ಹೊಸ ನೋಟ... ಹಳೆ ನೆನಪು


Google images
ಶ್ರೀನಿವಾಸನ ಕಣ್ಣಲ್ಲಿ ಒಂದು ಮಿಂಚು, ಸ್ಟೀರಿಯೊದಲ್ಲಿ ಬರ್ತಾ ಇದ್ದ ಡಾ.ರಾಜ್ ಹಾಡಿಗೆ ಸ್ಟೀರಿಂಗ್ ಮೇಲಿದ್ದ ಕೈಬೆರಳ ಕುಣಿತ. ಬಹಳ ದಿನಗಳಾದ ಮೇಲೆ ಕುಟುಂಬದೊಂದಿಗೆ ಹೊರ ಹೊರಟ ಸಂಭ್ರಮ, ಯಾರು ಏನು ಹೇಳಿದರೆ ಅವರಿಗೆ ಈ ಉತ್ಸಾಹ ತಣಿಯುತ್ತಿರಲಿಲ್ಲ. ಅವರಿದ್ದಿದ್ದೇ ಹೀಗೆ, ಎಲ್ಲಾದಕ್ಕೂ ಸೈ. ನಿಧಾನವಾಗಿ ಏನನ್ನೂ ಮಾಡುವ ಜಾಯಮಾನವಲ್ಲ ಆದರೆ ಯಾವುದನ್ನು ಯಾರನ್ನು ಅಲ್ಲೆಗೆಳೆಯುತ್ತಿರಲಿಲ್ಲ, ಮಾಡುವಾಗ ತಮ್ಮನ್ನು ಪೂರ್ತಿಯಾಗಿ ಕೊಡುತ್ತಿದ್ದರೆ, ಹಾಗೆಯೆ ಅದರ ನೆನಪುಗಳನ್ನೂ ಜೋಪಾನವಾಗಿಡುತ್ತಿದ್ದರು.

ಇಂದು ಬೆಳಗ್ಗಿನಿಂದಲು ಅವರ ಮನಸ್ಸು ಹೇಳುತ್ತಿತ್ತು ಏನೊ ವಿಶೇಷವಿದೆ ಈ ದಿನದ ಗಾಳಿಯಲ್ಲಿ ಅಂತ. ಬೆಂಗಳೂರಿಂದ ಹೊರಟ ಗಾಡಿ ಶಿವಮೊಗ್ಗದ ರಾಯರ ಮನೆಗೆ ತಲುಪಿದಾಗ ಆಗಲೆ ಮಧ್ಯಾಹ್ನವಾಗಿತ್ತು. ಪರಿಚಯದ ಮನೆಯಲ್ಲಿನ ಸಂಭ್ರಮಕ್ಕೆ ಭಾಗಿಯಾಗಲು ಇಡೀ ಕುಟುಂಬವೇ ಹೊರಟು ಬಂದಿತ್ತು. ಊಟ ಉಪಚಾರವಾದ ಮೇಲೆ ಜಗುಲಿಯಲ್ಲಿ ಖುರ್ಚಿ ಹಾಕಿ ಕುಳಿತರು ಶ್ರೀ ಮತ್ತು ಅವರ ಅಕ್ಕ ಶ್ರೀಮತಿ, ಹೊಟ್ಟೆ ತುಂಬಿತ್ತು, ಗಾಳಿ ಬೀಸಿತ್ತು, ಬಾಯಲ್ಲಿನ ಎಲೆ ಅಡಿಕೆ ತೊಗರು ಮಾತ್ರ ಉಳಿದಿತ್ತು, ಹರಟೆ ಕೊಚ್ಚುತ್ತಿದ್ದ ಅಕ್ಕ ತಮ್ಮ ಮಾತಿನಲ್ಲಿ ಒಂದು ಸಣ್ಣ ಮೌನ, ಹಾಗೆ ಕಣ್ಣ್ ಮುಚ್ಚಿದಂತಾಗುತ್ತಿತ್ತು ಅವರಕ್ಕನಿಗೆ, ಆಗ ಶ್ರೀನಿವಾಸನಿಗೆ ನೆನಪಾಯಿತು.

“ಅಕ್ಕ, ನಾವು ಸಣ್ಣವರಿದ್ದಾಗ, ಶಿವಮೊಗ್ಗದಲ್ಲಿ ಎಲ್ಲಿದ್ದಿದ್ದೂ ಅಂತ ಗೊತ್ತಾ?”

ಜಾರುತ್ತಿದ್ದ ಕಣ್ಣಾಲಿಗಳನ್ನು ತೆರೆದುಕೊಂಡು ಶ್ರೀಮತಿ ನೆನಪಿಸಿಕೊಳ್ಳಲು ಪ್ರಯತ್ನಿಸಿದರು.

“ಅದು ಏನೊ ತುಮಕೂರು ಅಂತ ಬರುತ್ತೆ ಕಣೋ... ಇರು ಸ್ವಲ್ಪ....ಹಮ್”

ಅಷ್ಟರಲ್ಲಿ ಇವರ ತಮ್ಮ ಶ್ರೀಪತಿ ಖುರ್ಚಿ ತಂದು ಕೂತರು..

“ಏನು ನೆನಪಿಸ್ಕೊಳ್ಳತ್ತಿದ್ದೀಯಾ ಅಕ್ಕ?”

“ಅದೇ ನಾವಿದ್ದ ಮನೆ ಬೀದಿ ......ಗಂಟಲಲ್ಲಿದೆ ಬಾಯಿಗೆ ಬರ್ತಾ ಇಲ್ಲ ಕಣೊ..... ಎಷ್ಟು ವರ್ಷವಾಯಿತು ಗೊತ್ತಾ ಅಲ್ಲಿದ್ದು ನಾವು?”

ಶ್ರೀನಿವಾಸ್ ಮುಗುಳ್ನಕ್ಕು ಹೇಳಿದರು

“ನಾನು ೬-೭ ವರ್ಷದವನಾಗಿದ್ದೆ... ಅಂದರೆ ಸುಮಾರು ೩೫-೩೬ ವರ್ಷಗಳಾಯಿತು........ ಆದರೆ ಅದರ ನೆನಪಿಗೆ ವಯಸ್ಸಾಗಿಲ್ಲ... ಇವತ್ತಿಗೂ ಆ ರಸ್ತೆ ತುದಿಯ ಅರಳಿಕಟ್ಟೆ ನೆನಪಾಗುತ್ತೆ, ಅಮ್ಮನ ಆ ನೀಲಿ ಬಣ್ಣದ ಸೀರೆ, ಅಪ್ಪ ದುಡ್ಡು ಕಳಿಸಿದ ತಕ್ಷಣ ಮನೆಗೆ ತರುತ್ತಿದ್ದ ಬ್ರೆಡ್ಡು, ಕಾಫಿ, ಸಕ್ಕರೆ ಮತ್ತು ಕನ್ನಡಿ..... ”

ಶ್ರೀಪತಿ ಎಚ್ಚೆತ್ತುಕೊಂಡು ಕೇಳಿದರು “ಕನ್ನಡಿ???? ಪ್ರತಿ ತಿಂಗಳು ಯಾಕೆ ಕನ್ನಡಿ”

ಶ್ರೀಮತಿ ಮುಸಿನಕ್ಕರು, ಶ್ರೀನಿವಾಸ್ ಜೋರಾಗೆ ನಕ್ಕು ಕೇಳಿದರು “ಓ ನಿಂಗೆ ಈ ಕಥೆನೆ ಗೊತ್ತಿಲ್ವಾ?... ಅದೇನೆಂದರೆ ಈಗಿನ ಹಾಗೆ ನಾವೆಲ್ಲ ಕನ್ನಡಿ ಗೊಡೆಗೆ ಹೊಡಿತ್ತಿರಲಿಲ್ಲ, ಕನ್ನಡಿ ಹಿಂದಿದ್ದ ಕಂಬಿನ ಕಿಟಕಿ ಸರಳಿಗೆ ಕಟ್ಟುತ್ತಿದ್ವಿ.... ಅಲ್ಲಿ ಕೋತಿಗಳ ಕಾಟ ಜಾಸ್ತಿ ಇತ್ತು ಅದಕ್ಕೆ ಪ್ರತಿ ತಿಂಗಳು ಹೊಸ ಕನ್ನಡಿ ತರಬೇಕಿತ್ತು... ಬಹಳ ವಿಚಿತ್ರವಾಗಿತ್ತು ನಮ್ಮ ಸಂಸಾರ... ಐಸ್ ಕ್ಯಾಂಡಿಲಿ ಹೊಟ್ಟೆ ತುಂಬಿಸಿಕೊಳ್ಳೋದು ನಿಂಗೆ ಬಹಳ ಇಷ್ಟವಾಗಿತ್ತು”

ಶ್ರೀನಿವಾಸ್ ಮತ್ತೆ ಶ್ರೀಮತಿ ಗತಕಾಲದ ದಿನಗಳಿಗೆ ವಾಪಸ್ ಹೋದರೆ ಶ್ರೀಪತಿ ಕನ್ನಡಿ ಬಗ್ಗೆ ಯೋಚಿಸಿ ಯೋಚಿಸಿ ನಗುತ್ತಿದ್ದರೆ.

ಶ್ರೀನಿವಾಸ್ ಪಟ್ಟನೆ ತಿರುಗಿ ಹೇಳಿದರು “ಅಕ್ಕ, ಪ್ಲೀಸ್ ಆ ಬೀದಿಗೆ ಒಮ್ಮೆ ಹೊಗೋಣ ಕಣೆ... ಅದು ನಮ್ಮಷ್ಟೆ ಬದಲಾಗಿದ್ಯಾ ಅಂತ ನೊಡೋಣ ಪ್ಲೀಸ್”

ಶ್ರೀಮತಿ ಮತ್ತೆ ಶ್ರೀಪತಿ ಇಬ್ಬರ ಮುಖದಲ್ಲೂ ಏನು ಹೇಳಬೇಕೊ ತಿಳಿಯದಂತಹ ಭಾವ. ಶ್ರೀಮತಿ ನಿಧಾನವಾಗಿ ಹೇಳಿದರು “ಬೇಡ ಕಣೋ, ಯಾಕೆ ಅಲ್ಲಿಗೆಲ್ಲಾ. ಸುಮ್ಮನೆ ಸಮಯ ವ್ಯರ್ಥ ಅಷ್ಟೆ”

ಶ್ರೀಪತಿ ಕೂಡ ಅವರನ್ನು ಬೆಂಬಲಿಸುತ್ತಾ ಹೇಳಿದರು “ಬೇಡ ಅಣ್ಣ, ಅಲ್ಲಿಗೆಲ್ಲಾ ಹೋದ್ರೆ ಸಮಯ ಹಿಡಿಯುತ್ತೆ, ಬೆಂಗ್ಳೂರಿಗೆ ಬೇಗ ಹೋಗಬೇಕು ..”

ಶ್ರೀನಿವಾಸ್ ಒಂದು ಕ್ಷಣ ಸುಮ್ಮನಿದ್ದು ಹೇಳಿದರು “ಹೇಗಿದ್ರೂ ನಾವು ಬಂದು ಮುಖ ತೋರಿಸಿ ಆಗಿದೆ, ಈಗ ಬೇರೇನು ಕೆಲ್ಸ ಇಲ್ಲ. ಈಗಲೆ ಹೊರಟರೆ ಅಲ್ಲಿ ಹೋಗಿ ಸರಿಯಾದ ಸಮಯಕ್ಕೆ ಬೆಂಗ್ಳೂರಿಗೂ ಹೊರಡಬಹುದು.”

ಅಕ್ಕ ತಮ್ಮ ಇಬ್ಬರು ಒಕ್ಕೊರಲಿನಿಂದ ಬೇಡವೆಂದಾಗ ಶ್ರೀನಿವಾಸ್ ಹಟ ಹಿಡಿದರು “ನಿಮಗೆ ಯಾಕೆ ಚಿಂತೆ, ಬೆಂಗ್ಳೂರಿಗೆ ನಾನು ನಿಮ್ಮನ್ನು ಸರಿಯಾದ ಸಮಯಕ್ಕೆ ತಲುಪಿಸ್ತೀನಿ. ಕಾರ್ ಓಡಿಸುವುದು ನಾನು ಅಲ್ವೆ.”

ಹೀಗೆ ಸುಮಾರು ಹೊತ್ತು ವಾದ ಮಾಡಿ ಅಂತು ಶ್ರೀನಿವಾಸ್ ಎಲ್ಲರನ್ನು ಒಪ್ಪಿಸಿ, ಹಳೆ ಮನೆಯ ಹಳೆ ನೆನಪನ್ನು ಹಸಿರಾಗಿಸಲು ಹೊರಟರು. ಹೊರಟ ಮೇಲೂ ಶ್ರೀಪತಿಯ ರಗಳೆ ತಪ್ಪಲಿಲ್ಲ. ಪ್ರತಿ ತಪ್ಪು ಬೀದಿಗೆ ಹೋದಾಗಲೂ “ಸಾಕು ಕಣೋ” ಅನ್ನೊ ವರಾತ. ಆದರೆ ಇದ್ಯಾವುದು ಶ್ರೀನಿವಾಸನ ಉತ್ಸಾಹವನ್ನು ಕಮ್ಮಿ ಮಾಡಲಿಲ್ಲ.

ಕೊನೆಗೂ ಸಿಕ್ಕಿತು ಅವರು ಹುಡುಕುತ್ತಿದ್ದ ಬೀದಿ, ಲೆಕ್ಕ ಮಾಡಿ ತಾವಿದ್ದ ಮನೆಯ ಮುಂದೆ ಕಾರ್ ನಿಲ್ಲಿಸಿ ಇಳಿದಾಗ ಕಂಡ ದೃಶ್ಯ ನೆನಪಿನಲ್ಲಿರುವುದಕ್ಕಿಂತ ಬಹಳ ಬದಲಾಗಿತ್ತು. ವಠಾರದ ಸಾಲು ಮನೆಗಳ ಬದಲು ಒಂದು ಭವ್ಯವಾದ ಬಂಗಲೆ, ಅಕ್ಕ ಪಕ್ಕ ಅಂಗಡಿಗಳು, ತಾರಸಿ ಮನೆಗಳು. ಶ್ರೀನಿವಾಸ ರಸ್ತೆಯ ತುದಿಗೆ ಕಣ್ಣು ಹಾಯಿಸಿದಾಗ ಕಂಡ ಅದೇ ಆಲದ ಮರ ಬದಲಾಗದನ್ನು ಕಂಡು ಮನ ಮುದಗೊಂಡಿತು. ಬಹಳ ಉತ್ಸಾಹದಿಂದ ಅಕ್ಕ ತಮ್ಮ ಇಬ್ಬರು ಪುಟ್ಟ ತಮ್ಮನೊಂದಿಗೆ ಬಾಲ್ಯದಲ್ಲಿ ಇಲ್ಲಿ ಕಳೆದ ದಿನಗಳ ಕಥೆಗಳನ್ನು ಮೆಲುಕು ಹಾಕುತ್ತಿದ್ದರು. ಐಸ್ ಕ್ಯಾಂಡಿಯ ಆಸೆ, ಕನ್ನಡಿಯ ನಗು, ತಣ್ಣನೆಯ ನೆಲದ ತಲೆನೋವು, ಮರುಕಗೊಂಡು ಊಟ ಕಳುಹಿಸುತ್ತಿದ್ದ ಮುದಿ ದಂಪತಿಗಳು, ತಿಂಗಳ ಮೊದಲ ಅಪ್ಪನ ಪತ್ರ, ಪತ್ರದೊಂದಿಗೆ ಬರುತ್ತಿದ್ದ ಸಂಬಳ, ಸಂಬಳ ತರುತ್ತಿದ್ದ ೩ ದಿನ ಸುಖ, ಆ ಮೂರು ದಿನದ ಸುಪ್ಪತ್ತಿಗೆ ಉಳಿದ ೨೭ದಿನಗಳ ಹಸಿವನ್ನು ನೀಗಿಸುತ್ತಿದ್ದ ಕಾಲ.

“ ನೆನಪುಗಳ ಮಾತು ಮಧುರ...ಮೌನಗಳ ಹಾಡು ಮಧುರ” ಸಾಲುಗಳಂತೆ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ, ಅಂದು ಕೂತ ಕಲ್ಲುಬೆಂಚಿನ ಮೇಲೆ ಕೂತು ಸಂಭ್ರಮಿಸುವುದರಲ್ಲಿ ಸಮಯ ಉರುಳಿದ್ದೆ ತಿಳಿಯಲಿಲ್ಲ. ಕಾರಿನಲ್ಲಿ ಕೂತ ಬೆಂಗಳೂರಿಗೆ ದಾರಿ ಹಿಡಿದರು, ಆಲದ ಮರ ಮೂಕ ಪ್ರೇಕ್ಷನ ರೂಪದಲ್ಲಿ ಇವರನ್ನು ಬೀಳ್ಕೊಟ್ಟಿತು. ಸುಮಾರು ಹೊತ್ತಾದ ಮೇಲೆ ಅವರಿಬ್ಬರಿಗೂ ಗೊತ್ತಾಗಿದ್ದು, ಇಲ್ಲಿ ಬರುವ ತನಕ ವಟ ವಟ ಅಂತ ತಗಾದೆ ತೆಗೆದ ತಮ್ಮ ಇಲ್ಲಿ ಬಂದ ಮೇಲೆ ಧ್ವನಿಯ ಹೊರಡಿಸಲಿಲ್ಲವೆಂದು.

ಶ್ರೀನಿವಾಸ್ ನಿಧಾನವಾಗಿ ಕೇಳಿದರು “ಏನಾಯಿತೊ, ಯಾಕೊ ಗುಮ್ಮನ ಹಾಗಿದ್ದೀಯಾ. ಚಿಂತಿಸಬೇಡ ಕಣಯ್ಯಾ, ಬೇಗ ಡ್ರೈವ್ ಮಾಡ್ತೀನಿ.”

ಉತ್ತರಕೊಡದೆ ಮುಳುಗುತ್ತಿದ್ದ ಸೂರ್ಯನನ್ನು ಕನ್ನಡಿಯಲ್ಲಿ ನೋಡುತ್ತಿದ್ದ ತಮ್ಮನ ಭಾವವೇ ಅರ್ಥವಾಗಲಿಲ್ಲ ಶ್ರೀನಿವಾಸನಿಗೆ. ಆದರು ಮತ್ತೊಬ್ಬರನ್ನು ತುಂಬಾ ಕೆದುಕುವ ಸ್ವಭಾವಲ್ಲದಿದ್ದರಿಂದ ಮತ್ತೆ ಪ್ರಶ್ನಿಸಲಿಲ್ಲ.  ರಾತ್ರಿ ಅಕ್ಕನನ್ನು ಬಿಟ್ಟು ತನ್ನ ಮನೆಯಲ್ಲಿ ಹೆಂಡತಿಯನ್ನು ಇಳಿಸಲು ನಿಂತಾಗ ಶ್ರೀಪತಿ ಕೇಳಿದ್ದ “ನಾನಿವತ್ತು ನಿಮ್ಮನೆಲೇ ಉಳಿಲಾ?”
ಶ್ರೀನಿವಾಸ ಏನು ಎಂದು ಕೇಳದೆ ಹೂಂ ಎಂದಿದ್ದ. ಆದರೆ ತಮ್ಮನ ವ್ಯವಹಾರ ವಿಚಿತ್ರವೆನಿಸಿತ್ತು. ಬೆಳಗಾಗಲು ಇನ್ನು ಕೆಲವೇ ಗಂಟೆಗಳಿದ್ದವು, ಅಷ್ಟರಲ್ಲಿ ಒಂದು ಸಣ್ಣ ನಿದ್ದೆ ಮಾಡಿಬಿಡೋಣವೆಂದು ಹೊರಟವನು ತಡೆದು ಹಾಲಿನಲ್ಲಿ ತಮ್ಮನ ಹಾಸಿಗೆ ಪಕ್ಕದಲ್ಲೆ ಹಾಸಿಗೆ ಬಿಚ್ಚಿಕೊಂಡ. ಸುಮಾರು ಹೊತ್ತಾದ ಮೇಲೆ ಶ್ರೀಪತಿ ಮೆಲ್ಲನಂದ “ನಿನ್ನ ಹುಚ್ಚುಗಳು ಕೆಲವು ಸಾರಿ ಹೀಗೆ ನಿಶಬ್ಧವಾಗಿಸುತ್ತೆ ಕಣೋ..... ಹಮ್ .... ಏಷ್ಟು ದೂರ ಬಂದಿದ್ದೀವಿ ಅಲ್ವಾ?” ಅವನು ಉತ್ತರ ಬಯಸಿರಲಿಲ್ಲ, ಶ್ರೀನಿವಾಸನು ಉತ್ತರ ಕೊಡಲಿಲ್ಲ. ಆದರೆ ನಿದ್ರೆಯ ಬದಲಿಗೆ ಕಣ್ಣಂಚಿನಲ್ಲಿ ಒಂದು ನೆನಪಿನ ಹನಿ. ಅಂದು ಕಾಡುತ್ತಿದ್ದ ಹಸಿವಿನ ಬಿಸಿ ತಾಕಿದಂತಾಯಿತು, ಆ ಕಡೆ ಈ ಕಡೆ ಹೊರಳಾಡಿ, ಕೊನೆಗೆ ಮನೆ ಬಾಗಿಲ ಮೆಟ್ಟಿಲ ಮೇಲೆ ಸೂರ್ಯೋದಯವನ್ನು ಕಾಯುತ್ತ ಕುಳಿತ. ಮನದಲ್ಲಿ ಯೋಚನೆಗಳ ರೈಲು ಹತ್ತಿದ “ಏಷ್ಟು ದೂರ ಬಂದಿದ್ದೀವಿ, ಇನ್ನು ದೂರ ಹೋಗುವುದಿದೆ..... ಹುಚ್ಚುಗಳ ಬೆನ್ನೇರಿದ್ದು ಸಾಕು ಇನ್ನು ಜೀವನದ ಬೆನ್ನೇರಬೇಕು. ಅಂದು ಅಪ್ಪ ಅಮ್ಮ ಪಟ್ಟ ಕಷ್ಟವನ್ನು ಸಾರ್ಥವಾಗಿಸಬೇಕು”. ದಿಗಂತದಾಚೆ ಹುಟ್ಟುತ್ತಿದ್ದ ಸೂರ್ಯನೊಂದಿಗೆ ಹೊಸ ಹೊಳಪು ಮೂಡಿತು ಶ್ರೀನಿವಾಸ ಕಣ್ಣಲ್ಲಿ.  

ಈ ಕಥೆಗೆ ಸ್ಪುರ್ಥಿಯಾದ ಶ್ರೀಕಾಂತ್ ಮಂಜುನಾಥಗೆ ಧನ್ಯವಾದ. ಅವರ ನೆನಪನ್ನು ಓದಲು ಇಲ್ಲಿಗೆ ಹೋಗಿ........
http://lakshavarsha.blogspot.in/2014/09/vs.html

ಕಾಮೆಂಟ್‌ಗಳು

  1. ಕೆಲ ನೆನಪುಗಳು ಏನೇ ಮಾಡಿದರು ಸಾಧಿಸಿದರು ಇಲ್ಲದಿದ್ದರೂ ನಮ್ಮ ನೆರಳಾಗಿ ಹಿಂದೆ ಬರುತ್ತವೆ.. ಸಿಹಿ ಸಿಹಿ ಯಾದ ನೆನಪುಗಳನ್ನು ಒಣಗಿಸಿ ಗರಿ ಗರಿ ಎನ್ನುವಂತೆ ಇಸ್ತ್ರಿ ಮಾಡಿ ಫಳ ಫಳ ಎನ್ನುವಂತೆ ಮಾಡಿದೆ ನಿಮ್ಮ ಬರಹ..

    ಒಂದು ಝರಿಯಾದರೆ ಇನ್ನೊಂದು ಕಡಲು.. ಒಂದು ಬಿಂಬವಾದರೆ ಇನ್ನೊಂದು ಪ್ರತಿಬಿಂಬ..

    ಅದ್ಭುತ ಕತೆಗಾರ್ತಿಯಾಗಿದ್ದೂ.. ನನ್ನ ಬರಹದಿಂದ ಸ್ಫೂರ್ತಿ ಸಿಕ್ಕಿ ಇನ್ನೊಂದು ಸುಂದರ ಲೇಖನ ಬರೆದಿದ್ದೇನೆ ಎನ್ನುವ ಅವರ ಹೃದಯವಂತಿಕೆಗೆ ನಾ ಧನ್ಯ.. ಸೂಪರ್ ನೀವಿ ಬಹಳ ಇಷ್ಟವಾಯಿತು ನೀವು ಕೊಟ್ಟ ಇನ್ನೊಂದು ರೂಪ ಮತ್ತು ತಿರುವು ಸೂಪರ್ ಸೂಪರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು