ಸಂಬಂಧ

Google images

ವಿಶ್ವ ಮನೆಗೆ ಬಂದಾಗ, ಒಂದು ಭಾರವಾದ ಮೌನ ನೆಲೆಸಿತ್ತು. ಅಪ್ಪ ಸೋಫಾದ ಮೇಲೆ ಪೇಪರ್ ಓದುತ್ತಿದ್ದರೂ, ಗಮನ ಯಾಕೊ ಅದರಲ್ಲಿ ಇದ್ದ ಹಾಗೆ ಇರಲಿಲ್ಲ. ಅಡುಗೆ ಮನೆಯಲ್ಲಿ ಜೋರು ಪಾತ್ರೆ ತೊಳೆಯೋ ಸದ್ದು.. ದಿನ ನಗುತ್ತಾ ಎದುರು ಬರುತ್ತಿದ್ದ ಹೆಂಡತಿ ಕಾಣದಿದ್ದಾಗ ಅವನಿಗೆ ಪರಿಸ್ಥಿತಿ ಅರ್ಥವಾಯಿತು.  ಆಫೀಸಿನಲ್ಲಿ ಬಾಸ್ ತಲೆನೋವು.. ಮನೆಗೆ ಬಂದ ತಕ್ಷಣ ಇದು ಬೇರೆ” ಅಂತ ಗೊಣಗುತ್ತಾ ಶೂ ಬಿಚ್ಚಿದ.

ಉಸ್ಸಪ್ಪ ಅಂತ ಸೋಫಾದ ಮೇಲೆ ಅಪ್ಪನ ಪಕ್ಕ ಕೂತು “ಮತ್ತೆ ಜಗಳಾನಾ” ಅಂತ ಹುಬ್ಬೆರಿಸಿದಾಗ, ಅಪ್ಪನ ಕಣ್ಣು  “ದೇವರೇ ಕಾಪಾಡಬೇಕು ನಿನ್ನ” ಅಂತ ಅಂದ ಹಾಗಿತ್ತು. ಅವರು ಯಾವುದಕ್ಕೂ ತಲೆ ಹಾಕುತ್ತಿರಲಿಲ್ಲ, ಒಮ್ಮೊಮ್ಮೆ ಅದು ಒಳ್ಳೇದು ಅಂತ ಅನಿಸಿದ್ರು ಇಂಥಹ ಸಮಯದಲ್ಲಿ ಇವರೇ ನೋಡಿಕೊಳ್ಳಬಹುದಿತ್ತು ಅಂತಾನೂ ಕಾಡುತ್ತಿತ್ತು
.
ಬಟ್ಟೆ ಬದಲಿಸಲು ರೂಮಿಗೆ ಬಂದ ವಿಶ್ವನನ್ನು ನೋಡಿ “ಕಾಫಿ ತರುತ್ತೀನಿ ಬಟ್ಟೆ ಬದಲಿಸಿ” ಅಂತ ಉಲಿದು ಹೊರ ನೆಡೆದಳು ಸ್ವಾತಿ. ಬಟ್ಟೆ ಬದಲಿಸಿ ಬಂದ ವಿಶ್ವನಿಗೆ ಡೈನಿಂಗ್ ಟೇಬಲ್ ಮೇಲೆ ಬಿಸಿ ಬಿಸಿ ಕಾಫಿ ತಿಂಡಿ ರೆಡಿಯಾಗಿತ್ತು.

ಅಲ್ಲೆ ಕೂತು ತರಕಾರಿ ಹೆಚ್ಚುತ್ತಿದ್ದ ಅಮ್ಮನ್ನ ನೋಡಿ ನಿಧಾನವಾಗಿ ವಿಶ್ವನೇ ಮಾತನಾಡಿಸಿದ “ಅಮ್ಮ... ಅದು...” ಕಣ್ಣೆತ್ತಿ ನೋಡಿದ ಅಮ್ಮನ ಕಣ್ಣುಗಳು ಕೆಂಪಾಗಿದ್ದನ್ನು ಕಂಡು ಮುಂದಿನ ಪದಗಳು ಬಾಯಿಯಲ್ಲಿಯೇ ಸಿಕ್ಕಿಕೊಂಡವು. ಬೇಡ ಈ ಮಾತು ಈಗ ಅನ್ನಿಸಿ ಅಂದ “ಅಮ್ಮ ಅದು ನಾಳೆ ಸ್ವಲ್ಪ ಬೇಗ ಹೋಗ್ಬೇಕು ಆಫೀಸಿಗೆ”

ಸೆರಗಲ್ಲಿ ಮೂಗೊರಿಸಿಕೊಂಡು ಅಮ್ಮ ಅಂದರು “ಸರಿ ಎಷ್ಟು ಹೊತ್ತಿಗೆ ಅಂತ ಹೇಳು, ತಿಂಡಿ ರೆಡಿ ಮಾಡಿಡ್ತೀನಿ”

ರಾತ್ರಿ ಊಟ ಮುಗಿಸಿ ರೂಮಿಗೆ ಬಂದ ವಿಶ್ವನಿಗೆ ಸ್ವಾಗತಿಸಿದ್ದು ನಿದ್ದೆಗೆ ಜಾರಿದ ಮಡದಿ ಮತ್ತು ನೀರವ ಮೌನ. ಅವಳಿಗೆ ನಿದ್ದೆ ಬಂದಿಲ್ಲಾ ಅಂತ ಗೊತ್ತಿದ್ರು ವಿಶ್ವ ಅವಳನ್ನು ಮಾತನಾಡಿಸದೆ ಬೆನ್ನು ಹಾಕಿ ಮಲಗಿದ. ದೇಹ ದಣಿದಿತ್ತು, ಮನಸ್ಸು ಎಷ್ಟು ಕಾಡಿದರೂ ಕೇಳದ ದೇಹ ನಿದ್ದೆಗೆ ಶರಣಾಯಿತು.

ಸ್ವಾತಿಯ ಕಣ್ಣಿಂದ ಕಣ್ಣೀರು ತಡೆಯಿಲ್ಲದೆ ಹರಿಯುತ್ತಾ ಇತ್ತು. ಸುಖವಾಗಿದ್ದ ನನ್ನ ತಂದು ಈ ನರಕಕ್ಕೆ ಸೇರಿಸಿದರು ಅಂತ ಮನಸ್ಸು ತಂದೆ ತಾಯಿಯನ್ನು ದೂರುತಿತ್ತು. “ಎಷ್ಟು ವಿಶ್ವಾಸದಿಂದಿದ್ದರೂ ಅಷ್ಟೇ ನಾನೊಬ್ಬಳು ಕಸಕ್ಕೆ ಸಮಾನ ಈ ಮನೇಲಿ. ಹೋಗಲಿ ಗಂಡನಿಗಾದರೂ ಒಂದು ಮಾತು ಇದ್ಯಾ ಸತ್ಯಾ ಅಂತ ಕೇಳೋ ಮನಸ್ಸಿಲ್ಲ” ಮನಸ್ಸು ತನ್ನದೆ ಸಿಟ್ಟಿನ ಬೇಗೆಯಲ್ಲಿ ಬೇಯುತ್ತಿತ್ತು.

ಇತ್ತ ಕಮಲಮ್ಮನಿಗೂ ನಿದ್ದೆ ಇಲ್ಲ, “ಛೇ  ಮನೆಯಲ್ಲಿ ನೆಮ್ಮದಿನೇ ಇಲ್ಲದಂತೆ ಮಾಡಿಬಿಟ್ಟಳು..  ಇವಳು ಬರುವ ಮುಂಚೆ ಮನೆ ಎಷ್ಟು ಕಳೆ ಕಳೆಯಾಗಿತ್ತು, ಸೊಸೆ ಮನೆ ಭಾಗ್ಯಲಕ್ಷ್ಮಿ, ಸುಖ ಸಂತೋಷ ವೃದ್ಧಿಯಾಗುತ್ತೆ ಇವಳಿಂದ ಅಂತ ಎಷ್ಟು ಆಸೆಯಿಂದ ಸೊಸೆ ಮಾಡ್ಕೊಂಡೆ, ನನ್ನ ನಿರೀಕ್ಷೆಗಳನೆಲ್ಲಾ ಕಾಲಲ್ಲಿ ಹೊಸಕಿ ಹಾಕಿದಳು. ಯಾವ ಜನ್ಮದ ಪಾಪಾನೋ ಈ ಇಳಿ ವಯಸ್ಸಲ್ಲಿ ಇದನ್ನೆಲ್ಲಾ ಅನುಭವಿಸಬೇಕಾಗಿದೆ ನನಗೆ" ಎಂದು ಮಗ್ಗುಲು ಬದಲಾಯಿಸುತ್ತಿದ್ದರು.

ಇವೆಲ್ಲದರ ಮಧ್ಯೇ ರಾಮರಾಯರ ಗೊರಕೆ ಹಿನ್ನೆಲೆ ಸಂಗೀತದಂತೆ ಇವರ ಸಿಟ್ಟಿಗೆ ತುಪ್ಪ ಸುರಿಯುತಿತ್ತು.

ಮರುದಿನ ದೇವರ ಪೂಜೆ ಮಾಡಿ ನಮಸ್ಕರಿಸುವಾಗ, ಮಗನ ಊಟವನ್ನು ಡಬ್ಬಿಗೆ ತುಂಬುತ್ತಿದ್ದ ಸೊಸೆಯ ಮುಖದಲ್ಲಿ ನಿದ್ದೆಯಿಲ್ಲದೆ ದಣಿದ ಭಾವ ನೋಡಿ ಒಮ್ಮೆ ಕಮಲಮ್ಮನಿಗೆ ಕರುಣೆ ಹುಟ್ಟಿತು. ಏನಾದರೂ ಆಗಲಿ ಮಗನನ್ನು ಚೆನ್ನಾಗಿ ನೋಡ್ಕೊತ್ತಾಳೆ, ಅಷ್ಟೆ ತಾನೆ ಮುಖ್ಯ ಎಂದು ನಿಟ್ಟುಸಿರು ಬಿಟ್ಟರು.

ಆಫೀಸಿಗೆ ಹೊರಟು ನಿಂತ ಮಗ ಯಾರ ಬಳಿಯೂ ಒಂದು ಮಾತಾಡಲಿಲ್ಲ . ಹಾಗೇ ಸಿಟ್ಟಿನ ಮೋರೆಯಲ್ಲಿ  ಹೋಗಿ ಬರ್ತೀನಿ ಅಂತಾನೂ ಹೇಳದೆ ಹೊರಟಾಗ, ಕಮಲಮ್ಮನಲ್ಲಿ ಹುಟ್ಟಿದ ಆ ಪುಟ್ಟ ಕರುಣೆ ಯೋಚನೆಯಾಯಿತು. ಪ್ರತಿದಿನ ಸಂಜೆ ಬರುವ ಮಗ .. ರಾತ್ರಿ ೧೦ ಗಂಟೆಗೆ ಬಂದು “ಊಟ ಅಯ್ತು ನಂದು” ಎಂದಷ್ಟೆ ಹೇಳಿ ಹೋಗಿ ಮಲಗಿದಾಗ ಆ ಯೋಚನೆ ಕಮಲಮ್ಮನನ್ನು ಕಾಡಿತು.

ಮರುದಿನ ಬೆಳಗ್ಗೆ ಬೇಗನೆ ತಿಂಡಿಯನ್ನೂ ತಿನ್ನದೆ ಹೊರಟ ಮಗನನ್ನು ನೋಡಿ ಕಮಲಮ್ಮ ಒಂದು ನಿರ್ಧಾರ ಮಾಡಿದರು . ತಿಂಡಿ ತಿಂದಾದ ಮೇಲೆ ಸೊಸೆಯನ್ನು ಕರೆದು ಹೇಳಿದರು “ದೇವಸ್ಥಾನಕ್ಕೆ ಹೊಗೋಣ ಬರ್ತೀಯಾ?” ಎಂದೂ ತನ್ನನ್ನು ಎಲ್ಲೂ ಕರೆಯದ ಅತ್ತೆ ಇಷ್ಟು ಮೃದು ಧ್ವನಿಯಲ್ಲಿ ಕರೆದಾಗ ಸ್ವಾತಿಗೆ ಹಳೆ ಸಿಟ್ಟು ಮರೆತು ಕುತೂಹಲ ಮೂಡಿತು “ಸರಿ ಬಟ್ಟೆ ಬದಲಿಸಿ ಬರ್ತೀನಿ ಇರಿ” ಎಂದು ಹೇಳಿ ರೂಮಿಗೆ ಹೋದಳು.

ಹೊರಟು ನಿಂತ ಮನೆ ಹೆಂಗಸರನ್ನು ರಾಮರಾಯರ ಕಣ್ಣು ಕನ್ನಡಕದ ಮೂಲಕ ಪೇಪರಿನ ಅಂಚಿನಿಂದಲೆ ಗಮನಿಸಿ ತುಟಿಯಲ್ಲಿ ಒಂದು ಸಣ್ಣ ನಗು ಮೂಡಿಸಿತು.

ದೇವರ ದರ್ಶನವಾದ ಮೇಲೆ ಅತ್ತೆ ಸೊಸೆ ಇಬ್ಬರೂ ದೇವಸ್ಥಾನದ ಸುತ್ತಲೂ ಕೂರಲು ಇಟ್ಟ ಕಲ್ಲು ಬೆಂಚಿನ ಮೇಲೆ ಕೂತು ಬಾಳೆ ಹಣ್ಣು ಪ್ರಸಾದ ತಿಂದರು. ಸ್ವಲ್ಪ ಹೊತ್ತಿನ ಮೌನವಾದ ಮೇಲೆ ಸ್ವಾತಿ “ಹೊರಡೋಣ್ವಾ ಅತ್ತೆ?” ಎಂದಳು. 

ಕಮಲಮ್ಮ ಗಂಟಲು ಸರಿ ಮಾಡಿಕೊಂಡು ಹೇಳಿದರು “ನಿನ್ನ ಹತ್ರ ಸ್ವಲ್ಪ ಮಾತಾಡಬೇಕು ಅದಕ್ಕೆ ಇವತ್ತು ನಿನ್ನನ್ನು ಕರೆದೆ” ಎಂದರು.

“ಅನ್ಕೊಂಡಿದ್ದೆ ಏನು ವಿಷಯ ಇದೆ ಅಂತ” ಸ್ವಾತಿ ಮನದಲ್ಲೆ ಹೇಳಿಕೊಂಡಳು 

ಆದರೂ ಹೊರಗೆ ಸಹಜವಾಗಿ ಹೇಳಿದಳು “ ಹೇಳಿ ಅತ್ತೆ ಏನು ವಿಷಯ?”

ಕಮಲಮ್ಮ ಒಂದು ನಿಮಿಷ ಸುಮ್ಮನಿದ್ದು ನಿಧಾನವಾಗಿ ಹೇಳಿದರು “ನನ್ನ ಮಾತು ಪೂರ್ತಿ ಕೇಳು ಸ್ವಾತಿ ಅಮೇಲೆ ನಿನ್ನ ಅಭಿಪ್ರಾಯ ಹೇಳು ಅಯ್ತಾ?”

“ ಹೂಂ” ಅಂದ ಸೊಸೆಯ ಉತ್ತರಕ್ಕೆ ಕಮಲಮ್ಮ ವಿಷಯ ಹೇಳಿದರು “ನನಗೆ ವಿಶ್ವ ಒಬ್ಬನೆ ಮಗ, ಇವನು ಹುಟ್ಟಿದ ಮೇಲೆ ನಮಗೆ ಮಕ್ಕಳಾಗಲೇ ಇಲ್ಲ. ಅದಕ್ಕೆ ಅನ್ನಿಸುತ್ತೆ ನಾನು ಇವನನ್ನು ಅಷ್ಟು ಹಚ್ಚಿಕೊಂಡಿದ್ದು. ಇವನು ನನ್ನ ಬಿಟ್ಟು ಇವರಪ್ಪನ ಹತ್ರ ಹೋದ್ರೂ ನನಗೆ ಸಹಿಸೋಕೆ ಆಗ್ತಿರಲಿಲ್ಲ, ಮನಸ್ಸು ಕಹಿ ಕಹಿ ಅನ್ನಿಸೋದು.   ನನಗೆ ಗೊತ್ತು ಇದು ಒಳ್ಳೆಯದಲ್ಲಾ, ಅವನು ವಸ್ತು ಅಲ್ಲ ಒಂದು ಜೀವಿ ಅಂತ. ಆದ್ರೆ ಏನು ಮಾಡೋದು ಹೇಳು ತಾಯಿ ಮನಸ್ಸೇ ಹಾಗೆ. ತನ್ನ ಮಗು ಮತ್ತೆ ತನ್ನ ಮಧ್ಯೆ ಯಾರೂ ಬಂದರೂ ಸಹಿಸಲಾರದು.”

ಈ ಮಾತನ್ನು ಕೇಳುತ್ತಿದ್ದ ಸ್ವಾತಿಗೆ ಅತ್ತೆ ಎಲ್ಲಿಗೆ ಈ ವಿಷಯ ತಗೊಂಡು ಹೋಗುತ್ತಾರೆ ಅನ್ನೋ ಒಂದು ಅನುಮಾನ ಬರಲು ಶುರುವಾಯಿತು. ಬೇಡ ಬೇಡವೆಂದರೂ ಕಣ್ಣಾಲಿಗಳು ತುಂಬಿಕೊಂಡವು “ನಾನು ಎಷ್ಟೆಂದರೂ ಹೊರಗಿನವಳೇ  ಎಂದೂ ಇವರಲ್ಲಿ ಒಬ್ಬಳಾಗಲಾರೆ” ಅನ್ನುವ ಭಾವ ಕಾಡಲು ತೊಡಗಿತು.

“ಆದರೆ ಸ್ವಾತಿ ಅವನ ಮದುವೆ ಬಗ್ಗೆ ಯೋಚಿಸಿದ್ದೆನೆ ಹೊರತು ಅವನ ಸಂಸಾರದ ಬಗ್ಗೆ ನಾನು ತಯಾರೀನೆ ಮಾಡಿಕೊಂಡಿರಲಿಲ್ಲ. ಅವನಿಗೆ ಹೆಂಡತಿನಾ ತರಬೇಕು ಅಂತ ಆಸೆ ಪಟ್ಟೆನೆ ಹೊರತು ಅವಳು ನನ್ನ ಸೊಸೆಯಾಗುತ್ತಾಳೆ ಅಂತ ಗಮನಿಸಿರಲೇ ಇಲ್ಲ. ನಿಮ್ಮ ಮದುವೆಯಾಗಿ ನೀನು ಮನೆಗೆ ಬಂದ ಮೇಲೆ ನನಗೆ ಅನಿಸಿದ್ದು, ನೀನು ಅತಿಥಿಯಾಗಿ ಬಂದ ಸದಸ್ಯೆ ಎಂದು. ನನ್ನ ಮನೆ, ನನ್ನ ಸಂಸಾರ, ನನ್ನ ಜಾಗ, ನನ್ನ ಮಗ ಎಲ್ಲದರಲ್ಲೂ ನಿನಗೂ ಪಾಲಿದೆ ಅಂತ. ಹತ್ತಾರೂ ವರ್ಷ ಒಬ್ಬಳೇ ಈ ಮನೆ ಕಟ್ಟಿ ಬೆಳೆಸಿದ ನಾನು ಆ ಸಾಮ್ರಾಜ್ಯವನ್ನು ನಿನ್ನ ಕೈಯಿಗೆ ಹಂಚಿಕೊಳ್ಳಬೇಕು..  ಮುಂದೆ ನಿನಗೆ ಒಪ್ಪಿಸಬೇಕು ಎಂದು ಅರಿವಾದಾಗ ಅದನ್ನು ಹೇಗೆ ನಿಭಾಯಿಸುವುದು ಗೊತ್ತಾಗಲಿಲ್ಲ ನನಗೆ.   ನಮ್ಮದು ಅನ್ನುವ ಹಕ್ಕು ಎಷ್ಟು ಮುಖ್ಯ ಅಲ್ಲವಾ ನಮಗೆ. ನನ್ನ ಅಸ್ಥಿತ್ವ ಈ ಮನೆ, ಈ ಸಂಸಾರ. ಇದು ಇಲ್ಲದೆ ನಾನು ಯಾರು ಅಂತಾನೇ ನನಗೆ ಗೊತ್ತಿಲ್ಲಾ.”

ಸ್ವಾತಿಗೆ ಅತ್ತೆಯ ಮಾತು ಚುಚ್ಚುತ್ತಿದ್ದರೂ, ಅವರ ನೋವು ಅರಿವಾಗುತ್ತಾ ಇತ್ತು. ಒಂದು ಆಟಿಕೆಯನ್ನು ಹಂಚಿಕೊಳ್ಳಲು ಹಿಂದೆ ಮುಂದೆ ಯೋಚಿಸುವ ನಾವು ಒಂದು ಜೀವನವನ್ನು ಹಂಚಿಕೋ ಎಂದಾಗ ಎಷ್ಟು ದಿಗಿಲಾಗಬಹುದು ಎನ್ನುವ ಅರಿವು ಅವಳಿಗೂ ಆಗುತ್ತಿತ್ತು. ಆದರೆ ಹೇಗೆ ಸಾಂತ್ವನ ಹೇಳುವುದು, ಅದು ಅಲ್ಲದೇ ಪೂರ್ತಿ ಮಾತು ಕೇಳಿದ ಮೇಲೆ ಮಾತನಾಡು ಎಂದು ಮೊದಲೇ ಹೇಳಿದ್ದರು..  ಮಾತು ಮುಗಿಯಲಿ ಎಂದು ಗಟ್ಟಿ ಮನಸ್ಸು ಮಾಡಿದಳು

“ನಾವು ಮಾಡಿದ ಮೊದಲ ತಪ್ಪು ನಾನು ನಿನ್ನಮ್ಮನ ಸ್ಥಾನ ತುಂಬುತ್ತೀನಿ ಹಾಗೂ ನೀನು ನನ್ನ ಮಗಳಾಗುತ್ತೀಯಾ ಎಂದು ಭಾವಿಸಿದ್ದು. ನಾನು ನಿನ್ನಮ್ಮ ಅಲ್ಲ. ನಾನು ವಿಶ್ವನ ಅಮ್ಮ. ನೀನು ನನ್ನ ಮಗಳಲ್ಲಾ, ನೀನು ವಿಶ್ವನ ಹೆಂಡತಿ. ಈ ಸಂಬಂಧ ನಾವು ಮರೆಯಬಾರದಿತ್ತು”

ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುವಷ್ಟು ಶಕ್ತಿಯಿರಲಿಲ್ಲ ಸ್ವಾತಿಯಲ್ಲಿ. ಒಂದು ಸೋತ ಭಾವ ನೆಲೆಸಿತ್ತು ಅವಳ ಮನದಲ್ಲಿ. ತನ್ನ ಸಂಸಾರವನ್ನು ಎಂದು ಒಡೆಯಬಾರದು, ಮಗನನ್ನು ತಂದೆ ತಾಯಿಯಿಂದ ದೂರ ಮಾಡಬಾರದು ಎಂದು ತನಗೆ ಕೊಟ್ಟುಕೊಂಡ ಭಾಷೆ ಇಂದೇಕೋ ನಿಭಾಯಿಸಲಾರೆ ಅನಿಸತೊಡಗಿತು.

ಸ್ವಾತಿ ಕಡೆ ತಿರುಗಿದ ಕಮಲಮ್ಮನ ಕಣ್ಣಲ್ಲಿ ನೀರಿರಲಿಲ್ಲ, ಅದೇನೊ ನೆಲೆ ಸಿಕ್ಕಿದ ಅವರ ಮುಖ ಭಾವ ಶಾಂತವಾಗಿತ್ತು.

ಸ್ವಾತಿಯ ಕೈ ಹಿಡಿದುಕೊಂಡು ಕಮಲಮ್ಮ ಹೇಳಿದರು “ನಾವಿಬ್ಬರು ದೊಡ್ಡ ದೊಡ್ಡ ಸಂಬಂಧದ ಭಾರದಲ್ಲಿ ಸುಸ್ತಾಗಿದ್ದೀವಿ ಸ್ವಾತಿ, ಮೊದಲು ಅದರಿಂದ ಮುಕ್ತವಾಗೋಣ. ನಾನು ನಿನಗೆ ಅಮ್ಮನಾಗುವ ಮೊದಲು, ನೀನು ನನ್ನ ಮಗಳಾಗುವ ಮೊದಲು ಒಬ್ಬರನೊಬ್ಬರು ಸ್ನೇಹಿತರಂತೆ ಭಾವಿಸೋಣ. ಹೇಗೆ ಒಂದು ಸ್ನೇಹ ಬೆಳೆದು ಹೆಮ್ಮರವಾಗಿ ತಂಪು ನೀಡುತ್ತೋ ಹಾಗೆ ಒಬ್ಬರನೊಬ್ಬರು ಅರಿತು, ಬೆರೆತು ನಂತರ ಅತ್ತೆ-ಸೊಸೆ, ಅಮ್ಮ-ಮಗಳು ಅನ್ನೋ ಬಿರುದನ್ನು ಪ್ರಯತ್ನಿಸೋಣ. ಇಲ್ಲವೇ ಅದಕ್ಕಿಂತ ಸ್ನೇಹದಲ್ಲೇ ಸುಖವಿದೆ ಅನ್ನಿಸಿದರೆ ಸ್ನೇಹಿತರಾಗಿಯೇ ಇರೋಣ. ನೀನು ನನ್ನ ಸೊಸೆಯಾದ ಮಾತ್ರಕ್ಕೆ ನಾನು ನಿನ್ನ ಅತ್ತೆಯಾದ ಮಾತ್ರಕ್ಕೆ ನಮ್ಮ ಮಧ್ಯೇ ಸ್ನೇಹ ಇರಬಾರದು ಅಂತಿಲ್ಲವಲ್ಲ. ಯಾವ ಮಗನ ಸುಖ ಸಂತೋಷಕ್ಕೆ ಅಂತ ನಿನ್ನ ಕರೆ ತಂದೇನೋ, ಯಾರನ್ನು ನಂಬಿ ನೀನು ಎಲ್ಲಾ ಬಿಟ್ಟೂ ಈ ಮನೆಗೆ ಬಂದೆಯೋ ಅವನನ್ನು ನಾವು ದೂರ ಮಾಡೋದು ಬೇಡ ಅಲ್ವಾ, ನೀನು ನನಗೆ ತುಂಬಾ ಇಷ್ಟ ಸ್ವಾತಿ, ನಾನು ನಿನ್ನ ಆರಿಸಿದ್ದೇ ನಿನ್ನ ನಗು ನಿನ್ನ ವಿನಯತೆ ನೋಡಿ,  ಅದನ್ನು ನಾನು ಹೊಸುಕುತಿದ್ದೀನಿ ಅನ್ನಿಸುತ್ತಾ ಇದೆ. ಪ್ಲೀಸ್ ನನ್ನ ಗೆಳತಿಯಾಗುತ್ತೀಯ, ನನಗೆ ನಾನು ನೋಡಿದ ಸ್ವಾತಿ ಮತ್ತೆ ಬೇಕು.”

ಮುಗೀತು ತನ್ನ ಸಂಸಾರ ಅಂತ ರೋಧಿಸುತ್ತಿದ್ದ ಮನಸ್ಸಿಗೆ ಸತ್ತವರು ಎದ್ದು ಬಂದಾಗ ಆಗುವಷ್ಟು ಆಶ್ಚರ್ಯವಾಗಿತ್ತು ಸ್ವಾತಿಗೆ. ಬಾಯಿ ಬಿಟ್ಟರೂ ಮಾತೆ ಹೊರಡದಿದ್ದಾಗ, ಸುಮ್ಮನೆ...  ಅತ್ತೆ .. ಅಲ್ಲ ಗೆಳತಿಯನ್ನು ಅಪ್ಪಿಕೊಂಡು ಅತ್ತುಬಿಟ್ಟಳು ಸ್ವಾತಿ.


ವಿಶ್ವ ಮನೆಗೆ ಬಂದಾಗ ಎದುರಿಗೆ ನಗು ಮೊಗದ ಹೆಂಡತಿ ಕಾಣಲಿಲ್ಲ, ಅಡುಗೆ ಮನೆಯಲ್ಲಿ ಸದ್ದಿಲ್ಲ. ಯಾಕೋ ಯುದ್ಧ ಮುಗಿದ ಹಾಗೆ ಇಲ್ಲ ಅಂತ ನೋಡಿದರೆ, ಸೋಫಾದ ಮೇಲೆ ಅಪ್ಪ ಕೂಡಾ ಇಲ್ಲ. ಅರೇ  ಎಲ್ಲಿ ಹೋದರು ಎಲ್ಲಾರು ಅಂತ ಯೋಚಿಸುತ್ತಿರುವಾಗ, ಮೇಲಿನ ಟೆರೆಸ್ ಗಾರ್ಡನ್ನಿನ್ನಿಂದ ನಗುವಿನ ಸದ್ದು. ಶೂ ಬಿಚ್ಚಿ ಸದ್ದಾಗದಂತೆ ಮೇಲೆ ಹತ್ತಿ ಹೋದ ವಿಶ್ವನ ಕಣ್ಣು ನಂಬಲಾರದ ದೃಶ್ಯ ಎದುರಾಯಿತು. ಗಾರ್ಡನ್ನಿನ್ನಲ್ಲಿ ಅತ್ತೆ, ಸೊಸೆ, ಮಾವ ಕೂತು ಹರಟುತ್ತಿದ್ದರು.  ಅಪ್ಪ ಅಮ್ಮ ಇಬ್ಬರೂ ವಿಶ್ವನ ಬಾಲ್ಯದ ಕಥೆಗಳನ್ನು ಹೇಳುತ್ತಿದ್ದರೇ ಸ್ವಾತಿಯ ಮೊಗದಲ್ಲಿ ಬೆಳದಿಂಗಳಂತಹ ನಗು. ಇವನು ನಿಂತಿದ್ದನ್ನು ಗಮನಿಸಿದ ಅಪ್ಪನ ಹತ್ತಿರ “ಏನಿದು ಆಶ್ಚರ್ಯ” ಎನ್ನುವ ಪ್ರಶ್ನೆ ಕೇಳಿದ ವಿಶ್ವನ ಮುಖಭಾವಕ್ಕೆ “ಈಗ ಎಲ್ಲಾ ಸರಿಯಾಗಿದೆ” ಎಂದು ಉತ್ತರಿಸಿತು ಅಪ್ಪನ ಕಣ್ಣುಗಳು.ಕಾಮೆಂಟ್‌ಗಳು

 1. ನಿಮ್ಮಲ್ಲಿನ ಅದ್ಭುತ ಕತೆಗಾರ್ತಿ ಮತ್ತೆ ಹೊರಬಂದಿದ್ದಾರೆ. ಸಮಸ್ಯೆಗಳು ಬಂದಾಗ ಅವಕ್ಕೆ ಬೆನ್ನು ಹಾಕಿ ಓಡಿ ಹೋಗುವ ಬದಲು.. ಅದರ ಬೆನ್ನು ತಟ್ಟಿ ಬಾಗಿಸುವುದು ಜಾಣತನ.. ಇಡಿ ಲೇಖನದಲ್ಲಿ ಗಮನ ಸೆಳೆಯುವುದು ಅಪ್ಪ ಮತ್ತು ಮಗ ಅತ್ತೆ ಸೊಸೆಯರ ಕಾದಾಟದಲ್ಲಿ ಬಳಲಿರುತ್ತಾರೆ.. ಆದರೆ ಅವರಿಬ್ಬರೂ ಈ ಸಮಸ್ಯೆಯನ್ನು ಬಗೆಹರಿಸಲು ಹೊಗುವುದನ್ನು ಮಾಡಿಸದೆ ಆ ಸಮಸ್ಯೆಗಳೇ ಜೊತೆಯಲ್ಲಿ ಕೂತು ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಮೂಡಿ ಬಂದಿರುವುದು ಅತ್ಯುತ್ತಮವಾಗಿ ಮೂಡಿ ಬಂದಿದೆ.

  ಅತ್ತೆ ಸೊಸೆಯರು ತಮ್ಮ ಅಹಂ ಅಥವಾ ಕಳೆದುಕೊಳ್ಳುತ್ತೀನಿ ಎನ್ನುವ ಭಾವವನ್ನು ಬದಿಗಿಟ್ಟು ಇರುವುದನ್ನು ಕಳೆದುಕೊಳ್ಳದೆ ಬೆಳೆಸುತ್ತೀನಿ ಎನ್ನುವ ನಿರ್ಧಾರಕ್ಕೆ ಬಂದಿರುವುದು ಅದ್ಭುತ ಎನ್ನಿಸುತ್ತದೆ.

  ಸಾಮಾನ್ಯ ಸಮಸ್ಯೆ ಎಂದು ಬಂದಾಗ ಸಿಗುವ ಅಥವಾ ಹೇಳುವ ಉಪಾಯ ಉತ್ತರ ಹೊರಗಡೆ ಹುಡುಕುವುದು.. ಆದರೆ ಇಲ್ಲೇ ಅದೇ ಪರಿಧಿಯೊಳಗೆ ನಿಧಾನವಾಗಿ ಸಮಸ್ಯೆಯ ನೂಲನ್ನು ಬಿಡಿಸಿ ಹಾಕುವುದು ಇಷ್ಟವಾಗುತ್ತದೆ.

  ಸೂಪರ್ ನಿವಿ.. ನಿವಿ ಸ್ಪೆಷಲ್ ಬಂದೆ ಬಿಟ್ಟಿತು.

  ಅತ್ಯುತ್ತಮ ಸಾಲುಗಳು "ಮುಗೀತು ತನ್ನ ಸಂಸಾರ ಅಂತ ರೋಧಿಸುತ್ತಿದ್ದ ಮನಸ್ಸಿಗೆ ಸತ್ತವರು ಎದ್ದು ಬಂದಾಗ ಆಗುವಷ್ಟು ಆಶ್ಚರ್ಯವಾಗಿತ್ತು"

  ಪ್ರತ್ಯುತ್ತರಅಳಿಸಿ
 2. ಎಲ್ಲ ಮುಗಿಯಿತು ಎನ್ನುವುದರ ಬದಲು ಇರುವುದನ್ನೇ ಸರಿಪಡಿಸಿಕೊಳ್ಳುವ ಜಾಣ್ಮೆಯತ್ತ ಮುನ್ನಡಸಿವ ಕಥನ.

  ಮನದಾಳಕಿಳಿಯುವ ಸರಳ ಶೈಲಿ.

  ಪ್ರತ್ಯುತ್ತರಅಳಿಸಿ
 3. Nice one...if every mother in law& daughter in law understands this ....every house will be an heaven

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು