ಮುಗಿದ ಮಾತು.....

ಯಾವುದೊ ಕಥೆಯ ಕೊನೆಯ ಸಾಲಿನಂತೆ “ಇಂದಿಗೆ ಮಾತು ಮುಗಿದು ಒಂದು ವರ್ಷವಾಯಿತು” ಎಂದು ಉದ್ಗರಿಸಿದ ಸುಹಾಸನ ಧ್ವನಿಯಲ್ಲಿ ಒಂದು ದುಃಖದ ಎಳೆ. 

ಅವನೊಂದಿಗೆ ಸೂರ್ಯ ಮುಳುಗುವುದನ್ನು ನೋಡುತ್ತಿದ್ದ ಪ್ರಜ್ವಲ್ ತಕ್ಷಣ ಕೇಳಿದ “ಮಾತು ಮುಗಿದು?? ಮಾತು ನಿಂತಿತ್ತು ಅಂತ ನನ್ನ ಅನಿಸಿಕೆ”  ಏನು ಉತ್ತರಿಸದ ಸುಹಾಸನನ್ನು ಮತ್ತೆ ಪ್ರಜ್ವಲ್ ಪ್ರಶ್ನಿಸಿದ “ಅಂದ ಹಾಗೆ ಮಾತು ಶುರುವಾಗಿದ್ದು ಹೇಗೆ??”

ಸುಹಾಸನ ಮೊಗದಲ್ಲಿ ಪುಟ್ಟ ನಗು, ಕಣ್ಣಲ್ಲಿ ಹಳೆ ನೆನಪಿನ ಛಾಯೆ. ಸಣ್ಣ ನಿಶಬ್ದದ ನಂತರ ಹೇಳಿದ “ಶುರು?? ಶುರು ನೆನಪಿಲ್ಲ, ಅವಳ ಮಾತು ಮಾತ್ರ ನೆನಪಿನಲ್ಲಿದೆ. ಎಲ್ಲಾದಕ್ಕೂ ಅವಳಲ್ಲಿ ಒಂದು ಅಭಿಪ್ರಾಯವಿರುತ್ತಿತ್ತು, ಎಲ್ಲವನ್ನು ವಿವರಿಸಬೇಕು. ಮತ್ತೆ ಬೋರ್ ಹೊಡೆಸುವಂತೆ ಪಾಠ ಮಾಡುವುದಲ್ಲಾ, ಆದರೆ ಮಾತಿನ ರಭಸ ಅಷ್ಟೇ ಜೋರು. ನಿಂಗೊತ್ತಾ ಅವಳು ಮಾತಾಡ್ತಾ ಇದ್ದರೆ ಕೇಳ್ತಾ ಇರೋಣ ಅನ್ಸುತ್ತೆ, ಸ್ವಲ್ಪ ಹೊತ್ತಿನ ನಂತರ ಅವಳೇ ಅಷ್ಟು ಮಾತಾಡಿದಕ್ಕೆ ಮುಜುಗರಪಡುತ್ತಿದ್ದಳು. ಮನಸ್ಸು ಗೆದ್ದುಬಿಟ್ಟಿದ್ದಳು ಕಣೊ....”

ಸುಹಾಸನ ಮಾತನ್ನು ನಗುವಿನಿಂದಲೇ ಕೇಳುತ್ತಿದ್ದ ಪ್ರಜ್ವಲ್ ಕೇಳಿದ “ಮತ್ತೆ ನೀನು ಇಷ್ಟು ಮಾತಾಡುವುದನ್ನು ಕಲಿತಿದ್ದು ಯಾವಾಗ ಅಂತ?”

ಪ್ರಜ್ವಲನ ಮಾತು ಕೇಳಿದ ಸುಹಾಸ ಜೋರಾಗಿ ನಗಲು ಶುರು ಮಾಡಿದ.

ಅವನ ನಗುವಿನ ಮಧ್ಯೆ ಪ್ರಜ್ವಲ್ ಪ್ರಶ್ನಿಸಿದ ಪ್ರೀತಿ ಗೀತಿ???”

ಸುಹಾಸ ತಕ್ಷಣವೇ ಹೇಳಿದ “ಹಾಗೇನೂ ಇರಲಿಲ್ಲ... ಆದರೆ ಅವಳೊಂದಿಗೆ ಮಾತಾಡೋಕೆ ಕಾಯ್ತಾ ಇರ್ತಿದಿದ್ದೆ... ಅದೇನೊ ಮೋಡಿ ಅವಳ ಮಾತಲ್ಲಿ.”

ಸ್ನೇಹಿತನನ್ನು ಮನೆಗೆ ಕಳಿಸಿದ ಮೇಲೆ ಹಾಸಿಗೆ ಮೇಲೆ ಬಿದ್ದುಕೊಂಡ ಸುಹಾಸನ ಮನದಲ್ಲಿ ಬರಿ ಸಹನಾಳ ಯೋಚನೆಗಳೆ ತುಂಬಿತ್ತು. ಅವಳ ಮಾತುಗಳು, ಪ್ರತಿಯೊಂದಕ್ಕೂ ಒಂದಕ್ಕೂ ಅವಳದೇ ಒಂದು ಅಭಿಪ್ರಾಯ... ಎಲ್ಲವನ್ನು ಸ್ವೀಕರಿಸುವ ಮತ್ತು ಮುಕ್ತವಾಗಿ ಮಾತಾಡುವ ದೊಡ್ಡ ಮನಸ್ಸು. 
ಯಾರೊ ಹೇಳಿದ ಮಾತಿಗೆ ಪ್ರಕ್ರಿಯಿಸಿದ ಇಬ್ಬರ ಮಧ್ಯೆ ನೆಡದ ಮಾತಿನ ಮಳೆ, ಎಲ್ಲವನ್ನು ತೋಯ್ದುಕೊಂಡು ಹೋದಂತಿತ್ತು. ಒಂದು ಕ್ಷಣ ಒಬ್ಬರನೊಬ್ಬರು ಮರೆತು ಜಗಳವಾಡಿದ್ದರು. ಚಂಡಮಾರುತ ನಿಂತ ಮೇಲೆ ನೆಲೆಸುವ ಘೋರ ಮೌನ ಈಗ ಅವರ ಮಧ್ಯ ನೆಲೆಸಿತ್ತು.... ಮೌನ ಮರುಭೂಮಿಯ ರೂಪದಲ್ಲಿ ಅವರ ಮಾತಿನ ಮಧ್ಯ ಬಂದಿತ್ತು.

ಸುಹಾಸ ಮನದಲ್ಲೆ ಹೇಳಿಕೊಂಡ  “ಯಾಕೊ ಇವತ್ತು ನಿನ್ನ ನೆನಪು ತುಂಬಾ ಬರ್ತಾ ಇದೆ ಕಣೆ.”

ಕತ್ತಲೆ ಪೂರ್ತಿಯಾಗಿ ಆವರಿಸಿಕೊಂಡರೂ ಲೈಟ್ ಹಾಕಲು ಮೇಲೆಳಲಿಲ್ಲ ಸುಹಾಸ. ಕೊನೆಗೂ ಒಂದು ನಿಟ್ಟುಸಿರಿನೊಂದಿಗೆ ಎದ್ದು ಲೈಟ್ ಹಚ್ಚಿದ. ಬಿಕೊ ಎನ್ನುತ್ತಿದ್ದ ಮನೆಯಲ್ಲಿ ಒಂಟಿ  ಮನಸ್ಸು ಚಡಪಡಿಸುತ್ತಿತ್ತು.

ಮನಸ್ಸನ್ನೂ ಬೇರೆಡೆಗೆ ತಿರುಗಿಸಲು ಟಿ.ವಿ ಹಚ್ಚಿದ, ಅದೇ ಮುಗಿಯದ ಬ್ರೇಕಿಂಗ್ ನ್ಯೂಸ್‍ಗಳ ಹಾವಳಿ ೧೦ ನಿಮಿಷ ಮಾತ್ರ ತಡೆದುಕೊಳ್ಳಲು ಸಾಧ್ಯವಾಯಿತು. ಟಿ.ವಿ ಆಫ್ ಮಾಡಿ ಫೇಸ್ ಬುಕ್ ಆನ್ ಮಾಡಿದ. ಮನಸ್ಸು ಎಲ್ಲೇ ಇದ್ದರೂ ಈ ಪ್ರಪಂಚದಲ್ಲಿ ಮುಳುಗೋದರಲ್ಲಿ ಅನುಮಾನವೇ ಇಲ್ಲ. ಆದರೆ ಸಹನ ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾಳೆ ಅನ್ನೋ ನೊಟಿಫಿಕೇಷನ್ ನೋಡಿದ ತಕ್ಷಣ ಅದೇ ಚಡಪಡಿಕೆ ಮತ್ತೊಮ್ಮೆ. ಲ್ಯಾಪ್‍ಟಾಪ್ ಮುಚ್ಚಿ ಸೋಫಾದ ಮೇಲೆ ಒರಗಿದ. ಕೊನೆಗೂ ಮನಸ್ಸು ತಡೆಯಲಿಲ್ಲ, ಫೋನ್ ಮಾಡೋಣ ಎಂದು ಮೊಬೈಲ್ ತೆಗೆದುಕೊಂಡ, ಆದರೆ ಹೊಟ್ಟೆಯಲ್ಲಿ ಆಡುತ್ತಿದ್ದ ಚಿಟ್ಟೆಗಳ ಕಲರವ ಧೈರ್ಯ ಕೊಡಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ವಾಟ್ಸ್ ಆಪ್‍ನಲ್ಲಿ ಅವಳಿಗೊಂದು ‘ಹೈ’ ಕಳಿಸಿದ.

ತಕ್ಷಣ ಉತ್ತರ ಬರದಿದ್ದನ್ನು ನೋಡಿ ಫೋನಿನಲ್ಲಿ ಇಂಟರ್‍ನೆಟ್ ಇದ್ಯಾ ಇಲ್ವಾ, ವಾಟ್ಸ್ ಆಪ್ ಹಾಳಾಗಿದ್ಯಾ ಎಂದೆಲ್ಲಾ ಚೆಕ್ ಮಾಡಿದ. ಐದು ನಿಮಿಷ ಹತ್ತಕ್ಕೆ ತಿರುಗಿತು, ಹತ್ತು ಹದಿನೈದಕ್ಕೆ....

“ಮಾತು ನಿಂತಿಲ್ಲ, ಮುಗಿದಿರೊದೆ ಸತ್ಯ” ಎಂದಿತು ಅವನ ಮನ.

ಫೋನ್ ಅಲ್ಲೆ ಬಿಟ್ಟು ಬಾಲ್ಕನಿಯಲ್ಲಿ ನಿಂತಿದ್ದವನನ್ನು ಟಿ-ಡಿಂಗ್’ ಎಂದು ಕರೆಯಿತು ವಾಟ್ಸ್ ಆಪ್... ಹೃದಯಕ್ಕೆ ವೇಗದ ಇತಿ ಮಿತಿ ತಿಳಿಯದಂತೆ ಹೊಡೆದುಕೊಳ್ಳುತ್ತಿತ್ತು, ಹೊಟ್ಟೆಯಲ್ಲಿನ ಚಿಟ್ಟೆ ತಾಂಡವವಾಡುತ್ತಿತ್ತು.... ಫೋನ್ ಆನ್ ಮಾಡಿ ನೋಡಿದ ಸುಹಾಸ

“ಅಬ್ಬಾ ಎಲ್ಲಿ ಮಾಯವಾಗಿದ್ಯೊ ಇಷ್ಟು ದಿನ ??”  

ಮಾತು ಮುಗಿದಿರಲಿಲ್ಲ.... ನಿಂತಿತ್ತು... ಇಂದು ಮತ್ತೆ ಹರಿಯಿತು........

ಕಾಮೆಂಟ್‌ಗಳು

 1. ಯಾಕೋ ಈ ಬರಹ ಓದುತ್ತಿದ್ದರೆ, ಈ ಆಧುನಿಕ ಪರಿಕರಗಳಿಲ್ಲದ ನಮ್ಮ ಕಾಲೇಜು ದಿನಗಳಲ್ಲಿ ಪ್ರೀತಿಗೆ ಬೀಳುತ್ತಿದ್ದ ನಮ್ಮ೦ತವರ ಕೈ ಹೇಗೆ ಕಟ್ಟಿ ಹಾಕುವಂತಿರುತ್ತಿತ್ತು ಎಂಬುದು ತಮ್ಮ ಅರಿವಿಗೂ ಈಗ ಬಂದಿದ್ದೀತು ಅಲ್ಲವೇ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅದು ಹೌದು, ಮನದ ಮಾತುನ್ನು ಎದುರಿಗೆ ಬಂದು ಹೇಳಲು ಸ್ವಲ್ಪ ಕಷ್ಟವಾಗುವುದು ... ಈಗಿನ ವ್ಯವಸ್ಥೆಯಲ್ಲಿ ಯಾರನ್ನಾದರು ಸಂಪರ್ಕಿಸುವುದು ಬಹಳ ಸುಲಭ..

   ಅಳಿಸಿ
 2. ಆತುರಕೆಟ್ಟರೆ ಆಂಜನೇಯನು ಸಹಾಯ ಮಾಡಲಾರ ಎಂಬ ಮಾತಿದೆ.. ಎಲ್ಲಾ ಸಮಸ್ಯೆಗಳನ್ನು ನಿರ್ಮಲವಾದ ಮನದಲ್ಲಿ ಇಳಿಯಲು ಬಿಟ್ಟರೆ ಉತ್ತರ ನಿಧಾನವಾಗಿ ಸ್ಪಷ್ಟವಾಗುತ್ತದೆ ಎನ್ನುತ್ತದೆ ಅನುಭವ ವಾಣಿ

  ಕಥಾನಾಯಕ ಹಟಾತ್ ದಿಕ್ಕೆಟ್ಟ ಮನಸ್ಸಿಗೆ ಒಳಪಟ್ಟಿದ್ದರು ನಿಧಾನವಾಗಿ ತಾಳ್ಮೆಯ ಜೊತೆಯಲ್ಲಿ ಹೆಜ್ಜೆ ಹಾಕಿ.. ಶಾಂತಿಗೆ ಮನ ಕೊಟ್ಟಾಗ ಸಮಸ್ಯೆಗಳು ಮಂಜಿನ ಹಾಗೆ ಕರಗುತ್ತದೆ.

  ಒಂದು ಮಾತಿಂದ ನಿಲ್ಲುವ ಅನುಬಂಧ ಅಣುವಿನಷ್ಟು ಬಂಧನದಲ್ಲಿರೋಲ್ಲ ಅನ್ನುವ ಮಾತು ಎಷ್ಟು ನಿಜ

  ಸೂಪರ್ ನಿವಿ ಚಿಕ್ಕ ಹಂದರವನ್ನು ದ್ರಾಕ್ಷಿಯ ಬಳ್ಳಿಯ ಹಾಗೆ ಹಬ್ಬಿಸಿರುವುದು ಇಷ್ಟವಾಗುತ್ತದೆ.. ನಿಮ್ಮ ಕಥಾ ಲೇಖಕಿಯ ಮನಕ್ಕೆ ಒಂದು ಹಾಟ್ಸ್ ಆಫ್.. ಸಾರೀ ವಾಟ್ಸ್ ಅಪ್ ಅರೆ ಅರೆ ಏನಾಗಿದೆ ಅದು ಹಾಟ್ಸ್ ಅಲ್ಲ.. ವಾಟ್ಸ್ ಅಪ್ ಅಲ್ಲ.. ಥಂಬ್ಸ್ ಅಪ್..

  ನಿವಿ ಸ್ಪೆಷಲ್ ಬಹಳ ದಿನಗಳಾದ ನಂತರ

  ಪ್ರತ್ಯುತ್ತರಅಳಿಸಿ
 3. ಆತುರಕೆಟ್ಟರೆ ಆಂಜನೇಯನು ಸಹಾಯ ಮಾಡಲಾರ ಎಂಬ ಮಾತಿದೆ.. ಎಲ್ಲಾ ಸಮಸ್ಯೆಗಳನ್ನು ನಿರ್ಮಲವಾದ ಮನದಲ್ಲಿ ಇಳಿಯಲು ಬಿಟ್ಟರೆ ಉತ್ತರ ನಿಧಾನವಾಗಿ ಸ್ಪಷ್ಟವಾಗುತ್ತದೆ ಎನ್ನುತ್ತದೆ ಅನುಭವ ವಾಣಿ

  ಕಥಾನಾಯಕ ಹಟಾತ್ ದಿಕ್ಕೆಟ್ಟ ಮನಸ್ಸಿಗೆ ಒಳಪಟ್ಟಿದ್ದರು ನಿಧಾನವಾಗಿ ತಾಳ್ಮೆಯ ಜೊತೆಯಲ್ಲಿ ಹೆಜ್ಜೆ ಹಾಕಿ.. ಶಾಂತಿಗೆ ಮನ ಕೊಟ್ಟಾಗ ಸಮಸ್ಯೆಗಳು ಮಂಜಿನ ಹಾಗೆ ಕರಗುತ್ತದೆ.

  ಒಂದು ಮಾತಿಂದ ನಿಲ್ಲುವ ಅನುಬಂಧ ಅಣುವಿನಷ್ಟು ಬಂಧನದಲ್ಲಿರೋಲ್ಲ ಅನ್ನುವ ಮಾತು ಎಷ್ಟು ನಿಜ

  ಸೂಪರ್ ನಿವಿ ಚಿಕ್ಕ ಹಂದರವನ್ನು ದ್ರಾಕ್ಷಿಯ ಬಳ್ಳಿಯ ಹಾಗೆ ಹಬ್ಬಿಸಿರುವುದು ಇಷ್ಟವಾಗುತ್ತದೆ.. ನಿಮ್ಮ ಕಥಾ ಲೇಖಕಿಯ ಮನಕ್ಕೆ ಒಂದು ಹಾಟ್ಸ್ ಆಫ್.. ಸಾರೀ ವಾಟ್ಸ್ ಅಪ್ ಅರೆ ಅರೆ ಏನಾಗಿದೆ ಅದು ಹಾಟ್ಸ್ ಅಲ್ಲ.. ವಾಟ್ಸ್ ಅಪ್ ಅಲ್ಲ.. ಥಂಬ್ಸ್ ಅಪ್..

  ನಿವಿ ಸ್ಪೆಷಲ್ ಬಹಳ ದಿನಗಳಾದ ನಂತರ

  ಪ್ರತ್ಯುತ್ತರಅಳಿಸಿ
 4. ಆ ಹಾ ಈ ಕಥೆಯ ಹೂರಣ ಚೆನ್ನಾಗಿದೆ. ಒಂದು ಸಣ್ಣ ಕಲ್ಪನೆಯ ಎಳೆಗೆ ಸುಂದರ ಪದಗಳ ಅಲಂಕಾರ ಮಾಡಿ , ಭಾವನೆಗಳ ಮೆರವಣಿಗೆ ಮಾಡಿದ್ದೀರಾ , ಚಂದಾ ಇದೆ ಇಷ್ಟಾ ಆಯ್ತು. ಸಹೋದರಿ ನಿವೇದಿತಾ ಜೈ ಹೊ

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು