ಅಮ್ಮ ಹಚ್ಚಿದೊಂದು ಹಣತೆ ...........

google images

"ಅಮ್ಮ ಹಚ್ಚಿದೊಂದು ಹಣತೆ ಇನ್ನು ಬೆಳಗಿದೆ,
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ................"

ಎಂ.ಆರ್.ಕಮಲ ಬರೆದ, ಎಂ.ಡಿ.ಪಲ್ಲವಿ ಹಾಡಿದ ಹಾಡು ಕೇಳಿ ನೋಡಿ... ಕೇಳುವುದಲ್ಲ ಆಲಿಸಿ ನೋಡಿ. ಆಲಿಸುವುದೆಂದರೆ ಮನೆ ಕೆಲಸ ಮಾಡುತ್ತಾ, ಫೇಸ್ಬುಕ್ನಲ್ಲಿ ಇರುವಾಗ ಅಥವಾ ಮಕ್ಕಳಿಗೆ ಹೊಂವರ್ಕ್ ಮಾಡಿಸುತ್ತಾ ಹಿನ್ನಲೆಯಲ್ಲಿರಲಿ ಕೇಳುವುದಲ್ಲ. ಇದನ್ನು ಕೇಳಬೇಕು ಅಂತಾನೆ ಕೂತು ಕೇಳಿ ನೋಡಿ. ಕೊನೆಯ ಸಾಲಿನ ಕೊನೆಯ ರಾಗ ಮುಗಿಯುವುದರೊಳಗೆ ನಿಮ್ಮ ಕಣ್ಣಂಚಿನಲ್ಲಿ ಒಂದು ಹನಿ, ತುಟಿಯಂಚಿನಲ್ಲಿ ಒಂದು ನಗು ಮೂಡುತ್ತೆ.

ಅದ್ಯಾಕೆ "ಅಮ್ಮ" ಅನ್ನೊ ವಿಷಯ ರೀತಿ ಮನದ ಬಾಗಿಲನ್ನು ತಟ್ಟಿ ತಟ್ಟಿ ಭಾವ ಮೂಡಿಸುತ್ತೆ? ಪ್ರಶ್ನೆಯನ್ನು ಬಹಳ ಸಲ ಕೇಳಿಕೊಂಡಿದ್ದೀನಿ, ನನ್ನನ್ನು "ಅಮ್ಮ" ಅನ್ನೊ ಜೀವ ಬರುವ ತನಕ ಅರಿಯಲಿಲ್ಲ ಮರ್ಮ. 'ಅಮ್ಮ' ಬರಿ ಒಂದು ಪದವಲ್ಲ, ಅದು ಬರಿ ಒಂದು ವ್ಯಕ್ತಿಗೆ ಕೊಟ್ಟ ಹುದ್ದೆಯಲ್ಲ. ಅದು ಅತ್ಮದಾಳದಿಂದ ಹೊರಟ ಒಂದು ಧ್ವನಿ, ನಮ್ಮ ಜೀವನದಲ್ಲೆ ತೀರಿಸಲಾಗದ ಒಂದು ಋಣ. ಬೆಂದು, ಬಳಲಿ, ಸೋತು ಬಂದಾಗ ಸಿಗುವ ನೆರಳು.

ಮೊನ್ನೆ ಯಾರೋ ಕೇಳಿದರು "ನಮಗೆ ನೋವಾದಾಗ ನಾವ್ಯಾಕೆ ಅಮ್ಮ ಅಂತ ಕರಿತ್ತೀವಿ??" ಅಂತ. ಬಹಳ ಲೌಕಿಕವಾಗಿ ನಾನು ಉತ್ತರಿಸಿದ್ದೆ "ಹಾಗೆನೂ ಇಲ್ಲ ಅಪ್ಪ ಅಂತ ಕರಿಯುವವರನ್ನು ನಾನು ನೋಡಿದ್ದೇನೆ ಆದರೆ ಹೆಚ್ಚಿನ ಸರಿ ಹುಟ್ಟಿನಿಂದ ಅಮ್ಮನೆ ನಮ್ಮ ನೋವುಗಳಿಗೆ ಮುಲಾಮು ಹಚ್ಚಿ, ಹ್ರಾಂ ಹ್ರೂಂ ಹಾ ಹುಶ್ ಮಾಡಿ ಸಮಾಧಾನ ಮಾಡಿರುತ್ತಾಳೆ, ಅದಕ್ಕೆ ಇರಬೇಕು, ನೋ" ಉದ್ಗಾರದಲ್ಲಿ ನಾವು ಅಮ್ಮ ಅನ್ನೊದು". ಕೊನೆಗೆ ಕೂತು ಯೋಚಿಸಿದಾಗ ಬಾಲ್ಯದ ಸವಿ ನೆನಪುಗಳಲ್ಲಿ ಅಮ್ಮ ಮಾಡಿದ ಸಮಾಧಾನಗಳು ನೆನೆಪಾದವು. ಬೆಳಗ್ಗೆ ಬಿದ್ದು ಪೆಟ್ಟಾದರು, ಮಧ್ಯಾಹ್ನ ಅಮ್ಮನನ್ನು ಕಂಡೊಡನೆ ಅಳು ಉಕ್ಕಿ ಬರುತಿತ್ತು (ಬೆಳಗ್ಗೆ ಪೆಟ್ಟಾದಾಗ, ಅದನ್ನು ವರೆಸಿಕೊಂಡು ಮತ್ತೆ ಆಡಲು ಹೋಗಿರುತ್ತಿದೆ). ಬಲ ಮಂಡಿಗೆ ಆಗಿದ ಅಬ್ಬುವನ್ನು ಅಮ್ಮ ಪಾಪ ಮಾಡಿ, "ನಾನು ಮಂತ್ರ ಹಾಕಿ ಸರಿ ಮಾಡಿತ್ತೀನಿ" ಅಂತ ಎಡ ಮಂಡಿ ತೋರಿ "ಸರಿಯಾತು ನೋಡು" ಅಂದರೆ ನಂಬಿಬಿಡುತ್ತಿದ್ದೆ. ಹೊತ್ತಿನಲ್ಲಿ ದೇವರೆ ಎದುರು ಬಂದು ಅದು ಸರಿಹೋಗಿಲ್ಲ ಅಂದಿದ್ರು, ಕೆಂಗಣ್ಣು ಬಿಟ್ಟು ದೇವರನ್ನು ಹೆದರಿಸಿಬಿಡೊ ಅಷ್ಟು ನಂಬಿಕೆ. ಪ್ರಪಂಚದಲ್ಲಿ ಯಾರನ್ನು ಸುಲಭವಾಗಿ ನಂಬುವ ಸ್ವಭಾವವಲ್ಲ ಮನುಷ್ಯನದು, ಆದರೆ ಅಮ್ಮನನ್ನು ಮಾತ್ರ ಅದು ಹೇಗೆ ಕಣ್ಣ್ ಮುಚ್ಚಿ ನಂಬುತ್ತೇವೆ ಅಲ್ವೆ.

ಮಕ್ಕಳು ಬೆಳೆದಂತೆ ಅಮ್ಮ ಸೂಪರ್ ಹೀರೊ ಅಲ್ಲ ಅವಳು ಸಾಮಾನ್ಯ ಮನುಷ್ಯಳು ಅಂತ ಅರಿವಾಗುತ್ತ ಹೋಗುತ್ತೆ. ಬಹಷಃ ನಮ್ಮ ಕಲ್ಪನೆಗಳು ಸುಳ್ಳು ಅಂತ ನಮ್ಮ ಒಳ ಮನಸ್ಸಿಗೆ ಚುಚ್ಚುತ್ತೆ, ಅದಕ್ಕೆ ಕಾಣುತ್ತೆ ಮೊನ್ನೆ ಮೊನ್ನೆ ತನಕ ಅಮ್ಮನ ಸೆರಗು ಹಿಡಿದು ಓಡಾಡುತ್ತಿದ್ದ ಮಕ್ಕಳ ಬಾಯಲ್ಲಿ, ಟೀನೇಜ್ ಬಂದಾಕ್ಷಣ,  "ಅಮ್ಮ ನಿಂಗೆ ಇದು ಗೊತ್ತಾಗೊಲ್ಲ ಬಿಡು" ಅನ್ನು ಉದ್ಗಾರಗಳು ಹೇರಳವಾಗಿ ಕೇಳಿಬರುತ್ತೆ.

ಅಮ್ಮ ಸಾಮಾನ್ಯ ಮನುಷ್ಯಳೆ, ಅವಳು ಕೂಡ ಒಂದು ಮನೆಯ ಮುದ್ದಿನ ಮಗಳಾಗಿ ಬೆಳೆದು, ಇನ್ನೊಂದು ಮನೆಗೆ ಬಂದು ಸಂಸಾರ ಹೂಡಿ, ಗಂಡನೊಂದಿಗೆ ಸುಂದರ ಕನಸುಗಳನ್ನು ಕಂಡು ಸಂಭ್ರಮಿಸಿದ ಸಾಮಾನ್ಯ ಹೆಣ್ಣು ಮಗಳು. ಆದರು ಒಂದು ಮಗು ತನ್ನ ಹೊಟ್ಟೆಯಲ್ಲಿ ಚಿಗುರುತ್ತಿದೆ ಅಂತ ತಿಳಿದಾಕ್ಷಣ, ಹೆಣ್ಣು ಮಗಳು "ಅಮ್ಮ"ನಾಗುತ್ತಾಳೆ. ಮಗು "ಅಮ್ಮ" ಅಂತ ಕರಿಯುವ ಮೊದಲೆ ಅವಳು ಅಮ್ಮನಾಗುತ್ತಾಳೆ. ಇಷ್ಟು ದಿನ ಕಂಡ ತನ್ನ ಜೀವನದ ಕನಸುಗಳನ್ನು ಸರಿಸಿಟ್ಟು, ಹುಟ್ಟುವ ಮಗುವನ್ನೆ ತನ್ನ ಭವಿಷ್ಯ ಮಾಡಿಕೊಳ್ಳುತ್ತಾಳೆ. ತನ್ನೆಲ್ಲ ಪ್ರೀತಿ, ಮಮತೆ, ಸ್ನೇಹ ಎಲ್ಲವನ್ನು ತನಗೆ ಆ ಕ್ಷಣ ತಿರುಗಿ ಕೊಡದ ಮಗುವಿನ ಮೇಲೆ ಧಾರೆಯೆರೆಯುತ್ತಾಳೆ. ಮಗುವಿನ ವಯಸ್ಸಿನಷ್ಟೆ ವಯಸ್ಸು ಅಮ್ಮ ಅನ್ನೊ ಹುದ್ದೆಗೆ. ಮಗುವಿನ ಲಾಲನೆ ಪಾಲನೆ ಎಲ್ಲವನ್ನು ತನ್ನ ಅನುಭವದಿಂದಲೆ ಕಲಿಯುತ್ತಾಳೆ. ಹಿರಿಯರು ಹೇಳಿದ ಸೂತ್ರಗಳು ಇರಬಹುದು, ಆದರೆ ಪ್ರತಿ ಮಗುವಿನ ಸ್ವಭಾವ, ಅಸ್ತಿತ್ವ ಹೇಗೆ ಬೇರೆ ಬೇರೆ ಇರುತ್ತದೆಯೋ ಹಾಗೆ ಅಮ್ಮನ ಅಸ್ತಿತ್ವ ಅದರ ಪ್ರಕಾರವಾಗಿ ಬದಲಾಗುತ್ತೆದೆ. ನಮಗೆ "ನಾವು" ಇದ್ದೇವೆ ಅನ್ನೊ ಅರಿವು ಮೂಡುವ ಮುಂಚಿನಿಂದ ನಮ್ಮನ್ನು ಅರ್ಥೈಸಿಕೊಂಡ ಅದರ ಅನುಗುಣವಾಗಿ ಬದಲಾಗುವ ಏಕೈಕ ಜೀವ "ಅಮ್ಮ".

ಅದೇ ಅಮ್ಮ ಅಜ್ಜಿಯಾದಾಗ ನಮಗೆ ಮತ್ತೆ ಆಶ್ಚರ್ಯವಾಗುವಂತೆ ಬದಲಾಗುತ್ತಾಳೆ. ಮಕ್ಕಳನ್ನು ತಿದ್ದಲು ಕಣ್ಣು ಬಿಟ್ಟು ಹೆದರಿಸಲು ಹಿಂಜರಿಯದಿದ್ದ ಅಮ್ಮ, ಮೊಮ್ಮಗುವನ್ನು ತಿದ್ದಲು ಮುದ್ದು ಮಾತುಗಳಿಂದ ರಮಿಸುತ್ತಾಳೆ. ನಾನು ಎಷ್ಟೋ ಸಾರಿ ಕೇಳಿದುಂಟು, "ಅಬ್ಬಾ, ಮೊಮ್ಮಗ ಅಂದರೆ ನಿಂಗೆ ಎಲ್ಲಿಲ್ಲದ ಮಮತೆ ಉಕ್ಕಿ ಬರುತ್ತೆ ಅಲ್ವಾ!" ಅಂತ. ಅಮ್ಮ ನಕ್ಕು ಅಂದಿದ್ದಳು "ನೀವು ಮಕ್ಕಳಾಗಿದ್ದಾಗ, ನಿಮ್ಮನ್ನು ಮುದ್ದಿಸುವುದರೊಂದಿಗೆ ನಿಮ್ಮನ್ನು ತಿದ್ದುವುದು ನನ್ನಗೆ ಜವಾಬ್ದರಿಯಾಗಿತ್ತು ಆದರೆ ನಿನ್ನ ಮಗನನ್ನು ತಿದ್ದಲು ನೀನ್ನನ್ನು ತಯಾರು ಮಾಡಿದ್ದೀನಲ್ಲ, ಈಗ ನನಗೆ ಮುದ್ದಿಸುವುದು ಮಾತ್ರ ಕೆಲಸ"....ಹೌದಲ್ಲವೇ!! ನಾನು ಒಂದು ಮಗುವಿನ ಭವಿಷ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳವ ಮಟ್ಟಿಗೆ ಸರ್ಮಥಳನ್ನಾಗಿ ಮಾಡಿದ್ದು ಅಮ್ಮನೇ ಅಲ್ಲವೆ. ಪ್ರತಿ ಮಗಳು ಅಮ್ಮನಾಗುತ್ತಾಳೆ, ಪ್ರತಿ ಅಮ್ಮನು ಮಗಳಾಗಿರುತ್ತಾಳೆ. ಈ ಜೀವನ ಎನ್ನುವುದು ಹೇಗೆ ಚಕ್ರದಂತೆ ತಿರುಗುತ್ತದೆ, ಪ್ರತಿ ಮನುಷ್ಯನು ತನ್ನ ತಂದೆ ತಾಯಿಯ ಸ್ಥಾನವನ್ನು ಒಮ್ಮೆ ಅನುಭಸುತ್ತಾನೆ. ಆ ಸ್ಥಾನದಲ್ಲಿ ನಿಂತಾಗ ಮಾತ್ರ, ಅಮ್ಮ ಕೂಗುತ್ತಿದ್ದಿದ್ದು, ನಮಗೆ ಕ್ರೂರವೆನಿಸಿದರು ಶಿಕ್ಷೆ ಕೊಡುತ್ತಿದ್ದ ಕಾರಣಗಳು ಅರ್ಥವಾಗುತ್ತದೆ. ತಪ್ಪು ಮಾಡಿದಕ್ಕೆ ನಾವು ಹೊಡೆತ ತಿಂದು ರಾತ್ರಿ ಮಲಗಿದರೆ, ಬೆಳಗ್ಗೆ ಅಮ್ಮನ ಕಣ್ಣ ಏಕೆ ಕೆಂಪಾಗಿರುತಿತ್ತು ಅಂತ ಈಗ ತಿಳಿಯುತ್ತದೆ. ಅತ್ತು ಸುಸ್ತಾಗಿ ಮಲಗಿದ ಕಂದನ ಮೈಸವರಿ ಶಿಕ್ಷಿಸಿದಕ್ಕೆ ಪದೇ ಪದೇ ಕ್ಷಮೆ ಯಾಚಿಸುವ ಅಮ್ಮನನ್ನು, ನಾವು ದೊಡ್ಡವರಾದ ಮೇಲೆ ಶಿಕ್ಷಿಸಲು ಹಿಂಜರಿಯುವುದಿಲ್ಲ. ಒಮೊಮ್ಮೆ ಒಬ್ಬ ಸ್ನೇಹಿತನಿಗೂ ಕೊಡವಂತಹ ತಾಳ್ಮೆ ಅಮ್ಮನೆಡೆಗೆ ಇರುವುದಿಲ್ಲ. ಎಷ್ಟಂದರೂ ಅವಳು ಅಮ್ಮ, ನಾವು ದೂರ ತಳ್ಳಿದರು ಎಲ್ಲಿ ಹೋಗಿಯಾಳು ಅನ್ನುವ ಹಮ್ಮೇ????   
  
"ಹೆತ್ತವರಿಗೆ ಹೆಗ್ಗಣವು ಮುದ್ದು" ಅನ್ನುವ ಗಾದೆ ಮಾತು ಸುಳ್ಳಲ್ಲ. ತನ್ನ ಮಗು ಹೇಗೆ ಇದ್ದರು, ಏನೆ ಆದರು, ಮುಂದೆ ಅವಳನ್ನು ಕಾಲ ಕಸದಂತೆ ನೋಡಿದರು, ತಾಯ ತುಡಿತ ನಿಲ್ಲದು, ಪ್ರೀತಿ ಬತ್ತದು. ಆದರೆ ಮಕ್ಕಳಾದ ನಾವು ಮರೆಯುವ ಮಾತೇನೆಂದರೆ ಅಮ್ಮನು ಮನುಷ್ಯಳು ಅನ್ನೊದು. ೧೮-೨೦ ವರ್ಷ ಕಾಪಾಡಿದ ಜೀವದ ಯೋಚನೆ ಬಿಡು ಅಂತೀವಿ, "ನಾವು ದೊಡ್ಡವರಾಗಿದ್ದೇವೆ ಚಿಕ್ಕ ಮಕ್ಕಳ ಹಾಗೆ ನಮ್ಮ ನೆಡೆಸಿಕೊಳ್ಳಬೇಡ" ಅಂತ ಕೂಗುತ್ತೇವೆ, "ನಿಂಗೆ ಇದೆಲ್ಲ ತಿಳಿಯೊಲ್ಲ ಸುಮ್ಮನಿರು" ಅಂತ ಗದರಿಸುತ್ತೇವೆ. ಅಲ್ಲೆ ಪಕ್ಕದಲ್ಲಿ ನಮ್ಮ ಮಗುವಿಗೆ "ನಿಧಾನವಾಗಿ ಹೋಗು ಎಡವಿಬಿಡ್ತೀಯಾ" ಅಂತ ಎಚ್ಚರಿಕೆನೂ ಕೊಡ್ತೀವಿ.

ಎಂತ ಹಿಪೊಕ್ರಸಿ ಅನಿಸುತ್ತೆ ಅಲ್ವೆ. ಆದರೆ ಇದರಲ್ಲಿ ಹಿಪೊಕ್ರಸಿ ಇಲ್ಲ. ರೆಕ್ಕೆ ಬಲಿತ ಹಕ್ಕಿಗಳಿಗೆ ಗೂಡು ಬಿಟ್ಟು ಹಾರುವ ಬಯಕೆ, ಜೀವನದಲ್ಲಿ ಒಂದೇ ಒಂದು ಸಾರಿ ನಿರ್ಧಾರ ತೆಗೆದುಕೊಂಡು ಅದಕ್ಕೆ ಅಮ್ಮನಿಗೆ ಸಂಜಾಸಿಕೊಡದೆ, ಅವಳು ಹಾಗೆ ನಮ್ಮನ್ನು ನಂಬಿ ಅದನ್ನು ಒಪ್ಪಿಕೊಳ್ಳಲಿ ಅನ್ನೊ ಆಸೆ. ಆದರೆ ಸ್ವಲ್ಪ ಸಮಾಧಾನಿಸಿ, ಅಮ್ಮನೆಡೆಗೆ ಸ್ವಲ್ಪ ಸಂಯಮವಹಿಸಿ, ತನ್ನ ಜೀವನದಲ್ಲಿ ಅತಿ ಆಸೆ, ಪ್ರೀತಿಯಿಂದ ಮಾಡಿದ ಒಂದೇ ಒಂದು ಕೆಲಸವನ್ನು ಇನ್ನು ಮಾಡದಿರು ಅನ್ನುವಾಗ ಧ್ವನಿಯಲ್ಲಿ ವಿನಯತೆ ಇರಲಿ, ಅವಳಿಗೂ ದೂರ ನಿಂತು ಬೆಳೆಯುವ ಮಕ್ಕಳನ್ನು ನೋಡಿ ಖುಷಿ ಪಡಬಹುದು ಅಂತ ತಿಳಿಯಲು ಸ್ವಲ್ಪ ಸಮಯಕೊಡಿ. ಹಾಗೆ ದೂರ ಹೋದರು, ಅಮ್ಮನ ಮಡಲಿನಲ್ಲಿ ತಲೆಟ್ಟು ಮಲಗುವ ಸುಖ ನಮಗೆಷ್ಟು ಮುಖ್ಯ ಅನ್ನೊದು ಅವಳಿಗೂ ತಿಳಿಸಿ. ನಮಗಾಗಿ ಸರಿಸಿಟ್ಟ ತನ್ನ ಕನಸುಗಳನ್ನು ಮತ್ತೆ ಹೆಕ್ಕಿಕೊಳ್ಳಲು ಸಹಕರಿಸಿ. ಹಾಗೂ ಅರ್ಥವಾಗದಿದ್ದರೆ ನೀವೇ ಅರ್ಥೈಸಿಕೊಳ್ಳಿ. ಎಷ್ಟೆಂದರೂ ಅವಳು ಅಮ್ಮನಲ್ಲವೆ, ಪ್ರಪಂಚದ ತುದಿಯ ತನಕ ನಾವು ನೆಡೆದರು, ಸೆರಿಗಿನ ತುದಿಯ ಮುದ ಮರೆಯಲು ಸಾಧ್ಯವೆ????.... ನಮ್ಮ ಅತ್ಮದಲ್ಲಿ ದಾರಿ ದೀಪವಾಗಿ ಬೆಳಗುತ್ತಿರುವುದು, ಅಮ್ಮ ಹಚ್ಚಿದ ದೀಪವಲ್ಲವೆ????.... ನಮಗೆ ಕಾಣುವ ದೂರದ ಬೆಟ್ಟ ನುಣ್ಣಗಿಲ್ಲ ಅಂತ ತಿಳಿದು ಸೋತು ಸುಣ್ಣವಾಗಿ ಹಿಂತಿರುಗಿ ನೋಡಿದಾಗ, ಕೈ ಚಾಚಿ ಅಪ್ಪಿಕೊಂಡು ಕಂದ ಎಂದು ಮಿಡಿಯುವುದು ಜೀವವಲ್ಲವೆ... ಅವಳು ಅಮ್ಮನಲ್ಲವೆ......








ಕಾಮೆಂಟ್‌ಗಳು

  1. ತುಂಬಾ ಆಪ್ತವಾದ ಬರಹ ಜೊತೆಗೆ ಒಳ್ಳೆಯ ಗೀತೆಯೂ ಸಹ. ಧನ್ಯವಾದಗಳು.
    ಅಮ್ಮ ಎನ್ನುವ ಪದ ಉಲಿಯುವಾಗಲೇ ನೂರು ಸಿಹಿ ತಿನಿಸುಗಳ ಮೆಲ್ಲುವ ಅನುಭವ.
    ನನಗೆ "ಅಮ್ಮ" ಎಂದರೆ ಆಕೆ ನನ್ನ ಪಾಲಿಗೆ ಜೀವಂತ ದಂತಕತೆ - ಧೀರೆ. ನಾನು 3 ವರ್ಷ ಮಗುವಾಗಿದ್ದಾಗಲೇ ನಮ್ಮ ತಂದೆ ತೀರಿಕೊಂಡರು. ಏಳು ಮಕ್ಕಳ ತುಂಬು ಸಂಸಾರ, ಒಂದಕ್ಕೂ ಮದುವೆ ಇಲ್ಲ. ಎಲ್ಲರನ್ನೂ ಓದಿಸಿ, ಎಲ್ಲರಿಗೂ ಮದುವೆ ಮಾಡಿಸಿ, ದಡ ಸೇರಿಸಿದ ದಿಟ್ಟೆ.

    ಪ್ರತ್ಯುತ್ತರಅಳಿಸಿ
  2. ಚುಕ್ಕಿ ಇತ್ತು ರಂಗೋಲಿ ಇಡುವಾಗ ಒಂದರಿಂದ ಹತ್ತು... ಹತ್ತರಿಂದ ಒಂದು ಹೀಗೆ ಆರೋಹಣ ಅವರೋಹಣ ಇಡುತ್ತ ಚುಕ್ಕಿ ಇತ್ತು ಪ್ರತಿ ಚುಕ್ಕಿಗಳನ್ನ ಸೇರಿಸುತ್ತಾ ಹೋದ ಹಾಗೆ ಒಂದು ಸುಂದರ ಚಿತ್ತಾರ ಮೂಡಿ ಬರುತ್ತದೆ. ಅಮ್ಮ ಎನ್ನುವ ಪದವೇ ಒಂದು ಅದ್ಭುತ ಶಕ್ತಿ ಕೊಡುವ ಟಾನಿಕ್ ಅಂಥಹ ಸುಂದರ ಪದದ ಮೇಲೆ ನೀವು ಬರೆದ ಲೇಖನ, ಹೊತ್ತು ತಂದ ಬಾಲ್ಯದ ನೆನಪುಗಳು ಒಂದು ಕ್ಷಣ ಬಾಲ್ಯದ "ಅಬ್ಬು"ವಿಗೆ ಕರೆದುಕೊಂಡು ಹೋಗಿದ್ದು ಸುಳ್ಳಲ್ಲ. ಗಾಯ ಮಾಯಬಹುದು ಆದರೆ ಕಲೆ ಅಲ್ಲ ಅನ್ನುವ ಹಾಗೆ ಅಮ್ಮನಾದರೂ ಅಮ್ಮ ತಂದು ಕೊಟ್ಟ, ಕಲಿಸಿಕೊಟ್ಟ ಪ್ರೀತಿ ಅಂತಃಕರಣ ಮುಂದಿನ ಪೀಳಿಗೆಗೆ ಹೊತ್ತೊಯ್ಯುವ ಕಾಯಕ ಸದಾ ನಡೆಯುತ್ತಲೇ ಇರುತ್ತದೆ. ಒಂದು ಸುಂದರ ಅನುಭವ ಕೊಟ್ಟ ನಿವಿ ಸ್ಪೆಷಲ್ ನನ್ನ ಅಮ್ಮನನ್ನು ಇನ್ನಷ್ಟು ಹೆಚ್ಚೂ ಪ್ರೀತಿಸಲು ಅನು ಮಾಡಿಕೊಟ್ಟಿತು. ಹಾಟ್ಸ್ ಆಫ್ ನಿವಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಮ್ಮನನ್ನು ಎಷ್ಟು ಪ್ರೀತಿಸಿದರು ಅದು ಕಮ್ಮಿನೆ. :) ಆ ಸುಂದರ ರಂಗೋಲಿ ಇಡಲು ಸಹಕರಿಸಿದಕ್ಕೆ ಧನ್ಯವಾದಗಳು :)

      ಅಳಿಸಿ
  3. ಬಲ ಮಂಡಿಗೆ ಆಗಿದ ಅಬ್ಬುವನ್ನು ಅಮ್ಮ ಪಾಪ ಮಾಡಿ, "ನಾನು ಮಂತ್ರ ಹಾಕಿ ಸರಿ ಮಾಡಿತ್ತೀನಿ" ಅಂತ ಎಡ ಮಂಡಿ ತೋರಿ "ಸರಿಯಾತು ನೋಡು" ಅಂದರೆ ನಂಬಿಬಿಡುತ್ತಿದ್ದೆ.

    ಅತೀ ಸಹಜ ಮತ್ತು ಸುಂದರ ಸಾಲು... ಎಷ್ಟೋ ಬಾರಿ ನೆನಪಿಸಿಕೊಂಡ ಮತ್ತು ಮತ್ತೆ ಮತ್ತೆ ನೆನಪಾಗಿಸಿಕೊಂಡ ಸಂದರ್ಭ ಇದು...

    "ಕೃತಕ ದೀಪ ಕತ್ತಲಲ್ಲಿ ಕಳೆದು ಹೋಗದಂತೆ......."
    ತುಂಬಾ ಅರ್ಥವತ್ತಾದ ಭಾವ ಹೊತ್ತ ಗೀತೆ ಜೊತೆಗೆ
    ಒಂಟಿ ಅನ್ನಿಸಿದಾಗ ಕಣ್ಣಿರನ್ನೂ ಸಮಾಧಾನವನ್ನೂ ಒಟ್ಟಿಗೆ ನೀಡುವಂತಹ
    ರಾಗ ಸಾಹಿತ್ಯ...
    ನಾನು ತುಂಬಾ ಸಕ ಕೇಳುವ ಹಾಡುಗಳಲ್ಲೊಂದು...

    ನಿವೇದಿತಾ ರಾಶಿ ಇಷ್ಟ ಆತು ಬರಹ...





    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಮ್ಮನಿಗೆ ಮಾತ್ರ ಮಂತ್ರ ಮಾಡಿ ಹಾ ಹುಷ್ ಮಾಡುವ ಕಲೆ ಗೊತ್ತಿರುವುದು. :) ನನ್ನ ಮೆಚ್ಚಿನ ಹಾಡುಗಳಲ್ಲಿ ಈ ಹಾಡು ಒಂದು. ಓದಿದಕ್ಕೆ ಧನ್ಯವಾದಗಳು.

      ಅಳಿಸಿ
  4. ನೀವು ಮಕ್ಕಳಾಗಿದ್ದಾಗ, ನಿಮ್ಮನ್ನು ಮುದ್ದಿಸುವುದರೊಂದಿಗೆ ನಿಮ್ಮನ್ನು ತಿದ್ದುವುದು ನನ್ನಗೆ ಜವಾಬ್ದರಿಯಾಗಿತ್ತು ಆದರೆ ನಿನ್ನ ಮಗನನ್ನು ತಿದ್ದಲು ನೀನ್ನನ್ನು ತಯಾರು ಮಾಡಿದ್ದೀನಲ್ಲ, ಈಗ ನನಗೆ ಮುದ್ದಿಸುವುದು ಮಾತ್ರ ಕೆಲಸ"....
    ನನ್ನ ಮನದಲಿ ನಿಂತ ಸಾಲುಗಳು ಇವು..ಹೌದಲ್ವಾ ಅಮ್ಮ ಻ಜ್ಜಿಯಾದಾಗ ಹೇಗೆ ಬದಲಾಗ್ತಾಳೆ..ಅಲ್ವಾ..?? ತಾಯಿ ಬೆಳೆಯುವ ಪರಿ ವಿಧವಿಧ ಬಣ್ಣನೆ ಇಷ್ಟ ಆಯ್ತು -ನಿವಿ ಲೇಖನ ಸೂಪರ್..ಅದ್ರಲ್ಲೂ ಅಮ್ಮಅಂದ್ರೆ ಹೆಚ್ಚು ಅಂಕ...... 10/10

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನ ಅಮ್ಮ ಹೇಳಿದ ಮಾತುಗಳು ಅವು. ಮತ್ತೆ ಹೇಳಿದ್ರು, ಅಜ್ಜ ಅಜ್ಜಿಗೆ ಮತ್ತು ಪುಟ್ಟ ಮಕ್ಕಳಿಗೆ ಹೆಚ್ಚು ಅಂತರವಿರೊಲ್ಲ ಇಬ್ಬರಿಗೂ ಪ್ರೀತಿಸುವುದು ಮಾತ್ರ ಗೊತ್ತು. ಅಂತ ಅಜ್ಜ ಅಜ್ಜಿ ಪಡೆದ ನನ್ನ ಮಗನೆ ಪುಣ್ಯವಂತ :)... ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು