ನಿರ್ಧಾರ
Image courtesy : Google images |
ಕಾಡಿಗೆ ಹಚ್ಚಿದ ಕಣ್ಣುಗಳನ್ನು
ಪಟಪಟನೆ ಆಡಿಸಿದಳು ಸಹನ. ಕನ್ನಡಿಯಲ್ಲೊಮ್ಮೆ ತನ್ನ ಶೃಂಗಾರ ಸರಿ ಇದೆಯೇ ಎಂದು ನೋಡಿ ಸಮಾಧಾನವಾದ ಮೇಲೆ,
ತನ್ನ ಬ್ಯಾಗನ್ನು ಬಗಲಿಗೆ ಸಿಕ್ಕಿಸಿ ರೂಮಿನಿಂದ ಹೊರ ಹೊರಟಳು.
ಅವಳು ನಡುಮನೆಯೊಳಗೆ ಹೆಜ್ಜೆಯಿಡುವ
ಹೊತ್ತಿಗೆ ಅವಳ ಮೊಬೈಲ್ ಒಂದು ಸೀಟಿ ಹಾಕಿತು. ಬ್ಯಾಗನ್ನು ಚೇರಿಗೆ ಸಿಕ್ಕಿಸಿ, ಡೈನಿಂಗ್ ಟೇಬಲ್ ಮೇಲೆ
ಕುಳಿತು, ಮೊಬೈಲ್ ತೆರೆದು ನೋಡಿದಳು. ವಿಶಾಲ್‍ನಿಂದ ಒಂದು ಮೆಸೇಜ್ “ಏನು ನಿರ್ಧಾರ ಮಾಡಿದೆ?” ಒಂದು ಕ್ಷಣ ಯೋಚಿಸಿ ಮೊಬೈಲನ್ನು ಬ್ಯಾಗಿನೊಳಗೆ ಸೇರಿಸಿ,
ಅಡಿಗೆಮನೆ ಕಡೆ ತಿರುಗಿ ಕೂಗಿದಳು “ಅಮ್ಮ ಕಾಫಿ”
ಅವಳಮ್ಮ ಸರೋಜ ಒಂದು ಕೈಯಲ್ಲಿ
ಕಾಫಿ, ಇನ್ನೊಂದು ಕೈಯಲ್ಲಿ ತಿಂಡಿ ಪ್ಲೇಟ್ ಹಿಡಿದು ಬರುತ್ತಾ ಹೇಳಿದರು “ತಂದೆ ಕಣೆ ಕೂಗಬೇಡ. ನಿಂಗೆ
ಇಷ್ಟ ಅಂತ ತರಕಾರಿ ಹಾಕಿ ಅವಲಕ್ಕಿ ಮಾಡಿದ್ದೀನಿ. ನೀನು ಇವತ್ತು ತಿಂಡಿ ತಿನ್ನದೆ ಎದ್ದು ಹೋಗೋ. ನಿನ್ನ ಕ್ಲಾಸು, ಫ್ರೆಂಡ್ಸ್ ಎಲ್ಲಾ
ಒಂದು ಅರ್ಧ ಗಂಟೆ ಮಟ್ಟಿಗೆ ಮರೆತು, ಹಾಯಾಗಿ ಕೂತು ಅವಲಕ್ಕಿ ತಿನ್ನು..”
ಎದುರು ವಾದಿಸದೆ ನಸು ನಕ್ಕು ತಿಂಡಿ
ಪ್ಲೇಟನ್ನು ಕೈಗೆ ತೆಗೆದುಕೊಂಡ ಮಗಳನ್ನು ನೋಡಿ ಸರೋಜಳಿಗೆ ಆಶ್ಚರ್ಯ. ಅವಳ ಎದುರು ಕೂತು, ಎಂದೂ ಮಗಳನ್ನು
ನೋಡೆ ಇಲ್ಲವೇನೋ ಅನ್ನೋ ಹಾಗೆ ಅವಳ ರೂಪವನ್ನು ಕಣ್ಣಲ್ಲಿ ತುಂಬಿಕೊಂಡರು.
ಅಮ್ಮ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು
ನೋಡಿ ಸಹನ ಕೇಳಿದಳು “ಏನಾಯ್ತಮ್ಮ, ಹೀಗೆ ನೋಡ್ತಾ ಇದ್ದಿ?”
“ನನ್ನ ಪುಟ್ಟ ಮಗಳು ಎಷ್ಟು ದೊಡ್ಡವಳಾಗಿ
ಬೆಳೆದುಬಿಟ್ಟಿದ್ದಾಳೆ ಅಂತ ನೋಡ್ತಾ ಇದ್ದೀನಿ ಕಣೆ. ನೀನು ಚಿಕ್ಕ ಹುಡುಗಿಯಾಗಿದ್ದಾಗಿನಿಂದಾನೂ ಕಾಡಿಗೆ
ಹಚ್ಕೊಳ್ಳೊದು ಅಂದ್ರೆ ಬಹಳ ಇಷ್ಟ, ಕಣ್ಣುರಿ ಬಂದ್ರು ಹಿಂದು ಬಿಡದೆ ಮುಂದು ಬಿಡದೆ ಹಾಕಿಸಿಕೊಳ್ಳತ್ತಿದ್ದೆ.
ಇವತ್ತು ನಿಂಗೆ ನನ್ನ ಸಹಾಯದ ಅಗತ್ಯವಿಲ್ಲ, ಕಾಡಿಗೆ ನಿಂಗೆ ತುಂಬಾ ಚೆನ್ನಾಗಿ ಕಾಣುತ್ತೆ ಕಣೆ”
ಅಪರೂಪಕ್ಕೆ ಅಮ್ಮ ಭಾವುಕಳಾಗಿದನ್ನು
ನೋಡಿ ಸಹನಳಿಗೆ ಮನದಲ್ಲಿ ಏನೋ ಕಸಿವಿಸಿ…. ಏನಾಯಿತು ಅಮ್ಮಂಗೆ ಅನ್ನೋ ಪ್ರಶ್ನೆ. ಅದರೂ ಅದನ್ನು ವ್ಯಕ್ತಪಡಿಸದೆ
ಉತ್ತರವಾಗಿ ಸುಮ್ಮನೆ ಒಂದು ನಗೆ ಬೀರಿದಳು.
ಯಾಕೊ ಕಣ್ ತುಂಬಿ ಬಂದಂತಾಗಿ ಸರೋಜ
ಎದ್ದು ಅಭ್ಯಾಸದಂತೆ ಕೈವರೆಸುತ್ತ ಅಡಿಗೆಮನೆ ಕಡೆ ಹೆಜ್ಜೆ ಹಾಕಿದರು. ಹೆಜ್ಜೆ ಹಾಕುತ್ತಾ ಹಾಗೆ ಮಗಳಿಗೆ
ಕೂಗಿ ಹೇಳಿದರು “ನಾನು ಇವತ್ತು ರಜೆ ತಗೊಂಡಿದ್ದೀನಿ, ಸ್ವಲ್ಪ ಕೆಲಸ ಇದೆ. ನೀನು ಕಾಲೇಜ್ ಮುಗಿದ ತಕ್ಷಣ
ಮನೆಗೆ ಸೀದಾ ಬರ್ತೀಯಾ ತಾನೆ. ಅಥವಾ ಬೇರೆಲ್ಲಾದರೂ ಹೋಗೋದಿದೆಯ?” ಬಹಳ ಸಹಜವಾಗೇ ಕೇಳಿದ ಪ್ರಶ್ನೆಯಾದರೂ,
ಧ್ವನಿಯಲ್ಲಿ ಏನೋ ಭಾವ ತುಂಬಿದಂತಿತ್ತು.
ಕಾಫಿ ಕುಡಿಯುತ್ತಿದ್ದ ಸಹನಾಳ
ಕೈ ಒಮ್ಮೆ ನಿಂತಿತು, ಸಂಭಾಳಿಸಿಕೊಂಡು ಕಾಫಿ ಕುಡಿಯುತ್ತಾ ಆದಷ್ಟು ಸಹಜತೆಯಿಂದ ಹೇಳಿದಳು “ಇನ್ನು
ಗೊತ್ತಿಲ್ಲಾಮ್ಮ, ಸ್ಪೆಷಲ್ ಕ್ಲಾಸ್ ಏನಾದ್ರೂ ಇರಬಹುದು. ನೀನು ನಂಗೆ ಕಾಯಬೇಡ ಆಯ್ತಾ.”
ಕೆಲಸ ಮಾಡುತ್ತಿದ್ದ ಸರೋಜ ಇದೇ
ಉತ್ತರವನ್ನು ನಿರೀಕ್ಷಿಸಿದ್ದಳು ಅನ್ನೋ ಹಾಗೆ ಒಂದು ನಿಟ್ಟುಸಿರು ಬಿಟ್ಟಳು. ಒಂದು ಕ್ಷಣ ಕಣ್ ತುಂಬಿ
ಬಂದಿದ್ದನ್ನು ಸಂಭಾಳಿಸಿಕೊಂಡು, ಕೈ ತೊಳೆದು ಹೊರಟು ನಿಂತ ಮಗಳನ್ನು ಕಳಿಸಿಕೊಡಲು ಬಾಗಿಲ ಬಳಿ ಬಂದಳು.
ಸಹನ ಚಪ್ಪಲಿ ಹಾಕಿಕೊಂಡು ಹೆಲ್ಮೆಟ್
ತೆಗೆದುಕೊಂಡಳು, ಅಮ್ಮ ಬಂದಿದ್ದನ್ನು ನೋಡಿ ನಕ್ಕು
“ಹೊರಟೆ ಅಮ್ಮ, ಬೈ” ಅಂದಳು ಸರೋಜ ತನ್ನ ಭಾವುಕತೆಗೆ ಒಂದು ಕ್ಷಣ ಮೈಮರೆತು ಮಗಳನ್ನು ಅಪ್ಪಿಕೊಂಡು
ಹೇಳಿದಳು “ಹುಷಾರಾಗಿ ಹೋಗು ಪುಟ್ಟಿ, ಬೇಗ ಬಂದ್ಬಿಡು, ನಾನು ನಿಂಗೆ ಕಾಯ್ತಾ ಇರ್ತೀನಿ”
ಬಹಳ ವರ್ಷಗಳಾದ ಮೇಲೆ “ಪುಟ್ಟಿ”
ಎಂದು ಕರೆಯುತ್ತಿದ್ದ ಅಮ್ಮನ್ನನ್ನು ನೊಡಿ ಸಹನಾಳಿಗೆ ಯಾಕೋ ಅನುಮಾನ. ಆದರೂ ಪ್ರಶ್ನಿಸದೆ ಅಮ್ಮನನ್ನು
ಅಪ್ಪಿ ಹಿಡಿದು, ಬೈ ಹೇಳಿ ಹೊರಟೇ ಬಿಟ್ಟಳು.
ಸ್ಕೂಟಿ ಹಚ್ಚಿ ಹಕ್ಕಿಯಂತೆ ಹಾರಿ
ಹೋಗುತ್ತಿದ್ದ ತನ್ನ ಕಂದನನ್ನು ನೋಡಿ ಸರೋಜಾಳಿಗೆ ಇನ್ನು ಅಳು ತಡೆಯಾಗಲಿಲ್ಲ. ಅಲ್ಲೆ ಕುರ್ಚಿಯ ಮೇಲೆ
ಕೂತು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.
ಸ್ವಲ್ಪ ಸಮಾಧಾನವಾದ ಮೇಲೆ ಬಾಗಿಲು
ಹಾಕಿ, ಒಳ ಬಂದು ಸೋಫಾದ ಮೇಲೆ ಒರಗಿದಾಗ, ಹಿಂದಿನ ದಿನ ರಾತ್ರಿ ಮಗಳಿಗೆ ಹಾಲು ಕೊಡಲೆಂದು ಹೋದಾಗ,
ಸಹನ ಫೋನಿನಲ್ಲಿ ಆಡುತ್ತಿದ್ದ ಮಾತುಗಳು ನೆನಪಾದವು.
“ವಿಶಾಲ್, ಯಾಕೆ ಅಷ್ಟು
ಎಕ್ಸೈಟ್ ಆಗ್ತಾ ಇದ್ದೀಯಾ. ಇಂಥ ವಿಚಾರಗಳನ್ನ ಹಾಗೆಲ್ಲಾ ಒಂದು ಕ್ಷಣದಲ್ಲಿ ನಿರ್ಧಾರ ಮಾಡೋಕೆ ಆಗೋಲ್ಲಾ.”
………….
“ಹಾಗಲ್ಲ ನಾನು ಹೇಳಿದ್ದು.
ನಾನು ನಿನ್ನ ತುಂಬಾ ಪ್ರೀತಿಸ್ತೀನಿ ಕಣೋ, ಆದ್ರೂ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗೋ ನಿರ್ಧಾರ ಯಾಕೆ
ಅಂತ?”
…………..
“ನಂಗೆ ನೀ ಹೇಳ್ತಾ ಇರೋದು
ಅರ್ಥ ಆಗ್ತಾ ಇದೆ… ಆದರೂ ….
…..
ಸರಿ ಹಾಗಾದ್ರೆ.. ಹಾಗೆ
ಮಾಡೋಣ.
……….
“ನಾನು ಅಲ್ಲಿ ತನಕ ಒಬ್ಬಳೇ
ಬರಲ್ಲ, ನಾನು ನಾಳೆ ಕಾಲೇಜ್ ಬಾಗಿಲಲ್ಲೇ ಸಿಗ್ತೀನಿ. ಅಲ್ಲಿಂದ ಒಟ್ಟಿಗೆ ಹೋಗೋಣ.”
ಪ್ರೀತಿಯ ಮಗಳ ಈ ಮಾತುಗಳನ್ನು
ಕೇಳಿ ಸರೋಜಳ ಜಂಘಾಬಲವೇ ಉಡುಗಿಹೋಯ್ತು. ಆ ಕ್ಷಣವೇ ಒಳ ಹೋಗಿ ಕೆನ್ನೆಗೆ ಎರಡು ಕೊಟ್ಟು ಬುದ್ದಿ ಹೇಳಬೇಕು
ಎಂಬ ಮನಸ್ಸಾದರೂ, ಕೋಪವನ್ನು ಒಂದು ಕ್ಷಣ ಬದಿಗಿರಿಸಿ ಸುಮ್ಮನೆ ಅಡುಗೆಮನೆ ಕಡೆ ನೆಡೆದಿದ್ದಳು. ತೆಗೆದುಕೊಂಡು
ಹೋಗಿದ್ದ ಹಾಲನ್ನು ಹಾಗೆ ಕಟ್ಟೆ ಮೇಲೆ ಇಟ್ಟು, ಏನು ಮಾಡುವುದು, ಈ ಪರಿಸ್ಥಿತಿಯನ್ನು ಹೇಗೆ ಸಂಭಾಳಿಸುವುದು
ಎಂಬ ಚಿಂತೆಯಲ್ಲಿ ಅಲ್ಲೇ ನಿಂತಳು. ಯಾವ ಉಪಾಯವೂ ಹೊಳೆಯದಿದ್ದಾಗ, ಮಗಳನ್ನೇ ಕೇಳಿಬಿಡೋಣ ಎಂದು ಅವಳ
ರೂಮಿಗೆ ಹೋದ ಸರೋಜ ನೋಡಿದ್ದು, ಯಾವ ಚಿಂತೆಯೂ ಇಲ್ಲದೆ ಶಾಂತಳಾಗಿ ಮಲಗಿದ್ದ ಮುದ್ದು ಮಗಳು. ಇದು ಸಾಧ್ಯವಿಲ್ಲ,
ನನ್ನ ಮಗಳ ಇಂತ ತಪ್ಪು ಹೆಜ್ಜೆಗಳನ್ನು ಇಡಲಾರಳು, ನಾನು ಏನೋ ತಪ್ಪು ತಿಳಿದುಕೊಂಡಿದ್ದೇನೆ ಎಂದು ತನಗೆ
ತಾನೆ ಸಮಾಧಾನ ಹೇಳಿಕೊಂಡು ತನ್ನ ರೂಮಿಗೆ ಹೋಗಿದ್ದಳು ಸರೋಜ.
ಕಣ್ಣಾಲಿಗಳಲ್ಲಿ ಕಣ್ಣೀರು ಮತ್ತೆ
ಉಕ್ಕಿ ಬಂದಾಗ ಎದ್ದು ದೇವರ ಮುಂದೆ ಹೋಗಿ ಕಣ್ಣ್ಮುಚ್ಚಿ ಕೂತಳು. ಆದರೆ ಮನಕ್ಕೆ ಶಾಂತಿ ಸಿಗಲಿಲ್ಲ.
ನೆನಪುಗಳ ಮಹಾ ಸಾಗರವೇ ಉಕ್ಕುತ್ತಿತ್ತು ಅವಳ ಮನದೊಳಗೆ.
ಗಂಡ ತೀರಿಹೋದಾಗ, ೪ ವರ್ಷದ ಪುಟ್ಟ
ಮಗುವಾಗಿದ್ದ ಸಹನಳನ್ನು ಎದೆಗಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದಳು ಸರೋಜ. ಅತ್ತೆ ಮನೆಯಲ್ಲಿ ಹೆಣ್ಣು
ಮಗಳು ಎಂಬ ಕಾರಣಕ್ಕೆ ಪುಟ್ಟ ಕಂದಮ್ಮನ ಮೇಲೆ ಕೆಲಸಗಳ ಭಾರವನ್ನು ಹೊರೆಸಲು ನೋಡಿದಾಗ, ಧೈರ್ಯ ಮಾಡಿ
ದಿಟ್ಟ ಹೆಜ್ಜೆ ಮುಂದಿಟ್ಟು ಮನೆ ಬಿಟ್ಟು ಬಂದಿದ್ದಳು.
ಒಡಲಲ್ಲಿ ಬೆಚ್ಚಗೆ ಮಲಗಿದ್ದ ಮಗಳು,
ತಲೆ ಮೇಲೆ ತವರುಮನೆ ಸೂರು ಬಿಟ್ಟರೆ ಏನೂ ಇಲ್ಲದೆ ಬಾಳನ್ನು ಶುರುಮಾಡಿದ ಸರೋಜ. ಇಂದು ಸ್ವತಂತ್ರವಾಗಿ
ತನ್ನ ಕಾಲ ಮೇಲೆ ತಾನು ನಿಂತು ಮಗಳನ್ನು ನಿಲ್ಲಿಸಿದ್ದಳು. ಮಗಳಿಗೆ ತನ್ನೆಲ್ಲಾ ಪ್ರೀತಿಯನ್ನು ಧಾರೆಯೆರೆದು,
ಅವಳಲ್ಲಿ ದೃಢತೆ ಮತ್ತು ಧೈರ್ಯ ತುಂಬಿದ ಆತ್ಮವಿಶ್ವಾಸವನ್ನು ಬೆಳೆಸಿದ್ದಳು, ಒಂದು ವಯಸ್ಸು ಮೀರಿದ
ಮೇಲೆ ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ನೀಡಿದ್ದಳು. ಮಗಳ ನಿರ್ಧಾರಗಳ
ಬಗ್ಗೆ ಹೆಮ್ಮೆ ಪಟ್ಟಿದ್ದಳು, ನಂಬಿಕೆ ಇಟ್ಟಿದ್ದಳು.
ಚಿಕ್ಕಂದಿನಿಂದಲೂ ಎಲ್ಲವನ್ನೂ
ತನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಮಗಳು ಹೀಗೇಕೆ ಮಾತು ಮುಚ್ಚಿಟ್ಟಳು. ಮಗಳು ಬೆಳೆಯುತ್ತಾ ಬೆಳೆಯುತ್ತಾ
ತನ್ನದೆ ಪ್ರಪಂಚದಲ್ಲಿ ಕಳೆದುಹೋಗುತ್ತಿದ್ದಾಗ ಸರೋಜಾಳು ಅವಳನ್ನು ಅಲುಗಸಿ ಎಂದು ಕೇಳಲಿಲ್ಲ. ಅದೇ
ತಪ್ಪಾಯಿತೇ???
ಇದು ಉಪಯೋಗವಿಲ್ಲ ಎಂದು ಎನಿಸಿ
ತನ್ನ ರೂಮಿನೆಡೆಗೆ ಭಾರದ ಹೆಜ್ಜೆಗಳನಿಟ್ಟಳು. ಮನಸ್ಸಿನಲ್ಲಿ ನೂರು ಪ್ರಶ್ನೆಗಳು. ಎಲ್ಲಿ ತಪ್ಪು ಮಾಡಿದೆ
ನಾನು? ಯಾಕೆ ಹೀಗಾಯಿತು? ಎಲ್ಲಾರೂ ಹೇಳೋ ಹಾಗೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯದಲ್ಲಿ ಕೈ ಹಿಡಿಯಬೇಕಿತ್ತೇ?
ಅವಳನ್ನು ಹೋಗಲು ಬಿಡಬಾರದಿತ್ತೇ? ಕೂಡಿ ಹಾಕಬೇಕಿತ್ತೇ? ಕೊಟ್ಟು ಕೇಳಬೇಕಿತ್ತೇ?,,,,, ಹೀಗೆ ಹತ್ತು
ಹಲವು ಸಂದೇಹಗಳು, ಪ್ರಶ್ನೆಗಳ ಮಧ್ಯೇ ಯಾವಾಗ ನಿದ್ದೆ ಬಂತು ಎಂಬುದು ತಿಳಿಯಲಿಲ್ಲ ಸರೋಜಾಳಿಗೆ.
ಕಾಲೇಜ್ ಬಾಗಿಲ ಬಳಿ ಸಹನ ವಿಶಾಲ್‍ಗಾಗಿ
ಕಾಯುತ್ತಾ ನಿಂತಿದ್ದಳು, ದೂರದಿಂದ ಅವನ ಬೈಕ್ ಬರುವುದನ್ನು ಕಂಡು ತನ್ನ ಸ್ಕೂಟಿಯನ್ನು ಲಾಕ್ ಮಾಡಿ
ರಸ್ತೆಯ ಅಂಚಿಗೆ ಬಂದು ನಿಂತಳು. ಬೈಕು ನಿಲ್ಲಿಸುತ್ತಿದ್ದ ಹಾಗೆ ಏನೂ ಮಾತಿಲ್ಲದೆ ಬೈಕ್ ಹತ್ತಿದ್ದಳು.
ಇಬ್ಬರು ಹತ್ತಿರವಿದ್ದ ಕಾಫಿ ಹೌಸಿಗೆ
ಹೋದರು. ತಮಗೆ ಬೇಕಾದ ಕಾಫಿಗಳನ್ನು ಆರ್ಡರ್ ಮಾಡಿದ ತಕ್ಷಣ ವಿಶಾಲ್ ಅಂದ
“ಏನು ನಿರ್ಧಾರ ಮಾಡಿದೆ??”
“ನಿಂಗೆ ತಲೆ ಕೆಟ್ಟಿದೆ ಅಂತ
ನಿರ್ಧಾರ ಮಾಡಿದ್ದೀನಿ”
“ಸಹನ ನಾನು ಜೋಕ್ ಮಾಡ್ತಾ
ಇಲ್ಲ.”
“ಅದಕ್ಕೆ ತಲೆ ಕೆಟ್ಟಿದೆ ಅಂತ
ಹೇಳಿದ್ದು”
“ನೋಡು ಸಹನ, ಅಪ್ಪ ಅಣ್ಣನ
ಪ್ರೀತಿಯ ವಿಷಯ ತಿಳಿದು ಹೇಗೆ ಕೂಗಾಡಿದರು ಅಂತ ನಿಂಗೆ ಗೊತ್ತಿಲ್ಲ. ಸಿಟ್ಟಿನಲ್ಲಿ ಆ ಹುಡುಗಿಯ ಮನೆಗೆ
ಜನರನ್ನು ಕಳಿಸಿ ಗಲಾಟೆ ಮಾಡಿಸಿದ್ದಾರೆ. ನಿಮ್ಮಲಿ ನಿಮ್ಮಮ್ಮ ಮತ್ತು ನೀನು ಮಾತ್ರ ಇರೋದು. ನಿಂಗೇನಾದ್ರೂ
ಆದ್ರೆ ನಾನು ಹೇಗೇ ಇರೋದು”
“ಸರಿಯಾಗಿ ಹೇಳಿದೆ ವಿಶಾಲ್,
ನಮ್ ಮನೆಯಲ್ಲಿ ನನ್ ಬಿಟ್ರೆ ಅಮ್ಮ ಮಾತ್ರ ಇರೋದು. ನಾನು ನಿನ್ನ ಜೊತೆ ಓಡಿ ಹೋದ್ರೆ ನಮ್ಮಮ್ಮನ ಗತಿ
ಏನು??”
ಈ ಪ್ರಶ್ನೆಗೆ ಏನೂ ಉತ್ತರ ಹೇಳದೇ
ಕುಳಿತ್ತಿದ್ದ ವಿಶಾಲ್‍ನನ್ನು ನೋಡಿ ಸಹನ ಮುಂದುವರೆಸಿದಳು “ನಾವು ಮೊದಲೇ ಇದನೆಲ್ಲಾ ನಿರ್ಧಾರ
ಮಾಡಿದ್ವಿ. ನನ್ನ ಓದು ಇನ್ನೂ ಮುಗಿದಿಲ್ಲಾ, ನೀನು
ಈಗ ತಾನೆ ಕೆಲಸಕ್ಕೆ ಸೇರಿದ್ದೀಯಾ. ಇದೆಲ್ಲಾ ಆಗೊ ಮಾತಲ್ಲ. ಮತ್ತೆ ನಾನು ನನ್ನಮ್ಮನ ನಂಬಿಕೆ ಮುರಿಯೋದಿಲ್ಲಾ.
ನಾನು ನಾನಾಗಿ ಬೆಳೆಯಬೇಕು ಎಂದು ಅವರು ತನ್ನ ಮನೆ ಬಿಟ್ಟು ಬಂದು, ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ
ನನಗೆ ಗೊತ್ತು. ನಾನೇನೇ ಮಾಡಿದ್ರೂ ಅವರ ತಲೆ ತಗ್ಗಿಸೋ ಕೆಲಸ ಮಾಡೊಲ್ಲ. ನನ್ನ ನಿರ್ಧಾರಗಳನ್ನು ಅವರು
ಯಾವತ್ತೂ ಪ್ರಶ್ನಿಸಲಿಲ್ಲ, ಹಾಗೆಯೇ ಅವರು ಪ್ರಶ್ನಿಸೋ ಹಾಗೆ ನಾನೆಂದೂ ಮಾಡಲಿಲ್ಲ, ಮಾಡೋದೂ ಇಲ್ಲ.”
“ಹಾಗಾದ್ರೆ ನಿಂಗೆ ನನ್ನ ಮೇಲೆ
ಪ್ರೀತಿನೆ ಇಲ್ವಾ??”
“ಪ್ರೀತಿ ಇಲ್ಲಾ ಅಂತ ಯಾರ್
ಹೇಳಿದ್ರು, ಆದರೆ ಮನೆ ಬಿಟ್ಟು ಅಮ್ಮನನ್ನು ಅವಮಾನಗೊಳಿಸೋಷ್ಟು ಅಲ್ಲ. ನೋಡು ಎಲ್ಲಾ ಸರಿ ಹೋಗುತ್ತೆ.
ಸ್ವಲ್ಪ ತಾಳ್ಮೆ ಇರ್ಲಿ. ನನ್ನ ಓದು ಮುಗಿಲಿ, ನೀನು ಕೆಲಸದಲ್ಲಿ ಗಮನ ಕೊಡು. ನಾಳೆ ನಮಗೆ ಸರಿ ಅನಿಸಿದಾಗ
ಅಮ್ಮನ ಮುಂದೆ ಹೋಗಿ ನಮ್ಮ ನಿರ್ಧಾರ ತಿಳಿಸೋಣ. ಅವರು ಖಂಡಿತ ಹೂಂ ಅಂತಾರೆ. ಆಮೇಲೆ ನಿಮ್ಮ ಮನೆಯವರನ್ನು
ಒಪ್ಪಿಸೋಣ. ಅವರು ಇಲ್ಲಾ ಅಂದ್ರೆ ಅವರು ಒಪ್ಪೋ ತನಕ ನಾವು ಅವರಿಗೆ ಸಮಯ ಕೊಡೋಣ. ಇಷ್ಟು ತಾಳ್ಮೆ ನಿನಗಿದೆ
ಅಂದ್ರೆ ಸರಿ. ಇಲ್ಲಾಂದ್ರೆ ……..”
“ಇಲ್ಲಾಂದ್ರೆ ನನ್ನ ಬಿಟ್
ಬಿಡು ಅಂತೀಯಾ ?”
“ಇಲ್ಲಾ ವಿಶಾಲ್, ಬಿಟ್ ಬಿಡು
ಅಂತ ಅಲ್ಲಾ. ನಿನಗೆ ನೆಮ್ಮದಿ ಸಂತೋಷ ಸಿಗುವ ಹಾದಿ, ಆ ಹಾದಿಗೆ ಜೊತೆಯಾಗುವ ಜೊತೆಗಾರ್ತಿ ಬೇರೆ ಇರಬಹುದು
ಅಂತ. ನೋಡು, ಬಾಳೆಲ್ಲಾ ಒಂದಾಗಿ ಇರಬೇಕು ಅಂತ ಕನಸು ಕಾಣೋದೂ ಮಾತ್ರ ಪ್ರೀತಿಯಲ್ಲ, ಕನಸು ಕಂಗಳಲ್ಲಿ
ಕಣ್ಣೀರ ತಡೆದುಕೊಳ್ಳುವ ಶಕ್ತಿಯು ಇರಬೇಕು. ನಂಗೆ ನಮ್ಮ ಪ್ರೀತಿಯ ಮೇಲೆ ಆ ನಂಬಿಕೆ ಇದೆ. ನಿಂಗೆ ಇದೆಯಾ??”
ತಮ್ಮ ಆರ್ಡರ್‍ಗಳನ್ನು ತಂದ ವೈಟರೆಡೆಗೆ
ಒಂದು ನಗೆ ಬೀರಿದ ಸಹನಾಳ ಸಹನೆಯನ್ನು ನೋಡಿ ಯೋಚಿಸುತ್ತಾ ಕುಳಿತ ವಿಶಾಲ್, ಸ್ವಲ್ಪ ಹೊತ್ತಿನ ನಂತರ
ನುಡಿದ “ನಂಗೆ ಆ ನಂಬಿಕೆ ಇದೆ.”
ಮುಗುಳ್ನಗೆ ಬೀರಿದ ಸಹನಾಳ ಮುಖದಲ್ಲಿ
ತೃಪ್ತಿಯ ನಗು ಚಿಮ್ಮುತ್ತಿತ್ತು.
ಕಾಲೇಜಿಗೆ ಬಿಟ್ಟ ವಿಶಾಲ್‍ಗೆ
ಬೈ ಹೇಳಿ ಎಂದಿನಂತೆ ತನ್ನ ಕ್ಲಾಸ್‍ಗಳನ್ನು ಅಟೆಂಡ್ ಮಾಡಿದಳು. ಯಾಕೋ ಸಂಜೆ ಎಂದಿನಂತೆ ಶಟಲ್ ಕಾಕ್
ಆಡಲು ಮನಸ್ಸಾಗದೆ ಸೀದಾ ಮನೆಯ ಕಡೆಗೆ ಸ್ಕೂಟಿ ಹೊರಡಿಸಿದಳು. ಮನೆ ತಲುಪೋ ಹೊತ್ತಿಗೆ ಸೂರ್ಯ ತನ್ನ
ದಿನಚರಿ ಮುಗಿಸಿ ವಿದಾಯ ಹೇಳುತ್ತಿದ್ದ.
ಸ್ಕೂಟಿ ನಿಲ್ಲಿಸಿ ಮನೆ ಬಾಗಿಲ
ಹತ್ತಿರ ನಿಂತ ಸಹನಾಳಿಗೆ ಏನೋ ಕಸಿವಿಸಿ. ಸಂಜೆಯಾದರೂ ಇನ್ನೂ ಲೈಟ್ ಹಾಕಿಲ್ಲ, ಮನೆ ಯಾಕೊ ಬಿಕೋ ಎನ್ನುತಿದೆ
ಅನ್ನೊ ಭಾವ. ಪ್ರಶ್ನೆಯಲ್ಲೇ ಬಾಗಿಲ ಕರೆಗೆಂಟೆ ಒತ್ತಿದಳು.
ಕರೆಗಂಟೆ ಶಬ್ದಕ್ಕೆ ಯಾರೋ ತಣ್ಣೀರೂ
ಸುರಿದು ಎಬ್ಬಿಸಿದ ಹಾಗಾಯಿತು ಸರೋಜಾಳಿಗೆ. ಹೊರಗೆ ಸಂಜೆಗತ್ತಲು, ಗಡಿಯಾರದ ಮುಳ್ಳು ಆರು ಗಂಟೆ ತೋರಿಸುತ್ತಿತ್ತು.
ಕರೆಗಂಟೆ ಕ್ರಿರ್ ಕ್ರಿರ್ ಶಬ್ದ ಮಾಡ್ತಾನೆ ಇತ್ತು.
ಮಂಪರಿನಲ್ಲೆ ಎದ್ದು ಬಂದು ಬಾಗಿಲು
ತೆಗೆದಳು ಸರೋಜ. ಎದುರಿಗೆ ನಿಂತ ಮಗಳನ್ನು ನೋಡಿ ಎಲ್ಲಾ ದುಗುಡಗಳು ಧಾವಿಸಿ ಬಂದವು.
ಸಹನ ಒಳಬರುತ್ತಾ ಕಳಕಳಿಯಿಂದಲೇ
ಕೇಳಿದಳು “ಅಮ್ಮ ಏನಾಯಿತು, ಲೈಟ್ ಹಾಕಿಲ್ಲ, ನಿನ್ನ ನೋಡಿದ್ರೆ ನಿದ್ದೆಯಿಂದ ಎದ್ದು ಬಂದ ಹಾಗೆ
ಇದ್ದೀಯಾ. ಏನಾಯಿತು? ಮೈಯಲ್ಲಿ ಹುಷಾರಿಲ್ವ??”
ಮಗಳು ಅಷ್ಟು ಪ್ರಶ್ನೆ ಕೇಳ್ತಾ
ಇದ್ರೂ ಸರೋಜಾಳ ಮನದಲ್ಲಿ ಒಂದೇ ಧ್ವನಿ ಗುನುಗುತ್ತಿತ್ತು “ಮಗಳು ವಾಪಸ್ ಬಂದ್ಳು, ಮಗಳು ಎಲ್ಲೂ
ಹೋಗಿಲ್ಲಾ”
ಸೆರಗಿನಲ್ಲಿ ಮುಖವರೆಸುವ ನೆಪದಲ್ಲಿ
ಕಣ್ಣೊರಿಸಿಕೊಂಡು ಸರೋಜ ಅಂದಳು “ಯಾಕೊ ತಲೆನೋವು ಬಂದಿತ್ತು, ಅದಕ್ಕೆ ಮಲಗಿದ್ದೆ. ಸಮಯ ಹೋಗಿದ್ದೇ
ಗೊತ್ತಾಗಲಿಲ್ಲ. ನೀನು ಬಾ, ನಾನು ಒಂದು ಕ್ಷಣದಲ್ಲಿ ಕಾಫಿ ಮಾಡಿ ತರ್ತೀನಿ” ಅಂತ ಅಡುಗೆಮನೆ ಕಡೆ
ಹೆಜ್ಜೆ ಹಾಕಿದವಳನ್ನು ಸಹನ ಹಿಡಿದು ಡೈನಿಂಗ್ ಟೇಬಲ್ ಚೇರಿನಲ್ಲಿ ಕೂರಿಸಿ ಅಂದಳು “ನೀನು ಕೂತ್ಕೊ
ಅಮ್ಮ, ನಾನು ಕಾಫಿ ಮಾಡ್ತೀನಿ.”
ಅಡುಗೆಮನೆ ಬಾಗಲಿನ ತನಕ ಹೋಗಿ
ಸಹನ “ಕಾಫಿ ಜೊತೆ ಇವತ್ತು ಕೂತು ಹರಟೆ ಹೋಡೆಯೋಣಾ ಅಮ್ಮ. ಎಷ್ಟು ದಿನವಾಯಿತು ನಿನ್ನ ಹತ್ರ ಮನಸ್ಸು
ಬಿಚ್ಚಿ ಮಾತಾಡಿ” ಅಂದು ಒಳ ನೆಡೆದಳು.
ಸರೋಜಾಳ ಮುಖದ ಮೇಲೆ ಹೇಳ ತೀರದ
ಆನಂದ ಚಿಮ್ಮುತಿತ್ತು.
ವಾಟ್ಸ್ ಲೈಫ್.. ಲೈಫ್ ಇಸ್ ಅ ಗೇಮ್... ದೆನ್ ಪ್ಲೇ ಇಟ್ ಐಸೆ..
ಪ್ರತ್ಯುತ್ತರಅಳಿಸಿಸಿಂಗಪುರ್ ನಲ್ಲಿ ರಾಜ ಕುಳ್ಳ ಚಿತ್ರ ಹಾಡು ನೆನಪಿಗೆ ಬಂತು. ಹೌದು ಜೀವನದಲ್ಲಿ ನೊಂದು ನರಳಿದ ಬಾಳಿನಲ್ಲಿ ಜೀವನ ಒಂದು ಆಟದ ಹಾದಿ ಹಿಡಿಯಬೇಕು. ಗೆದ್ದೇ ಗೆಲ್ಲುತ್ತೇನೆ ಎಂಬ ಛಲ ಇರಬೇಕು. ಆಗ ಸಮಸ್ಯೆಗಳೇ ಪರಿಹಾರವಾಗಿ ವಸುದೇವನಿಗೆ ಯಮುನೆ ದಾರಿ ಮಾಡಿ ಕೊಟ್ಟ ಹಾಗೆ ದಾರಿ ಕಾಣುತ್ತವೆ.
ಸಹನಾ ಹೆಸರಿಗೆ ತಕ್ಕ ಹಾಗೆ ತಾಳ್ಮೆಯಿಂದ ಸಮಸ್ಯೆ ಬಗೆಹರಿಸುವತ್ತ ಯೋಚಿಸುತ್ತಾ ಹೋದರೆ.. ಕೆಸರಿನಲ್ಲಿ ಅರಳಿದ ಕಮಲ ಸರೋಜಾ.. ತಾನು ನೆಡೆದು ಬಂದ ಹಾದಿಯನ್ನು ಒಮ್ಮೆ ನೆನೆದು ತಾನು ಸಾಕಿ ಸಲಹಿದ ಮಗಳು ಅಡ್ಡ ಹಾದಿ ಹಿಡಿಯುತ್ತಾಳೆ ಎನ್ನುವ ಆತಂಕ. ಕೆಸರಲ್ಲಿ ಹುಟ್ಟಿದರು ಆತಂಕ ತುಂಬಿಕೊಂಡ ಸರೋಜಾ ಒಂದು ಕಡೆಯಾದರೆ.. ತಾಳ್ಮೆಯ ರೂಪವೆತ್ತ ಸಹನಾ ಇನ್ನೊಂದು ಕಡೆ. ಒಮ್ಮೆ ಮನಸ್ಸು ಚಡಪಡಿಸುವಂತೆ ಆದರೂ ಸುಂದರ ಅಂತ್ಯ ಕಂಡ ಈ ಲೇಖನ ನಿಜಕ್ಕೂ ಖುಷಿಕೊಟ್ಟಿತು. ಅಪ್ಪ ಅಮ್ಮನ ನೆಮ್ಮದಿಯ ಮುಂದೆ ಜಗತ್ತಿನ ವೈಭೋಗಗಳು ತೃಣ ಸಮಾನ ಎನ್ನುವ ನೀತಿ ನಿಜಾಯಿತಿಗೊಂಡ ಅಪರೂಪದ ಕ್ಷಣದ ಕಥಾನಕ.
ಹಾಟ್ಸ್ ಆಫ್ ನಿವಿ
ತನ್ನ ಬಾಳಿನಲ್ಲಿ ಹಲವು ಪರೀಕ್ಷೆಗಳನ್ನು ಸರೋಜ ಅವರು ಎದುರಿಸಿರಬಹುದು. ತನ್ನ ಮಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟಿರಬಹುದು. ಅದನ್ನು ಮೀರಿ ಆ ತಾಯಿಯ ಅಳುಕು ತಪ್ಪಲ್ಲ. ಮಗಳ ಮೇಲಿನ ಅಪಾರ ಪ್ರೀತಿ ಇಂತಹ ಭಾವಗಳನ್ನು ಹುಟ್ಟುಹಾಕುತ್ತದೆ.
ಪ್ರತ್ಯುತ್ತರಅಳಿಸಿವಿಶಾಲ್ ಮತ್ತು ಸಹನರ ಒಲುಮೆ ಎಡೆಗಿನ ನಂಬಿಕೆಯು ಚಿರಕಾಲ ಹಿಮಗಿರಿ ಎತ್ತರಕ್ಕೆ ನಿಲ್ಲಲಿ.
(ನನ್ನಂತಹ ಇಂಗ್ಲೀಷ್ ಅನಕ್ಷರಸ್ತರಿಗಾಗಿ ತಾವು ಹೆಚ್ಚು ಹೆಚ್ಚು ಕನ್ನಡದಲ್ಲೇ ಬರೆಯಿರಿ :-D)
ನಿಜವಾಗಿಯೂ ತುಳುಕಿದ ಮನಕ್ಕೆ ಇದೊಂದು ಮೆರಗು.....
ಪ್ರತ್ಯುತ್ತರಅಳಿಸಿಮನ ತುಳುಕಿದ್ದು ನಿಜ.....
ತುಂಬಾ ಇಷ್ಟವಾಯಿತು....
ನೀವು ಬರೆಯುತ್ತಿರಿ.... ನಾವು ಓದುತ್ತಿರುತ್ತೇವೆ.....