ಹಣ್ಣು ಕಾಳು ತಿನ್ನೋಲ್ಲ. ಅದು ಎಲ್ಲಿ ಸಿಕ್ಕಿತೋ ಅಲ್ಲೇ  ವಾಪಸ್ ಬಿಟ್ಟು ಬಿಡಿ ಎಂದು. ಅಂಗಡಿಯವರಿಗೂ ಸರಿ ಅನ್ನಿಸಿ ಅದನ್ನು ಆ ಖಾಲಿ ಸೈಟಿನಲ್ಲಿ ಬಿಟ್ಟರು.

ಮನೆಗೆ ಹೋರಟ ಚಿರುಗೆ ಸಮಾಧಾನ ಆಗ್ಲಿಲ್ಲ. ಅಲ್ಲೇ ನಿಂತು ಸ್ವಲ್ಪ ಹೊತ್ತು ನೋಡಿದರು.. ಪೊದೆಯೊಳಗೆ ಹೋಗಿದ್ದ ಆ ಹಕ್ಕಿ ಮತ್ತೆ ಸ್ವಲ್ಪ ಹೊತ್ತಾದ ಮೇಲೆ ರಸ್ತೆಗೆ ಬಂದಿತ್ತು. ಯಾಕೋ ಈ ಹಕ್ಕಿಗೆ ಪ್ರಪಂಚ ನೋಡೋ ಹುಚ್ಚು ತುಂಬಾ ಇದೆ ಅಂತ ಅನಿಸಿ ಚಿರು ನನಗೆ ಫೋನಾಯಿಸಿದರು. ನನ್ನದು ಒಂದೇ ಉತ್ತರ ಸಾಧ್ಯವಾದರೆ ಅದನ್ನು ಮನೆಗೆ ತನ್ನಿ ಎಂದು. ಯಾಕೆಂದರೆ ನಸುಗತ್ತಲೆಯ ಸಮಯದಲ್ಲಿ ಆ ಹಕ್ಕಿ ಕಣ್ಣಿಗೆ ಕಾಣದೆ ಯಾರದ್ದೋ ಗಾಡಿಗೆ ಸಿಕ್ಕರೆ ಎನ್ನೋ ಭಯ ಇತ್ತು ನನಗೆ.

ಗಾಡಿಯ ಡಿಕ್ಕಿಯಲ್ಲಿಟ್ಟುಕೊಂಡು ನಿಧಾನವಾಗಿ ಗಾಡಿ ಓಡಿಸಿಕೊಂಡು ಮನೆಗೆ ಬಂದರು. ಪುಟ್ಟ ಹಕ್ಕಿ ತುಂಬಾ ಹೆದರಿತ್ತು. ಹಾರಲು ಬರ್ತಿತ್ತು ಆದ್ರೆ ತುಂಬಾ ದೂರ ಹಾರುವ ಶಕ್ತಿ ಇರಲಿಲ್ಲ. ಅದನ್ನು ನೋಡಿದ ತಕ್ಷಣ ಅನಿಸಿದ್ದು ಮೂವಿಗೆ ಇನ್ನೊಂದು ದಿನ ಹೋದರೆ ಆಯಿತು ಮೊದಲು ಈ ಹಕ್ಕಿನ  ಹೇಗಾದ್ರು ಕಾಪಾಡಬೇಕು ಎನ್ನುವುದು. ಮನೆಗೆ ಹತ್ತಿರದಲ್ಲೇ ಒಂದು ಪ್ರಾಣಿ ದಯಾ ಸಂಘವಿದೆ ಎಂದು ಗೊತ್ತಿತ್ತು, ಹಿಂದೊಮ್ಮೆ ಸ್ನೇಹಿತೆಯ ಪ್ರೀತಿಯ ನಾಯಿಯನ್ನು ಅಲ್ಲೇ ಹೂತ್ತಿದ್ದರು. ಆದರೆ ಅಲ್ಲಿಯ ಪೋನ್ ನಂಬರ್ ಇರಲಿಲ್ಲ ಮತ್ತೆ ಅವರ ಹತ್ರ ಈ ಹಕ್ಕಿಯನ್ನು ನೋಡಿಕೊಳ್ಳುವ ವ್ಯವಸ್ಥೆ ಇದ್ಯೋ ಇಲ್ವೋ ಗೊತ್ತಿಲ್ಲ.

ಸರಿ ಏನ್ ಮಾಡೋದು. ಗೂಗಲ್ ದೇವರ ಮೊರೆ ಹೊಕ್ಕು ಪ್ರಾರ್ಥನೆ ಮಾಡಿದಾಗ ತಥಾಸ್ತು ಎಂದು ಅಲ್ಲಿನ ಫೋನ್ ನಂಬರ್ ಮತ್ತೆ ವಿಳಾಸ ತೋರಿಸಿತು. ಫೋನಾಯಿಸಿ ಕೇಳಿದಾಗ ಅವರು ಕರ್ಕೊಂಡು ಬನ್ನಿ ನಮ್ಮಲ್ಲಿ ಅದರ ಆರೈಕೆ ಮಾಡುವ ವ್ಯವಸ್ತೆ ಎಲ್ಲಾ ಇದೆ ಎಂದರು. ಮನಸ್ಸಿಗೆ ತುಂಬಾ ಸಮಾಧಾನವಾಯಿತು. ತಕ್ಷಣವೇ ಚಿರು ಮತ್ತೆ ನಮ್ಮ ಚಿಕ್ಕಪ್ಪ ಸೇರಿ ಆ ಪುಟ್ಟ ಹಕ್ಕಿಯನ್ನು ಅಲ್ಲಿಗೆ ಕರ್ಕೊಂಡು ಹೋದರು.

ಅಲ್ಲಿ ಸುಮಾರು ಎಲ್ಲಾ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಇದೆ. ಮ್ಯಾಗ್ ಪೈ ರಾಬಿನ್ ಹಕ್ಕಿಯ ಇನ್ನೊಂದು ಕುಟುಂಬ ಸಧ್ಯಕ್ಕೆ ಅವರ ಆರೈಕೆಯಲ್ಲಿತ್ತು. ಚಿರು ವಿಚಾರಿಸಿದ್ರು "ನೀವು ಇದಕ್ಕೆ ತಿನ್ನಲು ಕೊಟ್ಟು ಸುಮ್ಮನೆ ಬಿಟ್ಟರೆ ಅದು ಹೇಗೆ ಬದುಕುತ್ತೆ ಎಂದು?"

ಅದಕ್ಕೆ ಅವರು ಹೇಳಿದರಂತೆ "ಹಾಗಲ್ಲ, ನಾವು ಅದಕ್ಕೆ ಆಹಾರ ಹುಡುಕುವುದನ್ನು ಕಲಿಸಿ ನಂತರ ಅದು ಹೊರಗೆ ಬದುಕ ಬಹುದು ಅನಿಸಿದ ನಂತರ ಬಿಡ್ತಿವಿ ಎಂದು"

ಅಲ್ಲಿ ಬಿಟ್ಟು ಬಂದ ಮೇಲೆ ನಮಗೆ ಕಾಡಿದ ವಿಷಯ ಯಾಕೆ ಈ ಹಕ್ಕಿ ರಸ್ತೆಗೆ ಬಂತು ಎಂದು. ಗೂಡಿನಿಂದ ಕೆಳಗೆ ಬಿತ್ತೆ ?? ಮತ್ತೆ ಯಾಕೆ ಪೊದೆಯಲ್ಲಿ ಅಡಗಲಿಲ್ಲ ?? ಹೀಗೆ ಇನ್ನಷ್ಟು ಪ್ರಶ್ನೆಗಳು.. ಮತ್ತೆ ಗೂಗಲ್ ದೇವನ ಸಹಾಯ ಬೇಡಿದೆವು. ತಿಳಿದು ಬಂದ ವಿಷಯ ಎಂದರೆ. ಈ ಮ್ಯಾಗ್ ಪೈ ರಾಬಿನ್ ಹಕ್ಕಿ ಮರಿ ಹಾರಲು ಕಲಿತ ಮೇಲೆ ಅದನ್ನು ಅದರ ತಂದೆ ತಾಯಿ ಹಕ್ಕಿಗಳು ಗೂಡಿನಿಂದ ಕೆಳಗೆ ತಂದು ನೆಲದ ಮೇಲೆ ಬಿಡುತ್ತೆ. ಬೆಳಕಿದ್ದಷ್ಟು ಹೊತ್ತು ದೊಡ್ಡ ಹಕ್ಕಿಗಳು ಆಹಾರ ತಂದು ಕೊಟ್ಟು ರಕ್ಷಣೆ ಮಾಡುತ್ತೆ ಆದರೆ ರಾತ್ರಿಯಲ್ಲಿ ಈ ಮರಿ ಹಕ್ಕಿ ಪೊದೆಯಲ್ಲಿ ಅಡಗಿ ಕುರುತ್ತೆ.. ಹೀಗೆ ೩-೪ ದಿನಗಳಾದ ಮೇಲೆ ಈ ಹಕ್ಕಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಬರುತ್ತೆ. ಅಷ್ಟು ಹೊತ್ತಿಗೆ ಅದಕ್ಕೆ ಹೆಚ್ಚು ದೂರ ಹಾರಲು ಬಂದಿರುತ್ತೆ, ಹೀಗೆ ಅದು ತನ್ನ ಗೂಡು ಬಿಟ್ಟು ತನ್ನ ಜೀವನ ನೋಡಿಕೊಳ್ಳುತ್ತೇ. ಬಹುಷ ಅಂದು ಆ ಪುಟ್ಟ ಮರಿ ಹಕ್ಕಿಯ ಸ್ವಾತ್ರಂತ್ಯದ ಮೊದಲ ರಾತ್ರಿಯಾಗಿತ್ತು ಅನ್ಸುತ್ತೆ.

ಸಧ್ಯ ಯಾವುದೋ ಗಾಡಿಗೆ ಸಿಕ್ಕದೆ ಯಾರಿಗೋ ಸಿಕ್ಕಿತ್ತಲ್ಲ ಅನ್ನೋದೇ ಸಮಾಧಾನ. ಪಾಸ್ತ ಮಾಡಿದ್ದೆ. ಮೂವಿಗೆ ಹೋಗಲು ಇನ್ನು ಸಮಯವಿತ್ತು. ಬೇಗ ಬೇಗ ತಿಂದು ಮೂವಿಗೆ ಹೋದ್ವಿ. "ಅವೆಂಜರಸ್" ಮೂವಿಗೆ ಹೊರಟ ನಮಗೆ ಸೂಪರ್ ಹಿರೋ ತರಹ ಅನಿಸ್ತಿತ್ತು.

          

ಕಾಮೆಂಟ್‌ಗಳು

  1. ತುಂಬಿದ ತುಳುಕೊಲ್ಲ ಅನ್ನುತ್ತಾರೆ.. ಆದರೆ ಈ ತುಂಬಿದ ಮನ ತುಳುಕಿರಲಿಲ್ಲ ಇತ್ತೀಚಿಗೆ.. ಆದರೆ ಮತ್ತೆ ತಿರುಗಿಬಂದ ರೀತಿ ಸೂಪರ್ ಸೂಪರ್
    ಅದು ಮುದ್ದಾದ ಮಾನವೀಯತೆಯ ಪ್ರಸಂಗವನ್ನು ಹೊತ್ತು ಬಂದ ರೀತಿ.. ಜೊತೆಯಲ್ಲಿಯೇ ನಮ್ಮ ನಮ್ಮ ಚಿಕ್ಕ ಚಿಕ್ಕ ಆಸೆ ಆಕಾಂಕ್ಷೆಗಳನ್ನು ಸರಿದೂಗಿಸಲು ಕೆಲವೊಮ್ಮೆ ಈ ರೀತಿಯ ಕಾರ್ಯಗಳನ್ನು ಇನ್ನೊಬ್ಬರಿಗೆ ವಹಿಸಿ ಜಾರಿಕೊಳ್ಳುವ ಸಂದರ್ಭಗಳು ಹೆಚ್ಚು.. ಆದರೆ ಒಂದು ಸುಂದರ ಸಂಜೆಯನ್ನು ಅಷ್ಟೇ ಸುಂದರ ಕಾರ್ಯದ ಮೂಲಕ ಆ ಸಂಜೆಗೆ ಇನ್ನಷ್ಟು ಮಾನವೀತೆಯ ರಂಗನ್ನು ಹಚ್ಚಿ ಇತರರಿಗೆ ಮಾರ್ಗ ಸೂಸುವ ಲೇಖನವನ್ನು ತಂದಿರುವುದು ಸೂಪರ್ ಸೂಪರ್

    ಸುಂದರ ಮನಸುಳ್ಳ ಸುಮಧುರ ಜೀವಿಗಳ ಸುಂದರ ಕಾರ್ಯ.. ಅಷ್ಟೇ ಮುದ್ದಾದ ಬರಹ

    ನಿವಿ ಸ್ಪೆಷಲ್ ಬಹಳ ದಿನಗಳ ನಂತರ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು